ಅಸಾಧ್ಯವನ್ನು ಸಾಧ್ಯವಾಗಿಸುವುದೇ ಪ್ರತಿಭೆ

ಹುಣಸೂರು: ವ್ಯಕ್ತಿಯಲ್ಲಿ ಹುದುಗಿರುವ ಪ್ರತಿಭೆ ಸಮುದಾಯದ ಒಳಿತಿಗೆ ಉಪಯೋಗವಾದಲ್ಲಿ ಮಾತ್ರ ಸಾರ್ಥಕತೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಾಗರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ಬಾಚಳ್ಳಿ ರಸ್ತೆಯಲ್ಲಿರುವ ಆದರ್ಶ ವಿದ್ಯಾಲಯ (ಆರ್‌ಎಎಂಎಸ್)ದಲ್ಲಿ ಬುಧವಾರ 2019-20ನೇ ಸಾಲಿನ ನಗರ ದಕ್ಷಿಣ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲರಿಗೂ ಅಸಾಧ್ಯವಾದುದನ್ನು ಸಾಧ್ಯವನ್ನಾಗಿಸುವುದೇ ಪ್ರತಿಭೆ ಎನ್ನಲಾಗುತ್ತದೆ. ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಗುರುತಿಸುವುದು ಶಾಲಾ ಮಟ್ಟದಲ್ಲೇ ಆಗಬೇಕೆಂದು ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಪ್ರತಿಭಾವಂತನ ಪ್ರತಿಭೆ ಸಾಮುದಾಯಿಕ ಒಳಿತಿನ ಅಂಶಗಳನ್ನು ಒಳಗೊಂಡಿರಬೇಕು. ವನ್ಯಜೀವಿಗಳ ಜೀವನಕ್ರಮದ ಕುರಿತು ಕಾಡುಗಳ್ಳ ವೀರಪ್ಪನ್ ಸ್ಪಷ್ಟತೆಯಿಂದ ಮತ್ತು ದೃಢತೆಯಿಂದ ಮಾತನಾಡುತ್ತಿದ್ದ. ಆದರೆ ಆತನ ಪ್ರತಿಭೆ ಸಮಾಜಕ್ಕೂ ಮತ್ತು ದೇಶದ ಸಂಪತ್ತಿಗೂ ಕೆಡುಕನ್ನು ಬಯಸಿತ್ತು. ಹಾಗಾಗಿ ಪ್ರತಿಭೆ ಸಮುದಾಯದ ಸಕಾರಾತ್ಮಕ ಬೆಳವಣಿಗೆಗೆ ಪೂರಕವಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ಪಟ್ಟಣ ಠಾಣೆ ಪಿಎಸ್‌ಐ ಮಹೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗೋವಿಂದೇಗೌಡ ಮಾತನಾಡಿದರು. ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಶಿಲ್ಪಾ, ನಿಕಟಪೂರ್ವ ಅಧ್ಯಕ್ಷ ಹಳ್ಳದ ಕೊಪ್ಪಲು ನಾಗಣ್ಣ, ಸದಸ್ಯರಾದ ಮರುಗೇಶ್, ಬಸವರಾಜು, ಡಾ.ಸುಧಾಕರ್, ಮುಖ್ಯಶಿಕ್ಷಕ ಚಂದ್ರಕುಮಾರ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *