Friday, 16th November 2018  

Vijayavani

Breaking News

ಅಸಾಧ್ಯವನ್ನು ಸಾಧ್ಯವಾಗಿಸುವ ಅಮಿತ ತಂತ್ರಗಾರ

Friday, 11.08.2017, 3:00 AM       No Comments

ಒಂದು ಕಾಲಕ್ಕೆ, ಹಿಂದಿ ಭಾಷಿಕ ಪ್ರದೇಶಗಳಿಗೆ ಸೀಮಿತವಾದ ಪಕ್ಷವೆಂದೇ ಪರಿಗಣಿಸಲ್ಪಡುತ್ತಿದ್ದ ಬಿಜೆಪಿ ಇಂದು ದೇಶಾದ್ಯಂತ ವ್ಯಾಪಿಸಿ ‘ಜನರ ಪಕ್ಷ’ ಎನಿಸಿಕೊಂಡಿದೆಯೆಂದರೆ, ಅದಕ್ಕೆ ನಾಯಕರು ಮತ್ತು ಕಾರ್ಯಕರ್ತರ ಸಮರ್ಪಣಾ ಮನೋಭಾವ, ಪರಿಶ್ರಮ, ಜನರೊಂದಿಗೆ ಬೆಳೆಸಿಕೊಂಡಿರುವ ಬಾಂಧವ್ಯವೇ ಕಾರಣ.

| ಅನಿಲ್ ಬಲೂನಿ

ಕಳೆದ ಮೂರು ವರ್ಷಗಳು ಭಾರತೀಯ ಜನತಾ ಪಕ್ಷದ ಪಾಲಿಗೆ ಯಶಸ್ಸು-ವಿಜಯೋತ್ಸವಗಳ ಒಂದು ಅಸಾಧಾರಣ ಪಯಣವೇ ಆಗಿದೆ ಎಂದರೆ ತಪ್ಪಾಗಲಾರದು. 2014ರ ಲೋಕಸಭಾ ಚುನಾವಣೆಯಲ್ಲಿ ಸುಲಭದ ಜಯವನ್ನು ದಾಖಲಿಸಿದ ಪಕ್ಷ, ಅನೇಕ ರಾಜ್ಯಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಸವಾಲಾಗಿ ಪರಿಣಮಿಸಿದ್ದ ಉತ್ತರಪ್ರದೇಶದಲ್ಲಿ ದಾಖಲೆಯನ್ನೇ ಸೃಷ್ಟಿಸಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಷಾ ಅಧಿಕಾರ ವಹಿಸಿಕೊಂಡ ನಂತರದ 16 ರಾಜ್ಯಗಳ ಚುನಾವಣೆಗಳ ಪೈಕಿ 10ರಲ್ಲಿ ಪಕ್ಷದ ಸರ್ಕಾರವೇ ಅಸ್ತಿತ್ವಕ್ಕೆ ಬಂದಿದ್ದು ಇಂಥ ಮತ್ತೊಂದು ದಾಖಲೆ. ಆದರೆ, ಬಿಜೆಪಿಯ ಮೂಲಮಟ್ಟದ ನಾಯಕರು ರಾಷ್ಟ್ರಪತಿ- ಉಪರಾಷ್ಟ್ರಪತಿ-ಪ್ರಧಾನಮಂತ್ರಿ ಸ್ಥಾನದಂಥ ದೇಶದ ಮೂರು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವುದನ್ನು ಖಾತ್ರಿಯಾಗಿಸಿದ್ದು ಅಮಿತ್ ಷಾ ಮಹೋನ್ನತ ಸಾಧನೆ ಎನ್ನಲಡ್ಡಿಯಿಲ್ಲ.

ಬಿಜೆಪಿ ಇಂಥದೊಂದು ಅಭೂತಪೂರ್ವ ಪ್ರಗತಿ ಕಂಡಿದ್ದು ಕಾಕತಾಳೀಯವೇನಲ್ಲ. ಒಂದು ಕಾಲಕ್ಕೆ ಹಿಂದಿ ಭಾಷಿಕ ಪ್ರದೇಶಗಳಿಗೆ ಸೀಮಿತವಾದ ಪಕ್ಷವೆಂದೇ ಪರಿಗಣಿಸಲ್ಪಡುತ್ತಿದ್ದ ಬಿಜೆಪಿಯಿಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಕಾಮರೂಪದಿಂದ ಕಛ್ ಪ್ರದೇಶದವರೆಗೆ ವ್ಯಾಪಿಸಿ ಜನಸಮೂಹದ ರಾಜಕೀಯ ಸಂಘಟನೆ ಎಂಬ ಎತ್ತರಕ್ಕೇರಿದೆಯೆಂದರೆ ಅದಕ್ಕೆ ಕಾರಣ ಕಾರ್ಯಕರ್ತರ ಸಮರ್ಪಣಾ ಮನೋಭಾವ ಮತ್ತು ಪರಿಶ್ರಮವೇ ಎಂಬುದರಲ್ಲಿ ಎರಡು ಮಾತಿಲ್ಲ. ಇಂಥದೊಂದು ಪ್ರಬಲ ಬಾಂಧವ್ಯದ ಹಿಂದಿರುವ ಶಕ್ತಿ ಅಮಿತ್ ಷಾ ಎಂಬುದು ನಿರ್ವಿವಾದ.

ಬಿಜೆಪಿಯ ಅಧ್ಯಕ್ಷರಾಗಿ ಷಾ ಈಗಷ್ಟೇ 3 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಪಕ್ಷದ ನೊಗ ಹೊರುವಂತೆ ಅವರನ್ನು ಕೇಳಿಕೊಂಡಾಗ, ಅವರ ರಾಜಕೀಯ ಅನುಭವವನ್ನು ಶಂಕಿಸಿದ ಅನೇಕರು, ‘ದೆಹಲಿ ರಾಜಕಾರಣದೊಂದಿಗೆ ಅಂಥದೇನೂ ನಂಟಿಲ್ಲದ ಅನನುಭವಿ’ ಎಂದೇ ಡಂಗುರ ಬಾರಿಸಿದ್ದು ಹೌದು. ಆದರೆ, 2014ರಲ್ಲಿ ಉತ್ತರಪ್ರದೇಶದಲ್ಲಿ ಪಕ್ಷದ ಭಾರಿ ಸಾಧನೆಗೆ, ಈ ಭರ್ಜರಿ ಯಶಸ್ಸು 2017ರಲ್ಲೂ ಮರುಕಳಿಸಿದ್ದಕ್ಕೆ ಅಮಿತ್ ಕಾರ್ಯಶೈಲಿಯೇ ಕಾರಣ ಎಂಬುದನ್ನು ಈ ಟೀಕಾಕಾರರು ಮರೆತಿದ್ದು ವಿಷಾದನೀಯ.

ಈ 3 ವರ್ಷಗಳ ಅವಧಿಯಲ್ಲಿ, ‘ಏರಲಾಗದ ಎತ್ತರ’ ಎಂದೇ ಪರಿಗಣಿತವಾಗಿದ್ದ ಯಶಸ್ಸಿನ ಅನೇಕ ಶಿಖರಗಳನ್ನು ಬಿಜೆಪಿ ಏರಿದೆ. ಪಕ್ಷದ ಭೌಗೋಳಿಕ ವ್ಯಾಪ್ತಿ ಬಹುಪಟ್ಟು ಹೆಚ್ಚಿರುವುದು ಮಾತ್ರವಲ್ಲದೆ, 13 ರಾಜ್ಯಗಳಲ್ಲಿ ಗದ್ದುಗೆ ಅಲಂಕರಿಸುವಷ್ಟು ಮತ್ತು 4 ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ ನಡೆಸುವಷ್ಟು ಪಾರಮ್ಯವನ್ನೂ ಅದು ಮೆರೆಯುತ್ತಿದೆ. 1,350 ಶಾಸಕರು ಮತ್ತು 330 ಸಂಸದರನ್ನು ತೆಕ್ಕೆಯಲ್ಲಿಟ್ಟುಕೊಂಡಿರುವ ಪಕ್ಷವಿಂದು ದೇಶದ ಅತಿದೊಡ್ಡ ರಾಜಕೀಯ ಅಸ್ತಿತ್ವ ಎನಿಸಿಕೊಂಡಿದೆ. ಅಮಿತ್ ನಾಯಕತ್ವ, ಜನಾಕರ್ಷಕ ಶಕ್ತಿಯಿಂದಾಗಿ ಒಂದಾದ ಮೇಲೊಂದು ರಾಜ್ಯಗಳಲ್ಲಿ ಬಿಜೆಪಿ ಮಿರುಗುತ್ತಿದೆ. ಪಕ್ಷ ದುರ್ಬಲವಾಗಿದೆ ಎಂದು ಪರಿಗಣಿಸಲ್ಪಟ್ಟಿರುವ ರಾಜ್ಯಗಳಲ್ಲೂ, ಪರಿಣಾಮಕಾರಿ ಮತಗಳಿಕೆ ದಾಖಲಿಸಿದೆ. ಚುನಾವಣೆ ಸ್ಥಳೀಯ ಸಂಸ್ಥೆಗಳದ್ದೇ ಇರಲಿ ಲೋಕಸಭೆಯದ್ದೇ ಇರಲಿ, ಪಕ್ಷ ಜಯಭೇರಿ ಬಾರಿಸುವುದನ್ನು ಅಮಿತ್ ಖುದ್ದು ಖಾತ್ರಿಪಡಿಸುತ್ತಾರೆ.

ಬೈಠಕ್-ಭೋಜನ-ವಿಶ್ರಾಮಗಳಲ್ಲೇ ತೊಡಗಿಸಿಕೊಂಡಿರುವ ಪಕ್ಷ ಎಂಬುದಾಗಿ ಬಿಜೆಪಿ ಕುರಿತು ಕುಹಕವಾಡಲಾಗುತ್ತಿತ್ತು. ಇಂಥ ಚಿತ್ತಸ್ಥಿತಿ ಬದಲಿಸಿದ ಅಮಿತ್, ಪಕ್ಷದೆಡೆಗಿನ ಅಚಲ ಬದ್ಧತೆ ಮತ್ತು ಸಮರ್ಪಣಾ ಮನೋಭಾವವನ್ನು ಕಾರ್ಯಕರ್ತರಲ್ಲಿ ಎರಕ ಹೊಯ್ದರೆನ್ನಬೇಕು. ತನ್ನ ಪಾರಮ್ಯಕ್ಕೆ ಯಾವುದೇ ವಿಪಕ್ಷವಾಗಲಿ ಒಕ್ಕೂಟವಾಗಲಿ ಸವಾಲೊಡ್ಡಲಾಗದಂಥ ಔನ್ನತ್ಯಕ್ಕೆ ಬಿಜೆಪಿಯಿಂದು ಏರಿದ್ದರೆ ಅಮಿತ್ ಅವರ ಅಮಿತ ಬದ್ಧತೆ, ಪರಿಶ್ರಮವೇ ಅದಕ್ಕೆ ಕಾರಣವೆಂಬುದು ದಿಟ. ಎಂದಿಗೂ ತಪು್ಪ ನಿರ್ಧಾರ ಕೈಗೊಳ್ಳದ ಅಮಿತ್ ನಿಜಾರ್ಥದಲ್ಲಿ ಸ್ವತಂತ್ರ ಚಿಂತಕರೇ ಸರಿ. ಯಾವುದೇ ಸವಾಲನ್ನು ನಿಭಾಯಿಸುವಲ್ಲಿ ತೋರುವ ವಿಭಿನ್ನತೆಗೆ ಅವರು ಹೆಸರುವಾಸಿ. ಅವರ ಕುಶಾಗ್ರಮತಿಗೆ ಹಲವು ಉದಾಹರಣೆ ನೀಡಬಹುದು. ‘ಮಿಸ್ಡ್ ಕಾಲ್’ ನೀಡುವ ಮೂಲಕ ಬೃಹತ್ ಸದಸ್ಯತ್ವ ಅಭಿಯಾನ ಕಾರ್ಯತಂತ್ರ ಅವರ ದೂರದೃಷ್ಟಿಗೊಂದು ಉತ್ತಮ ಉದಾಹರಣೆ. ಈ ತಂತ್ರವನ್ನು ರಾಜಕೀಯ ಪಂಡಿತರು, ಸಿನಿಕರು ಟೀಕಿಸಿದರೆ, ವಿಪಕ್ಷಗಳು ಜಿಗುಪ್ಸೆ ಹುಟ್ಟಿಸುವ ರೀತಿಯಲ್ಲಿ ಬೊಬ್ಬೆಯಿಟ್ಟವು; ಆದರೆ ಅಮಿತ್ ತಮ್ಮ ನಿಲುವಿಗೆ ಬದ್ಧರಾಗಿದ್ದರು. ಅವರ ಇಂಥ ದೃಢನಂಬಿಕೆ, ಬದ್ಧತೆಯಿಂದಾಗಿಯೇ ಬಿಜೆಪಿ 11 ಕೋಟಿಗೂ ಹೆಚ್ಚು ಸಕ್ರಿಯ ಸದಸ್ಯರನ್ನು ಹೊಂದುವ ಮೂಲಕ ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿಕೊಂಡಿದೆ. ಅಗಾಧ ಜನಸಂಪರ್ಕ ಹಾಗೂ ಮೂಲಮಟ್ಟದ ಕಾರ್ಯಕರ್ತನಾಗಿ ದಕ್ಕಿಸಿಕೊಂಡಿರುವ ಅನುಭವ, ಅಮಿತ್​ಗೆ ಇಂಥ ವಿಶಿಷ್ಟ ಆಂದೋಲನದ ಕುರಿತಾದ ಚಿಂತನೆಗೆ ನೆರವಾದವೆನ್ನಬೇಕು. ಪಕ್ಷವು ಕ್ಷಿಪ್ರವಾಗಿ ಬೆಳೆದು ರಾಜಕೀಯ ಯಶಸ್ಸುಗಳನ್ನು ದಾಖಲಿಸುತ್ತಲೇ ಹೋಗಿದ್ದಕ್ಕೆ ಕಾರಣವಾಗಿದ್ದು ಅವರ ದಿಟ್ಟನಿರ್ಣಯಗಳು. ಹೀಗಾಗಿ ಅಮಿತ್​ರನ್ನು ಕಟುವಾಗಿ ಟೀಕಿಸುತ್ತಿದ್ದವರೂ ಅವರ ಸಾಮರ್ಥ್ಯಗಳನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ.

ಪಕ್ಷವೊಂದು ಅಧಿಕಾರಕ್ಕೆ ಬಂದ ನಂತರ, ಅದರ ಸಂಘಟನೆಯು ಆಡಳಿತ ವ್ಯವಸ್ಥೆಯ ಕಾರುಬಾರಿಗೆ ಅಧೀನವಾಗಿ ವರ್ತಿಸಲು ಶುರುಮಾಡುತ್ತದೆ ಎಂಬುದು ವ್ಯಾಪಕ ಗ್ರಹಿಕೆ. ಆದರೆ ಅಮಿತ್ ನೇತೃತ್ವದ ಪಕ್ಷವು ಲೋಕಸಭಾ ಚುನಾವಣಾ ಯಶಸ್ಸಿಗೂ ಮುಂಚೆ ಇರುತ್ತಿದ್ದಷ್ಟೇ ಸುಸಂಗತವಾಗಿದೆ, ಸ್ಪಂದನಶೀಲವಾಗಿದೆ ಎಂಬುದು ಗಮನಾರ್ಹ. ಸರ್ಕಾರಕ್ಕೆ ನೆರವಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಸಂಘಟನೆಗೆ ಮಹತ್ವ ದಕ್ಕಿರುವುದಂತೂ ಹೌದು. ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳುವ ಹಾಗೂ ಬಡವಾತಿಬಡವರಿಗೆ ಜನಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮುಂಚೂಣಿಯಲ್ಲಿದ್ದು ರಾಷ್ಟ್ರವನ್ನು ಮುನ್ನಡೆಸುತ್ತಿದ್ದರೆ, ಸರ್ಕಾರದ ಸಂದೇಶವನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುತ್ತಿರುವ ಅಮಿತ್ ಷಾ, ಅದರಿಂದ ದಕ್ಕುವ ಹಿಮ್ಮಾಹಿತಿಯನ್ನು ಸರ್ಕಾರಕ್ಕೆ ನೀಡುತ್ತಿದ್ದಾರೆ. ಬಡವರಿಗೆ ಮೀಸಲಾದ ಎಲ್ಲ ಪ್ರಯೋಜನಗಳು ಅವರಿಗೆ ತಲುಪುವಂತಾಗುವುದನ್ನು ಪಕ್ಷದ ಕಾರ್ಯಕರ್ತರ ಮೂಲಕ ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ.

ಜನಧನ, ಜನಸುರಕ್ಷಾ, ಉಜ್ವಲಾ, ಮುದ್ರಾ, ಪಂಡಿತ್ ದೀನದಯಾಳ್ ಗ್ರಾಮೀಣ ವಿದ್ಯುದೀಕರಣ ಯೋಜನೆಗಳು ಮತ್ತು ಸ್ವಚ್ಛಭಾರತ ಆಂದೋಲನದಂಥ ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮೋದಿ ವ್ಯಸ್ತರಾಗಿದ್ದರೆ, ಅವುಗಳ ಕ್ಷಿಪ್ರ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಅಮಿತ್ ತೊಡಗಿಸಿಕೊಂಡಿದ್ದಾರೆ. ಪಕ್ಷ ಸಂಘಟನೆಯ ಒತ್ತಾಸೆಯೂ ಇದಕ್ಕಿದೆ.

ಬಿಜೆಪಿ ಬೇರುಗಳು ಭಾರತೀಯ ರಾಜಕೀಯ ವ್ಯವಸ್ಥೆಯ ಆಳಕ್ಕಿಳಿಯುವಂತಾಗಬೇಕು, ಯಾರೂ ಸುಲಭವಾಗಿ ಅದರ ಮೂಲೋತ್ಪಾಟನ ಮಾಡುವಂತಾಗಬಾರದು ಎಂಬ ಕಾರ್ಯಭಾರಕ್ಕೆ ಅಮಿತ್ ಬದ್ಧರು. ಈ ದೂರದೃಷ್ಟಿ ಇಟ್ಟುಕೊಂಡೇ ಅವರು ಪಂಡಿತ್ ದೀನದಯಾಳ್ ಕಾರ್ಯವಿಸ್ತಾರ ಯೋಜನೆ ಆರಂಭಿಸಿದ್ದು, ಇಲ್ಲಿ ಪಕ್ಷ ಮತ್ತು ಸರ್ಕಾರದ ಸಾಧನೆಗಳ ಕುರಿತು ಕಾರ್ಯಕರ್ತರಿಗೆ ತಿಳಿಹೇಳಲಾಗುತ್ತದೆ ಮತ್ತು ಅದನ್ನು ಅವರು ಜನಸಮುದಾಯಕ್ಕೆ ತಲುಪಿಸುತ್ತಾರೆ. ತಮ್ಮ ಈ ಧ್ಯೇಯವು ಯಶಸ್ವಿಯಾಗಿ ನೆರವೇರುವುದನ್ನು ಖಾತ್ರಿಪಡಿಸಿಕೊಳ್ಳಲು ಪಕ್ಷದ 4 ಲಕ್ಷ ಕಾರ್ಯಕರ್ತರನ್ನು ಅಮಿತ್ ಈಗಾಗಲೇ ಭಾರತದ ಉದ್ದಗಲಕ್ಕೂ ಕಳಿಸಿದ್ದಾರೆ.

ಮೃದುಮಾತಿನ ನಿತಿನ್ ಷಾ ಕೆಲಸದ ವಿಷಯದಲ್ಲಿ ಕಟ್ಟುನಿಟ್ಟಿನ ‘ಟಾಸ್ಕ್ ಮಾಸ್ಟರ್’. ಹಿಡಿದ ಕೆಲಸದಿಂದ ಹಿಂದೆಗೆಯುವುದು ಅವರ ಜಾಯಮಾನದಲ್ಲೇ ಇಲ್ಲ. ಅತಿದೊಡ್ಡ ರಾಜಕೀಯ ಪಕ್ಷದ ಅಗ್ರಗಣ್ಯ ನಾಯಕರೊಬ್ಬರು ಲಕ್ಷದ್ವೀಪದಲ್ಲಿ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಬೆರೆತು ನಿರಂತರ ಮೂರು ದಿನಗಳವರೆಗೆ ಪ್ರಚಾರ ನಡೆಸಿದ್ದನ್ನು ಭಾರತೀಯ ರಾಜಕಾರಣದಲ್ಲಿ ನೀವೆಂದಾದರೂ ಕೇಳಿದ್ದುಂಟೇ? ಇದೇ ಅಮಿತ್ ಕಾರ್ಯವೈಖರಿ! ಈಶಾನ್ಯ ಭಾರತದ ಜನರು ಮತ್ತು ನಾಯಕರ ಪರಾಧೀನತೆಯನ್ನು ಅಂತ್ಯಗೊಳಿಸಲೆಂದು ರೂಪುಗೊಂಡ ‘ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ’ (ಘಟ್ಟಠಿಜಉಚಠಠಿ ಈಛಿಞಚ್ಚ್ಟಠಿಜ್ಚಿ ಅ್ಝಚ್ಞ್ಚ ಘಉಈಅ)ಕ್ಕೆ ಅವರೇ ಅಧ್ವರ್ಯು. ಸ್ಥಳೀಯ ಮಟ್ಟದ ಚುನಾವಣೆಗಳಲ್ಲೂ ಅವರು ತೀವ್ರೋತ್ಸಾಹದಿಂದ ತೊಡಗಿಸಿಕೊಂಡ ಕಾರಣದಿಂದಲೇ ಒಡಿಶಾದಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡುವಂತಾಯಿತು ಮತ್ತು ಮಹಾರಾಷ್ಟ್ರದಲ್ಲಿ ಒಂದು ಕಾಲಕ್ಕೆ ಪ್ರಬಲ ಸಹಭಾಗಿಯಾಗಿದ್ದ ಶಿವಸೇನೆಯನ್ನು ಹಿಂದಿಕ್ಕುವುದು ಸಾಧ್ಯವಾಯಿತು.

ಬಿಜೆಪಿಯ ಅಧ್ಯಕ್ಷಗಿರಿ ವಹಿಸಿಕೊಂಡಾಗಿನಿಂದ 300ಕ್ಕೂ ಹೆಚ್ಚು ಬಾರಿ ಪ್ರವಾಸ ಕೈಗೊಂಡು 5.6 ಲಕ್ಷ ಕಿ.ಮೀ.ಗೂ ಹೆಚ್ಚು ಅಂತರವನ್ನು ಕ್ರಮಿಸಿದ್ದಾರೆ ಅಮಿತ್. ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತಾಡುವುದರ ಜತೆಗೆ, ಬೂತ್ ಮಟ್ಟದ ಕಾರ್ಯಕರ್ತರು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗುವುದನ್ನು ಖಾತ್ರಿಪಡಿಸಿದ್ದಾರೆ. ಇಂಥ ದಣಿವರಿಯದ ದುಡಿಮೆಯ ಫಲ ಎಲ್ಲರೆದುರಿದ್ದು, ವಿಶ್ಲೇಷಣೆಗೆ ಮುಕ್ತವಾಗಿದೆ. ಪಕ್ಷದ ಎಲ್ಲ ಸ್ತರದ ಕಾರ್ಯಕರ್ತರಿಗೆ ಅವರು ಆಯೋಜಿಸಿದ ತರಬೇತಿ ಕಾರ್ಯಕ್ರಮಗಳಿಂದಾಗಿ ಇಂದು 8 ಲಕ್ಷಕ್ಕೂ ಹೆಚ್ಚು ಮಂದಿ ಪರಿಣತರಾಗಿದ್ದು ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾದರೂ ಅಖಾಡಕ್ಕಿಳಿಯುವುದಕ್ಕೆ ಸಜ್ಜಾಗಿದ್ದಾರೆ. ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ಇಂಥದೊಂದು ಭಾರಿ ಕಸರತ್ತು ನಡೆದ ನಿದರ್ಶನವಿಲ್ಲ.

ದೇಶದ ಎಲ್ಲ ರಾಜ್ಯಗಳಿಗೆ ಕನಿಷ್ಠಪಕ್ಷ 2ರಿಂದ 3 ದಿನಗಳವರೆಗೆ ಭೇಟಿನೀಡುವ 110 ದಿನಗಳ ಸುದೀರ್ಘ ಅಖಿಲ ಭಾರತ ಪ್ರವಾಸದಲ್ಲೀಗ ವ್ಯಸ್ತರಾಗಿರುವ ಅಮಿತ್, ನುರಿತ ಕೆಲಸಗಾರರು, ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಬೆರೆತು ವಿಚಾರ ವಿನಿಮಯ ಮಾಡುತ್ತ, ನಾಯಕರನ್ನು ರೂಪಿಸುತ್ತ ತನ್ಮೂಲಕ ಪಕ್ಷದ ಬಲವರ್ಧನೆಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಉತ್ಸಾಹ, ಕ್ರಿಯಾಶೀಲತೆ ಕಂಡ ಎದುರಾಳಿಗಳು, ಇವರೇನು ಅಖಿಲಭಾರತ ಮಟ್ಟದಲ್ಲಿ ಅಸ್ತಿತ್ವ ಹೊಂದಿರುವ ಆಡಳಿತ ಪಕ್ಷವೊಂದರ ಅಧ್ಯಕ್ಷರೋ ಅಥವಾ ವಿಪಕ್ಷ ನಾಯಕರೋ? ಎಂದು ನಿಬ್ಬೆರಗಾಗುವಂತಾಗಿದೆ!

2014ರ ಚುನಾವಣಾ ಫಲಿತಾಂಶಗಳ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ದಾಖಲಿಸಿದ ಅದ್ಭುತ ಯಶಸ್ಸಿನ ಹಿನ್ನೆಲೆಯಲ್ಲಿ ಅಮಿತ್​ರನ್ನು ‘ಪಂದ್ಯದ ಪುರುಷೋತ್ತಮ’ (ಮ್ಯಾನ್ ಆಫ್ ದ ಮ್ಯಾಚ್) ಎಂದೇ ಕರೆದಿದ್ದರು; 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಅಮಿತ್​ರ ಪರಿಶ್ರಮದ ದುಡಿಮೆ ಹಾಗೂ ಸಾಟಿಯಿಲ್ಲದ ತಂತ್ರಗಾರಿಕೆ ಬಿಜೆಪಿಗೆ ಅಸಾಧಾರಣ ಗೆಲುವು ತಂದುಕೊಡಲಿರುವುದು ಮಾತ್ರವಲ್ಲದೆ, ‘ಸರಣಿಯ ಪುರುಷೋತ್ತಮ’ (ಮ್ಯಾನ್ ಆಫ್ ದ ಸೀರೀಸ್) ಎಂಬ ಗೌರವದ ಹಕ್ಕುದಾರರನ್ನಾಗಿಸಲಿರುವುದು ನಿರ್ವಿವಾದ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top