ಅಸಮಾನತೆ ವಿರುದ್ಧದ ಹೋರಾಟ ಸ್ಮರಣೀಯ

blank

ಪಾಂಡವಪುರ: ಜಾತಿ ವ್ಯವಸ್ಥೆ, ಅಸ್ಪಶ್ಯತೆ, ಅಸಮಾನತೆಯ ವಿರುದ್ಧ ಬಸವಣ್ಣ 12ನೇ ಶತಮಾನದಲ್ಲಿ ಹೋರಾಟ ನಡೆಸಿ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಸುಧಾರಣೆಗೆ ನಾಂದಿ ಹಾಡಿದರು ಎಂದು ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

blank

ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶ್ರೀ ಜಗಜ್ಯೋತಿ ಬಸವಣ್ಣನವರ 892ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆಧ್ಯಾತ್ಮಿಕ, ಸಮಾನತೆ, ಅಸ್ಪಶ್ಯತೆ ವಿಚಾರವಾಗಿ ಅನುಭವ ಮಂಟಪದ ಮೂಲಕ ಜನರಿಗೆ ಅರಿವು ಮೂಡಿಸಿದರು. ಬಸವಣ್ಣನ ಆದರ್ಶ, ಹೋರಾಟ ಮತ್ತು ಸಾಮಾಜಿಕ ಕಳಕಳಿಯನ್ನು ಈಗಲೂ ಸ್ಮರಿಸುತ್ತಿದ್ದೇವೆ ಎಂದರೆ ಅವರ ದಿವ್ಯತೆ ಎಷ್ಟಿರಬಹುದು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಅನುಭವ ಮಂಟಪದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಭಾಗವಹಿಸಿ ತಮ್ಮ ವಿಚಾರಗಳನ್ನು ಚರ್ಚಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದರು. ಬಸವಣ್ಣನವರು ಕನ್ನಡ ಭಾಷೆಯ ಮೂಲಕವೇ ಜನರಿಗೆ ಅರಿವು ಮೂಡಿಸಿ ಭಗವಂತನನ್ನು ಅರ್ಥೈಸುವ ಕೆಲಸ ಮಾಡಿದ್ದರು ಎಂದರು.

ಚಂದ್ರವನ ಆಶ್ರಮದ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಲಿಂಗ ಭೇದ, ಅಸಮಾನತೆ ಹೋಗಲಾಡಿಸಿದರು. ದೇವರನ್ನು ಗರ್ಭಗುಡಿಯಲ್ಲಿಟ್ಟು ಪೂಜಿಸದೆ ಇಷ್ಟಲಿಂಗ ಧಾರಣೆ ಮೂಲಕ ಎದೆಯ ಮೇಲೆ ಇಟ್ಟುಕೊಂಡು ಪೂಜಿಸುವಂತೆ ಬದಲಾವಣೆ ತಂದರು. ನಾವು ಪೂಜಿಸುವ ಲಿಂಗಕ್ಕೆ ಭೇದ ಭಾವವಿಲ್ಲ. ಮನುಷ್ಯರಲ್ಲಿ ಏಕೆ ಭೇದ ಭಾವ ಎಂದು ತಿಳಿಸಿದ ಮಹಾನ್‌ಪುರುಷರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸುತ್ತೂರು ಮಠಕ್ಕೂ ಪಾಂಡವಪುರಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀಗಳು 2009-10ರಲ್ಲಿ ಸುತ್ತೂರು ಜಾತ್ರೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದೀಗ ಮತ್ತೆ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಜಾತ್ರೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪಟ್ಟಣದಲ್ಲಿ ಬಸವ ಭವನ ನಿರ್ಮಾಣ ಮಾಡಬೇಕೆಂಬುದು ಬಹುದಿನ ಬೇಡಿಕೆಯಾಗಿದೆ. ಅಗತ್ಯ ನಿವೇಶನ ಮಂಜೂರು ಮಾಡಿಸಿಕೊಟ್ಟರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೂಲಕ ಸಿಎಸ್‌ಆರ್ ಅನುದಾನ ತಂದು ಬಸವ ಭವನ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಬಸವಣ್ಣ ನಾಡಿನ ಸಾಂಸ್ಕೃತಿಕ ರಾಯಭಾರಿ. ಸಮ ಸಮಾಜ ನಿರ್ಮಾಣಕ್ಕೆ ಹೋರಾಡಿದರು. ಬಸವಣ್ಣನವರು ಒಂದು ಜಾತಿಗೆ ಸೀಮಿತಗೊಂಡವರಲ್ಲ, ಅವರು ವಿಶ್ವಮಾನವರು. ಎಲ್ಲ, ಜಾತಿ, ಜನಾಂಗದವರು ಸೇರಿ ಅವರ ಜಯಂತಿ ಆಚರಣೆ ಮಾಡಿದಾಗ ಮಾತ್ರ ಸಾರ್ಥಕತೆ ಬರುತ್ತದೆ. ಪ್ರತಿಯೊಬ್ಬ ವೀರಶೈವ ಲಿಂಗಾಯತರು ಧರ್ಮಪಾಲನೆ ಮಾಡಬೇಕು. ಕೆಲವು ಪಟ್ಟಭದ್ರರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತರ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂ. ಅನುದಾನ ಘೋಷಿಸಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮಕ್ಕೆ 300 ಕೋಟಿ ರೂ. ಅನುದಾನ ನೀಡಿದ್ದಾರೆ. ಬಡವರು, ರೈತರು ಸಹಾಯ ಧನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಮಂಜೂರು ಮಾಡಿಕೊಡುವ ಮೂಲಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಪಟ್ಟಣದ ಬನ್ನಾರಿ ಮಾರಮ್ಮನ ದೇವಸ್ಥಾನದಿಂದ ವಿವಿಧ ಕಲಾತಂಡಗಳೊಂದಿಗೆ ಬಸವಣ್ಣನವರ ಪುತ್ಥಳಿಯನ್ನು ಪೂರ್ಣಕುಂಭದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.

ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕುಂದೂರು ಮಠದ ಡಾ.ಶ್ರೀ ಶರತ್‌ಚಂದ್ರ ಸ್ವಾಮೀಜಿ, ಸಾಲೂರು ಮಠದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ತಾಳಶಾಸನ ಎಸ್.ಆನಂದ್, ತಾಲೂಕು ಘಟಕದ ಅಧ್ಯಕ್ಷ ಎಂ.ಶಿವಕುಮಾರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ನಿವೃತ್ತ ಉಪವಿಭಾಗಾಧಿಕಾರಿ ಚಿಕ್ಕತಮ್ಮಯ್ಯ, ಮುಖಂಡರಾದ ಎಸ್.ಎ.ಮಲ್ಲೇಶ್, ಅಮೃತಿ ರಾಜಶೇಖರ್, ಸಾಹಿತಿ ದ್ಯಾವಪ್ಪ, ಸಿದ್ದಪ್ಪ, ಬುಳ್ಳಪ್ಪ, ಸುಜೇಂದ್ರಕುಮಾರ್ ಇತರರು ಇದ್ದರು.

Share This Article
blank

ಮಳೆಗಾಲದಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು! rainy season

rainy season: ಈಗಾಗಲೇ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಈ ಹವಾಮಾನ  ಅನೇಕ ರೋಗಗಳು ಮತ್ತು ಸೋಂಕುಗಳ…

ಈ ವಿಷಯಗಳಲ್ಲಿ ಪುರುಷರು ಮಹಿಳೆಯರ ಮುಂದೆ ನಿಲ್ಲಲು ಸಾಧ್ಯವಿಲ್ಲ! Chanakya Niti

Chanakya Niti : ಆಚಾರ್ಯ ಚಾಣಕ್ಯ ರಾಜಕೀಯ, ಸಮಾಜ, ಸಂಬಂಧಗಳು ಮತ್ತು ಜೀವನದ ಸೂಕ್ಷ್ಮ ವ್ಯತ್ಯಾಸಗಳನ್ನು…

blank