ಅಸಮಾನತೆ ತೊಲಗಲಿ

ದೇವನಹಳ್ಳಿ: ದೇಶದ ಶೇ.16.35 ದಲಿತ ಮಹಿಳೆಯರು ದೌರ್ಜನ್ಯದ ನಡುವೆ ಬದುಕು ಸವೆಸುತ್ತಿದ್ದಾರೆ ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಚಾಲಕ ಬಸವರಾಜ್ ಕೌತಾಳ್ ಅಭಿಪ್ರಾಯಪಟ್ಟರು.

ದಲಿತ ವಿಮೋಚನೆ ಮಾನವಹಕ್ಕುಗಳ ವೇದಿಕೆಯಿಂದ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜಾತಿ, ಲಿಂಗ, ಧಾರ್ಮಿಕ ಅಸಮಾನತೆಯ ವಿಶ್ಲೇಷಣೆ, ದಲಿತ ಮಹಿಳೆಯರ ಸಬಲೀಕರಣ ಹಾಗೂ ನಾಯಕತ್ವ ಕುರಿತು ಜಿಲ್ಲಾಮಟ್ಟದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಮಹಿಳೆ ಯರ ಮೇಲೆ ಅತ್ಯಾಚಾರ, ದಲಿತರ ಮನೆಗಳ ಮೇಲೆ ದಾಳಿ, ಕೊಲೆ ಪ್ರಕರಣ ನಿತ್ಯ ನಡೆಯುತ್ತಿವೆ. ಸ್ವತಂತ್ರ ಭಾರತದಲ್ಲಿ ದಲಿತರ ಮೇಲಿನ ದಮನ, ಶೋಷಣೆ ಹಾಗೂ ಹತ್ಯಾಕಾಂಡ ನಿತ್ಯದ ವಿದ್ಯಮಾನಗಳಾಗಿಯೇ ಮುಂದುವರಿಯುತ್ತಿವೆ ಎಂದು ಬೇಸರಿಸಿದರು.

ದಲಿತ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಮುಂದೆ ಬಂದು, ನಮ್ಮವರನ್ನು ಜಾಗೃತಿಗೊಳಿಸದ ಹೊರತು ಈ ಶೋಷಣೆ, ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದರು.

ಸಂಘಟನೆ ತಾಲೂಕು ಸಂಚಾಲಕ ಡಿ.ಎಂ.ಕುಮಾರ್ ಮಾತನಾಡಿ, ಇಂತಹ ವಿಚಾರಗೋಷ್ಠಿಗಳು ಶೋಷಿತರಿಗೆ ಪ್ರಸಕ್ತ ಸಂದರ್ಭದಲ್ಲಿ ಅನಿವಾರ್ಯ. ನಮಗೆ ನಾವೇ ಎಚ್ಚೆತ್ತುಕೊಳ್ಳದೆ ಹೋದರೆ ಈ ಮಡಿವಂತಿಕೆಯ ಸಮಾಜದಲ್ಲಿ ಇನ್ನಷ್ಟು ತುಳಿತಕ್ಕೊಳಗಾಗಬೇಕಾದೀತು ಎಂದರು.

ಸಂಘಟನೆ ಜಿಲ್ಲಾ ಸಂಚಾಲಕಿ ರಾಮಕ್ಕ ಚಂದ್ರು ಮಾತನಾಡಿ, ಸಾಮಾಜಿಕ ನ್ಯಾಯ, ಸಮಾನತೆ ಸಾಧಿಸಲು ನಮಗೆ ಹೊಸ ಸಿದ್ಧತೆ ಬೇಕಾಗಿದೆ. ಸ್ತ್ರೀ-ಪುರುಷರು ಸಮಾನರೆಂದ ಸಮಾನತೆಯ ಶಿಲ್ಪಿ ಡಾ. ಅಂಬೇಡ್ಕರ್ ಅವರ ಮಾರ್ಗದಲ್ಲಿ ದಲಿತ ಚಳವಳಿ ಕಟ್ಟಬೇಕಿದೆ ಎಂದರು.

ದೇಶದಲ್ಲಿ ಜಾತಿಯ ಕ್ರಾಂತಿಯಾಗಬೇಕಿದೆ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಆದರೆ ಇಂದಿಗೂ ಜಾತಿಯ ಅಸಮಾನತೆ ಮುಂದುವರಿದಿದೆ. ಇಂದಿಗೂ ದಲಿತರಿಗೆ ಹಲವೆಡೆ ಕ್ಷೌರ ಮಾಡುವುದಿಲ್ಲ. ದೇವಾಲಯಕ್ಕೆ ಪ್ರವೇಶ ನೀಡುವುದಿಲ್ಲ. ಅಂಗನವಾಡಿಗಳಲ್ಲಿ ದಲಿತರು ಮಾಡಿದ ಬಿಸಿಯೂಟವನ್ನು ಸವರ್ಣೀಯ ಮಕ್ಕಳು ತಿನ್ನುವುದಿಲ್ಲ. ಒತ್ತಾಯ ಮಾಡಿದರೆ ಅವರ ಮಕ್ಕಳನ್ನು ಅಲ್ಲಿಗೆ ಕಳುಹಿಸುವುದೇ ಇಲ್ಲ. ದಲಿತ ವಿದ್ಯಾವಂತರನ್ನು ಸಹ ಮಾನಸಿಕವಾಗಿ ಹಿಂಸಿಸಿ ಬಲಿಪಡೆಯುತ್ತಿದ್ದಾರೆ. ದಲಿತರ ಬಡತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ದಿಸೆಯಲ್ಲಿ ಜಾಗೃತಿ ಅವಶ್ಯ ಅದರಲ್ಲೂ ದಲಿತ ಮಹಿಳೆಯರು ಸಂಘಟಿತರಾಗಿ ಹೋರಾಟದ ಶಕ್ತಿಯಾಗಿ ಹೊರಬರಬೇಕಿದೆ ಎಂದರು.

ಜಿಲ್ಲಾ ಸಂಚಾಲಕ ಆರ್.ಮೈಲಾರಪ್ಪ ಎಸ್.ನಾಗೇನಹಳ್ಳಿ, ನೆಲಮಂಗಲ ತಾಲ್ಲೂಕು ಸಂಚಾಲಕಿ ಎಸ್.ಉಮಾದೇವಿ, ಜಿಲ್ಲಾ ಸಂಚಾಲಕಿ ಸುಮಿತ್ರ, ತಾಲ್ಲೂಕು ಸಂಚಾಲಕರಾದ ಬಿ.ಎಸ್.ಬಸವರಾಜ್, ದೊಡ್ಡಬಳ್ಳಾಪುರದ ಎನ್.ಎ.ನಾಗರಾಜ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *