ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ಉದ್ಯೋಗ, ಆದಾಯ ಎರಡೂ ಇಲ್ಲದೆ ಸಂಕಷ್ಟದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರು ಇದೀಗ ಸರ್ಕಾರ ೋಷಿಸಿರುವ ಆರ್ಥಿಕ ಸಹಾಯಧನ ಪಡೆಯಲು ಪರದಾಡುತ್ತಿದ್ದಾರೆ. ಉದ್ಯೋಗ ಪ್ರಮಾಣ ಪತ್ರ ಇಲ್ಲದ್ದರಿಂದ ಅದನ್ನು ಪಡೆಯಲು ಸ್ಥಳೀಯ ಸಂಸ್ಥೆ ಕಚೇರಿಗೆ ಅಲೆದಾಡುತ್ತಿದ್ದಾರೆ.
ಸರ್ಕಾರವು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಒಂದು ಬಾರಿ ಪರಿಹಾರವಾಗಿ 2,000 ರೂ. ಆರ್ಥಿಕ ನೆರವು ಘೋಷಿಸಿದೆ. ಆದರೆ, ದಾಖಲೆಗಳ ಹೊಂದಾಣಿಕೆ, ಉದ್ಯೋಗ ಪ್ರಮಾಣ ಪತ್ರ ಹಾಗೂ ಸೇವಾಸಿಂಧು ಪೋರ್ಟಲ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ಬಡ ಕಾರ್ಮಿಕರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದು, ನಿತ್ಯದ ಜೀವನ ಗೋಳಾಟವಾಗಿದೆ.
ಸ್ಮಾರ್ಟ್ ಕಾರ್ಡ್: ಕರೊನಾ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜೂ. 14ರ ವರೆಗೆ ಘೋಷಿಸಿರುವ ಲಾಕ್‌ಡೌನ್‌ನಿಂದ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್‌ಗಳು, ಮೆಕಾನಿಕ್, ಬೀದಿ ವ್ಯಾಪಾರಿಗಳು, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹೀಗೆ ಅನೇಕ ಕಾರ್ಮಿಕರು ಆದಾಯ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಅವರಿಗೆಲ್ಲ 11 ಅಸಂಘಟಿತ ವಲಯದಲ್ಲಿ ಏಕ ಶೀರ್ಷಿಕೆ ಮತ್ತು ಏಕ ಚಿಹ್ನೆಯಡಿ ನೋಂದಾಯಿಸಿ, ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ’ಯಡಿ ಸ್ಮಾರ್ಟ್ ಕಾರ್ಡ್ ನೀಡಲು ಕಾರ್ಮಿಕ
ಇಲಾಖೆ ಕ್ರಮ ಕೈಗೊಂಡಿದೆ.
3 ಲಕ್ಷ ಅರ್ಜಿ ವಿತರಣೆ: ಯೋಜನೆಯಡಿ ಹೆಸರು ನೋಂದಾಯಿಸಲು 3 ಲಕ್ಷ ಅರ್ಜಿ ಮುದ್ರಿಸಿ ಉದ್ದೇಶಿತ ವಲಯದ ಕಾರ್ಮಿಕರು, ಸಂಘಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೂ ವಿತರಿಸಲಾಗಿದೆ. ರಾಜ್ಯದಲ್ಲಿ ಈವರೆಗೆ 60,763 ಅರ್ಜಿಗಳನ್ನು ಮಂಡಳಿ ಸ್ವೀಕರಿಸಿದ್ದು, 25,063 ಸ್ಮಾರ್ಟ್ ಕಾರ್ಡ್ ಮುದ್ರಿಸಲಾಗಿದೆ. ಬಹಳಷ್ಟು ಕಾರ್ಮಿಕರು ಇನ್ನೂ ಹೆಸರು ನೋಂದಾಯಿಸಿಕೊಳ್ಳದ್ದರಿಂದ ಸರ್ಕಾರದ ಸಹಾಯಧನ ಪಡೆಯಲು ಸಮಸ್ಯೆ ಎದುರಿಸುವಂತಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆ ಎಲ್ಲಿಂದ ತರೋದು?: ಅರ್ಹ ಫಲಾನುಭವಿ ಕಾರ್ಮಿಕರು ಸಹಾಯಧನ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಅಲ್ಲದೆ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಅಸಂಘಟಿತ ಕಾರ್ಮಿಕರೆಂಬ ಸ್ವಯಂ ಘೋಷಣೆ ಪ್ರಮಾಣ ಪತ್ರ ಹಾಗೂ ನಿಗದಿತ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಉದ್ಯೋಗ ಪ್ರಮಾಣ ಪತ್ರ ಲಗತ್ತಿಸುವುದೂ ಕಡ್ಡಾಯವಾಗಿದೆ. ಹೀಗಾಗಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಉದ್ಯೋಗ ಮಾಡುತ್ತಿರುವ ಬಗ್ಗೆ ದಾಖಲೆ ಕೊಡಿ ಎನ್ನುತ್ತಿದ್ದಾರೆ. ಆದರೆ, ಮನೆಗಳ ಮಾಲೀಕರು ಕರೊನಾ ಹಿನ್ನೆಲೆಯಲ್ಲಿ ಮನೆ ಕೆಲಸದಿಂದ ತೆಗೆದು ಹಾಕಿದ್ದಾರೆ.
ಅಲ್ಲದೆ, ಕೆಲಸ ಮಾಡುತ್ತಿದ್ದ ಹೋಟೆಲ್ ಹಾಗೂ ಸಣ್ಣಪುಟ್ಟ ಉದ್ದಿಮೆಗಳೂ ಬಂದ್ ಆಗಿವೆ. ನಾವೆಲ್ಲ ಎಲ್ಲಿಂದ ಕೆಲಸದ ದಾಖಲೆ ತರಬೇಕು ಎಂದು ತಿಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಗೃಹ ಕಾರ್ಮಿಕರಾದ ರಿಯಾನಾ ಎಸ್. ಮುಲ್ಲಾ, ರೇಣುಕಾ ಗುರಪ್ಪಗೋಳ.
ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಸಹಾಯಧನ ಜಮಾ ಆಗಲಿದೆ. ಅಸಂಘಟಿತ ವಲಯದ ಕಾರ್ಮಿಕರು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಲ್ಲಿ ಸಮಸ್ಯೆಯಿದ್ದಲ್ಲಿ ತಕ್ಷಣ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸರಿಪಡಿಸಲಾಗುವುದು. ಜುಲೈ 20ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
| ವೆಂಕಟೇಶ ಶಿಂದಿಹಟ್ಟಿ ಉಪ ಆಯುಕ್ತ, ಕಾರ್ಮಿಕ ಇಲಾಖೆ, ಬೆಳಗಾವಿಅಸಂಘಟಿತ ವಲಯದ ಕಾರ್ಮಿಕರು ಅರ್ಜಿ ಸಲ್ಲಿಸಿದರೆ ತಕ್ಷಣ ಉದ್ಯೋಗ ಪ್ರಮಾಣ ಪತ್ರ ನೀಡುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೀದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಸಹಾಯಧನ ಜಮಾ ಆಗಲಿದೆ. ನಿಗದಿತ ಸಮಯದಲ್ಲಿಯೇ ಕಾರ್ಮಿಕರಿಂದ ಅರ್ಜಿ ತುಂಬಿಸಿಕೊಳ್ಳಲಾಗುತ್ತಿದೆ.
| ಜಗದೀಶ ಕೆ.ಎಚ್ ಪಾಲಿಕೆ ಆಯುಕ್ತ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ