ಅಸಂಘಟಿತ ಕಾರ್ವಿುಕರಿಗೆ ಪಿಂಚಣಿ

ಶಿವಮೊಗ್ಗ: ಅಸಂಘಟಿತ ಕಾರ್ವಿುಕರ ನಿವೃತ್ತ ಜೀವನ ಭದ್ರತೆಗೆ ಕೇಂದ್ರ ಸರ್ಕಾರವು ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆ ಅನುಷ್ಠಾನ ಮಾಡುತ್ತಿದೆ ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಭಾಂಗಣದಲ್ಲಿ ಕಾರ್ವಿುಕ ಭವಿಷ್ಯ ನಿಧಿ ಸಂಘಟನೆಯಿಂದ ಆಯೋಜಿಸಿದ್ದ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಸಂಘಟಿತ ಕಾರ್ವಿುಕರ ಶ್ರೇಯೋಭಿವೃದ್ಧಿಗೆ ಹಾಗೂ ಸ್ವಾಭಿಮಾನದ ಜೀವನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಯೋಜನೆ ರೂಪಿಸಿದ್ದಾರೆ. ಜಿಲ್ಲೆಯ ಎಲ್ಲ ಅಸಂಘಟಿತ ಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಬೇಕು. ಪಿಂಚಣಿ ಯೋಜನೆಯಿಂದ ಕಾರ್ವಿುಕರಿಗೆ ಶಕ್ತಿ ತುಂಬಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ಪ್ರತಿಯೊಬ್ಬ ಅಸಂಘಟಿತ ಕಾರ್ವಿುಕರು ಯೋಜನೆ ಲಾಭ ಪಡೆದುಕೊಳ್ಳಬೇಕು. ಕಾರ್ವಿುಕ ಹಾಗೂ ಉದ್ಯೋಗ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸಿ ಯೋಜನೆ ಅನುಷ್ಠಾನ ಯಶಸ್ವಿ ಆಗಬೇಕು. ನಿವೃತ್ತಿ ಜೀವನ ಪರ್ಯಂತ ಉಪಯೋಗ ಆಗುವ ಮೂಲಕ ಭದ್ರತೆ ಸಿಗಲಿದೆ ಎಂದರು.

ಅಸಂಘಟಿತ ವಲಯದ ಕಾರ್ವಿುಕರು 18-40 ವಯೋಮಿತಿಗೆ ಅನುಗುಣವಾಗಿ ಪ್ರತಿ ತಿಂಗಳು 55 ರೂ.ನಿಂದ 200 ರೂ.ವರೆಗೆ ಕಟ್ಟಬೇಕಾಗುತ್ತದೆ. ಫಲಾನುಭವಿ ಕಟ್ಟುವ ಮೊತ್ತಕ್ಕೆ ಸಮನಾಗಿ ಕೇಂದ್ರ ಸರ್ಕಾರ ಕೂಡ ಅದೇ ಮೊತ್ತವನ್ನು ಪಾವತಿ ಮಾಡುತ್ತದೆ. 60 ವರ್ಷದ ನಂತರ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ದೊರೆಯುತ್ತದೆ ಎಂದು ಹೇಳಿದರು.

ದೇಶದಲ್ಲಿ 3.15 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್​ಸಿ) ಕಾರ್ಯ ನಿರ್ವಹಿಸುತ್ತವೆ. ದೇಶದಲ್ಲಿ 40 ಕೋಟಿಗಿಂತ ಹೆಚ್ಚಿನ ಅಸಂಘಟಿತ ಕಾರ್ವಿುಕರು ಇದ್ದಾರೆ. ಸಿಎಸ್​ಸಿ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾಯಿಸಬಹುದಾಗಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉಪಯುಕ್ತ ಯೋಜನೆಗಳು ಅನುಷ್ಠಾನ ಆಗಿವೆ. ಅಸಂಘಟಿತ ಕಾರ್ವಿುಕರಿಗೆ ಜಾರಿಗೊಳಿಸಿರುವ ಯೋಜನೆಯನ್ನು ಅಧಿಕಾರಿಗಳು ಎಲ್ಲರಿಗೂ ತಲುಪಿಸುವ ಕೆಲಸ ಮಾಡಬೇಕು. ರಾಜ್ಯದ ಲಕ್ಷಾಂತರ ಅಸಂಘಟಿತ ಕಾರ್ವಿುಕರಿಗೆ ಯೋಜನೆ ಉಪಯೋಗ ಆಗಲಿದೆ ಎಂದರು.

ನೋಂದಣಿ ಮಾಡಿಸಿದ ಅಸಂಘಟಿತ ಕಾರ್ವಿುಕರಿಗೆ ಯೋಜನೆಯ ಕಾರ್ಡ್ ವಿತರಿಸಲಾಯಿತು. ಉದ್ಯಮಿ ಡಿ.ಎಸ್.ಅರುಣ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಸಹಾಯಕ ಪಿಎಫ್ ಆಯುಕ್ತ ಶ್ರೀನಾಥ್ ಪದ್ಮನಾಭನ್, ಪ್ರಾದೇಶಿಕ ಪಿಎಫ್ ಆಯುಕ್ತ ವಿ.ಹುಸೇನಪ್ಪ, ಕಾರ್ವಿುಕ ಅಧಿಕಾರಿ ಎಂ.ವಿಶ್ವನಾಥ್ ಉಪಸ್ಥಿತರಿದ್ದರು.

ಅಸಂಘಟಿತ ಕಾರ್ವಿುಕರೆಂದರೆ ಯಾರು?:ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಕೂಲಿ ಕೆಲಸ ಮಾಡುವವರು, ಕೃಷಿ ಕಾರ್ವಿುಕರು, ಕೈಮಗ್ಗ ಕಾರ್ವಿುಕರು, ಬೆಳಕು, ದೃಶ್ಯ, ಧ್ವನಿವರ್ಧಕ ಕೆಲಸಗಾರರು, ಮರಗೆಲಸ, ಪೇಯಿಂಟ್ ಕೆಲಸ, ಅಡುಗೆ ಕೆಲಸ, ಇಟ್ಟಿಗೆ ಗೂಡು ಕೆಲಸ, ಮನೆ ಕೆಲಸ, ಕಟ್ಟಡ ಕಾರ್ವಿುಕರು, ಬೀಡಿ ಸುತ್ತುವ ಕೆಲಸ ಮಾಡುವವರು ಹಾಗೂ ಇತರೆ ವೃತ್ತಿಯಲ್ಲಿರುವವರು