ಬೆಳಗಾವಿ: ಅರೆಕಾಲಿಕ ವೃತ್ತಿಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಅನಾರೋಗ್ಯದಂಥ ತುರ್ತು ಸಂದರ್ಭಗಳಲ್ಲಿ ಕಾರ್ಮಿಕ ಇಲಾಖೆ ನಿಮ್ಮ ಸಹಾಯಕ್ಕೆ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಇಲಾಖೆ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ ಹೇಳಿದರು.
ನಗರದ ವಿಜಯವಾಣಿ ಕಚೇರಿಯಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಬೆಳಗಾವಿ ವೃತ್ತಪತ್ರಿಕೆ ವಿತರಕರ ಸಂಘ ಮತ್ತು ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ನೋಂದಣಿ ಮತ್ತು ವಿಮೆ ಸೌಲಭ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ, ವೇತನ ಭದ್ರತೆ ಇಲ್ಲ. ಅತಂತ್ರ ಸ್ಥಿತಿಯಲ್ಲಿಯೇ ದುಡಿಯುತ್ತಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ ಕಾಯಂ ಉದ್ಯೋಗ, ವೇತನ ಭದ್ರತೆ ಇಲ್ಲ. ಅಂಥವರಿಗಾಗಿ ಸರ್ಕಾರವು ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಘೋಷಣೆ ಮಾಡಿದೆ ಎಂದರು.
2,650ಕ್ಕೂ ಅಧಿಕ ನೋಂದಣಿ: ಈಗಾಗಲೇ ರಾಜ್ಯಾದ್ಯಂತ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಇಲ್ಲಿಯವರೆಗೆ 2,650ಕ್ಕೂ ಅಧಿಕ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯಿಂದಾಗಿ ಅಪಘಾತದಿಂದ ಮರಣ ಹೊಂದಿದಲ್ಲಿ 2 ಲಕ್ಷ ರೂ. ಅಥವಾ ಶಾಶ್ವತ ಅಂಗವೈಕಲ್ಯಕ್ಕೀಡಾದರೆ 2 ಲಕ್ಷ ರೂ. ವರೆಗೆ ಪರಿಹಾರ ಸಿಗಲಿದೆ. ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ 1ಲಕ್ಷ ರೂ. ಸಹಾಯಧನ ಸೌಲಭ್ಯ ಸಿಗಲಿದೆ ಎಂದರು. ಪತ್ರಿಕೆ ವಿತರಕರ ಸಂಘದ ನಿರ್ದೇಶಕ ಶ್ರೀರಾಜು ಬೋಸಲೆ ಮಾತನಾಡಿ, ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಅವರು ಪತ್ರಿಕಾ ವಿತರಕರ ಮೇಲೆ ಕಾಳಜಿಯಿಂದ ನೋಂದಣಿ ಮತ್ತು ವಿಮೆ ಸೌಲಭ್ಯ ಶಿಬಿರ ಹಮ್ಮಿಕೊಂಡಿರುವುದಕ್ಕೆ ಧನ್ಯವಾದಗಳು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಪತ್ರಿಕಾ ವಿತರಕರು ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಕಾರ್ಮಿಕ ಅಧಿಕಾರಿಗಳಾದ ತರುನಂ ಬೆಂಗಾಲಿ, ಮಲ್ಲಿಕಾರ್ಜುನ ಜೋಗೂರ, ಸಂಘದ ನಿರ್ದೇಶಕ ಸತೀಶ ನಾಯಕ ಮತ್ತು ಪತ್ರಿಕಾ ವಿತರಕರ ಸಂಘದ ಸದಸ್ಯರು ಇತರರಿದ್ದರು.