ಅಶ್ವತ್ಥ್ ಕುಟುಂಬದ ಸ್ವಾಭಿಮಾನದ ಕಥೆ

| ಗಣೇಶ್​ ಕಾಸರಗೋಡು

ಹಿರಿಯ ನಟ ಕೆ.ಎಸ್. ಅಶ್ವತ್ಥ್ ಬದುಕಿದ್ದಿದ್ದರೆ ಇಂದಿಗೆ ಸರಿಯಾಗಿ 93 ವರ್ಷ ವಯಸ್ಸಾಗಿರುತ್ತಿತ್ತು. 1925ರ ಮೇ 25ರಂದು ಜನಿಸಿದ ಈ ಮಹಾನ್ ಕಲಾವಿದ 2010ರ ಜನವರಿ 18ರಂದು ಕಾಲವಾದರು. ಅವರ ಮೂಲ ಹೆಸರು; ಅಶ್ವತ್ಥ್ ನಾರಾಯಣ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕರಗನಹಳ್ಳಿಯವರಾದ ಅವರು 1944ರಲ್ಲಿ ಸರ್ಕಾರಿ ಸ್ವಾಮ್ಯದ ಆಹಾರ ಇಲಾಖೆಯ ಉದ್ಯೋಗದಲ್ಲಿದ್ದರು! ರಂಗಭೂಮಿ ಕಲಾವಿದರಾಗಿದ್ದ ಅಶ್ವತ್ಥ್ 1955ರಲ್ಲಿ ‘ಸ್ತ್ರೀರತ್ನ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂದಿನ 55 ವರ್ಷಗಳ ಕಾಲ ಸಜ್ಜನಿಕೆಯ ಕಲಾವಿದ ಎಂಬ ವಿಶೇಷ ಗೌರವದೊಂದಿಗೆ ಬಾಳಿದ ಅಶ್ವತ್ಥ್ ಈಗ್ಗೆ 8 ವರ್ಷಗಳ ಹಿಂದೆ ವಯೋಸಹಜ ಕಾಯಿಲೆಯಿಂದ ಬಳಲಿ ಕಾಲವಾದರು.

ಮೈಸೂರಿನ ಸರಸ್ವತಿಪುರದಲ್ಲಿರುವ ‘ಕಲಾಶ್ರೀ’ ಎಂಬ ಹೆಸರಿನ ಸ್ವಂತ ಮನೆ ಬಿಟ್ಟರೆ ಬೇರೆ ಆಸ್ತಿಪಾಸ್ತಿ ಮಾಡದ ಅಶ್ವತ್ಥ್ ಅವರ ಕುಟುಂಬ ಈಗಲೂ ಅದೇ ಮನೆಯಲ್ಲೇ ಬದುಕು ಸಾಗಿಸಿದೆ. ಪ್ರೀತಿಯ ಹೆಂಡತಿ ಶಾರದಮ್ಮ, ಮಗ ರವಿಶಂಕರ್, ಸೊಸೆ ಸುಧಾ, ಮೊಮ್ಮಗ ಸ್ಕಂದ- ಅಗಲಿದ ಮೇರುನಟ ಅಶ್ವತ್ಥ್ ಅವರ ಪುಟ್ಟ ಕುಟುಂಬವಿದು. ಇಂಥ ಕುಟುಂಬ ಅಶ್ವತ್ಥ್ ನಿರ್ಗಮನದ ಬಳಿಕ ಈ 8 ವರ್ಷಗಳಲ್ಲಿ ಹೇಗೆ ಬದುಕು ನಡೆಸಿದೆ?

ಇತ್ತೀಚೆಗೆ ಕ್ಯಾಬ್ ಡ್ರೖೆವರ್ ಆಗಿ ಸುದ್ದಿಯಾಗಿದ್ದ ಅವರ ಮಗ ರವಿಶಂಕರ್ ಉರುಫ್ ಶಂಕರ್ ಅಶ್ವತ್ಥ್ ಮಹಾ ಸ್ವಾಭಿಮಾನಿ. ಅವರು ಕ್ಯಾಬ್ ಡ್ರೖೆವರ್ ಆದ ಕಥೆಯನ್ನು ಅವರ ಬಾಯಲ್ಲೇ ಕೇಳಿ; ‘ಒಂದು ಬೆಳಿಗ್ಗೆ ವ್ಯಕ್ತಿಯೊಬ್ಬರು ಕಾರಿಳಿದುಕೊಂಡು ನಮ್ಮ ಮನೆಗೆ ಬಂದರು. ಬಂದವರೇ ‘ನಾನೊಂದು ಸಿನಿಮಾ ಮಾಡ್ಬೇಕು, ನಿಮ್ಮ ಸಹಾಯ ಬೇಕು. ನೀವೇ ನಿರ್ದೇಶಕರು. ನಿಮ್ಮ ಮಗ ನಾಯಕ…’-ಅಂದರು! ನಾನು ಗಾಬರಿಬಿದ್ದೆ. ಆದರೆ ನನ್ನ ಮೇಲಿನ ಅವರ ನಂಬಿಕೆ ಅಚಲವಾಗಿತ್ತು. ಎರಡು ಕಥೆ ರೆಡಿ ಮಾಡಿಕೊಂಡೆ. ಅದು ಅವರಿಗೆ ಇಷ್ಟವಾಗಲಿಲ್ಲ. ಮಸಾಲೆ ಕಥೆ ಬೇಕು ಅಂದರು. ತಲೆ ಮೇಲೆ ಕೈ ಹೊತ್ತು ಕೂತೆ. ಆಗ ನೆರವಿಗೆ ಬಂದವರೇ ನಮ್ಮ ಮಹಡಿ ಮೇಲಿನ ‘ಪಿಜಿ’ಯಲ್ಲಿ ವಾಸವಾಗಿರುವ ಹೆಣ್ಣು ಮಕ್ಕಳು! ಅವರು ಈ ‘ಉಬರ್’ ಕ್ಯಾಬ್ ಡ್ರೖೆವರ್ ಕಥೆ ಬರೆಯಲು ಪ್ರೇರೇಪಿಸಿದರು. ಬರೆಯುತ್ತ ಹೋದಂತೆಲ್ಲ ಅದರ ಒಳ ಸುಳಿಗಳ ಪರಿಚಯವಾಗುತ್ತ ಹೋಯಿತು. ಕಥೆಗೆ ಒಂದು ರೂಪು ಸಿಗುವಷ್ಟರಲ್ಲಿ ನಾನು ಸಂಪೂರ್ಣವಾಗಿ ’ಉಬರ್’ ಕ್ಯಾಬ್ ಡ್ರೖೆವರ್ ಉದ್ಯೋಗದಿಂದ ಆಕರ್ಷಿತನಾಗಿದ್ದೆ! ನನ್ನನ್ನು ಹುಡುಕಿಕೊಂಡು ಬಂದಿದ್ದ ನಿರ್ವಪಕರಿಗೆ ಕಥೆ ಹೇಳಿದಾಗ ಖುಷಿಯಿಂದ ಒಪ್ಪಿಕೊಂಡರು. ನಾನು ಮುಂದಿನ ಕೆಲಸ ಕಾರ್ಯಗಳಿಗಾಗಿ ಅಡ್ವಾನ್ಸ್ ಕೇಳಿದೆ… ಅಷ್ಟೇ! ಮಾರನೇ ದಿನ ಕೊಡುವುದಾಗಿ ಹೇಳಿ ಹೋದವರು ಇವತ್ತಿನ ತನಕ ಈ ಕಡೆ ಸುಳಿದಿಲ್ಲ. ಆತನೊಬ್ಬ 420 ಅಂತ ಆ ಮೇಲೆ ಗೊತ್ತಾಯಿತು! ಆತನ ಆಸೆ ಬಿಟ್ಟು ಕ್ಯಾಬ್ ಡ್ರೖೆವರ್ ಉದ್ಯೋಗದತ್ತ ಗಮನ ಹರಿಸಿದೆ. ನನ್ನದೇ ಕಾರಿಗೆ ಬಾಡಿಗೆ ಕಾರಿನ ರೂಪುರೇಷೆ ಕೊಟ್ಟೆ. ಅದಕ್ಕೆ ಬೇಕಾಗಿರುವ ಫಾರ್ವಲಿಟೀಸ್ ಮಾಡಿಸಿಕೊಂಡೆ. ಹೀಗೆ ನಾನು ಸ್ವಾಭಿಮಾನದ ಬದುಕಿನ ಕ್ಯಾಬ್ ಡ್ರೖೆವರ್ ಆದೆ! ತಪ್ಪಾ? ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ಬೆಂಗಳೂರಲ್ಲಿ ಈ ಕೆಲಸ. ಉಳಿದ ದಿನ ಅಭಿನಯಕ್ಕೆ ಮೀಸಲು. ಬೆಂಗಳೂರಿನ ಸ್ಯಾಟಲೈಟ್ ಟೌನ್​ನಲ್ಲೊಂದು ಪುಟ್ಟ ಮನೆ ಬಾಡಿಗೆಗೆ ಹಿಡಿದಿದ್ದೇನೆ. ನಾನು ತೃಪ್ತ, ಸಂತೃಪ್ತ. ನನ್ನದೇ ಜಗತ್ತು, ನನ್ನದೇ ಕಾರು, ನನ್ನದೇ ಉದ್ಯೋಗ, ನನ್ನದೇ ಸಂಪಾದನೆ, ನನ್ನದೇ ಬದುಕು…’- ಇಷ್ಟು ಹೇಳಿ ಶಂಕರ್ ಅಶ್ವತ್ಥ್ ನಿಟ್ಟುಸಿರು ಬಿಟ್ಟರು!

ಹಾಗಿದ್ದರೆ ಶಂಕರ್ ಅಶ್ವತ್ಥ್ ಪತ್ನಿ ಸುಧಾ ಅವರು ಕ್ಯಾಟರಿಂಗ್ ಉದ್ಯೋಗ ಮಾಡುತ್ತಿರುವುದು ಸುಳ್ಳೇ? ಖಂಡಿತ ಇಲ್ಲ. ಹಾಗೆ ನೋಡಿದರೆ ಸುಧಾ ಆ ಮನೆಯ ದೀಪ! ಮಾವ ತೀರಿಕೊಂಡ ನಂತರ ಸಂಪಾದನೆಯ ಎಲ್ಲ ಬಾಗಿಲುಗಳು ಮುಚ್ಚಿಕೊಂಡಾಗ ತೆರೆದುಕೊಂಡದ್ದೇ ಈ ಕ್ಯಾಟರಿಂಗ್ ಉದ್ಯೋಗ! ಟಿಫನ್ ಬಾಕ್ಸ್​ಗಳಲ್ಲಿ ಊಟ ಸಿದ್ಧಪಡಿಸಿ, ಅದನ್ನು ಮಾರಿ ಬದುಕು ಕಟ್ಟಿಕೊಂಡ ಮಹಾ ಸ್ವಾಭಿಮಾನದ ದಿಟ್ಟ ಮಹಿಳೆ ಈ ಸುಧಾ! ಅಶ್ವತ್ಥ್ ಪಾಲಿಗೆ ಇವರು ಬರೀ ಸೊಸೆ ಮಾತ್ರವಾಗಿರಲಿಲ್ಲ. ಅವರ ಮಗಳ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಸುಧಾ. ಒಂದು ದಿನವೂ ‘ಮಾವ’ ಎಂದು ಕರೆಯದ ಈ ಸೊಸೆ ಪಾಲಿಗೆ ಅಶ್ವತ್ಥ್ ‘ಅಪ್ಪಾಜಿ’! ಇವರ ಅಡುಗೆಯ ಕೈರುಚಿ ಕಂಡ ಅಕ್ಕಪಕ್ಕದ ಮನೆಯವರು ತಮಗೂ ಊಟ ಸಿದ್ಧಪಡಿಸಿ ಕೊಡುವಂತೆ ವಿನಂತಿಸಿಕೊಂಡದ್ದೇ ಈ ಕ್ಯಾಟರಿಂಗ್ ಉದ್ಯೋಗ ಆಕರ್ಷಿಸಲು ಕಾರಣ. ದಿನವೊಂದಕ್ಕೆ ಐವತ್ತರಿಂದ ನೂರು ಊಟ ಮಾರಾಟ ಮಾಡುವ ಸುಧಾ ಅಕ್ಕಪಕ್ಕದ ಮನೆಯ ವೃದ್ಧರ ಪಾಲಿನ ಅನ್ನಪೂರ್ಣೆಶ್ವರಿ! ಅಶ್ವತ್ಥ್ ಮೊಮ್ಮಗ ಸ್ಕಂದ ಸ್ಪುರದ್ರೂಪಿ. ಸ್ವಿಮ್ಮಿಂಗ್​ನಲ್ಲಿ ನ್ಯಾಷನಲ್ ಚಾಂಪಿಯನ್! ಅಭಿನಯದಲ್ಲಿ ಆಸಕ್ತಿಯಿದೆ. ಆದರೆ ಯೋಗ ಕೂಡಿ ಬಂದಿಲ್ಲ. ಹೀಗಾಗಿ ಅಲ್ಲಿ ಇಲ್ಲಿ ಏನೇನೋ ಕೆಲಸ ಮಾಡಿಕೊಂಡಿದ್ದಾನೆ! ಅಶ್ವತ್ಥ್ ಬಾಳಸಂಗಾತಿ ಶಾರದಮ್ಮ ಬದುಕಿನ ಸಂಧ್ಯಾಕಾಲದಲ್ಲಿದ್ದಾರೆ. ದಿನನಿತ್ಯದ ಕೆಲಸವನ್ನು ತಾವೇ ಮಾಡಿಕೊಳ್ಳುತ್ತ ಮನೆಮಂದಿಗೆ ಹೊರೆಯಾಗದಂತೆ ಬದುಕು ನಡೆಸಿದ್ದಾರೆ.

ಇವಿಷ್ಟು ಸಂಕ್ಷಿಪ್ತವಾಗಿ ಅಶ್ವತ್ಥ್ ಕುಟುಂಬದ ಕಥೆ. ಹೆಚ್ಚುಕಮ್ಮಿ ಅರ್ಧ ಶತಕಕ್ಕೂ ಹೆಚ್ಚು ಕಾಲ ಕಲಾಸೇವೆಯಲ್ಲಿ ನಿರತರಾಗಿದ್ದ ಮಹಾನ್ ಕಲಾವಿದನ ಕುಟುಂಬದ ಸ್ಥಿತಿಗತಿ ಇದು. ಸುಮಾರು 400 ಚಿತ್ರಗಳಲ್ಲಿ ನಟಿಸಿರುವ ಅಶ್ವತ್ಥ್ ಸಜ್ಜನಿಕೆಗೆ ಹೆಸರಾದವರು. ‘ನಾಗರಹಾವು’ ಚಿತ್ರದ ಮೂಲಕ ಈ ನಾಡಿನ ಚಿತ್ರಾಭಿಮಾನಿಗಳ ಪಾಲಿನ ’ಚಾಮಯ್ಯ ಮೇಸ್ಟ್ರು’ ಆಗಿಯೇ ಬಾಳಿದ ಅಶ್ವತ್ಥ್ ಅವರು ಚಿತ್ರ ಜೀವನದ ಮಹಾನ್ ಸಾಧನೆಗಾಗಿ ‘ಪುಟ್ಟಣ್ಣ ಕಣಗಾಲ್’ ಪುರಸ್ಕಾರ ಪಡೆದುಕೊಂಡವರು. ಬದುಕಿನ ಕೊನೆಗಾಲದಲ್ಲಿ ಕೈ ಖಾಲಿ ಮಾಡಿಕೊಂಡು, ಊಟಕ್ಕೂ ಪರದಾಡುವಂಥ ದುಃಸ್ಥಿತಿಯಲ್ಲಿ ಅವರ ಕೈ ಹಿಡಿದದ್ದು ಪತ್ರಿಕಾ ಮಾಧ್ಯಮ! ಈ ಬಗ್ಗೆ ಶಂಕರ್ ಅಶ್ವತ್ಥ್ ಹೇಳುತ್ತಾರೆ; ‘ಅಪ್ಪಾಜಿಯ ಕೊನೆಯ ಒಂಭತ್ತು ವರ್ಷಗಳ ಬದುಕಿಗೆ ನೆರವಾಗಿ ಬಂದವರು ಪತ್ರಿಕಾ ಮಾಧ್ಯಮದವರು. ಅಪ್ಪನ ಆರ್ಥಿಕ ದುಃಸ್ಥಿತಿಯ ಬಗ್ಗೆ ಅವರು ಬರೆದು ಜನರ, ಅಭಿಮಾನಿಗಳ, ಸರ್ಕಾರದ ಕಣ್ಣು ತೆರೆಸದಿದ್ದರೆ ನಾವೆಲ್ಲ ಉಪವಾಸ ಬಿದ್ದು ಸಾಯಬೇಕಾಗಿತ್ತು! ಆಗ ಅಪ್ಪಾಜಿಯ ಕೈ ಹಿಡಿದ ಮಾಧ್ಯಮವೇ ಈಗ ನನ್ನ ಕೈ ಹಿಡಿದಿದೆ! ಅಭಿನಯದ ಅವಕಾಶವಿಲ್ಲದೆ ನಾನು ಕ್ಯಾಬ್ ಡ್ರೖೆವರ್ ವೃತ್ತಿಯಲ್ಲಿ ತೊಡಗಿಕೊಂಡಾಗ ಅದೇ ಮಾಧ್ಯಮದ ಮಂದಿ ನನ್ನ ಸ್ವಾಭಿಮಾನದ ಬದುಕಿನ ಬಗ್ಗೆ ಬರೆಯುವ ಮೂಲಕ ಸಪೋರ್ಟ್ ಮಾಡಿರುವುದನ್ನು ಮರೆಯೋದುಂಟಾ?’- ಎಂದು ಪ್ರಶ್ನಿಸುತ್ತ ಕ್ಯಾಬ್​ನ ಸ್ಟೇರಿಂಗ್ ಹಿಡಿದು ಎಕ್ಸಲೇಟರ್ ಒತ್ತಿಕೊಂಡರು ಶಂಕರ್ ಅಶ್ವತ್ಥ್!

Leave a Reply

Your email address will not be published. Required fields are marked *