ಅಶಿಸ್ತು ತೋರುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ

ಮುಂಡರಗಿ: ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದೇ ಅಶಿಸ್ತು ತೋರುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ ಬಿಇಒ ಎಸ್.ಎನ್. ಹಳ್ಳಿಗುಡಿ ಅವರಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದಿಲ್ಲ ಎನ್ನುವ ಆರೋಪಗಳು ಗ್ರಾಮಸ್ಥರಿಂದ ಕೇಳಿಬರುತ್ತಿವೆ. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಅಂತಹ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಳ್ಳಿಗುಡಿ, ‘ತಾಲೂಕಿನ ಹಲವಾರು ಶಾಲೆಗಳಲ್ಲಿ ಈಗಾಗಲೇ ಇಲೆಕ್ಟ್ರಾನಿಕ್ ಹಾಜರಾತಿ ಯಂತ್ರಗಳನ್ನು ಅಳವಡಿಸಲಾಗಿದೆ. ಇಲೆಕ್ಟ್ರಾನಿಕ್ ಹಾಜರಾತಿ ಇಲ್ಲದ ಶಾಲೆಗಳ ಶಿಕ್ಷಕರ ಸಂಬಳ ತಡೆಹಿಡಿಯಲಾಗುತ್ತದೆ ಎಂದು ಈಗಾಗಲೇ ಎಲ್ಲ ಶಾಲೆಗಳಿಗೆ ಆದೇಶ ನೀಡಲಾಗಿದೆ. ಮುಖ್ಯ ಶಿಕ್ಷಕರು 9.15ಕ್ಕೆ ಹಾಗೂ ಸಹ ಶಿಕ್ಷಕರು 9.30ಕ್ಕೆ ಶಾಲೆಯಲ್ಲಿರಬೇಕು ಎಂದು ಸೂಚಿಸಲಾಗಿದೆ. ಅದನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಶಾಲೆಯ ಅಕ್ಷರ ದಾಸೋಹಕ್ಕೆ ಜಿಲ್ಲೆಯಿಂದ ಕಳಪೆ ಆಹಾರ ಸಾಮಗ್ರಿ ಪೂರೈಸಲಾಗುತ್ತಿದೆ ಎಂದು ಬಿಇಒ ಅವರು ಸಭೆಯ ಗಮನ ಸೆಳೆದರು. ‘ಅಕ್ಷರ ದಾಸೋಹದ ನಿರ್ದೇಶಕರು ಹಾಗೂ ಬಿಇಒ ಅವರು ಖುದ್ದಾಗಿ ಆಹಾರ ಸಾಮಗ್ರಿ ಪರಿಶೀಲಿಸಬೇಕು. ಕಳಪೆ ಆಹಾರ ಸಾಮಗ್ರಿ ಪೂರೈಕೆಯಾಗುತ್ತಿದ್ದರೆ ತಕ್ಷಣ ಅದನ್ನು ವಾಪಸ್ ಕಳುಹಿಸಿ ಗುಣಮಟ್ಟದ ಆಹಾರ ಪೂರೈಸಬೇಕು’ ಎಂದು ಇಒ ಕಲ್ಮನಿ ಸೂಚಿಸಿದರು.

ತೋಟಗಾರಿಕೆ ಇಲಾಖೆಯವರು ಶಾಲೆ, ಆಸ್ಪತ್ರೆ, ಗ್ರಾಮ ಪಂಚಾಯಿತಿ ಮೊದಲಾದ ಕಾರ್ಯಾಲಯಗಳ ಆವರಣದಲ್ಲಿ ಕೈತೋಟ ನಿರ್ವಿುಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ರುದ್ರಗೌಡ ಪಾಟೀಲ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ‘ಈಗಾಗಲೇ ಅದಕ್ಕೆ ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಜೂನ್​ನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ’ ಎಂದರು.

ಚೆಕ್ ಡ್ಯಾಮ್ ನಿರ್ವಣಕ್ಕೆ ಹಿಂದೇಟು: ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕೃಷಿ ಹೊಂಡ ಹಾಗೂ ಚೆಕ್ ಡ್ಯಾಮ್ಳನ್ನು ನಿರ್ವಿುಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಕ್ಷೇತ್ರದ ಜನರಿಗೆ ಉತ್ತರಿಸುವುದು ಕಷ್ಟವಾಗಿದೆ ಎಂದು ಸದಸ್ಯ ವೆಂಕಪ್ಪ ಬಳ್ಳಾರಿ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಅಧಿಕಾರಿಗಳು ಸದಸ್ಯರೊಂದಿಗೆ ರ್ಚಚಿಸಿ ಕೃಷಿ ಹೊಂಡ ಚೆಕ್ ಡ್ಯಾಮ್ ನಿರ್ವಿುಸಲು ಮುಂದಾಗಬೇಕು ಎಂದು ಇಒ ಕಲ್ಮನಿ ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಸದಸ್ಯರಾದ ರುದ್ರಪ್ಪ ಬಡಿಗೇರ, ಪುಷ್ಪಾ ಪಾಟೀಲ, ಲಲಿತಾ ಎಲಿಗಾರ, ಕುಸುಮಾ ಮೇಟಿ, ಬಸಪ್ಪ ಮಲ್ಲನಾಯ್ಕರ್ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.