ಕಾರವಾರ: ಕುಮಟಾ ತಾಲೂಕಿನ ಬಾಡ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆಗೆ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಜಿಪಂ ಸಿಇಒ ಎಂ.ರೋಶನ್ ತಿಳಿಸಿದರು.
ಜಿಪಂ ಕಚೇರಿಗೆ ಗುರುವಾರ ಆಗಮಿಸಿದ್ದ ಗ್ರಾಪಂ ಅಧ್ಯಕ್ಷೆ ಹಾಗೂ ಸದಸ್ಯರಿಗೆ ಅವರು ಈ ವಿಷಯ ತಿಳಿಸಿದರು. ಎರಡು ದಿನಗಳ ಹಿಂದೆ ಜಿಪಂ ಕಚೇರಿಗೆ ಆಗಮಿಸಿದ ಕೆಲ ಗ್ರಾಮಸ್ಥರು, ‘ಗ್ರಾಪಂ ಶಾಸನಬದ್ಧ ಅನುದಾನದಲ್ಲಿ ಅವ್ಯವಹಾರವಾಗಿದೆ. ಕೊಟ್ಟಿಗೆ, ಶೌಚಗೃಹ ನಿರ್ವಣದ ಹಣ ಬಿಡುಗಡೆಯಾಗಿಲ್ಲ’ ಎಂದು ದೂರಿದ್ದರು.
ಈ ಸಂಬಂಧ ತನಿಖೆ ನಡೆಸಲು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್ಒ ಉದಯ ನಾಯ್ಕ ಅವರನ್ನು ನೇಮಿಸಲಾಗಿದೆ. ಅವರು ಗ್ರಾಪಂಗೆ ಬಂದಾಗ ತನಿಖೆಗೆ ಸಹಕರಿಸಿ ಎಂದು ಸೂಚಿಸಿದರು. 14ನೇ ಹಣಕಾಸು ಯೋಜನೆಯಲ್ಲಿ 65 ಕಾಮಗಾರಿಗಳು ಬಾಕಿ ಇದ್ದು ಅದನ್ನು ಮುಗಿಸಲು ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಯಾವುದೇ ಸಿಬ್ಬಂದಿಯನ್ನು ನಿಯಮ ಮೀರಿ ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನಿನ ಪರಿಧಿಯಲ್ಲಿ ನೇಮಕ ಮಾಡಿಕೊಳ್ಳದೇ ಇದ್ದಲ್ಲಿ ಕ್ರಮ ವಹಿಸಲಾಗುವುದು ಎಂದರು.
ನಮ್ಮ ತಪ್ಪಲ್ಲ: ಗ್ರಾಪಂನಲ್ಲಿ ಅನುದಾನ ಅಕ್ರಮ ಬಳಕೆ ಬಗ್ಗೆ ರಾಮಾ ನಾಯ್ಕ ಎಂಬುವವರು ಜಿಪಂಗೆ ದೂರು ನೀಡಿದ್ದಾರೆ. ಆದರೆ, ಹಿಂದಿನ ಆಡಳಿತ ಸಮಿತಿಯಲ್ಲಿ ಅವರು ಉಪಾಧ್ಯಕ್ಷರಾಗಿದ್ದರು. ಆಗಲೇ ಗ್ರಾಪಂ ಸಿಬ್ಬಂದಿ ವೇತನಕ್ಕೆ ಶಾಸನಬದ್ಧ ಅನುದಾನ ಬಳಸಲು ಸಭೆಯಲ್ಲಿ ಅನುಮೋದನೆ ನೀಡಿದ್ದರು. ವೈಯಕ್ತಿಕ ದ್ವೇಷದ ಕಾರಣಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಪಟಗಾರ ತಿಳಿಸಿದರು. ಉಪಾಧ್ಯಕ್ಷ ರವಿ ಎಸ್.ನಾಯ್ಕ, ಸದಸ್ಯರಾದ ಬಾಬು ನಾಯ್ಕ, ಮಂಜುನಾಥ ನಾಯ್ಕ, ಜಯಶ್ರೀ ನಾಯ್ಕ, ಗೀತಾ ಸುಬ್ರಾಯ ನಾಯ್ಕ, ಗೀತಾ ಕಮಲಾಕ್ಷ ನಾಯ್ಕ, ಕೈರುನ್ನಿಸ್ಸಾ ಶೇಖ್, ಭಾರತಿ ಶಂಕರ ಹಳ್ಳೇರ ಸುಬ್ರಹ್ಮಣ್ಯ ನಾಯ್ಕ, ಸಯ್ಯದ್ ಹಸನ್ ಶೇಖ್, ದಾವೂದ್ ಕಾಶಿಂ ಬಿಕಬಾ ಇದ್ದರು.