ಹೊಯ್ಸಳಕಟ್ಟೆಯಲ್ಲಿ ಚಿಕಿತ್ಸೆ ಸಿಗದೆ ನಿತ್ಯ ಪರದಾಡುತ್ತಿರುವ ರೋಗಿಗಳು
ಕಿರಣ್ ಹುಳಿಯಾರು
ಕಾಯಂ ವೈದ್ಯರಿಲ್ಲ. ನಿಯೋಜನೆಗೊಂಡಿರುವ ವೈದ್ಯರೂ ನಿತ್ಯ ಬರುತ್ತಿಲ್ಲ. ಈ ಪರಿಣಾಮ ಹತ್ತಾರು ಹಳ್ಳಿಗಳ ರೋಗಿಗಳು ಚಿಕಿತ್ಸೆಗಾಗಿ ಪರದಾಡುವುದು ಸಾಮಾನ್ಯ. ಇದು, ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅನಾರೋಗ್ಯ ಸ್ಥಿತಿ. ರಾಷ್ಟ್ರೀಯ ಹೆದ್ದಾರಿ 234 ಹಾದು ಹೋಗುವ ಮಾರ್ಗದಲ್ಲಿ ಈ ಗ್ರಾಮವಿದ್ದು, ಇಲ್ಲಿನ ಆರೋಗ್ಯ ಕೇಂದ್ರವನ್ನೇ ಸುತ್ತಮುತ್ತಲಿನ ಜನರು ಅವಲಂಬಿಸಿದ್ದಾರೆ. ಆದರೆ, ಇಲ್ಲಿನ ಆಸ್ಪತ್ರೆಗೇ ಚಿಕಿತ್ಸೆ ದೊರಕಿಸಿಕೊಡಬೇಕಾದ ಸ್ಥಿತಿ ನಿಮಾರ್ಣವಾಗಿದೆ.
ಕಾಯಂ ವೈದ್ಯರಿಲ್ಲದ ಕಾರಣದಿಂದ ಈ ಆಸ್ಪತ್ರೆಗೆ ದಸೂಡಿ ಆಸ್ಪತ್ರೆಯ ವೈದ್ಯರನ್ನು 4 ದಿನಗಳು ಹಾಗೂ ಗೋಡೆಕೆರೆಯ ವೈದ್ಯರನ್ನು ವಾರದಲ್ಲಿ 2 ದಿನಗಳ ಕಾಲ ಡೆಪ್ಯೂಟೇಷನ್ ಮಾಡಲಾಗಿದೆ. ಆದರೆ ಇವರಿಬ್ಬರೂ ಯಾವಾಗ ಬಂದು ಹೋಗುತ್ತಾರೋ ಯಾರಿಗೂ ತಿಳಿಯದಾಗಿದೆ. ಅಕಸ್ಮಾತ್ ಬಂದರೂ ಬೆಳಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆಯಲ್ಲಿ ಇರುವುದಿಲ್ಲ. ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಿಸಿ, ಔಷಧ ಪೂರೈಕೆ ಮಾಡಬೇಕು. ನೀರು, ಶೌಚಗೃಹ ಸೇರಿ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ತುರ್ತು ಚಿಕಿತ್ಸೆ ಮರೀಚಿಕೆ: ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದರಿಂದ ಅಪಘಾತಗಳಾದಾಗ ತುರ್ತು ಚಿಕಿತ್ಸೆಯೂ ಇಲ್ಲಿ ಸಿಗದಾಗಿದೆ. ಗರ್ಭಿಣಿ, ಬಾಣಂತಿಯರಿಗೆ ಮಾಸಿಕ ಅಗತ್ಯ ಸಲಹೆ ಸೂಚನೆ, ಔಷಧೋಪಚಾರ ದೂರದ ಮಾತು. ವೈದ್ಯರಿಲ್ಲದ ಆಸ್ಪತ್ರೆ, ದೇವರಿಲ್ಲದ ಗರ್ಭಗುಡಿ ಎರಡೂ ವ್ಯರ್ಥ ಎಂಬ ಮಾತನ್ನು ಈ ಆಸ್ಪತ್ರೆ ನೋಡಿಯೇ ಹೇಳಿರಬೇಕು ಎನ್ನುವಂತಿದೆ.
ಕುಡುಕರ ಅಡ್ಡೆಯಾದ ಆವರಣ: ಕಾಯಂ ವೈದ್ಯರಿಲ್ಲ, ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಇರೋದಿಲ್ಲ ಎನ್ನುವ ಕಾರಣದಿಂದಾಗಿ ಆಸ್ಪತ್ರೆಯ ಆವರಣ ಕುಡುಕರ ಅಡ್ಡೆಯಾಗಿದೆ. ಸುತ್ತಲೂ ಕಾಂಪೌಂಡ್ ಇರುವುದರಿಂದ ಕಾಂಪೌಂಡ್ ಹಾರಿ ಬಂದು ಇಲ್ಲಿ ಮದ್ಯಪಾನ ಮಾಡಿದರೆ ಯಾರಿಗೂ ಕಾಣೋದಿಲ್ಲ ಎನ್ನುವ ಕಾರಣದಿಂದ ಹಲವರು ಇಲ್ಲಿ ನಿತ್ಯ ಪಾರ್ಟಿ ಮಾಡಿ ಹೋಗುತ್ತಿದ್ದಾರೆ. ನಿತ್ಯ ಮುಂಜಾನೆ ಇಲ್ಲಿನ ಡಿ ಗ್ರೂಪ್ ನೌಕರನಿಗೆ ಮದ್ಯದ ಬಾಟಲಿ, ಕುರುಕಲು ತಿಂಡಿಯ ಕವರ್ ಸ್ವಚ್ಛ ಮಾಡುವುದೇ ಕಾಯಕವಾಗಿದೆ.
ಶೌಚಗೃಹಕ್ಕಿಲ್ಲ ನೀರು: ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಹಾಯಕರ ಅನುಕೂಲಕ್ಕಾಗಿ ಎರಡು ಶೌಚಗೃಹ ನಿರ್ಮಿಸಿದ್ದಾರೆ. ಆದರೆ ಈ ಶೌಚಗೃಹಕ್ಕೆ ನೀರಿನ ವ್ಯವಸ್ಥೆ ಇಲ್ಲ. ಗ್ರಾಪಂ ಅವರು ಇಲ್ಲಿನ ಆಸ್ಪತ್ರೆ ಸಂಪ್ಗೆ ನಿತ್ಯ ನೀರು ಪೂರೈಸುತ್ತಾರೆ. ಆದರೆ ಸಂಪ್ನಿಂದ ಶೌಚಗೃಹ ಹಾಗೂ ಆಸ್ಪತ್ರೆಗೆ, ಲ್ಯಾಬ್ಗೆ ನೀರು ಪೂರೈಸುವ ಸಿಂಟೆಕ್ಸ್ಗೆ ನೀರು ತುಂಬಿಸದೆ ಶೌಚಗೃಹಕ್ಕೆ ಬೀಗ ಜಡಿದಿದ್ದಾರೆ. ಹಾಗಾಗಿ ಬಯಲು ಶೌಚವೇ ಗತಿ ಎಂಬಂತಾಗಿದೆ.
ಕ್ಯಾನ್ಗಳಿಂದ ಫಿಲ್ಟರ್ ನಿರ್ಮಾಣ: ಈ ಆಸ್ಪತೆಯ ಹಿಂಭಾಗ ಮೇಲೆ ಕೆಳಗೆ 2 ನೀರಿನ ಕ್ಯಾನ್ ಇಟ್ಟಿದ್ದಾರೆ. ಇದಕ್ಕೆ ಮೇಲಿನ ಕ್ಯಾನ್ನಿಂದ ಕೆಳಗಿನ ಕ್ಯಾನ್ಗೆ ಪೈಪ್ ಅಳವಡಿಸಿದ್ದಾರೆ. ಕೆಳಗಿನ ಕ್ಯಾನ್ನಿಂದ ನೆಲಕ್ಕೆ ಮತ್ತೊಂದು ಪೈಪ್ ಅಳವಡಿಸಿದ್ದಾರೆ. ಇದೇನೆಂದು ಸಿಬ್ಬಂದಿ ಕೇಳಿದರೆ ಫಿಲ್ಟರ್ ಅನ್ನುತ್ತಾರೆ. ಇಲ್ಲಿಗೆ ಎಲ್ಲಿಂದ ನೀರು ಬರುತ್ತದೆ. ಹೇಗೆ ಫಿಲ್ಟರ್ ಆಗುತ್ತದೆ ಎಂದು ಮರು ಪ್ರಶ್ನಿಸಿದರೆ ಮೌನಕ್ಕೆ ಶರಣಾಗುತ್ತಾರೆ.
ಶೌಚಗೃಹಕ್ಕೆ ನೀರು ಬರೋದಿಲ್ಲ ಎನ್ನುವ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಪಂಚಾಯಿತಿ ಅವರೊಂದಿಗೆ ಮಾತನಾಡಿ ಎರಡ್ಮೂರು ದಿನಗಳಲ್ಲಿ ಸಮಸ್ಯೆ ಪರಿಹರಿಸುತ್ತೇನೆ. ಆಸ್ಪತ್ರೆಗೆ ನಿಯೋಜನೆಗೊಂಡಿರುವ ದಸೂಡಿ, ಗೋಡೆಕೆರೆಯ ವೈದ್ಯರಿಗೆ ನಿತ್ಯ ಬಂದು ಹೋಗುವಂತೆ ತಿಳಿಸುತ್ತೇನೆ.
| ಡಾ.ವೈ.ಎಚ್.ಮಧು
ಪ್ರಭಾರ ಆರೋಗ್ಯಾಧಿಕಾರಿ, ಹೊಯ್ಸಳಕಟ್ಟೆ ಪಿಎಚ್ಸಿ
ಮೊದಲಿದ್ದ ಕಾಯಂ ವೈದ್ಯರು ಹೋದ ಬಳಿಕ ಇಬ್ಬರು ವೈದ್ಯರನ್ನು ಡೆಪ್ಯೂಟೇಷನ್ ಮೇಲೆ ಹಾಕಿದ್ದಾರೆ. ಎರಡು ದಿನ ಬಂದರೆ ಮೂರು ದಿನ ಬರಲ್ಲ. ರೋಗಿಗಳು ಬಂದಾಗ ವೈದ್ಯರಿಲ್ಲದಿದ್ದರೆ ಇಲ್ಲಿನ ಸಿಬ್ಬಂದಿಯಿಂದ ಈಗ ಹೋದರು, ಇವತ್ತು ರಜೆ ಇದ್ದಾರೆ. ಮೀಟಿಂಗ್ ಹೋಗಿದ್ದಾರೆ ಎನ್ನುವ ಸಿದ್ಧ ಉತ್ತರಗಳು ಸಿಗುತ್ತವೆೆ. ಹತ್ತು &ಹದಿನೈದು ಹಳ್ಳಿಗಳ ಜನರು ಆರೋಗ್ಯ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.
| ಗಿರೀಶ್ ಗ್ರಾಪಂ ಸದಸ್ಯ, ಹೊಯ್ಸಳಕಟ್ಟೆ
ಹೊಯ್ಸಳಕಟ್ಟೆ ಆಸ್ಪತ್ರೆಗೆ ಹೋದಾಗಲೆಲ್ಲಾ ಒಬ್ಬರು ನರ್ಸ್ ಇರುತ್ತಾರೆ. ಇವರೇ ತಮಗೆ ತಿಳಿದ ಚಿಕಿತ್ಸೆ ಕೊಡುತ್ತಾರೆ. ಇವರು ಸರ್ವೇಗೆ, ಪೊಲೀಯೋ ಅಭಿಯಾನ ಹೀಗೆ ಹಳ್ಳಿಗಳಿಗೆ ಹೋದರೆ ಚಿಕಿತ್ಸೆಯೇ ಸಿಗದೆ ಆಸ್ಪತ್ರೆ ಬಿಕೋ ಎನ್ನುತ್ತದೆ. ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಈ ಆಸ್ಪತ್ರೆ ಸಂಪೂರ್ಣ ವಿಫಲವಾಗಿದೆ.
| ಶ್ರೀನಿವಾಸ್
ಸ್ಥಳಿಯ ನಿವಾಸಿ ಗುರುವಾಪುರ