ಅವೈಜ್ಞಾನಿಕ ಹಂಪ್ಸ್ ತೆರವುಗೊಳಿಸಿ

ಹಾವೇರಿ: ಜಿಲ್ಲೆಯಲ್ಲಿರುವ ಅನಧಿಕೃತ ಹಾಗೂ ವೈಜ್ಞಾನಿಕವಲ್ಲದ ರಸ್ತೆ ಉಬ್ಬು (ಹಂಪ್ಸ್)ಗಳನ್ನು ತೆರವುಗೊಳಿಸಬೇಕು. ರಸ್ತೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ ನಿರ್ದೇಶನ ನೀಡಿದರು.

ಎಸ್​ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸ್ತೆ ಡಿವೈಡರ್ ಫಲಕಗಳು, ರಸ್ತೆ ರಿಫ್ಲೆಕ್ಟರ್​ಗಳನ್ನು ಅಳವಡಿಸುವುದು. ರಸ್ತೆ ಉಬ್ಬುಗಳಿಗೆ ಪೇಂಟಿಂಗ್ ಮಾಡಲು ಕ್ರಮ ವಹಿಸಬೇಕು. ನಗರ ವ್ಯಾಪ್ತಿಯೊಳಗೆ ಸಿಸಿಟಿವಿ ಅಳವಡಿಕೆ ಹಾಗೂ ಸಮರ್ಪಕ ಕಾರ್ಯನಿರ್ವಹಣೆ ಕುರಿತು ಕ್ರಮ ವಹಿಸಿ. ವಾಹನ ನಿಲುಗಡೆಗೆ ಮಾರ್ಕಿಂಗ್ ವ್ಯವಸ್ಥೆ, ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಅಪಘಾತವಾದ ಸಂದರ್ಭದಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಆಂಬುಲೆನ್ಸ್ ಸೇವೆ ನೀಡಬೇಕು. ಆಸ್ಪತ್ರೆಗಳಲ್ಲಿ ವೈದ್ಯರು ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡಬೇಕು. ಹೆಚ್ಚು ಗಾಯಾಳುಗಳು ದಾಖಲಾದ ಸಂದರ್ಭದಲ್ಲಿ ಖಾಸಗಿ ವೈದ್ಯರ ಹಾಗೂ ಅರೇವೈದ್ಯಕೀಯ ಸಿಬ್ಬಂದಿ ಸಹಕಾರ ಪಡೆದು ತ್ವರಿತ ವೈದ್ಯಕೀಯ ಸ್ಪಂದನೆ ಹಾಗೂ ಚಿಕಿತ್ಸೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಹೆಚ್ಚಿನ ಸಾರಿಗೆ ಸೌಲಭ್ಯ ನೀಡಿ: ಜಿಲ್ಲೆಯಲ್ಲಿ ಜಾತ್ರೆ, ಧಾರ್ವಿುಕ ಸ್ಥಳ, ಕಾರ್ಖಾನೆಗಳು ಹಾಗೂ ಶಾಲಾ ಕಾಲೇಜ್​ಗಳಲ್ಲಿ ಪ್ರಯಾಣ ದಟ್ಟಣೆಯಿರುವ ಪ್ರದೇಶಗಳನ್ನು ಆಯಾ ಇಲಾಖೆಗಳು ಸರ್ವೆ ಮಾಡಬೇಕು. ಸಾರಿಗೆ ವ್ಯವಸ್ಥೆ ಕುರಿತು ವರದಿ ಮಾಡಬೇಕು. ದಾವಣಗೆರೆ ಹಾಗೂ ಹುಬ್ಬಳ್ಳಿಗೆ ಪ್ರತಿದಿನ ಕಾರ್ವಿುಕರು ಪ್ರಯಾಣ ಮಾಡುವ ಸಂದರ್ಭಗಳಲ್ಲಿ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ, ಕಾರ್ವಿುಕ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರಕಾಶ, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ಕಾರ್ವಿುಕ, ಅಬಕಾರಿ ಇಲಾಖೆ ಹಾಗೂ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸಮಿತಿ ರಚನೆ: ರಸ್ತೆ ಅಪಘಾತಗಳ ವೈಜ್ಞಾನಿಕ ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಲೋಕೋಪಯೋಗಿ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಪ್ರತಿನಿಧಿಗಳನ್ನು ಒಳಗೊಂಡ ತಾಲೂಕಾವಾರು ತನಿಖಾ ತಂಡಗಳನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಮಿತಿ ಪ್ರತಿ ರಸ್ತೆ ಅಪಘಾತ ಸಂಭವಿಸಿದ ನಂತರ ವೈಜ್ಞಾನಿಕ ತನಿಖೆ ನಡೆಸಿ ಕಾರಣಗಳನ್ನು ದೃಢಪಡಿಸಿ ಅಪಘಾತ ತಗ್ಗಿಸುವ ನಿಟ್ಟಿನಲ್ಲಿ ಸುರಕ್ಷಾ ಕ್ರಮಗಳ ಕೈಗೊಳ್ಳಲು ಕ್ರಮ ವಹಿಸಲಿದೆ ಎಂದು ಎಸ್​ಪಿ ಕೆ. ಪರಶುರಾಮ ತಿಳಿಸಿದರು.

ರಸ್ತೆ ಬದಿಯ ಹೋಟೆಲ್, ಡಾಬಾಗಳ ಮೇಲೆ ನಿಗಾ: ರಸ್ತೆ ಬದಿಯ ಹೋಟೆಲ್ ಹಾಗೂ ಡಾಬಾಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಹಾಗೂ ಮದ್ಯ ಸೇವನೆ ತಡೆಗೆ ಆಗಾಗ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಕೆಲವೊಮ್ಮೆ ಹೆದ್ದಾರಿ ಮಾರ್ಗದ ಹೋಟೆಲ್​ಗಳಲ್ಲಿ ಚಾಲಕರೇ ಮದ್ಯ ಕೊಂಡೊಯ್ದು ಊಟದ ಮುಂಚೆ ಹೋಟೆಲ್​ಗಳಲ್ಲಿ ಮದ್ಯಪಾನ ಮಾಡುವುದು ಉಂಟು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪರಾಧ ಹಾಗೂ ಅಪಾಯಕಾರಿ. ಇಂತಹ ಚಟುವಟಿಕೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಅಧಿಕಾರಿಗಳು ಸತತ ನಿಗಾ ವಹಿಸಬೇಕು ಎಂದು ಎಸ್ಪಿ ಕೆ. ಪರಶುರಾಮ ಸೂಚಿಸಿದರು.

ಜಿಲ್ಲೆಯಲ್ಲಿ ವಿವಿಧ ಧಾರ್ವಿುಕ ಕ್ಷೇತ್ರಗಳಿವೆ. ಈ ಕ್ಷೇತ್ರಗಳಿಗೆ ನಿಗದಿತ ದಿನಾಂಕದಂದು ಹೆಚ್ಚಿನ ಜನ ಆಗಮಿಸುತ್ತಾರೆ. ಅಂತಹ ಸ್ಥಳಗಳನ್ನು ಗುರುತಿಸಬೇಕು. ಯಾವ ಯಾವ ದಿನಗಳಲ್ಲಿ ಜಿಲ್ಲೆಯ ಯಾವ ಧಾರ್ವಿುಕ ಕೇಂದ್ರಗಳಿಗೆ ಹೆಚ್ಚು ಜನ ಪ್ರಯಾಣಿಸುತ್ತಾರೆ ಎಂದು ಸಮೀಕ್ಷೆ ಮಾಡಿ ಜನರ ಸುರಕ್ಷಿತ ಪ್ರಯಾಣಕ್ಕಾಗಿ ಒತ್ತು ನೀಡಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.
| ಕೆ. ಪರಶುರಾಮ ಎಸ್​ಪಿ