ಅವೈಜ್ಞಾನಿಕ ಕಾಮಗಾರಿಗೆ ಜನ ಹೈರಾಣ

ತಿಪಟೂರು : ನಗರದಾದ್ಯಂತ ಕೈಗೊಂಡಿರುವ ಎರಡನೇ ಹಂತದ ಒಳಚರಂಡಿ ಯೋಜನೆ, 24*7 ಕುಡಿವ ನೀರಿನ ಯೋಜನೆ ಅವೈಜ್ಞಾನಿಕ ಕಾಮಗಾರಿಯಿಂದ ಬಡಾವಣೆಗಳ ರಸ್ತೆಗಳು ಹಾಳಾಗಿದೆ ಎಂದು ಆರೋಪಿಸಿ ಸದಸ್ಯರು ನಗರಸಭೆ ವಿಶೇಷ ಸಭೆಯಲ್ಲಿ ಪ್ರತಿಭಟನೆಗೆ ಮುಂದಾದರು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಟಿ.ಎನ್.ಪ್ರಕಾಶ್ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಸಭೆಯ ಆರಂಭದಲ್ಲಿಯೇ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸದಸ್ಯರಾದ ಗೊರಗೊಂಡನಹಳ್ಳಿ ರಾಜಶೇಖರ್, ರೇಖಾ ಅನೂಪ್, ಅಬ್ದುಲ್ ಖಾದರ್ ಮೊದಲಾದವರು ಸಭೆಯ ಅಜೆಂಡಾ ಹೊರತುಪಡಿಸಿ ನಗರದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಸಹಕರಿಸುತ್ತಿಲ್ಲ. ಕಾಮಗಾರಿ ಹೆಸರಿನಲ್ಲಿ ರಸ್ತೆ ಅಗೆದು ಗುಂಡಿಗಳನ್ನಾಗಿ ಮಾರ್ಪಡಿಸಿದ್ದಾರೆ. ಅನೇಕರು ಬಿದ್ದು ಕೈ, ಕಾಲು ಮುರಿದುಕೊಂಡಿರುವ ನಿದರ್ಶನಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ ಟಿ.ಎನ್.ಪ್ರಕಾಶ್ ಮಧ್ಯಪ್ರವೇಶಿಸಿ, ಸಮಸ್ಯೆ ಕುರಿತು ಶೀಘ್ರವೇ ಪ್ರತ್ಯೇಕ ಸಭೆ ಕರೆದು ರ್ಚಚಿಸಲಾಗವುದು ಸದಸ್ಯರನ್ನು ಸಮಾಧಾನಪಡಿಸಿದರು.

ನಗರದಲ್ಲಿ ನಡೆಯುತ್ತಿರುವ ಎರಡು ಕಾಮಗಾರಿಗಳು ಅತ್ಯಂತ ಉಪಯುಕ್ತವಾಗಿದೆ. ಶಾಶ್ವತವಾದ ಕೆಲಸಗಳಾಗಿದ್ದು ಗುತ್ತಿಗೆದಾರರ ತೊಂದರೆಯಿಂದ ಮತ್ತು ಮಳೆಯಿಂದ ಸಮಸ್ಯೆ ಉದ್ಭವಿಸಿದೆ. ಕೂಡಲೇ ಗುತ್ತಿಗೆದಾರರಿಗೆ ತಿಳಿಸಿ ರಸ್ತೆ ಗುಂಡಿ ಮುಚ್ಚಿಸಲಾಗುವುದು ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.

2018-19ರ ಸಾಲಿನ 14ನೇ ಹಣಕಾಸಿನ ಯೋಜನೆ ಸಾಮಾನ್ಯ ಮೂಲ ಅನುದಾನ 2.33 ಕೋಟಿ ಹಣದ ಕ್ರಿಯಾಯೋಜನೆ ತಯಾರಿಸಿ ಕುಡಿಯುವ ನೀರು, ಸಾರ್ವಜನಿಕ ಶೌಚಗೃಹ, ರಸ್ತೆಗಳು, ಬೀದಿದಿಪಗಳ ದುರಸ್ತಿ, ಸ್ಮಶಾನ ನಿರ್ವಹಣೆ ಸೇರಿ ವಿವಿಧ ಕಾಮಗಾರಿಗಳಿಗೆ ಬಳಸುವಂತೆ ಅನುಮೊದನೆ ನೀಡಲಾಯಿತು.

ನಗರೋತ್ಥಾನ ಹಣದ ಸಮರ್ಪಕ ಬಳಕೆ, ನಗರಸಭಾ ನಿಧಿ, 2018-19ನೇ ಸಾಲಿನ ಎಸ್​ಎಫ್​ಸಿ ಮುಕ್ತ ನಿಧಿ ಅನುದಾನವನ್ನು ಎಲ್ಲ ವಾರ್ಡ್​ಗಳಿಗೆ ಹಂಚುವ ಬದಲು ಒಳಚರಂಡಿ ಯೋಜನೆ, 24*7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಮಾಡುತ್ತಿರುವ ಬಡಾವಣೆಗಳ ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು.

ಅಧಿಕಾರಿಗಳಿಗೆ ಎಚ್ಚರಿಕೆ: ಸಭೆಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ತರದಿದ್ದರಿಂದ ಕುಪಿತಗೊಂಡ ಶಾಸಕ ಬಿ.ಸಿ.ನಾಗೇಶ್, ಮಾಹಿತಿ ತಂದಿಲ್ಲ ಎಂದರೆ ಸಭೆ ಹೇಗೆ ನಡೆಸುವುದು. ಇಲ್ಲಿಗೆ ಸಭೆ ನಿಲ್ಲಿಸಿ. ಇಲ್ಲವಾದರೆ ಮುಂದಿನ ಬಾರಿ ಸೂಕ್ತ ಮಾಹಿತಿ ನೀಡಬೇಕು. ಇಲ್ಲವೇ ಮನೆಗೆ ಹೋಗಿ ಎಂದು ಖಡಕ್ ಎಚ್ಚರಿಕೆ ನೀಡಿದರು.