ಅವೈಜ್ಞಾನಿಕವಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ

ಶಿವಮೊಗ್ಗ: ಕನ್ನಡ ಮಾಧ್ಯಮ ಶಿಕ್ಷಕರು ಎಸ್​ಎಸ್​ಎಲ್​ಸಿ ಆಂಗ್ಲ ಮಾಧ್ಯಮ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ಸಂಘಟನೆ ಪ್ರಮುಖರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್​ಎಸ್​ಎಲ್​ಸಿ ಇಂಗ್ಲಿಷ್ ಮಾಧ್ಯಮದ ಉತ್ತರಪತ್ರಿಕೆಯ ಮೌಲ್ಯಮಾಪನವನ್ನು ಕನ್ನಡ ಮಾಧ್ಯಮ ಶಿಕ್ಷಕರಿಂದ ಮಾಡಿಸುತ್ತಿರುವ ಅಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎಂದು ದೂರಿದರು. ಶಿವಮೊಗ್ಗ ನಗರದ 7 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಎನ್​ಇಎಸ್ ಕೇಂದ್ರದಲ್ಲಿ ಸಮಾಜ ವಿಜ್ಞಾನ ಮೌಲ್ಯಮಾಪನ ನಡೆಯುತ್ತಿದೆ. ಈ ಕೇಂದ್ರಕ್ಕೆ 25 ಸಾವಿರ ಉತ್ತರಪತ್ರಿಕೆಗಳು ಬಂದಿದ್ದು, ಇದರಲ್ಲಿ 4 ಸಾವಿರ ಮಾತ್ರ ಕನ್ನಡದ ಮಾಧ್ಯಮದಲ್ಲಿ ಇದೆ. ಉಳಿದ 20 ಸಾವಿರ ಪತ್ರಿಕೆಗಳು ಇಂಗ್ಲಿಷ್ ಮಾಧ್ಯಮದಲ್ಲಿವೆ ಎಂದು ತಿಳಿಸಿದರು.

ಈ ಕೇಂದ್ರದಲ್ಲಿ ಮೌಲ್ಯಮಾಪನದಲ್ಲಿ ತೊಡಗಿರುವ 400 ಶಿಕ್ಷಕರಲ್ಲಿ 300ಕ್ಕೂ ಹೆಚ್ಚು ಮಂದಿ ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಿದವರು. ಇವರಿಗೆ ಇಂಗ್ಲಿಷ್ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಸರಾಗವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತಿಲ್ಲ. ಹತ್ತಾರು ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲೇ ಪಾಠ ಮಾಡಿದವರಿಗೆ ಸಮಾಜವಿಜ್ಞಾನ ಪತ್ರಿಕೆಗಳ ಮೌಲ್ಯಮಾಪನ ಮಾಡುವುದು ಕಷ್ಟವಾಗುತ್ತಿದೆ ಎಂದರು.

ಕೀ ಉತ್ತರಗಳಿದ್ದರೂ ಗಣಿತ ಹಾಗೂ ವಿಜ್ಞಾನದಷ್ಟು ಸಲೀಸಾಗಿ ಸಮಾಜ ವಿಜ್ಞಾನ ಪತ್ರಿಕೆ ಮೌಲ್ಯಮಾಪನ ಮಾಡಲಾಗುವುದಿಲ್ಲ. ಮೌಲ್ಯಮಾಪನಕ್ಕೆ ನಿರಾಕರಿಸಿದ ಕನ್ನಡ ಮಾಧ್ಯಮ ಶಿಕ್ಷಕರನ್ನು ಬೆದರಿಸಿ ಬಲವಂತದಿಂದ ಮೌಲ್ಯಮಾಪನ ಮಾಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದ್ದರೂ ಶಿವಮೊಗ್ಗದಲ್ಲಿ ಅದಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ರೀತಿಯ ಮೌಲ್ಯಮಾಪನದಿಂದ ವಿದ್ಯಾರ್ಥಿಗಳ ಉತ್ತರಕ್ಕೆ ಸರಿಯಾದ ಅಂಕಗಳು ಸಿಗದೆ ಅವರ ಭವಿಷ್ಯಕ್ಕೆ ಕುತ್ತಾಗುವ ಸಾಧ್ಯತೆ ಇದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು. ಅಗತ್ಯವಿರುವ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ನೇಮಿಸಬೇಕು. ಇಲ್ಲವಾದಲ್ಲಿ ಮೌಲ್ಯಮಾಪನ ಕೇಂದ್ರದ ಬಳಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಅರುಣ್ ಕುಮಾರ್ ಮುಂತಾದವರಿದ್ದರು.