ಅವಿಶ್ವಾಸ ನಿರ್ಣಯ ಮಂಡಿಸಲು ವಿಫಲ

ಕೋಲಾರ: ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಗುರುವಾರ ನಿಗದಿಯಾಗಿದ್ದ ಸಭೆಗೆ ಅವಿಶ್ವಾಸ ಮಂಡನೆಗೆ ಸಹಿ ಹಾಕಿದ್ದ ಸದಸ್ಯರೇ ಗೈರಾಗಿದ್ದರಿಂದ ಕೋರಂ ಇಲ್ಲದೆ ಮುಂದೂಡಲಾಗಿದ್ದು, ಬೀಸುವ ದೊಣ್ಣೆಯಿಂದ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ಪಾರಾಗಿದ್ದಾರೆ.

ಒಟ್ಟು 30 ಸದಸ್ಯ ಬಲದ ಜಿಪಂನಲ್ಲಿ ಅಧ್ಯಕ್ಷೆ ಗೀತಮ್ಮ ವಿರುದ್ಧ ಜ.28ರಂದು 22 ಸದಸ್ಯರು ಪಕ್ಷಾತೀತವಾಗಿ ಅವಿಶ್ವಾಸ ಮಂಡನೆಗೆ ಸಭೆ ಕರೆಯಲು ಮನವಿ ನೀಡಿದ್ದರು. ನಿಯಮಾನುಸಾರ ಅಧ್ಯಕ್ಷರು ಸಭೆ ಕರೆಯದಿದ್ದರಿಂದ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಸಭೆ ನಿಗದಿಯಾಗಿತ್ತು. ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ತೂಪಲ್ಲಿ ಆರ್.ನಾರಾಯಣಸ್ವಾಮಿ, ಆರ್.ಶ್ರೀನಿವಾಸ್ ಸಭೆಗೆ ಆಗಮಿಸಿದ್ದರು. ಜಿಪಂ ಸಿಇಒ ಜಿ. ಜಗದೀಶ್ 30 ನಿಮಿಷ ಕಾಲಾವಕಾಶ ನೀಡಿದರೂ ಇನ್ನುಳಿದ ಸದಸ್ಯರು ಹಾಜರಾಗದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ. ಮುಂದಿನ ಸಭೆ ಕರೆಯುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಯಶೋದಾ ಪ್ರಕಟಿಸಿದರು.

ಬಸ್ ಕೆಟ್ಟಿತಂತೆ! ಸಭೆ ಮುಂದೂಡಿದ ಬಳಿಕ ಪ್ರಕಾಶ್ ರಾಮಚಂದ್ರ, ಬಿ.ವಿ.ಮಹೇಶ್, ಜಯಪ್ರಕಾಶ್ ಹಾಜರಾದರೂ ಸಮಯ ಮುಗಿದಿತ್ತು. ಅವಿಶ್ವಾಸ ಮಂಡಿಸಿದ್ದ ಎಲ್ಲ ಸದಸ್ಯರೂ ಹಾಜರಾಗಬೇಕಿತ್ತು. ಮಾರ್ಗ ಮಧ್ಯೆ ಪ್ರಯಾಣಿಸುತ್ತಿದ್ದ ಬಸ್ ಕೆಟ್ಟಿದ್ದರಿಂದ ಸಕಾಲಕ್ಕೆ ಬರಲು ಸಾಧ್ಯವಾಗಲಿಲ್ಲ. ಅತೃಪ್ತರು ನಾವೆಲ್ಲ ಜತೆಗಿದ್ದೇವೆ. ಮುಂದಿನ ದಿನಾಂಕದಂದು ಅವಿಶ್ವಾಸ ಮಂಡಿಸುತ್ತೇವೆ ಎಂದು ಮ್ಯಾಕಲ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಾಧ್ಯಮದವರಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು.

ಕೆಎಚ್ ಮೇಲುಗೈ: ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಆಪ್ತರಾಗಿರುವ ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಿ ಸಂಸದರಿಗೆ ಹಿನ್ನಡೆ ಉಂಟು ಮಾಡುವ ರಾಜಕೀಯ ಎದುರಾಳಿಗಳ ಪ್ರಯತ್ನ ವಿಫಲವಾಗಿದ್ದು, ಸಂಸದ ಕೆ.ಎಚ್.ಮುನಿಯಪ್ಪ ಸದ್ಯಕ್ಕೆ ಮೇಲುಗೈ ಸಾಧಿಸಿದ್ದಾರೆ.

ಕಾಯ್ದೆ ಉಲ್ಲಂಘಿಸಿ ಅವಿಶ್ವಾಸ: ಕೋಲಾರ: ಜಿಪಂನ 22 ಸದಸ್ಯರು ಆರ್​ಡಿಪಿಆರ್ ಕಾಯ್ದೆ ಉಲ್ಲಂಘಿಸಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡಿಸಿದ್ದು, ಅವಿಶ್ವಾಸ ಮಂಡನೆಯೇ ಊರ್ಜಿತವಲ್ಲ ಎಂದು ಸದಸ್ಯ ಆರ್.ನಾರಾಯಣಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಆರ್​ಡಿಪಿಆರ್ ಕಾಯ್ದೆ 179 ಪ್ರಕಾರ ಅಧ್ಯಕ್ಷರ ಮೇಲೆ ವಿಶ್ವಾಸ ಇಲ್ಲ ಎಂಬ ಕಾರಣ ನೀಡಿ ಅವಿಶ್ವಾಸ ಮಂಡಿಸಬಹುದು. ದುರ್ನಡನೆ, ನಿರ್ಲಕ್ಷ್ಯವಹಿಸಿದರೆ ಕಾಯ್ದೆ 179/4ರ ಪ್ರಕಾರ ಅಧಿಕಾರದಿಂದ ವಜಾಗೊಳಿಸಲು ಸರ್ಕಾರಕ್ಕೆ ಅವಕಾಶವಿದೆ. ಸದಸ್ಯರು ನೀಡಿರುವ ಅರ್ಜಿಯಲ್ಲಿ ಕಾಯ್ದೆ 179ರ ಕುರಿತು ಸ್ಪಷ್ಟತೆ ಇಲ್ಲ ಎಂದರು.