ಅವಳು ಯಾರು ?

ಡಾ. ಕೆ.ಎಸ್. ಶುಭ್ರತಾ, ಮನೋವೈದ್ಯೆ, ಶಿವಮೊಗ್ಗ

ಅವಳು ಎಂದರೆ ತಾಯಿ. ಅವಳು ಎಂದರೆ ಅಕ್ಕ. ಅವಳು ಎಂದರೆ ಪತ್ನಿ… ಹೀಗೆ ಏನೆಲ್ಲ. ಅವಳು ಎಲ್ಲರಿಗಾಗಿ ಎಷ್ಟೊಂದು ಕಷ್ಟಪಡುತ್ತಾಳೆ. ಆದರೆ, ಅವಳ ಬಗ್ಗೆ ಕಾಳಜಿ ವಹಿಸುವವರು ಅತಿ ಕಡಿಮೆ. ಆದರೂ ಅವಳ ಹೋರಾಟ ಅಷ್ಟಕ್ಕೇ ಮುಗಿಯದು. ಅಸಂಖ್ಯಾತ ಮಹಿಳೆಯರು ತಮ್ಮ ಸುಖವನ್ನು ಕಡೆಗಣಿಸಿ ತಮ್ಮವರಿಗಾಗಿ ಬದುಕನ್ನು ಮುಡಿಪಿಡುವಾಗ ಅವರ ಅಗಾಧ ಜೀವನಪ್ರೀತಿಯ ಬಗ್ಗೆ ಬೆರಗು ಮೂಡದೇ ಇರದು.

ಆ ಮಹಿಳೆ ಪ್ರತಿ ತಿಂಗಳೂ ನನ್ನಲ್ಲಿ ಬರುತ್ತಾರೆ, ತನ್ನ ತಮ್ಮಂದಿರ ಚಿಕಿತ್ಸೆಗಾಗಿ. ನಲವತೆôದು ವರ್ಷದ ಮಹಿಳೆ ಆಕೆ. ಅವಳಿಗೆ ಇಪ್ಪತ್ತು ವರ್ಷಗಳಿರುವಾಗ ತಂದೆ ತಾಯಿ ತೀರಿಕೊಂಡರು. ಅವಳಿಗೆ ಇಬ್ಬರು ತಮ್ಮಂದಿರು. ಇಬ್ಬರಿಗೂ ಬುದ್ಧಿಮಾಂದ್ಯತೆ. ಒಬ್ಬನಿಗೆ ಸೌಮ್ಯ ತರಹದ ಬುದ್ಧಿಮಾಂದ್ಯತೆ ಇದ್ದರೆ, ಇನ್ನೊಬ್ಬನಿಗೆ ತೀವ್ರ ತರಹದ ಬುದ್ಧಿಮಾಂದ್ಯತೆ. ಅದರೊಂದಿಗೆ ಇಬ್ಬರಿಗೂ ಅಪಸ್ಮಾರ ಕಾಯಿಲೆ ಬೇರೆ ಇದೆ. ತಂದೆ-ತಾಯಿ ತೀರಿದ ನಂತರ ಈ ಮಹಿಳೆಯೇ ಕೆಲಸಕ್ಕೆ ಸೇರಿ ದುಡಿದು ತಮ್ಮಂದಿರನ್ನು ಸಾಕುತ್ತಿದ್ದಾಳೆ. ಮೊದಲನೆಯ ತಮ್ಮ ಸ್ವಲ್ಪಮಟ್ಟಿಗೆ ಕೂಲಿ ಕೆಲಸವಾದರೂ ಮಾಡುತ್ತಾನೆ. ಎರಡನೆಯವನು ಅದನ್ನೂ ಮಾಡುವುದಿಲ್ಲ. ಸಂಸಾರವನ್ನು ನೋಡಿಕೊಳ್ಳುವುದರ ಜತೆಗೆ, ಅಪಸ್ಮಾರದ ಮಾತ್ರೆಗಳಿಗೂ ದುಡ್ಡು ಹೊಂದಿಸಬೇಕು. ತಮ್ಮಂದಿರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ, ಮದುವೆಯೂ ಆಗಿಲ್ಲ. ‘ಏನಮ್ಮಾ, ನೀವು ನಿಮ್ಮ ಮದುವೆ ಬಗ್ಗೆ ಯೋಚನೆ ಮಾಡಿಲ್ಲವೇ?’ ಎಂದು ಕೇಳಿದರೆ, ಅವಳು ನಕ್ಕು ‘ಮೇಡಂ, ನನಗಂತೂ ವಯಸ್ಸಾಯಿತು. ಈಗ ನನ್ನ ಮೊದಲನೆಯ ತಮ್ಮ ಮದುವೆ ಮಾಡೆಂದು ಕಾಡುತ್ತಿದ್ದಾನೆ. ಸಾಲ ಮಾಡಿಯಾದರೂ ಹುಡುಗಿ ತಂದು ಮದುವೆ ಮಾಡಬೇಕೆಂದಿದ್ದೇನೆ’ ಎಂದು ಹೇಳುತ್ತಾಳೆ.

***

ಅವಳು ಇಪ್ಪತ್ತೆಂಟು ವರ್ಷದ ಮಹಿಳೆ. ಎರಡು ತಿಂಗಳ ಬಾಣಂತಿ. ಹೆರಿಗೆಯಾಗಿ ಆರೋಗ್ಯವಂತ ಹೆಣ್ಣು ಮಗು ಹುಟ್ಟಿದೆ. ನನ್ನ ಬಳಿ ಬಾಣಂತಿ ಸನ್ನಿಯ ರೀತಿ ಆಗಿ ಕರೆತಂದಿದ್ದರು. ಗಂಡನಿಗೆ ತನ್ನ ಮನೆಗೇ ಕರೆದುಕೊಂಡು ಹೋಗಬೇಕೆಂಬ ಹಠ. ತಾಯಿಗೆ ಮೂರು ತಿಂಗಳಾದರೂ, ಮಗಳು ಬಾಣಂತನಕ್ಕಾಗಿ ತೌರು ಮನೆಯಲ್ಲಿರಲಿ ಎಂಬ ಯೋಚನೆ. ಈ ವಿಷಯಕ್ಕೇ ಮನೆಯಲ್ಲಿ ಜಗಳ. ಗಂಡನಿಗೆ ಮಗು ಹೆಣ್ಣು ಎಂಬ ಅಸಮಾಧಾನ ಬೇರೆ. ಇದೆಲ್ಲಾ ಚಿಂತೆ ಸೇರಿ, ನಿದ್ರೆಯಿಲ್ಲದೆ, ಖಿನ್ನತೆಗೊಳಗಾಗಿದ್ದಳು ಅವಳು. ತಂದೆ-ತಾಯಿ-ಗಂಡ ನನ್ನಲ್ಲಿ ಅವಳನ್ನು ಕರೆತಂದಿದ್ದರು. ಅವಳಲ್ಲಿನ ಖಿನ್ನತೆಯ ಲಕ್ಷಣಗಳನ್ನೆಲ್ಲ ಕೂಲಂಕುಷವಾಗಿ ಕೇಳಿ, ಈ ಜಗಳದ ಬಗ್ಗೆಯೂ ಕೇಳಿದೆ. ಆ ತಂದೆ ಹೇಳಿದ್ದು ನನಗೆ ಆಶ್ಚರ್ಯ ಮತ್ತು ಸಿಟ್ಟು ತಂದಿತ್ತು. ‘ಮೇಡಂ, ಜಗಳ ಆಯಿತು. ಅಳಿಯ ನನ್ನ ಮಗಳಿಗೆ ಒಂದು ಏಟೂ ಹೊಡೆದ’ ಎಂದ ಆ ತಂದೆ. ನಾನು ‘ಹೊಡೆದನಾ? ನೀವ್ಯಾಕೆ ಸುಮ್ಮನಿದ್ದಿರಿ?’ ಎಂದು ಸಿಟ್ಟಿನಿಂದ ಕೇಳಿದೆ. ‘ಮೇಡಂ, ಅದರಲ್ಲಿ ಏನಿದೆ? ಗಂಡನಲ್ಲದೆ ಮತ್ಯಾರು ಹೆಂಡತಿಗೆ ಹೊಡೆಯುತ್ತಾರೆ? ಏನೋ ಸಿಟ್ಟಿಗೆ ಒಂದೇಟು ಕೊಟ್ರೆ, ಅದನ್ನೇ ತಲೆಗೆ ಹಚ್ಚಿಕೊಳ್ಳುತ್ತಾರೆಯೇ?’ ಎನ್ನಬೇಕೇ? ಆ ಬಾಣಂತಿ ಕೂಡ ‘ಅದೇನೂ ಇಲ್ಲ, ಮೇಡಂ’ ಎಂದಳು.

***

ಅವಳು ಮೂವತೆôದು ವರ್ಷ ವಿವಾಹಿತೆ. ಗಂಡನಿಗೆ ಕುಡಿತದ ಚಟ. ಅವನನ್ನು ಮದ್ಯವ್ಯಸನದಿಂದ ಮುಕ್ತಗೊಳಿಸುವ ಅವಳ ಪ್ರಯತ್ನ ಕಳೆದ ಆರು ವರ್ಷಗಳಿಂದ ನಡೆದೇ ಇದೆ. ಚಿಕಿತ್ಸೆ ತೆಗೆದುಕೊಂಡ ಬಳಿಕ ಮೂರು ನಾಲ್ಕು ತಿಂಗಳು ಕುಡಿಯುವುದಿಲ್ಲ. ಒಂದು ದಿನ ಮತ್ತೆ ಪ್ರಾರಂಭ. ಕುಡಿತ ಪ್ರಾರಂಭವಾಗುತ್ತಿದ್ದ ಹಾಗೇ ಇವಳಿಗೆ ಹಿಂಸೆ. ಮನಸ್ಸಿಗೆ ನೋವಿನ ಜತೆಗೆ ದೇಹಕ್ಕೂ ಹೊಡೆತ. ಗಂಡ ಕುಡಿತದ ಅಮಲಿನಲ್ಲಿ ಇವಳಿಗೆ ಹೊಡೆಯುತ್ತಾನೆ. ಅದನ್ನೆಲ್ಲ ತಡೆಯುತ್ತಾಳೆ. ಮರುದಿನ ಎದ್ದು, ಗಂಡನನ್ನು ಪುಸಲಾಯಿಸಿ, ಅವನ ಹೊಡೆತದಿಂದ ಊದಿದ ಮುಖ, ಕಪ್ಪಾದ ಕಣ್ಣು, ಅಲ್ಲಲ್ಲಿ ಗಾಯ ಹೊತ್ತುಕೊಂಡೇ ನನ್ನಲ್ಲಿ ಚಿಕಿತ್ಸೆಗಾಗಿ ಅವನನ್ನು ಕರೆತರುತ್ತಾಳೆ. ಮತ್ತೆ ಆಸ್ಪತ್ರೆಯಲ್ಲಿ ಮೂರು ದಿನಗಳಿದ್ದು, ಅವನ ಸೇವೆ ಮಾಡಿ ಗುಣಗೊಳಿಸಿ, ಸಾಲ ಮಾಡಿದ ಹಣದಿಂದ ಆಸ್ಪತ್ರೆಯ ಬಿಲ್ ಕಟ್ಟಿ, ಗುಣಮುಖಗೊಳಿಸಿ, ಮನೆಗೆ ಕರೆದೊಯ್ಯುತ್ತಾಳೆ.

ಅವಳು ಮೂವತ್ತು ವರ್ಷದ ತಾಯಿ. ಆರು ವರ್ಷದ ಮಗನನ್ನು ಮನೋವೈದ್ಯಕೀಯ ಚಿಕಿತ್ಸೆಗಾಗಿ ಕರೆತರುತ್ತಾಳೆ. ಎರಡು ವರ್ಷಗಳಿದ್ದಾಗ ಆ ಮಗುವಿಗೆ ‘ಬೆಳವಣಿಗೆಯ ತೊಂದರೆ’ ಇದೆಯೆಂದು ಮಕ್ಕಳ ವೈದ್ಯರಿಂದ ಅರಿತಳು. ನನ್ನಲ್ಲಿ ಕರೆತಂದಳು. ಮಗುವಿಗೆ ಇದ್ದದ್ದು ಆಟಿಸಂ ಸಮಸ್ಯೆ. ಆಟಿಸಂ ಇರುವ ಮಕ್ಕಳಲ್ಲಿ ಮಾತು ಬರುವುದು ನಿಧಾನವಾಗುತ್ತದೆ.

ಕೆಲವೊಮ್ಮೆ ಬರದೇ ಇರಬಹುದು. ಸಾಮಾಜಿಕ ಕೌಶಲಗಳ ಸಮಸ್ಯೆ ಇರುತ್ತದೆ. ಬೇರೆ ಬೇರೆ ವರ್ತನಾ ಸಮಸ್ಯೆಗಳಿರುತ್ತವೆ. ಸೌಮ್ಯ ತರಹದ ಬುದ್ಧಿಮಾಂದ್ಯತೆಯೂ ಇರುತ್ತದೆ. ಈಗ ನಾಲ್ಕು ವರ್ಷಗಳ ಹಿಂದೆ, ನನ್ನಲ್ಲಿ ಬಂದಾಗ, ನಾನು ಈ ಸಮಸ್ಯೆ ಬಗ್ಗೆ ಅವಳಿಗೆ ತಿಳಿಹೇಳಿದಾಗ, ಅವಳ ಪ್ರತಿಕ್ರಿಯೆ ನನ್ನ ಮನಸ್ಸಿನಲ್ಲಿ ಚಿತ್ರದ ಹಾಗೆ ನೆನಪಿದೆ. ಆಸ್ಪತ್ರೆಯಲ್ಲಿ ಇದ್ದೇನೆಂದು ಲೆಕ್ಕಿಸದೇ, ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಳು. ನನಗೆ ಅವಳನ್ನು ಸಂತೈಸಲು ಒಂದು ಗಂಟೆ ಹಿಡಿದಿತ್ತು. ನಾಲ್ಕು ವರ್ಷಗಳ ನಂತರ, ಈಗ ಇವಳನ್ನು ಮತ್ತು ಮಗುವನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇವಳು ಅಂದಿನಿಂದ ಇಂದಿನವರೆಗೆ ‘ನನ್ನ ಮಗು ಚೆನ್ನಾಗಿ ಆಗುತ್ತದೆ’ ಎಂಬ ದೃಢ ನಂಬಿಕೆಯಿಂದ, ಪ್ರಯತ್ನ ಪಡುತ್ತಿದ್ದಾಳೆ. ತಾನು ಇದ್ದ ಒಳ್ಳೆಯ ಕೆಲಸವನ್ನು ತೊರೆದು, ಮಗುವಿಗಾಗಿಯೇ ಮನೆಯಲ್ಲಿದ್ದು ತಾನೇ ಖುದ್ದಾಗಿ ಮಕ್ಕಳ ಬೆಳವಣಿಗೆಯ ಸಮಸ್ಯೆಗಳ ಬಗ್ಗೆ ದೂರಶಿಕ್ಷಣ ಕೋರ್ಸ್ ಮುಗಿಸಿ, ನಾವು ಹೇಳುವ ಎಲ್ಲ ವರ್ತನಾ ಬದಲಾವಣೆಗಳನ್ನು ಮನೆಯಲ್ಲಿ ಕಾರ್ಯರೂಪಕ್ಕೆ ತರುತ್ತಿದ್ದಾಳೆ. ಇವಳ ಅಂದರೆ ಈ ತಾಯಿಯ ಪ್ರಾಮಾಣಿಕ ಪ್ರಯತ್ನದಿಂದ ದಿನೇ ದಿನೆ ಮಗುವಿನಲ್ಲಿ ಸಕಾರಾತ್ಮಕ ಬದಲಾವಣೆಗಳೂ ಸಾಕಷ್ಟು ಆಗುತ್ತಿವೆ.

***

ಮನೋವೈದ್ಯೆಯಾಗಿ ಪ್ರತಿದಿನವೂ ನೋಡುವ ಈ ಮೇಲಿನ ರೀತಿಯ ಘಟನೆಗಳು/ ಸಂದರ್ಭಗಳನ್ನು ನನ್ನ ಮನಸ್ಸು ವಿಶ್ಲೇಷಿಸಿದಾಗ ‘ಅವಳು ಯಾರು?’ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತೇನೋ ಎನ್ನಿಸುತ್ತದೆ. ‘ಸಿಕ್ಕಿತು’ ಎಂದಾಗ ಅವಳೊಂದು ಅದ್ಭುತ ಎನಿಸಿ, ಅವಳ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಇವಳಿಗೆ ಎಲ್ಲಿಂದ ಈ ಸಹನಾಶಕ್ತಿ, ತ್ಯಾಗಬುದ್ಧಿ ಬಂತು ಎಂದು ಅಚ್ಚರಿಯಾಗುತ್ತದೆ. ಅವಳು ಇತರರಿಗಾಗಿ ಮಾಡಿದಷ್ಟು, ಬೇರೆಯವರು ಇವಳಿಗೆ ಮಾಡುತ್ತಾರೆಯೇ? ಮನಸ್ಸು ಆರ್ದ್ರಗೊಳ್ಳುತ್ತದೆ. ಅವಳಿಗಾಗಿ ನನ್ನ ಕೈಲಾದಷ್ಟು ಮಾಡುವುದಷ್ಟೇ ನನ್ನ ಜವಾಬ್ದಾರಿ ಎಂದು ಮನಸ್ಸು ಸಮಾಧಾನ ಹೇಳುತ್ತದೆ. ಅವಳು ಬಾಣಂತಿಯಾಗಿ ನನ್ನಲ್ಲಿ ಬಂದಾಗ, ಹೆಚ್ಚು ಕಾಯಿಸದೇ ಸರದಿಯನ್ನು ಮುರಿದು ಬೇಗ ಕರೆಯುತ್ತೇನೆ. ಅವಳು ಅಕ್ಕನಾಗಿ ಬಂದು ತಮ್ಮಂದಿರಿಗೆ ಮಾತ್ರೆ ತೆಗೆದುಕೊಳ್ಳಲು ಬಂದಾಗ ನನ್ನ ಕೈಯಲ್ಲಿ ಸಾಧ್ಯವಾದಷ್ಟು ಉಚಿತವಾದ ಮಾತ್ರೆಗಳನ್ನು ಕೊಡುತ್ತೇನೆ. ಅವಳು ಬೆಳವಣಿಗೆಯ ಸಮಸ್ಯೆ ಇರುವ ತಾಯಿಯಾಗಿ ಮಗುವಿನ ಚಿಕಿತ್ಸೆಗಾಗಿ ಬಂದಾಗ ಅವಳಿಗಾಗಿ ಹೆಚ್ಚಿನ ಸಮಯ ಕೊಟ್ಟು ಮಗುವಿನ ಸಮಸ್ಯೆ ಜತೆ ಅವಳ ಸುಖ/ದುಃಖವನ್ನು ವಿಚಾರಿಸಿಕೊಳ್ಳುತ್ತೇನೆ. ಅವಳು ಕುಡಿತದ ಸಮಸ್ಯೆ ಇರುವ ಗಂಡನ ಚಿಕಿತ್ಸೆಗಾಗಿ ಬಂದಾಗ, ನನ್ನಿಂದ ಸಾಧ್ಯವಾದಷ್ಟು ಆ ಗಂಡನಿಗೆ ಆಪ್ತಸಮಾಲೋಚನೆ ಮಾಡಿ ಹೇಗಾದರೂ ಕುಡಿತದಿಂದ ಮುಕ್ತ ಮಾಡುವ ಪ್ರಯತ್ನ ಮಾಡುತ್ತೇನೆ. ಅವಳು ಗಂಡನಿಂದ ಏಟು ತಿನ್ನುತ್ತಿದ್ದರೆ, ಆ ಪುರುಷನಲ್ಲಿ ಕೌಟುಂಬಿಕ ದೌರ್ಜನ್ಯದ ಬಗೆಗಿರುವ ಕಾನೂನಿನ ವಿಷಯ ಹೇಳಿ ಸ್ವಲ್ಪವಾದರೂ ಭಯ ಮೂಡಿಸಲು ಪ್ರಯತ್ನಿಸುತ್ತೇನೆ. ಅವಳಿಗಾಗಿ ಇನ್ನೂ ಏನಾದರೂ ಮಾಡಬೇಕೆನ್ನುವ ಹಂಬಲ/ತುಡಿತ ಇದ್ದೇ ಇದೆ.

Leave a Reply

Your email address will not be published. Required fields are marked *