ಅವಳಿ ನಗರದಲ್ಲಿ ಮುಂದುವರಿದ ಕಟ್ಟುನಿಟ್ಟು

ಹುಬ್ಬಳ್ಳಿ ಲಾಕ್​ಡೌನ್​ನ ಮೊದಲ ಹಂತದ ಕೊನೆಯ ದಿನವಾದ ಮಂಗಳವಾರ ಹು-ಧಾ ಅವಳಿ ನಗರದ ಕೆಲವೆಡೆ ಬೈಕ್ ಸಂಚಾರ ಕಂಡುಬಂದರೂ ಬಹುತೇಕ ಪ್ರದೇಶದಲ್ಲಿ ಕಟ್ಟುನಿಟ್ಟಿನ ಪಾಲನೆ ಮುಂದುವರಿದಿತ್ತು.

ಲಾಕ್​ಡೌನ್​ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದ್ದರೂ ಹುಬ್ಬಳ್ಳಿ ಸವೋದಯ ವೃತ್ತ, ಗೋಕುಲ ರಸ್ತೆ, ಧಾರವಾಡದ ಜ್ಯುಬಿಲಿ ವೃತ್ತ, ಎನ್​ಟಿಟಿಎಫ್ ಸೇರಿ ವಿವಿಧೆಡೆ ಬೈಕ್ ಹಾಗೂ ಆಟೊಗಳ ಸಂಚಾರ ಕಂಡುಬಂದಿತು. ಕೆಲವೆಡೆ ಪೊಲೀಸರು ನಾಕಾಬಂದಿ ನಡೆಸಿ ಪ್ರತಿ ವಾಹನದವರನ್ನು ಪ್ರಶ್ನಿಸುತ್ತಿದ್ದರು. ಕೆಲವು ಕಡೆಗೆ ಅಷ್ಟು ಬಿಗಿ ಇರಲಿಲ್ಲ.

ಅಗತ್ಯ ವಸ್ತು ಖರೀದಿ ಸೇರಿ ವಿವಿಧ ಕಾರಣಕ್ಕಾಗಿ ಸಂಚರಿಸುತ್ತಿದ್ದವರ ಸಂಖ್ಯೆ ತೀರ ಕಡಿಮೆ ಇರಲಿಲ್ಲ. ಕೆಲವೆಡೆ ತರಕಾರಿ ಖರೀದಿಸಲು ಜನರು ಗುಂಪಾಗಿ ನಿಂತಿದ್ದೂ ಕಾಣಿಸಿತು. ಬಹುತೇಕ ಬಡಾವಣೆಗಳಲ್ಲಿ ಬೆಳಗ್ಗೆಯಿಂದಲೇ ತರಕಾರಿ ಮಾರಾಟ ಮಾಡುವವರು ಆಟೊ ಹಾಗೂ ತಳ್ಳುಗಾಡಿಗಳನ್ನು ತೆಗೆದುಕೊಂಡು ಬಂದಿದ್ದರು. ಹುಬ್ಬಳ್ಳಿ ಸ್ಟೇಷನ್ ರಸ್ತೆ, ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಹಿರೇಪೇಟ, ಕುಸುಗಲ್ಲ ರಸ್ತೆ, ವಿದ್ಯಾನಗರ ಇತರ ಪ್ರಮುಖ ರಸ್ತೆಗಳು ವಾಹನ ಹಾಗೂ ಜನ ಸಂಚಾರ ಇಲ್ಲದೆ ಬಿಕೊ ಎನ್ನುತ್ತಿದ್ದವು. ಬಿಗ್​ಬಜಾರ್ ಎದುರು ಜನರು ಅಗತ್ಯ ವಸ್ತುಗಳ ಖರೀದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತಿದ್ದರು.

ಗೋಕುಲ ಕೈಗಾರಿಕಾ ಪ್ರದೇಶದಲ್ಲಿಯೂ ಎಲ್ಲ ಕೈಗಾರಿಕೆಗಳು ಮುಚ್ಚಿದ್ದು, ಸಂಪೂರ್ಣ ಪ್ರದೇಶ ಬಿಕೋ ಎನ್ನುತ್ತಿತ್ತು.

ದಾನಿಗಳಿಗಾಗಿ ಕಾಯುತ್ತಿರುವ ಬಂಜಾರ ಕಾಲನಿ ಜನ ದಿನಗೂಲಿ ಮಾಡಿಯೇ ಬದುಕಬೇಕು…ಲಾಕ್​ಡೌನ್​ನಿಂದಾಗಿ ಕೆಲಸ ಇಲ್ಲದಂತಾಗಿದೆ. ನಮ್ಮ ಗೋಳು ಯಾರೂ ಕೇಳುತ್ತಿಲ್ಲ… ಗೋಕುಲ ರಸ್ತೆ ಬಂಜಾರ ಕಾಲನಿ ಜನರ ಅಳಲು ಇದು. ಲಾಕ್​ಡೌನ್​ನಿಂದಾಗಿ ಬಂಜಾರ ಕಾಲನಿಯಲ್ಲಿಯೂ ಜನ ಸಂಚಾರ ವಿರಳವಾಗಿದೆ. ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ. ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದಾರೆ. ಮನೆಯಲ್ಲಿದ್ದ ದಿನಸಿ ಖಾಲಿಯಾಗುತ್ತಿದೆ. ಹಣ ಕೊಟ್ಟು ದಿನಸಿ ಖರೀದಿಸಬೇಕೆಂದರೆ ದುಡಿಮೆ ಇಲ್ಲ. ಕಳೆದ ಕೆಲ ದಿನಗಳ ಹಿಂದೆ 2 ತಿಂಗಳಿಗಾಗುವಷ್ಟು ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡಲಾಗಿದೆ. ಆದರೆ, ಅಡುಗೆಗೆ ಬೇಕಾದ ಎಣ್ಣೆ, ಹಿಟ್ಟು, ಬೇಳೆ, ತರಕಾರಿ ಖರೀದಿಸಲು ಇವರ ಬಳಿ ಹಣ ಇಲ್ಲ. ಯಾರಾದರೂ ದಾನಿಗಳು ಬಂದು ನಿತ್ಯೋಪಯೋಗಿ ಸಾಮಗ್ರಿಗಳನ್ನು ನೀಡುತ್ತಾರೆಯೇ ? ಎಂದು ಜಾತಕ ಪಕ್ಷಿಯಂತೆ ಇಲ್ಲಿನ ಜನ ಕಾಯುತ್ತಿದ್ದಾರೆ.

ಡಾಕಪ್ಪ ವೃತ್ತದ ಸುತ್ತ ಆತಂಕ ಒಂದೇ ಕುಟುಂಬದ ಐವರಲ್ಲಿ ಕರೊನಾ ಪಾಸಿಟಿವ್ ಕಂಡುಬಂದ ಮುಲ್ಲಾ ಓಣಿಯ ಸುತ್ತ ಬುಧವಾರವೂ ಆತಂಕದ ವಾತಾವರಣ ಮುಂದುವರಿದಿತ್ತು. ಡಾಕಪ್ಪ ವೃತ್ತ, ಹಿರೇಪೇಟ, ಕಮರಿಪೇಟ ಸೇರಿ ಸುತ್ತಲಿನ ಪ್ರದೇಶಗಳ ಮನೆಗಳು ಬಾಗಿಲು ಮುಚ್ಚಿದ್ದವು. ಆದರೂ ಆಗೊಮ್ಮೆ, ಈಗೊಮ್ಮೆ ಬೈಕ್ ಸವಾರರು ಮುಲ್ಲಾ ಓಣಿಯಲ್ಲಿ ಕಾಣಿಸುತ್ತಿದ್ದರು. ಕಳೆದ ಎರಡ್ಮೂರು ದಿನಗಳಿಂದ ಈ ಪ್ರದೇಶದಲ್ಲಿ ವಾಹನ ಹಾಗೂ ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದ ಪೊಲೀಸರು, ಮಂಗಳವಾರ ಸ್ವಲ್ಪ ಮಟ್ಟಿನ ಸಡಿಲಿಕೆ ನೀಡಿದಂತೆ ತೋರಿತು.

ಪೊಲೀಸರಿಂದ ಎಚ್ಚರಿಕೆ ಮನೆಯಲ್ಲಿ ಇದ್ದು ಕರೊನಾ ಸೋಂಕು ಹೊಡೆದೋಡಿಸಬೇಕು. ಅನಿವಾರ್ಯ ಇದ್ದಾಗ ಮಾತ್ರ ಹೊರಗಡೆ ಬರಬೇಕು. ಸುಮ್ಮನೆ ತಿರುಗಾಡಿದರೆ ಶಿಕ್ಷೆ ವಿಧಿಸಲಾಗುವುದು. ನಿಮ್ಮ ಓಣಿಯಲ್ಲಿ ಸೋಂಕಿತ ವ್ಯಕ್ತಿ ಕಾಣಿಸಿಕೊಂಡರೆ ಇಡೀ ಓಣಿ, ಊರಿಗೇ ಹೈ ಅಲರ್ಟ್ ಘೊಷಣೆಯಾಗುತ್ತದೆ. ಹುಷಾರಾಗಿರಬೇಕು… ಪೊಲೀಸರು ಮೈಕ್​ನಲ್ಲಿ ಹೀಗೆ ಸಂದೇಶ ನೀಡುತ್ತ ಸಾಗಿದರು. ಮಂಗಳವಾರ ಪ್ರಧಾನಿ ಭಾಷಣದ ನಂತರ ಲಾಕ್​ಡೌನ್ ಮುಂದುವರಿಕೆಯಾಗಿರುವ ಸಂಗತಿಯನ್ನು ಪೊಲೀಸರು ಪುನಃ ಸಾರಿ ಮನವರಿಕೆ ಮಾಡಿಕೊಟ್ಟರು. ಹುಬ್ಬಳ್ಳಿ ಮುಲ್ಲಾ ಓಣಿಯ ಕರೊನಾ ಪೀಡಿತರ ಮನೆಯಿಂದ 3 ಕಿ.ಮೀ. ಸುತ್ತಳತೆಯಲ್ಲಿ ಕಂಟೈನ್​ವೆುಂಟ್ ಘೊಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಕೆಲವೆಡೆ ತರಕಾರಿ ವ್ಯಾಪಾರ ಮಾಡಲು ತಳ್ಳು ಬಂಡಿ ತೆಗೆದುಕೊಂಡು ಬಂದವರನ್ನು ಸಹ ಪೊಲೀಸರು ಮಧ್ಯಾಹ್ನದ ನಂತರ ಮನೆಗೆ ಕಳುಹಿಸಿದ್ದು ಕಂಡುಬಂತು.

ಬೈಕ್ ವ್ಹೀಲಿಂಗ್ ಲಾಕ್​ಡೌನ್ ಮಧ್ಯೆಯೂ ಬೈಕ್ ಸವಾರನೊಬ್ಬ ವ್ಹೀಲಿಂಗ್ ನಡೆಸಿದ ಘಟನೆ ಮಂಗಳವಾರ ಹುಬ್ಬಳ್ಳಿ ಬಸವ ವನ ಬಳಿ ನಡೆದಿದೆ. ಬೈಕ್ ಸವಾರನನ್ನು ಕರ್ತವ್ಯ ನಿರತ ಪೊಲೀಸ್ ಪೇದೆ ಹಾಗೂ ಹೋಂಗಾರ್ಡ್ ತಡೆಯುವ ಪ್ರಯತ್ನ ನಡೆಸಿದರೂ ಆತ ಸ್ವಲ್ಪದರಲ್ಲಿ ಪಾರಾದ. ಲಾಕ್​ಡೌನ್ ಸಮಯದಲ್ಲಿ ಅನಗತ್ಯ ಸಂಚಾರ ನಡೆಸುವುದು ತಪ್ಪು. ಇಂತಹ ಸಮಯದಲ್ಲಿ ಬೈಕ್ ಸವಾರರು ವ್ಹೀಲಿಂಗ್ ನಡೆಸುತ್ತಿದ್ದಾರೆ!

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…