ಹುಬ್ಬಳ್ಳಿ- ಧಾರವಾಡ: ಅವಳಿ ನಗರದಲ್ಲಿ ಗುರುವಾರ ಸಂಜೆ ಭಾರಿ ಬಿರುಸಿನ ಮಳೆಯಾಗಿದೆ. ಗುಡುಗು, ಸಿಡಿಲಿನ ಅಬ್ಬರ ಹಾಗೂ ಬಿರುಗಾಳಿಯೊಂದಿಗೆ ಬಂದ ಮಳೆಯು ತಾಸಿಗೂ ಹೆಚ್ಚು ಕಾಲ ಸುರಿಯಿತು. ಕೆಲವೆಡೆ ಆಲಿಕಲ್ಲಿನ ಮಳೆಯಾಗಿದೆ.
ಹುಬ್ಬಳ್ಳಿಯ ವಿವಿಧೆಡೆ ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವರಣ ಇತ್ತು. ಸಂಜೆಯಾಗುತ್ತಲೇ ದಟ್ಟವಾದ ಮೋಡಗಳು ಆವರಿಸಿದವು. ಕೆಲಹೊತ್ತು ಬಿರುಗಾಳಿ ಬೀಸಿ ಭಯ ಹುಟ್ಟಿಸಿತ್ತು. ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ, ಸಂಜೆ ಧಾರಾಕಾರವಾಗಿ ಸುರಿಯಿತು. ಇಡೀ ದಿನ ಬಿಸಿಲಿನ ವಾತಾವರಣವಿದ್ದರೂ ಸಂಜೆ ಹೊತ್ತಿಗೆ ಬಿರುಸಿನ ಮಳೆಯಾಯಿತು. ಕೆಲಹೊತ್ತು ಮಳೆಯೊಂದಿಗೆ ದೊಡ್ಡ ಆಲಿಕಲ್ಲುಗಳು ಧರೆಗೆ ಅಪ್ಪಳಿಸಿದವು. ಸಂಜೆ 6ರಿಂದ ಏಳು ಗಂಟೆಯವರೆಗೂ ಬಿಡದೇ ಮಳೆ ಸುರಿಯಿತು. ನಂತರದಲ್ಲೂ ಆಗಾಗ ಜಡಿ ಮಳೆ ಸುರಿದು ತಂಪಿನ ವಾತಾವರಣ ಸೃಷ್ಟಿಸಿತು. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಜನ ಹಾಗೂ ವಾಹನಗಳ ಓಡಾಟ ಇರಲಿಲ್ಲ. ಹಾಗಾಗಿ ಮಳೆಯಿಂದ ಜನರಿಗೆ ಅಷ್ಟಾಗಿ ತೊಂದರೆ ಕಂಡು ಬರಲಿಲ್ಲ.