ಅವಳಿನಗರಕ್ಕೆ ಕಾಲಿಟ್ಟ ಬಾಡಿಗೆ ಬೈಕ್​ಗಳು

ಹುಬ್ಬಳ್ಳಿ: ಪ್ರತಿ ಗಲ್ಲಿಯಲ್ಲೂ ಬಾಡಿಗೆ ಸೈಕಲ್ ಸಿಗುತ್ತಿದ್ದ ಕಾಲ ಒಂದಿತ್ತು. ವಾಹನ ಸೌಕರ್ಯ ಹೆಚ್ಚಿದ ಮೇಲೆ ಬಾಡಿಗೆ ಸೈಕಲ್ ಸಿಗುವುದೂ ಇಲ್ಲ; ನಗರ ಪ್ರದೇಶದಲ್ಲಿ ಸೈಕಲ್ ತುಳಿಯುವವರೂ ಕಡಿಮೆಯಾಗಿದ್ದಾರೆ. ಹೊರಗಿನಿಂದ ನಗರಕ್ಕೆ ಬಂದವರು ಆಟೋರಿಕ್ಷಾ ಅಥವಾ ಸಿಟಿ ಬಸ್​ನಲ್ಲಿ ಹೋಗಬೇಕು. ಅದಲ್ಲದಿದ್ದರೆ ನಡೆದೇ ಹೋಗಬೇಕಿದೆ. ಇಂಥ ಸಂದರ್ಭದಲ್ಲೇ ಶುರುವಾಗಿದೆ ಬಾಡಿಗೆ ಬೈಕ್ ಸೇವೆ.

ಲೈಸೆನ್ಸ್ ತೋರಿಸಿ, ಆಧಾರ್ ಕಾರ್ಡ್ ಕೊಟ್ಟರೆ ಸಾಕು ಬಾಡಿಗೆ ಬೈಕ್ ಪಡೆದು, ಎಲ್ಲೆಂದರಲ್ಲಿ ಸುತ್ತಾಡಬಹುದು.

ಹೌದು. ಮುಂಬೈ, ಪುಣೆ, ಬೆಂಗಳೂರುಗಳಂತಹ ಮಹಾನಗರಗಳಲ್ಲಿರುವ ಬಾಡಿಗೆ ಬೈಕ್ ಹುಬ್ಬಳ್ಳಿ-ಧಾರವಾಡಕ್ಕೂ ಕಾಲಿಟ್ಟಿವೆ. ಪ್ರತಿ ತಾಸಿಗೆ ನಿಗದಿತ ಹಣ ನೀಡಿದರೆ ಸಾಕು, ದಿನವಿಡೀ ಸುತ್ತಾಡಬಹುದು.

ಡ್ರೖೆವಜಿ ಹಾಗೂ ಓಗೊ ಎಂಬ ಎರಡು ಪ್ರತ್ಯೇಕ ಕಂಪನಿಗಳು ಅವಳಿನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಜನಮನ್ನಣೆ ಗಳಿಸಿವೆ.

ಡ್ರೖೆವಜಿ ಕೆಲ ತಿಂಗಳುಗಳಿಂದ ಹುಬ್ಬಳ್ಳಿಯಲ್ಲಿ ಬಾಡಿಗೆ ಬೈಕ್ ನೀಡುತ್ತಿದ್ದರೆ, ಓಗೊ ಇತ್ತೀಚೆಗೆ ಸೇವೆ ಪ್ರಾರಂಭಿಸಿದೆ.

ಹುಬ್ಬಳ್ಳಿ ಮರಾಠಾ ಗಲ್ಲಿಯ ಹರ್ಷಾ ಕಾಂಪ್ಲೆಕ್ಸ್ (ಲಕ್ಷ್ಮೀ ಬಾಲಕೃಷ್ಣ ಆರ್ಕೆಡ್) ಆವರಣದಲ್ಲಿ ಡ್ರೖೆವಜಿ ಸಂಸ್ಥೆ 96 ಹೊಂಡಾ ಆಕ್ಟಿವಾ ಬೈಕ್​ಗಳನ್ನು ಬಾಡಿಗೆಗಾಗಿ ಇಟ್ಟಿದೆ. ಪ್ರತಿ ತಾಸಿಗೆ 10 ರೂ.ಗಳಂತೆ ಬಾಡಿಗೆ ಹಣ ನಿಗದಿಪಡಿಸಿದ್ದು, ಸವಾರರು ಆಧಾರ್ ಕಾರ್ಡ್ ನೀಡುವ ಜೊತೆಗೆ ಡ್ರೖೆವಿಂಗ್ ಲೈಸೆನ್ಸ್ ತೋರಿಸಬೇಕು. ಬೈಕ್ ಜೊತೆಗೆ ಬೇಕಾದ ಹೆಲ್ಮೆಟ್ ಅನ್ನು ಕಂಪನಿಯೇ ನೀಡುತ್ತದೆ. ಈ ಬೈಕ್ ಪಡೆದು ರಾಜ್ಯದ ಯಾವುದೇ ಮೂಲೆಗೂ ಹೋಗಬಹುದು!

ಈಗಾಗಲೇ ಬೆಂಗಳೂರು, ಮುಂಬೈ, ಪುಣೆ, ಮಂಗಳೂರಿನಲ್ಲಿ ಬಾಡಿಗೆ ಬೈಕ್ ನೀಡುತ್ತಿರುವ ಡ್ರೖೆವಜಿ, ಹುಬ್ಬಳ್ಳಿ ಮೂಲಕ ಉತ್ತರ ಕರ್ನಾಟಕಕ್ಕೆ ಕಾಲಿಟ್ಟಿದ್ದು, ಮುಂದೆ ಬೇರೆ ನಗರಗಳಿಗೂ ಸೇವೆ ವಿಸ್ತರಿಸುವ ಗುರಿ ಹೊಂದಿದೆಯಂತೆ.

ಹುಬ್ಬಳ್ಳಿ-ಧಾರವಾಡದಲ್ಲಿ 10ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಓಗೊ ಕಂಪನಿ, ಪ್ರತಿ ಕೇಂದ್ರಗಳಲ್ಲಿ 10-15 ಹೊಂಡಾ ಆಕ್ಟಿವಾ ಬೈಕ್​ಗಳನ್ನು ಇಟ್ಟಿದೆ. ಧಾರವಾಡದ ವಿದ್ಯಾಗಿರಿ ಬಸ್ ನಿಲ್ದಾಣ ಬಳಿ, ಸತ್ತೂರ, ಎಸ್​ಡಿಎಂ ಡೆಂಟಲ್ ಕಾಲೇಜ್, ಹುಬ್ಬಳ್ಳಿ ವಿದ್ಯಾನಗರದ ಹಂಸ ಹೋಟೆಲ್ ಪಕ್ಕ, ವಿದ್ಯಾನಗರದ ನಿಲಗಿರಿ ಕಾಂಪ್ಲೆಕ್ಸ್ ಬಳಿ, ಚೇತನಾ ಕಾಲೇಜ್ ಹತ್ತಿರ, ಹರ್ಷಾ ಕಾಂಪ್ಲೆಕ್ಸ್, ಅಕ್ಷಯ ಪಾರ್ಕ್ ಬಳಿ, ಗೋಕುಲ ರಸ್ತೆಯ ಬೆಲ್ಲದ ಶೋ ರೂಮ್ ಬಳಿ ಓಗೊ ಕೇಂದ್ರಗಳಿವೆ.

ಪೆಟ್ರೋಲ್ ಇರುವ ಬೈಕ್​ಗಳನ್ನೇ ಸವಾರರಿಗೆ ನೀಡಲಾಗುತ್ತದೆ. ಮೊದಲ ಬಾರಿಗೆ ಈ ಬೈಕ್ ಪಡೆಯುವ ಪ್ರಯಾಣಿಕರಿಂದ 12 ಕಿಮೀ ದೂರದವರೆಗೆ ಪ್ರತಿ ತಾಸಿಗೆ 4 ರೂ. ಪಡೆಯುವ ಓಗೊ ಕಂಪನಿ, ನಂತರ ಪ್ರತಿ ತಾಸಿಗೆ 36 ರೂ. ಶುಲ್ಕ ವಿಧಿಸುತ್ತದೆ. ಒಮ್ಮೆ ಬೈಕ್ ಪಡೆದವರು 48 ತಾಸಿನಲ್ಲಿ ಓಗೊದ ಯಾವುದಾದರೂ ಕೇಂದ್ರದಲ್ಲಿ ಹಾಜರಾಗಿ ಬಾಡಿಗೆ ಕಟ್ಟಬೇಕು. ಮತ್ತೆ ಅಲ್ಲಿಂದಲೇ ಬೈಕ್ ಪಡೆದು ಪ್ರಯಾಣ ಮುಂದುವರಿಸಬಹುದು.

ಪ್ರಯಾಣಿಕರು ತಮ್ಮ ಆಂಡ್ರಾಯ್್ಡ ಮೊಬೈಲ್ ಫೋನ್​ನಲ್ಲಿ ಓಗೊ ಆಪ್ ಡೌನ್​ಲೋಡ್ ಮಾಡಿಕೊಂಡು, ತಮ್ಮ ಲೈಸೆನ್ಸ್ ವಿವರ ಅಪ್​ಲೋಡ್ ಮಾಡಿದರೆ ಸಾಕು. ಅವರು ತಮ್ಮ ಗ್ರಾಹಕರು ಎಂದು ಪರಿಗಣಿಸುತ್ತಾರೆ. ಹುಬ್ಬಳ್ಳಿಯಲ್ಲಿ ಈಗಾಗಲೇ ನಿತ್ಯ 180-200 ಬೈಕ್​ಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ ಎನ್ನುತ್ತಾರೆ ಓಗೊ ಟೀಮ್ ಲೀಡರ್ ಶ್ರೀರಾಜ್.

ಒಟ್ಟಿನಲ್ಲಿ ಕಡಿಮೆ ಹಣದಲ್ಲಿ ಅವಳಿನಗರದಲ್ಲಿ ವಿವಿಧೆಡೆಯ ಪ್ರಯಾಣ ಇನ್ನೂ ಸುಲಭ. ಅವಳಿನಗರದಲ್ಲಿ ಆಟೋಗಳು ಮೀಟರ್ ಹಾಕಿ ಹಣ ಪಡೆಯುವ ಪದ್ಧತಿ ಇನ್ನೂ ಜಾರಿಯಾಗಿಲ್ಲ. ಹೀಗಾಗಿ ಒಬ್ಬೊಬ್ಬ ಆಟೋದವರು ಒಂದೊಂದು ದರ ಹೇಳುತ್ತಾರೆ. ಚೌಕಾಶಿ ಮಾಡಿದರೂ ಹೆಚ್ಚು ಪ್ರಯೋಜನವಾಗದ್ದರಿಂದ, ಹೊರಗಡೆಯಿಂದ ನಗರಕ್ಕೆ ಬಂದ ಅನೇಕರು ನಡೆದುಕೊಂಡೇ ಹೋಗುತ್ತಿದ್ದರು. ಅಂಥವರಿಗೆ ಬಾಡಿಗೆ ಬೈಕ್ ವರದಾನವಾಗಿದೆ.

ಬಾಡಿಗೆ ಬೈಕ್ ಪಡೆದು ನಗರದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು. ಬಸ್, ಆಟೋ ಸೌಕರ್ಯ ಇಲ್ಲದ ಬಡಾವಣೆಗಳಿಗೆ ಹೋಗುವವರು, ನಗರದಲ್ಲಿ ಅಲ್ಲೊಂದು ಇಲ್ಲೊಂದು ಕೆಲಸ ಇಟ್ಟುಕೊಂಡು ಬರುವವರು ಬಾಡಿಗೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದಾರೆ.

ಅಬ್ದುಲ್, ಕ್ಷೇತ್ರಾಧಿಕಾರಿ, ಡ್ರೖೆವಜಿ ಕಂಪನಿ, ಹುಬ್ಬಳ್ಳಿ 

Leave a Reply

Your email address will not be published. Required fields are marked *