ಅವರಗುಪ್ಪ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ!

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಅವರಗುಪ್ಪಕ್ಕೆ ಮೂಲ ಸೌಲಭ್ಯ ಒದಗಿಸದ ಕಾರಣ ಇಲ್ಲಿಯ 2 ಬೂತ್​ಗಳ 1300 ಮತದಾರರು ಲೋಕಸಭೆ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ ಎಂದು ಗ್ರಾಪಂ ಸದಸ್ಯ ಎಚ್.ಆರ್. ನಾಯ್ಕ ಅವರಗುಪ್ಪ ಹೇಳಿದರು.

ಅವರಗುಪ್ಪದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಜಿಲ್ಲಾ ಪರಿಷತ್ ರಚನೆಯಾದಾಗ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸಿ, ನೀರಿನ ಟ್ಯಾಂಕ್ ನಿರ್ವಿುಸಲಾಗಿತ್ತು. ಆದರೆ, ಪೈಪ್​ಗಳು ಹಳೆಯದಾಗಿವೆ. ಹೀಗಾಗಿ ಪೂರೈಕೆಯಲ್ಲಿ ಪದೇ ಪದೆ ವ್ಯತ್ಯಯವಾಗುತ್ತಿದೆ. ಅಲ್ಲದೆ, ಕೆಲವೆಡೆ ಮಾತ್ರ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಸಂಸದರ, ಶಾಸಕರ ಅನುದಾನ ನಮ್ಮ ಗ್ರಾಮಕ್ಕೆ ದೊರೆತಿಲ್ಲ. ನಮ್ಮ ಗ್ರಾಮವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ’ ಎಂದರು.

‘ಹೆಸ್ಕಾಂನವರು ಮಲತಾಯಿ ಧೋರಣೆ ತೋರುತ್ತಿದ್ದು, ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಮಳವತ್ತಿಯಲ್ಲಿ ಪಟ್ಟಣ ವ್ಯಾಪ್ತಿಯ ಮೀಟರ್ ನಂಬರ್ ಕೊಟ್ಟಿದ್ದಾರೆ. ಆದರೆ, ಇಲ್ಲಿನ ನಿವಾಸಿಗಳಿಗೆ ಪಟ್ಟಣ ವ್ಯಾಪ್ತಿಯ ಮೀಟರ್ ಕೊಡದೇ ಅನ್ಯಾಯ ಮಾಡಿದ್ದಾರೆ. ವಾರದಲ್ಲಿ ನ್ಯಾಯ ಒದಗಿಸದಿದ್ದರೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು. 1984ರಲ್ಲಿ ಎಂಜಿಸಿ ಹೌಸಿಂಗ್ ಸೊಸೈಟಿಗೆ 5 ಎಕರೆ ಅರಣ್ಯಭೂಮಿ ಇಲಾಖೆ

ಲೀಸ್​ಗೆ ಕೊಟ್ಟಿದೆ. ಆದರೆ, ಈವರೆಗೆ 25 ಎಕರೆ ಅತಿಕ್ರಮಣವಾಗಿದೆ. 5 ಎಕರೆ ದಾಖಲೆ ಇಟ್ಟುಕೊಂಡು ಎಲೆಡೆ ಕಟ್ಟಡ ಕಟ್ಟಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಕ್ರಮಕೈಗೊಂಡಿಲ್ಲ’ ಎಂದು ಆಕ್ಷೇಪಿಸಿದರು.

ಗ್ರಾಪಂ ಉಪಾಧ್ಯಕ್ಷ ಕೆ.ಆರ್. ವಿನಾಯಕ ಮಾತನಾಡಿ, ‘ಅತಿಕ್ರಮಿಸಿದ 25 ಎಕರೆ ಜಮೀನಿನಲ್ಲಿ 50 ಹಾಸಿಗೆಯ ಆಸ್ಪತ್ರೆ, ಕ್ರೀಡಾ ಇಲಾಖೆಗೆ ಮಂಜೂರಾದ ಜಾಗದಲ್ಲಿ ಧನ್ವಂತರಿ ಹಾಸ್ಟೆಲ್ ಕಟ್ಟಿದ್ದಾರೆ. ಹಿಂದಿನ ಉಪವಿಭಾಗಾಧಿಕಾರಿ ಸರ್ವೆ ಮಾಡಿ ಜಾಗದ ಗುರುತು ಹಾಕಿದ್ದರೂ ಈವರೆಗೆ ಕ್ರಮ ತೆಗೆದುಕೊಂಡಿಲ್ಲ. ಗೆಸ್ಟ್್ಟ ಹೌಸ್, ಔಷಧ ಘಟಕ ನಿರ್ವಿುಸಲು ಗ್ರಾಪಂ ಅನುಮತಿ ಪಡೆದಿಲ್ಲ. ಹಾಸ್ಟೆಲ್​ನ ತ್ಯಾಜ್ಯವನ್ನು ಬೇಕಾಬಿಟ್ಟಿ ಬಿಡುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ, ಒಂದೂವರೆ ಲಕ್ಷದ ಬದಲು ಕೇವಲ 50 ಸಾವಿರ ರೂ. ತೆರಿಗೆ ಕಟ್ಟುತ್ತಾರೆ. ಈ ಬಗ್ಗೆ ಗ್ರಾಪಂ ಸಭೆಯಲ್ಲಿ ಠರಾವು ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದರು.

ಎಚ್.ಆರ್.ನಾಯ್ಕ ಮಾತನಾಡಿ, ‘ಎಂಜಿಸಿ ಕಾಲೇಜ್ ಹಾಗೂ ಧನ್ವಂತರಿ ಆಯುರ್ವೆದ ಕಾಲೇಜ್​ನಿಂದ ಗ್ರಾಪಂ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಅನಧಿಕೃತವಾಗಿ ವಿದ್ಯುತ್ ಬಳಸುತ್ತಿದ್ದರೂ ಕ್ರಮವಿಲ್ಲ. ಇಷ್ಟೆಲ್ಲ ಅಕ್ರಮಗಳಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೌನವಹಿಸಿದ್ದಾರೆ. ಹೀಗಾಗಿ ನಾವು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಗ್ರಾಪಂ ಸದಸ್ಯೆ ಸವಿತಾ ನಾಯ್ಕ, ಸುಮನಾ ನಾಯ್ಕ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ವಿ.ಎಂ.ನಾಯ್ಕ, ಶ್ರೀನಿವಾಸ ನಾಯ್ಕ, ವೀರಭದ್ರ ಗೊಂಡ, ಸೋಮೇಶ ನಾಯ್ಕ, ಲಲಿತಾ ಚನ್ನಯ್ಯ, ಅಶೋಕ ಚನ್ನಯ್ಯ, ವೆಂಕಟೇಶ ನಾಯ್ಕ ಇತರರಿದ್ದರು.

Leave a Reply

Your email address will not be published. Required fields are marked *