ಅವಧಿ ವಿಸ್ತರಿಸಲು ಕಿಮ್್ಸ ಸರ್ಕಾರಾನಾ?

ಹುಬ್ಬಳ್ಳಿ: ಕಿಮ್್ಸ ಆವರಣದ ತಾಯಿ ಮತ್ತು ಮಗು ಆಸ್ಪತ್ರೆಗೆ ತಗುಲಿರುವ ಬಾಲಗ್ರಹಪೀಡೆ ಹಾಗೂ ಆರೋಗ್ಯ ಕರ್ನಾಟಕ ಯೋಜನೆ ಬಳಕೆಯಲ್ಲಿನ ಹಿನ್ನಡೆ ಕುರಿತು ನಗರದ ಖಾಸಗಿ ಹೋಟೆಲ್ಲೊಂದರಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.

2012ರಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ಕಾಮಗಾರಿ ಆರಂಭವಾಗಿದೆ. 2019 ಬಂದರೂ ಇನ್ನೂ ಹಸ್ತಾಂತರವಾಗುತ್ತಿಲ್ಲ ಏಕೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು. ಶೀಘ್ರವೇ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು ಎಂದು ಕಿಮ್್ಸ ನಿರ್ದೇಶಕ ಡಾ. ಡಿ.ಡಿ. ಬಂಟ್ ಹೇಳಿದರು. ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ, ಒಂದು ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಲು ಇಷ್ಟು ವರ್ಷ ಬೇಕೇ? ಎಂದು ಪ್ರಶ್ನಿಸಿದರು. ಗುತ್ತಿಗೆದಾರರತ್ತ ಡಾ. ಬಂಟ್ ಬೆಟ್ಟು ಮಾಡಿದ್ದರಿಂದ ಗುತ್ತಿಗೆದಾರ ಮಾಹಿತಿ ನೀಡಲು ಅನುವಾದ. 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಕಿಮ್ಸ್​ನವರು ಹೇಳಿದ್ದರಿಂದ ಒಂದು ವರ್ಷ ವಿಸ್ತರಿಸಲಾಯಿತು ಎಂದು ಗುತ್ತಿಗೆದಾರ ವಿವರಿಸಿದರು. ಸಚಿವ ಶಿವಳ್ಳಿ, ಅವಧಿ ವಿಸ್ತರಿಸಲು ಕೆಎಂಸಿನೇ ಸರ್ಕಾರಾನಾ? ಎಂದು ಗುಡುಗಿದರು. ಇಂಥವರಿಂದ ದೇಶ ಉದ್ಧಾರವಾಗುತ್ತದೇನ್ರೀ? ಕೆಲಸ ಪೂರ್ಣಗೊಳಿಸದವರನ್ನು ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಎಂದು ಸಚಿವ ತುಕಾರಾಂ, ಬಂಟ್​ಗೆ ಸೂಚಿಸಿದರು.

ಇವರೆಲ್ಲ ಸೇರಿ ಚಂದಮಾಮನ ಕಥೆ ಹೇಳುತ್ತಿದ್ದಾರೆ ಎಂದು ಸಚಿವ ಸಿ.ಎಸ್. ಶಿವಳ್ಳಿ ಕಿಡಿಯಾದರು. ನಿರ್ದೇಶಕರೇ ಇದುವರೆಗೆ ಯಾಕೆ ಇದನ್ನು ನೋಡಿಲ್ಲ ? ಎಂದು ಪ್ರಶ್ನಿಸಿದರು. ಆಗ ನಾನು ನಿರ್ದೇಶಕನಾಗಿರಲಿಲ್ಲ, ಆಗಲೇ ಕಾಮಗಾರಿ ಆರಂಭಿಸಲಾಗಿತ್ತು ಎಂದು ಬಂಟ್ ಉತ್ತರಿಸಿದರು. ನಿರ್ದೇಶಕರಾಗಿ ಬಂದ ಮೇಲಾದರೂ ಕಾಮಗಾರಿ ತ್ವರಿತಕ್ಕೆ ಮುಂದಾಗಬಹುದಿತ್ತಲ್ಲ? ಎಂದು ಶಿವಳ್ಳಿ ಚಾಟಿ ಬೀಸಿದರು.

ಆರೋಗ್ಯ ಕರ್ನಾಟಕ ಯೋಜನೆಯಡಿ ಇದುವರೆಗೆ ಕಿಮ್ಸ್​ನಿಂದ 2 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್ ವಿವರಿಸಿದರು. ಇಷ್ಟು ಕಡಿಮೆ ಹಣ ಉಪಯೋಗಿಸಿದರೆ ಹೇಗೆ ? ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಿಟ್ಟರೆ ನಂತರದ ಸ್ಥಾನ ತಮ್ಮದಿರಬೇಕಿತ್ತು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ, ಬಂಟ್​ಗೆ ತರಾಟೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ದೀಪಾ ಚೋಳನ್, ಡಿಎಚ್​ಒ ಡಾ. ರಾಜೇಂದ್ರ ದೊಡ್ಮನಿ, ಕಿಮ್್ಸ ವೈದ್ಯಕೀಯ ಅಧೀಕ್ಷ ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ಮುಖ್ಯ ಆಡಳಿತಾಧಿಕಾರಿ ಬಸವರಾಜ ಸೋಮಣ್ಣವರ, ಇತರರು ಉಪಸ್ಥಿತರಿದ್ದರು.

ಸೂಪರ್ ಸ್ಪೆಷಾಲಿಟಿ ಶೀಘ್ರ ಸಿದ್ಧ

ಕೇಂದ್ರ ಸರ್ಕಾರದ ಸಹಾಯದೊಂದಿಗೆ 150 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಗಿಯುವ ಹಂತದಲ್ಲಿದೆ. ಶೀಘ್ರವೇ ಸಾರ್ವಜನಿಕ ಸೇವೆಗೆ ಅರ್ಪಿಸಲಾಗುವುದು. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮತ್ತೆ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಿಮ್ಸ್​ನಲ್ಲಿ ನಡೆಯುತ್ತಿರುವ ಘಟನೆಗಳ ಸಂಪೂರ್ಣ ಮಾಹಿತಿ ಇದೆ ಎಂದು ಸಚಿವ ತುಕಾರಾಂ ತಿಳಿಸಿದರು.

ಮಾಧ್ಯಮದವರು ಬೇಡ

ಮೊದಲ ಸಲ ಕಿಮ್ಸ್​ಗೆ ಭೇಟಿ ನೀಡಿದ ಸಚಿವ ತುಕಾರಾಂ, ವಿವಿಧ ವಿಭಾಗಗಳ ಮುಖ್ಯಸ್ಥರನ್ನು ಪರಿಚಯಿಸಿಕೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ತಾವು ಬಂದ ಹಿನ್ನೆಲೆ ಹೇಳಿಕೊಂಡು, ಸಹಕಾರ ಕೊಡುವಂತೆ ಕೋರಿ ಮಾಧ್ಯಮದವರನ್ನು ಹೊರಗೆ ಕಳುಹಿಸಿದರು.

ಸಚಿವರಿಗೆ ಮುತ್ತಿಗೆ

ಕಿಮ್ಸ್​ಗೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂಗೆ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮುತ್ತಿಗೆ ಹಾಕಿ, ಪ್ರತಿ ತಿಂಗಳು ಸಂಬಳ ವಿಳಂಬವಾಗಿ ನೀಡಲಾಗುತ್ತಿದೆ. ಪಿಎಫ್, ಇಎಸ್​ಐ ಹಾಗೂ ಸಂರಕ್ಷಣಾ ಪರಿಕರ ಸರಿಯಾಗಿ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ತಾವು ಭರವಸೆ ನೀಡಿ ಹೋಗಬೇಡಿ ಎಂದು ಆಕ್ರೋಶದಿಂದ ಹೇಳಿದರು. ಉತ್ತರಿಸಿದ ಸಚಿವರು, ಇನ್ನೊಮ್ಮೆ ಕಿಮ್ಸ್​ಗೆ ಭೇಟಿ ನೀಡುತ್ತೇನೆ. ಸಮಸ್ಯೆ ಪರಿಹರಿಸಲಾಗುವುದು ಎಂದರು.

ಸಂಘದ ಅಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಮಹೇಶ ಮನ್ನಿಕೇರಿ, ಸುರೇಶ ಸೌದುಲ್, ಸೈಯದ್ ನದಾಫ, ಮುದುಕಪ್ಪ ಮೂಡಲವರ್, ಗಂಗಮ್ಮ ಶಿವಮೂರ್ತಿ, ಗೀತಾ ಹರಿಜನ, ಸುಶೀಲಾ ಮಣ್ಣವಡ್ಡರ್, ಇತರರು ಇದ್ದರು.