ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜೆನರಿಕ್ ಔಷಧ ಮಾರಾಟ ಮಳಿಗೆಯಲ್ಲಿ ಅವಧಿ ಮೀರಿದ ಗ್ಲೂಕೋಸ್ ಡಬ್ಬಗಳನ್ನು ಗ್ರಾಹಕರಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯ ಸಂಬಂಧಿ ಗುರುಮೂರ್ತಿ ಎಂಬುವವರಿಗೆ ಈ ಅನುಭವವಾಗಿದೆ. ಸೋಮವಾರ ಮಧ್ಯಾಹ್ನ ಗುರುಮೂರ್ತಿ ಜೆನರಿಕ್ ಔಷಧ ಮಳಿಗೆಯಲ್ಲಿ ಖರೀದಿಸಿದ ಎರಡು ಗ್ಲೂಕೋಸ್ ಬಾಟಲಿಗಳ ಅವಧಿಯನ್ನು ವಾರ್ಡ್ ಗೆ ಬಂದ ಬಳಿಕ ಪರಿಶೀಲಿಸಿದ್ದು, ಡಬ್ಬಗಳ ಮೇಲಿನ ಅವಧಿ ಉಲ್ಲೇಖಿಸಿರುವ ಭಾಗದಲ್ಲಿ ಇನ್ನೊಂದು ಚೀಟಿ ಅಂಟಿಸಿರುವುದನ್ನು ಗಮನಿಸಿದ್ದಾರೆ. ಅದರ ಅವಧಿ 2012ಕ್ಕೆ ಮುಗಿದು ಹೋಗಿದ್ದು ಆ ಭಾಗದ ಮೇಲೆ ಬಳಕೆ ಅವಧಿ 2021 ಎಂದು ಹೊಸದಾಗಿ ಚೀಟಿ ಅಂಟಿಸಿ ಮೋಸಗೊಳಿಸಿರುವುದು ಗಮನಕ್ಕೆ ಬಂದಿದೆ.
ಜಿಲ್ಲಾ ಸರ್ಜನ್‍ಗೆ ದೂರು:
ಗುರುಮೂರ್ತಿ ಮತ್ತೆರಡು ಗ್ಲೂಕೋಸ್ ಡಬ್ಬಗಳನ್ನು ಖರೀದಿಸಿ ಪರಿಶೀಲಿಸಿದಾಗಲೂ ಮತ್ತೆ ಅದೇ ರೀತಿಯಲ್ಲಿ 2012ರ ಅವಧಿ ಇರುವುದು ಗೊತ್ತಾಗಿದೆ. ತಕ್ಷಣ ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್‍ಕುಮಾರ್ ಅವರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಸರ್ಜನ್ ಹಾಗೂ ಡಿಎಚ್‍ಒ ಡಾ.ಎಸ್.ಎನ್.ಉಮೇಶ್ ಅವರೊಂದಿಗೆ ಔಷಧ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಇತರ ಗ್ಲೂಕೋಸ್ ಡಬ್ಬಗಳ ಮೇಲೂ ಅದೇ ಮಾದರಿಯಲ್ಲಿ 2012ರ ಸ್ಟಿಕ್ಕರ್ ಮೇಲೆ 2021ರ ಸ್ಟಿಕ್ಕರ್ ಅಂಟಿಸಿರುವುದು ಗಮನಕ್ಕೆ ಬಂದಿದೆ. ಮಳಿಗೆ ಸಿಬ್ಬಂದಿಯನ್ನು ಈ ಕುರಿತು ಪ್ರಶ್ನಿಸಿದಾಗ ನಾವು ಆರ್ಡರ್ ಹಾಕುತ್ತೇವಷ್ಟೆ. ಔಷಧಿ ಸರಬರಾಜುದಾರರಿಂದ ಇದು ನಡೆದಿದ್ದು ಸ್ಟಿಕ್ಕರ್ ಅಂಟಿಸಿರುವ ಈ ಪರಿ ನಮ್ಮ ಗಮನಕ್ಕೆ ಬಂದಿಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅನಂತರ ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್, ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದು, ದೂರು ದಾಖಲಿಸಿ, ಔಷಧ ನಿಯಂತ್ರಣಾಧಿಕಾರಿಗಳ ಮೂಲಕ ತನಿಖೆ ಮಾಡಿಸುವುದಾಗಿ ತಿಳಿಸಿದ್ದಾರೆ. ಇದೀಗ ಬಳಕೆ ಅವಧಿ ಮುಗಿದ ಔಷಧಿಯ ಗುಣಮಟ್ಟ ಸರಿ ಇದೆಯೇ? ಹಾಗೆಯೇ ರೋಗಿಗಳಿಗೆ ಸಮಸ್ಯೆ ಆಗಿದೆಯೇ ಎಂಬ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.