ಅವಕಾಶ ಕೊಟ್ಟರೆ ಕ್ಷೇತ್ರದ ಚಿತ್ರಣ ಬದಲು

ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಅಪ್ಪ-ಮಗ(ಯಡಿಯೂರಪ್ಪ-ರಾಘವೇಂದ್ರ) ಜಿಲ್ಲೆಗೆ ಯಾವುದೆ ಕೆಲಸ ಮಾಡಿಲ್ಲ. ಒಮ್ಮೆ ಅವಕಾಶ ಕೊಟ್ಟರೆ ಕ್ಷೇತ್ರದ ಚಿತ್ರಣವನ್ನೇ ಬದಲಿಸುತ್ತೇನೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಭರವಸೆ ನೀಡಿದರು.

ತಿಲಕ್​ನಗರದ ರಾಘವೇಂದ್ರಸ್ವಾಮಿ ಕಲ್ಯಾಣ ಮಂದಿರದಲ್ಲಿ ಗುರುವಾರ ಶಿವಮೊಗ್ಗ ನಗರದ ಸ್ನೇಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸತ್​ನಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಪ್ರತಿನಿಧಿಸುವ ಮೂಲಕ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಹೆಸರು ಉಳಿಸುತ್ತೇನೆ ಎಂದರು.

ಯಾವುದೆ ಕಾರಣಕ್ಕೂ ಜಾತಿ ರಾಜಕಾರಣ ಮಾಡುವುದಿಲ್ಲ. ಅದನ್ನು ತಂದೆ (ಬಂಗಾರಪ್ಪ) ನನಗೆ ಕಲಿಸಿಲ್ಲ. ಜಾತಿ ಮತ್ತು ಸಮಾಜವು ತಾಯಿ ಸಮಾನವಿದ್ದಂತೆ. ಈ ಎರಡೂ ವಿಚಾರದಲ್ಲೂ ತಾರತಮ್ಯ ತೋರಿದ್ದೇ ಆದಲ್ಲಿ ತಾಯಿಗೆ ದ್ರೋಹ ಬಗೆದಂತೆ ಆಗಲಿದೆ. ಬಂಗಾರಪ್ಪ ಕೂಡ ಶಾಸಕ, ಸಂಸದ ಹಾಗೂ ಸಿಎಂ ಆಗಿದ್ದವರು. ರೈತರಿಗೆ 10 ಎಚ್​ಪಿ ಪಂಪ್​ಸೆಟ್​ವರೆಗೆ ಉಚಿತ ವಿದ್ಯುತ್ ಸೇರಿ ಅನೇಕ ಕೊಡುಗೆ ಕೊಟ್ಟಿದ್ದು ಅವರಂತೆ ಅನೇಕ ಜನಪರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರಾಜಕಾರಣದಲ್ಲಿ ಕಣ್ಣಿಗೆ ಕಾಣುವುದನ್ನು ಮಾತ್ರ ಮಾಡುತ್ತೇವೆ. ಆದರೆ ಮಧ್ಯಮ ವರ್ಗದ ಜನರ ಸಂಕಷ್ಟಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಸಂಸದನಾಗಿ ಆಯ್ಕೆ ಆದ ಮೇಲೆ ಎಲ್ಲ ವರ್ಗದ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಬ್ರಾಹ್ಮಣ ಸಮಾಜ ಯಾರಿಗೂ ಕೆಡುಕು ಮಾಡಿಲ್ಲ. ಎಲ್ಲರಿಗೂ ಒಳಿತು ಮಾಡಿಕೊಂಡೆ ಬಂದಿದೆ. ಸಮಾಜ ಬಾಂಧವರು ಈ ಬಾರಿ ಮಧು ಬಂಗಾರಪ್ಪ ಅವರಿಗೆ ಆಶೀರ್ವಾದ ನೀಡುವ ಮೂಲಕ ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ದೇಶಕ್ಕೆ ಭದ್ರ ಬುನಾದಿ ಹಾಕಿದ ಬ್ರಾಹ್ಮಣ ಸಮಾಜ ಕಡೆಗಣನೆಗೆ ಒಳಗಾಗುತ್ತಿದೆ. ಮಧ್ಯಮ ವರ್ಗದ ಜನರಿಗೆ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ ಎಂದರು. ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್ ಮಾತನಾಡಿದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಸಮಾಜದ ಹಿರಿಯರಾದ ಭಾರದ್ವಾಜ್, ಕೃಷ್ಣಮೂರ್ತಿ, ಮಧು, ಸಮಿತ್ರಮ್ಮ, ಕಾಂಗ್ರೆಸ್ ಮುಖಂಡ ರವಿಕುಮಾರ್ ಮತ್ತಿತರರಿದ್ದರು.

ಅಪ್ಪ-ಮಗ ರೈಲು ಬಿಡ್ತಿದ್ದಾರೆ:ಶಿವಮೊಗ್ಗ: ಜಿಲ್ಲೆಯಲ್ಲಿ ರೈಲ್ವೆ ಹಳಿ ಹಾಕಿಸಿದ್ದು ಎಸ್.ಬಂಗಾರಪ್ಪ. ಟ್ರೖೆನ್ ಬಿಟ್ಟು ಇದೀಗ ಅಪ್ಪ-ಮಗ ಜನತೆಗೆ ಸುಳ್ಳಿನ ರೈಲು ಬಿಡುತ್ತಿದ್ದಾರೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಕುಟುಕಿದರು. ಸ್ನೇಹಮಿಲನಕ್ಕೂ ಮೊದಲು ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪ್ಪ ಅವಧಿಯಲ್ಲಿ ರೈಲ್ವೆ ಹಳಿ ಹಾಕಿಸಲಾಗಿತ್ತು. ಆನಂತರ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅದರ ಮೇಲೆ ರೈಲು ಬಿಟ್ಟರು ಎಂದರು. ನನ್ನನ್ನು ಯಾರು ಇಂಪೋಡೆಂಟ್ ಅಭ್ಯರ್ಥಿ ಎಂದು ಜರಿದಿದ್ದರೋ ಅವರಿಗೆ ಶಿವಮೊಗ್ಗದ ಪ್ರಮುಖ ನಗರಗಳ ಪರಿಚಯವಿಲ್ಲ. ಆದರೆ ನನಗೆ ಎಲ್ಲ ನಗರ ಪರಿಚಯವಿದ್ದು, ಬಾಲ್ಯದಿಂದ ಇಲ್ಲೆಲ್ಲ ಓಡಾಡಿದ್ದಿದ್ದೇನೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಟಾಂಗ್ ನೀಡಿದರು. ಅಬ್ಬರದ ಪ್ರಚಾರದ ಜತೆಗೆ ಮತದಾರರ ಮನವೊಲಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ದಿನೇ ದಿನೆ ಗೆಲ್ಲುವ ವಿಶ್ವಾಸ ಹೆಚ್ಚಾಗುತ್ತಿದೆ. ಬೂತ್​ವುಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ ಎಂದರು. ಮೊದಲ ಹಂತದ ಮತದಾನ ಆಗಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ಸೇರಿ ಮೈತ್ರಿ ಸರ್ಕಾರದ ನಾಯಕರು ಆಗಮಿಸಿ ಶಕ್ತಿ ತುಂಬಲಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *