Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

‘ಅಲ್ಲಿ ಅತ್ತಿಮರದಲ್ಲಿ ಪರಿಮಳ ಉಯ್ಯಾಲೆಯಾಡುತ್ತದೆ….’

Sunday, 17.12.2017, 3:05 AM       No Comments

ನನ್ನ ಮನಸ್ಸಿಗೊಂದು ಅಗಾಧವಾದ ಭೂತಕಾಲವಿದೆ. ವರ್ತಮಾನ, ಭವಿಷ್ಯತ್ ಕಾಲಗಳ ಜತೆ ತೂಕ ಹಾಕಿದರೆ ಭೂತಕಾಲವೇ ಹೆಚ್ಚು ತೂಗುತ್ತದೆ. ಅಲ್ಲಿ ಸೊಂಪಾದ ಹಸಿರಿದೆ. ಮೊಕದ ಮೇಲಿಂದಿಳಿದು ಪಾದಮುಟ್ಟುವವರೆಗೆ ಹರಿವ ಬೆವರಿದೆ. ಕೆರೆ ಕಾಲುವೆಗಳಲ್ಲಿ ನೀರಿದೆ. ಬಣ್ಣಬಣ್ಣದ ಹೂಗಳಿವೆ, ಪಶುಪಕ್ಷಿಗಳಿವೆ. ಹೊಂಗೆ ಹೂವ ತೊಂಗಲ ಭೃಂಗ ಸಂಗೀತವಿದೆ. ಆದ್ದರಿಂದ ಆ ಕಡೆಗೇ ನುಗ್ಗುವುದು ಈ ಮನಸ್ಸಿನ ಚಾಳಿ.

 ರಚ್ಚೆಹಿಡಿದು ಕೂತಿದೆ ಮನಸ್ಸು- ನನ್ನನ್ನ ಹಿಂದಕ್ಕೆ ಕರಕೊಂಡು ಹೋಗು, ಹಿಂದಕ್ಕೆ ಕರಕೊಂಡು ಹೋಗು ಅಂತ. ಹಿಂದಕ್ಕೆ ಅಂದರೆ ಗೊತ್ತಲ್ಲ, ಹಿಂದಿನ ಕಾಲಕ್ಕೆ!

ಈವತ್ತಿನ ಅಂಕಣಕ್ಕೆ ಬೇರೊಂದು ವಿಷಯ ಬರೆಯುವುದಕ್ಕಿತ್ತು. ಬರೆಯುವುದಕ್ಕೊಂದು ಮೂಡು ಬರಲಿ ಅಂತ ಯಾವುದೋ ಪುಸ್ತಕ ಹಿಡಿದು ಕೂತೆ. ಆ ಪುಸ್ತಕದಲ್ಲೊಂದು ಶಬ್ದ ಎದುರಾಯಿತು- ನಾಸ್ಟಾಲ್ಜಿಯಾ ಅಂತ. ಯಾಕೋ ಕಣ್ಣು ಮುಂದಕ್ಕೆ ಚಲಿಸದೆ ‘ಕಣಿ’ ಹಾಕಿಕೊಂಡು ಅಲ್ಲೇ ನಿಂತುಬಿಟ್ಟಿತು. ಕಣ್ಣು ನಿಂತ ಜಾಗದಲ್ಲೇ ಮನಸ್ಸು ಕೂತೇಬಿಟ್ಟಿತು. ಆಗಲೇ ಈ ಮನಸ್ಸು ಹೀಗೆ ರಚ್ಚೆಗೆ ಬಿದ್ದದ್ದು!

ಮನೆಯಲ್ಲಿ ನನಗೊಬ್ಬ ಮೊಮ್ಮಗ ಇದ್ದಾನೆ, ಸಾಮ್ರಾಜ್ಯ ಅಂತ. ಇನ್ನೆರಡು ವಾರ ಕಳೆದರೆ ಅವನಿಗೆ ಎರಡು ವರ್ಷ. ಅವನು ನಿಲ್ಲುವುದನ್ನು ಕಲಿಯುತ್ತಿದ್ದಂತೇ ನಡೆಯುವುದನ್ನೂ ಕಲಿತ. ನಡೆಗಲಿತ ಕೂಡಲೇ ಓಡುವುದಕ್ಕೆ ಶುರುಮಾಡಿಬಿಟ್ಟ. ಈಗ ಕಂಕುಳಲ್ಲಿ ಕೂರುವುದೇ ತನಗೆ ಅವಮಾನ ಅಂತ ಭಾವಿಸಿಬಿಟ್ಟಿದ್ದಾನೆ ದೊಡ್ಡಮನುಷ್ಯ! ನೆಲಕ್ಕಿಳಿಸಿ ನಿಲ್ಲಿಸಿದ ಕೂಡಲೇ ಮುಂದುಮುಂದಕ್ಕೆ, ಮುಂದುಮುಂದಕ್ಕೆ ಓಡುತ್ತಿರುತ್ತಾನೆ. ಆದ್ದರಿಂದ ಈಗವನು ಮನೆಯಲ್ಲಿದ್ದಾಗ ನಮ್ಮ ಮನೆಯಲ್ಲಿ ಒಂದೇ ಆಟ- ಅವನಿಗೆ ಓಡುವಾಟ, ನಮಗೆ ಹಿಡಿಯುವಾಟ.

ಅವನಿಗೆ ಗಂಟೆಗೊಂದು ಬಾರಿ, ಗಳಿಗೆಗೊಂದು ಬಾರಿ ಮನೆ ಬೋರು ಅನ್ನಿಸುತ್ತದೆ. ಆಗೆಲ್ಲಾ ಹೀಗೇ- ನನ್ನ ಮನಸ್ಸಿನ ಹಾಗೇ- ರಚ್ಚೆ ಹಿಡಿಯುತ್ತಾನೆ, ಎಲ್ಲಾದರೂ ಕರೆದುಕೊಂಡು ಹೋಗು ಅಂತ. ಆಗ ಹೊರಕ್ಕೆ ಕರೆದೊಯ್ಯುತ್ತೇನೆ. ನಾಗರಿಕ ಬಡಾವಣೆಗಳಲ್ಲಿ ಇಂಥ ಹಸುಳೆಗಳಿಗೆ ಏನು ಅಂತ ತೋರಿಸುವುದು? ಖಾಲಿ ಸೈಟಿನಲ್ಲಿ ಕೂತಿರುವ ಒಂದೆರಡು ಕೊಕ್ಕರೆ, ನಡುಬೀದಿಯಲ್ಲಿ ನಿರುದ್ದಿಶ್ಯವಾಗಿ ನಿಂತಿರುವ ಒಂದೆರಡು ನಾಯಿ, ದಾರಿಯ ಪಕ್ಕದಲ್ಲಿ ಬೆಳೆದ ಹಸಿರು ಹುಲ್ಲಿಗೆ ಬಾಯಿಹಾಕಿ ಕವರುತ್ತಿರುವ ಹಸು, ಆಗೊಮ್ಮೆ ಈಗೊಮ್ಮೆ ಗಾಳಿಯಲ್ಲಿ ತೇಲಿಕೊಂಡು ರೆಕ್ಕೆ ಬಡಿಯುತ್ತಿರುವ ಚಿಟ್ಟೆ, ಇಲ್ಲಿ ಕಂಡು ಅಲ್ಲಿ ಹಾರುವ ಒಂದೆರಡು ಗೊರವನ ಹಕ್ಕಿ, ಗೌಜಲ ಹಕ್ಕಿ ಇಷ್ಟೆ. ಈಗೆಲ್ಲ ಕಾಗೆಗಳೂ ಕಣ್ಣಿಗೆ ಬೀಳುವುದಿಲ್ಲ. ಅವಕ್ಕೆ ದೊಡ್ಡ ಮನುಷ್ಯರ ಕಾರಿನ ಮೇಲೆ ಕೂತು ಫೋಟೋ ತೆಗೆಸಿಕೊಂಡು ಸುದ್ದಿಯಾಗುವ ಚಪಲ! ಅವು ನಮ್ಮ ಮನೆ ಕಡೆ ಯಾಕೆ ಬಂದಾವು ಹೇಳಿ! ಉಳಿದಂತೆ ಕಿಟಕಿಟಾರನೆ ಹಾರ್ನ ಮಾಡಿಕೊಂಡು ತೆವಳುವ ಬಸ್ಸುಗಳು, ಕೀಲುಕೀಲಿಗೂ ಬಗೆಬಗೆ ವಿಕಾರದ ಸದ್ದು ಮಾಡಿಕೊಂಡು ಹೋಗುವ ಮರಳು, ಇಟ್ಟಿಗೆ ಲಾರಿಗಳು, ಸೀಮೆಣ್ಣೆ ಹೊಗೆ ಕಾರುವ ಪರಿಸರಸ್ನೇಹಿ ಹಸಿರು ಆಟೋರಿಕ್ಷಾಗಳು, ತನ್ನ ಬೆಡಗು ಹೊಳಪಿಗೆ ತಾನೇ ಬೀಗುತ್ತಾ ಹರಿದಾಡುವ ಕಾರುಗಳು, ಗುರಿಯಿರದ ಬಾಣಗಳಂತೆ ಹಾರಿಹೋಗುವ ಬೈಕುಗಳು ಇವಷ್ಟೆ!

ಹೇಳಿಕೇಳಿ ನಮ್ಮ ಸಾಮ್ರಾಜ್ಯ ಹಸುಳೆ. ಅವನಿಗೆ ಭೂತಕಾಲವೆಂಬುದಿಲ್ಲ. ಇರುವುದೇನಿದ್ದರೂ ವರ್ತಮಾನ ಮತ್ತು ಭವಿಷ್ಯ ಮಾತ್ರ. ಅದಕ್ಕೇ ಏನೋ, ಈ ಪುಟ್ಟಕಂದನ ಪಾದಗಳು ಮುಂದುಮುಂದಕ್ಕೇ ಚಿಗಿಯುವುದು! ನನ್ನ ಮನಸ್ಸು ಹಾಗಲ್ಲ. ಅದಕ್ಕೊಂದು ಅಗಾಧವಾದ ಭೂತಕಾಲವಿದೆ. ವರ್ತಮಾನ, ಭವಿಷ್ಯತ್ ಕಾಲಗಳ ಜತೆ ತೂಕ ಹಾಕಿದರೆ ಭೂತಕಾಲವೇ ಹೆಚ್ಚು ತೂಗುತ್ತದೆ. ಆದ್ದರಿಂದ ಆ ಕಡೆಗೇ ನುಗ್ಗುವುದು ಈ ಮನಸ್ಸಿನ ಚಾಳಿ.

ಅಷ್ಟು ಮಾತ್ರವೇ ಅಲ್ಲದೆ ನನ್ನ ಭೂತಕಾಲದಲ್ಲಿ ಸೊಂಪಾದ ಹಸಿರಿದೆ. ಮೊಕದ ಮೇಲಿಂದಿಳಿದು ಪಾದಮುಟ್ಟುವವರೆಗೆ ಹರಿವ ಬೆವರಿದೆ. ಕೆರೆ ಕಾಲುವೆಗಳಲ್ಲಿ ನೀರಿದೆ. ಬಗೆಬಗೆ ಫಸಲಿದೆ. ಬಣ್ಣಬಣ್ಣದ ಹೂಗಳಿವೆ, ಪಶುಪಕ್ಷಿಗಳಿವೆ. ಕರೆಯ ಮೇಲೆ ಬಟ್ಟೆ ಕಳಚಿಟ್ಟು ಕೆರೆಯಲ್ಲಿ ಮುಳುಗೇಳುವ ಬರಿಬೆತ್ತಲ ಬಾಲಕರಿದ್ದಾರೆ. ಹೊಂಗೆ ಹೂವ ತೊಂಗಲ ಭೃಂಗ ಸಂಗೀತವಿದೆ. ಜಾಲಿಮರಗಳಲ್ಲಿ ಜೀರುಂಬೆ ಜೀಗುಡುತ್ತದೆ. ಲೈಟುಕಂಬಗಳಿಲ್ಲದ ಊರ ಕತ್ತಲೆಯಲ್ಲಿ ಬಾಲಕ್ಕೆ ದೀಪ ಅಂಟಿಸಿಕೊಂಡು ಹಾರಾಡುವ ಮಿಣುಕುಹುಳಗಳಿವೆ. ನೇರಳೆ ಮರದಲ್ಲಿ ಕಣ್ಣುಗುಡ್ಡೆಗಳಷ್ಟು ಕಪ್ಪಗಿರುವ ಹಣ್ಣುಗಳಿವೆ. ಅತ್ತಿಮರದಲ್ಲಿ ಪರಿಮಳ ಉಯ್ಯಾಲೆಯಾಡುತ್ತಿದೆ. ಬತ್ತ ತೆನೆಬಾಗಿ ಬೀಗುತ್ತಿದೆ. ಕಬ್ಬಿನ ಸೂಲಂಗಿ ಬಿಳುಪನ್ನೇ ಬೀಸುತ್ತಿದೆ. ರಾಗಿ ಹೊಲದಲ್ಲಿ ಹಸಿರು ಕಾಚಕ್ಕಿ, ಹರಳಿನ ಎಲೆಗೆ ಐದು ಬೆರಳು, ಅರಳಿ ಎಲೆಯನ್ನು ಸುರುಳಿಮಾಡಿ ಬಾಯಿಗಿಟ್ಟುಕೊಂಡು ಊದಿದರೆ ಪೀಪಿ, ‘ಪೀ…’ ಅನ್ನುತ್ತದೆ. ಕಳ್ಳಿಗಿಡಕ್ಕೆ ಕಲ್ಲು ಬಿಸಾಡಿದರೆ ಛಿಲ್ಲನೆ ಹಾಲು ಸುರಿಯುತ್ತದೆ. ನಮ್ಮೂರ ಪಕ್ಕದ ಲೋಕಪಾವನಿಯಲ್ಲಿ ತಿಳಿನೀರು ಕಲ್ಲುಪೊಟರೆಗಳಿಗೆಲ್ಲಾ ಇಳಿದು ಎಲ್ಲರನ್ನೂ ಎಲ್ಲವನ್ನೂ ಮೆಲ್ಲಗೆ ಮಾತಾಡಿಸಿಕೊಂಡು ಹರಿಯುತ್ತದೆ. ಲೋಕಪಾವನಿಯ ನೀರಿನಲ್ಲಿ ನಮ್ಮ ಮನೆಯ ಎಮ್ಮೆಗಳೂ, ನಾವೂ ಜಂಟಿಯಾಗಿ ಜಲಕ್ರೀಡೆಯಾಡುತ್ತಿರುತ್ತೇವೆ- ಅಯ್ಯೋ ನನ ಕಂದ ಸಾಮ್ರಾಜ್ಯ! ಕತೆ ಹೇಳು, ಕತೆ ಹೇಳು ಅಂತ ಪೀಡಿಸುತ್ತೀ! ಈ ಕತೆಗಳನ್ನೆಲ್ಲಾ ನಿನಗೆ ಹೇಳಲು ನಾನು ಇನ್ನೊಮ್ಮೆ ಮಾತು ಕಲಿಯಬೇಕಲ್ಲೋ ನನ್ನಪ್ಪಾ!

-ಈ ಸುಖಕ್ಕೇ ಈ ನನ್ನ ಮನಸ್ಸು ಹೀಗೆ ಆಗಾಗ ರಚ್ಚೆ ಹಿಡಿಯುವುದು, ‘ನನ್ನನ್ನ ಹಿಂದಕ್ಕೆ ಕರಕೊಂಡು ಹೋಗು, ಹಿಂದಕ್ಕೆ ಕರಕೊಂಡು ಹೋಗು’ ಅಂತ.

ಮೊನ್ನೆ ನಮ್ಮ ಮಾದಯ್ಯ ಮೇಷ್ಟ್ರು ಫೋನುಮಾಡಿದ್ದರು. ಕ್ಷಮಿಸಿ, ಮಾದಯ್ಯ ಮೇಷ್ಟ್ರು ಅಂದರೆ ಯಾರು ಅಂತ ನಿಮಗೆ ಗೊತ್ತಿಲ್ಲ. ಅವರು ನನ್ನ ಎಳೆಯ ತರಗತಿಗಳ ಮೇಷ್ಟ್ರು. ಒಳ್ಳೆ ಕೆಂಪಕೆಂಪಗೆ ಸುಂದರವಾಗಿದ್ದರು. ನಮ್ಮೂರ ಶಾಲೆಗೆ ಬಂದಾಗ ಇನ್ನೂ ತರುಣ. ನೀಟಾಗಿ ಬಾಚಿದ ತಲೆ, ಚಿಗುರುಮೀಸೆ, ಮಾಸದ ಮುಗುಳುನಗೆ, ಆಗೊಮ್ಮೆ ಈಗೊಮ್ಮೆ ಮೀಸೆಯ ತುದಿಯನ್ನು ಕಟಬಾಯಿಗೆಳೆದುಕೊಂಡು ಹಲ್ಲಿನಲ್ಲಿ ಕಡಿದುಕೊಳ್ಳುತ್ತಿದ್ದುದು- ಇವೆಲ್ಲವೂ ನನ್ನ ನೆನಪಿನಲ್ಲಿ ಗೆರೆಯಳಿಯದಂತೆ ಚಿತ್ರಿತವಾಗಿವೆ. ಅವರು ನಮ್ಮೂರಿಗೆ ಬಂದ ವರ್ಷದೊಳಗೇ ಮದುವೆಯಾದದ್ದು, ಮದುವೆಯಾದ ನಂತರ ಅವರು ಮತ್ತಷ್ಟು ಹೊಳಪು ಹೊಳಪಾಗಿ ಶಾಲೆಗೆ ಬಂದದ್ದು, ಆಗ ಅವರು ಹಾಕಿಕೊಂಡು ಬಂದಿದ್ದ ತಿಳಿಹಸಿರು ತುಂಬುತೋಳಿನ ಟೆರಿಲಿನ್ ಷರಟು, ಕಡುಹಸಿರು ಟೆರಿಕಾಟ್ ಪ್ಯಾಂಟು, ಕಪು್ಪ ಬೂಟು, ಹಸಿರು ಕಾಲುಚೀಲ, ಹಳೆಯ ಚೈನಿನ ವಾಚು ಕಳಚಿಟ್ಟು ಹೊಸ ಕಪು್ಪಬೆಲ್ಟಿನ ಗೋಲ್ಡ್​ಕೇಸಿನ ವಾಚು ಕಟ್ಟಿಕೊಂಡು ಬಂದಿದ್ದು- ಯಾವುಯಾವುದೂ ನನ್ನ ನೆನಪಿಂದ ಅಳಿಸಿಹೋಗಿಲ್ಲ.

ನಮ್ಮ ಮಾದಯ್ಯ ಮೇಷ್ಟ್ರು ನಿಲ್ಲುತ್ತಿದ್ದ ಭಂಗಿ, ಪಾಠ ಮಾಡುತ್ತಿದ್ದ ರೀತಿ- ಇಂಗ್ಲಿಷು, ಕನ್ನಡ, ಸಮಾಜ, ವಿಜ್ಞಾನ, ಗಣಿತ ಎಲ್ಲವನ್ನೂ ಅವರೇ ಚೆನ್ನಾಗಿ ಪಾಠ ಮಾಡುತ್ತಿದ್ದರು, ಅದೇನು ಓದಿದ್ದರೋ ಕಾಣೆ!- ಉಹ್ಞುಂ, ಯಾವುದೂ ಮರೆತಿಲ್ಲ.

ಇನ್ನೊಂದು ವಿಷಯವನ್ನು ಹೇಳಿಬಿಡಬೇಕು. ನಮ್ಮ ಮಾದಯ್ಯ ಮೇಷ್ಟ್ರು ‘ಹರಿಜನ’ (ಆಗಿನ್ನೂ ದಲಿತ, ಎಸ್​ಸಿ, ಎಸ್​ಟಿ ಅನ್ನುವ ಶಬ್ದಗಳು ಬಳಕೆಗೆ ಬಂದಿರಲಿಲ್ಲ). ನಾಗರಿಕವಾಗಿ ಹೇಳುವಾಗ ಏ.ಕೆ. (ಅಂದರೆ ಆದಿಕರ್ನಾಟಕರು ಅಂತ) ಅನ್ನುತ್ತಿದ್ದರು. ‘ಹರಿಜನ’ರಿಗೆ ಸಾಮಾಜಿಕ ಗೌರವ ಇರದಿದ್ದ ಕಾಲದಲ್ಲೂ ಮಾದಯ್ಯ ಮೇಷ್ಟ್ರು ನಮ್ಮೂರಿನ ಎಲ್ಲ ಜಾತಿ ಜನಾಂಗಗಳ ಗೌರವಕ್ಕೆ ಪಾತ್ರರಾಗಿದ್ದರು. ಅದಕ್ಕೆ ನಮ್ಮೂರಿನವರ ಔದಾರ್ಯಕ್ಕಿಂತಲೂ ಮಾದಯ್ಯ ಮೇಷ್ಟ್ರ ನಡವಳಿಕೆ ಮತ್ತು ಪಾಠ ಮಾಡುವ ಶ್ರದ್ಧೆ ಕಾರಣವಾಗಿತ್ತು. ಮೇಷ್ಟ್ರಿಗೆ ತಾನು ಹರಿಜನ ಎಂಬ ಪ್ರಜ್ಞೆ (ಆಥವಾ ಭಯ) ಅಂತಃಸ್ಥಾಯಿಯಾಗಿ ಇದ್ದೇ ಇತ್ತು ಅಂತ ಕಾಣುತ್ತದೆ. ಅದಕ್ಕೇ ಅವರು ಶಾಲೆಯಲ್ಲಿ ಹೆಚ್ಚು ಕೋಪಮಾಡಿಕೊಳ್ಳುತ್ತಿರಲಿಲ್ಲ. ಮಕ್ಕಳಿಗೆ ಹೆಚ್ಚಾಗಿ ಹೊಡೆಯುವುದು, ಬಡಿಯುವುದು ಮಾಡುತ್ತಿರಲಿಲ್ಲ. ಬಾಲ್ಯದ ವಿದ್ಯಾಭ್ಯಾಸಕ್ಕೆ ಅಂಥ ಪುಣ್ಯಾತ್ಮರು ಸಿಕ್ಕಿದ್ದು ನನಗೀಗ ಧನ್ಯತೆಯ ವಿಷಯ.

ಅವರೀಗ ಮುಕ್ಕಾಲು ಶತಮಾನ ಕಳೆದಿದ್ದಾರೆ. ಈಗಲೂ ನನ್ನನ್ನು ಕಂಡರೆ ಅದೇ ವಾತ್ಸಲ್ಯ. ಆವತ್ತು, ಅಂದರೆ ಹತ್ತತ್ತಿರ ಐವತ್ತು ವರ್ಷಗಳ ಹಿಂದೆ ಕಂಡಿದ್ದೆನಲ್ಲ, ಆ ಮುಗುಳ್ನಗೆ ಈಗಲೂ ಹಾಗೇ ಇದೆ. ನಾನು ಈಗ ಅವರಿಗಿಂತಲೂ ಎತ್ತರಕ್ಕೆ ಬೆಳೆದಿದ್ದೇನೆ- ದೈಹಿಕವಾಗಿ. ಈಗಲೂ ನಾನು ಎದುರಾದರೆ ಸಾಕು, ಅವರ ಮುಖದ ಮೇಲೆ ಆ ಪ್ರೀತಿ ಸುರಿಯುವುದನ್ನು ನೀವು ಯಾರಾದರೂ ನೋಡಬೇಕು. ‘ಏನಪಾ ಕೃಷ್ಣೇಗೌಡ, ಚೆನ್ನಾಗಿದೀಯಾ? ನೀನು ಚೆನ್ನಾಗಿರಬೇಕು ಕಣಪಾ, ಜಾಣ, ಜಾಣ, ಜಾಣ ಕಣಪಾ ನೀನು’ ಅಂತ ನನ್ನ ಹೆಗಲು ಮುಟ್ಟಿ, ಬೆನ್ನು ಸವರಿ ಮಾತಾಡಿಸುತ್ತಾರೆ. ಸುತ್ತಮುತ್ತ ಯಾರಾದರೂ ಇದ್ದರೆ, ‘ನನ್ನ ಶಿಷ್ಯ, ನನ್ನ ಶಿಷ್ಯ ಕೃಷ್ಣೇಗೌಡ. ಇವರ ದೊಡ್ಡಣ್ಣ ವಾಸು ಒಬ್ಬರನ್ನ ಬಿಟ್ಟರೆ, ಇವರಣ್ಣ ರಾಮಣ್ಣ, ಇವನ ತಂಗಿಯರು ಹೇಮ, ಶೀಲ, ಮಂಗಳ, ತಮ್ಮಂದಿರು ಧರ್ಮ, ಬಾಲು ಇವರೆಲ್ಲರೂ ನನ್ನ ಶಿಷ್ಯರು. ನಾನು ಇವರ ಊರಿನಲ್ಲಿ 14 ವರ್ಷ ಇದ್ದೆ. ಹಾಗಾಗಿ ಇವರ ತಂದೆ, ತಾಯಿ ಎಲ್ಲರೂ ನನಗೆ ಬಹಳ ಬೇಕಾದವರು. ಆ ಊರಿನ ಜನ ನನ್ನನ್ನ ಅಷ್ಟೇ ಪ್ರೀತಿಯಿಂದ ನೋಡಿಕೊಂಡರು’ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮೇಷ್ಟ್ರು ಈಗ ನನ್ನ ‘ಜಲದಕಣ್ಣು’ ಲೇಖನಗಳ ಪುಸ್ತಕಗಳನ್ನ ಓದ್ತಾ ಇರುತ್ತಾರೆ. ಅಲ್ಲೆಲ್ಲಾ ನಮ್ಮೂರಿನ ಎಷ್ಟೋ ನೆನಪುಗಳು ಇವೆಯಲ್ಲ. ಅದೆಲ್ಲಾ ಅವರೂ ನೋಡಿರುವಂಥದೇ. ಯಾವಾಗಲೋ ಒಮ್ಮೆ ಅವರಿಗೆ ಭಾವನೆಗಳು ಒತ್ತರಿಸಿ ಬಂದಾಗ ನನಗೆ ಫೋನುಮಾಡಿ, ‘ಕೃಷ್ಣೇಗೌಡ, ಜಲದಕಣ್ಣು ಓದ್ತಾ ಇದೀನಿ ಕಣಪಾ, ತುಂಬಾ ಚೆನ್ನಾಗಿ ಬರೆದಿದ್ದೀಯ ಕಣಪಾ, ನೀನು ಇನ್ನೂ…. ಇನ್ನೂ…. ಎತ್ತರಕ್ಕೆ ಹೋಗ್ಬೇಕು ಕಣಪಾ, ನನಗೆ ತುಂಬಾ…. ತುಂಬಾ… ಸಂತೋಷ ಕಣಪಾ….’ ಅನ್ನುತ್ತಿರುತ್ತಾರೆ. ಹಾಗೆ ಮಾತಾಡುವಾಗ ಅವರ ಮಾತುಗಳಲ್ಲಿ ತುಳುಕುವ ಪ್ರೀತಿ, ವಾತ್ಸಲ್ಯ ನನ್ನ ಕಣ್ಣು-ಮನಸ್ಸುಗಳನ್ನು ಒದ್ದೆಯಾಗಿಸಿಬಿಡುತ್ತವೆ.

ಮೊನ್ನೆ ಮಾದಯ್ಯ ಮೇಷ್ಟ್ರು ಫೋನು ಮಾಡಿದಾಗ ‘ಹಳ್ಳಿ ಬದುಕನ್ನ ಎಷ್ಟು ಚೆನ್ನಾಗಿ ನೋಡಿದೀಯಪ್ಪ ನೀನು? ನಿನಗೆ ಇದೆಲ್ಲಾ ಗೊತ್ತು ಅಂತ ನಾನೇ ಅಂದುಕೊಂಡಿರಲಿಲ್ಲ. ಯಾಕೆ ಅಂದ್ರೆ, ನಿಮ್ಮ ಮನೆಯವರು ಸಾಕಷ್ಟು ಸ್ಥಿತಿವಂತರಾಗಿದ್ರು. ನಿಮ್ಮ ತಂದೆ ತಾಯಿ ಆ ಕಾಲಕ್ಕೇ ವಿದ್ಯಾವಂತರಾಗಿದ್ರು. ನಿಮ್ಮ ಮನೆ ನನಗೆ ಹಳ್ಳಿಮನೆ ಥರಾನೇ ಕಾಣಿಸ್ತಾ ಇರಲಿಲ್ಲ. ಆದರೆ ನೀನು ಕೂಡಾ ದನ ಮೇಯಿಸ್ತಾ ಇದ್ದೆ, ಎಮ್ಮೆ ಮೈ ತೊಳೀತಾ ಇದ್ದೆ, ಹೊಲಗದ್ದೆಗಳಲ್ಲಿ ವ್ಯವಸಾಯ ಮಾಡ್ತಾ ಇದ್ದೆ ಅಂದ್ರೆ ನಾನು ಊಹೆ ಮಾಡೋಕೆ ಆಗ್ತಾ ಇಲ್ಲ. ನೀನೂ ಅದನ್ನೆಲ್ಲಾ ಮಾಡ್ತಾ ಇದ್ಯಾ?’ ಅಂದರು.

ಮೇಷ್ಟ್ರು ಹಾಗೆ ಭಾವಿಸುವುದಕ್ಕೆ ಕಾರಣ ಇದೆ. ಆ ಕಾಲದಲ್ಲಿ ನನ್ನೆಷ್ಟೋ ಸಹಪಾಠಿಗಳು ಶಾಲೆಗೆ ಬರುವಾಗ ನೆಟ್ಟಗೆ ಹಲ್ಲುಜ್ಜಿ, ಮೊಕ ತೊಳೆದು, ನೀಟಾಗಿ ತಲೆಬಾಚಿಕೊಂಡು, ಒಗೆದ ಬಟ್ಟೆ ಹಾಕಿಕೊಂಡು ಬರಬೇಕು ಅನ್ನುವುದೂ ಗೊತ್ತಿಲ್ಲದೆ ಹೇಗಿದ್ದರೆ ಹಾಗೆ ಬಂದುಬಿಡುತ್ತಿದ್ದರು. ಮೇಷ್ಟ್ರಿಗೆ ಸ್ವಚ್ಛತೆಯ ಪಾಠ ಹೇಳುವುದೂ ಅನಿವಾರ್ಯವಾಗಿಬಿಡುತ್ತಿತ್ತು (ಅಷ್ಟಾ ್ಯೆ? ಕೆಲವು ಮೇಷ್ಟ್ರುಗಳೂ ಹಾಗೇಹಾಗೇ ಶಾಲೆಗೆ ಬಂದುಬಿಡುತ್ತಿದ್ದರು, ಅವರ ಗದ್ದೆಯಿಂದಲೋ ಹೊಲದಿಂದಲೋ ನೇರವಾಗಿ!).

ನಾನು ಮೇಷ್ಟ್ರಿಗೆ ಹೇಳಿದೆ- ‘ನಂಬಿ ಸಾರ್, ನಾನು ಹಳ್ಳಿಯ ಬದುಕನ್ನು ನೇರಾನೇರವಾಗಿ ಅಂಗುಲಂಗುಲ ಅನುಭವಿಸಿಯೇ ಬೆಳೆದವನು. ಆಗೆಲ್ಲಾ ಹಳ್ಳಿಗಳಲ್ಲಿ ಎಂಥ ಜಮೀನುದಾರರೇ ಆದರೂ ದುಡಿಯದೇ ಬದುಕುವುದು ಸಾಧ್ಯವಿರಲಿಲ್ಲ. ಆ ಕಾಲಕ್ಕೇ ಊರ ಚೇರ್ಮನ್ ಆಗಿದ್ದ, ಇಸ್ತ್ರಿ ಮಾಡಿದ ಬಿಳಿಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ಅಪ್ಪ ಕೂಡ ಗುದ್ದಲಿ ಹಿಡಿದುಕೊಂಡು ಗದ್ದೆಗಿಳಿದು ದುಡಿಯುತ್ತಿದ್ದರು. ಅಪ್ಪನಿಗೆ ಇನ್ನು ದುಡಿಯುವುದಕ್ಕಾಗೋದಿಲ್ಲ ಅನ್ನುವ ಸ್ಥಿತಿ ಬಂದಮೇಲಷ್ಟೇ ‘ನಾವಿನ್ನು ಬದುಕಿರೋದು ಹಿಟ್ಟಿಗೆ ದಂಡ, ಭೂಮಿಗೆ ಭಾರ’ ಅನ್ನುವ ಭಾವನೆ ಬಂದದ್ದು. ಆಗ ಈಗಿನ ಹಾಗೆ ಕುಳಿತು ತಿನ್ನುವುದೇ ಬದುಕಿನ ಭೋಗ ಅನ್ನುವ ಅಭಿಪ್ರಾಯ ಎಲ್ಲೂ ಇರಲೇ ಇಲ್ಲ’.

ಇರಲಿ, ಈ ಅಂಕಣಕ್ಕೆ ಈ ಫಿಲಾಸಫಿ ಬೇಡವಾಗಿತ್ತು. ಹಳೆದಿನಗಳಿಗೆ ಮಗುಚಿಬಿದ್ದಿದ್ದ ಮನಸ್ಸನ್ನು ಅಲ್ಲೇ ಅಡ್ಡಾಡಲು ಬಿಟ್ಟು ಅದರ ವೀಕ್ಷಕ ವಿವರಣೆಯನ್ನು ನೀಡಿದ್ದರೆ ಇನ್ನೂ ಚೆಂದಾಗುತ್ತಿತ್ತು. ವರ್ತಮಾನದ ಈ ಕೃಷ್ಣೇಗೌಡನಿಗೆ ಹೀಗೆ ದೊಡ್ಡ ದೊಡ್ಡದಾಗಿ ಮಾತಾಡಿ ದೊಡ್ಡಮನುಷ್ಯ ಅನ್ನಿಸಿಕೊಳ್ಳುವ ಚಪಲ ಇರಬೇಕೇನೋ! ನಾನು ನನ್ನನ್ನೇ ನೋಡಿಕೊಂಡಾಗ ನನಗೆ ಈ ಹಮ್ಮು ಅಹಂಕಾರದ ಕೃಷ್ಣೇಗೌಡನಿಗಿಂತ ಬಾಲ್ಯದ ಬಯಲಲ್ಲಿ ಅಲೆದಾಡುವ ಅಬೋಧ ಬಾಲಕ ‘ಕೃಷ್ಣ’ನೇ ಹೆಚ್ಚು ಒಳ್ಳೆಯ ಹುಡುಗನಂತೆ ಕಾಣುತ್ತಾನೆ.

ಮನಸ್ಸನ್ನು ಹತ್ತತ್ತಿರ ಅರ್ಧ ಶತಮಾನ ಹಿಂದಕ್ಕೆ ಕರೆದುಕೊಂಡು ಹೋಗಿಬಿಟ್ಟೆ. ಅಲ್ಲಿ ನಮ್ಮೂರ ನಾಡಹಂಚು, ಮಣ್ಣಿನ ಗೋಡೆ, ತೊಪ್ಪೆ ಸಾರಿಸಿದ ನೆಲದ ಮನೆಗಳು ಕಂಡವು. ಕನಿಷ್ಠ ಚಡ್ಡಿಯನ್ನೂ ಹಾಕಿಕೊಳ್ಳದೆ ಮೂಗಿನಲ್ಲಿ ‘11’ರ ಆಕಾರದಲ್ಲಿ ಗೊಣ್ಣೆ ಸುರಿಸಿಕೊಂಡು ಓಡಾಡುವ ಹುಡುಗರು ಸಿಕ್ಕಿದರು. ಯಾರದೋ ಮನೆಯಲ್ಲಿ ಕೆಂಡದ ಮೇಲೆ ಮೆಣಸಿನಕಾಯಿ ಸುಟ್ಟದ್ದರ ಘಾಟು ಮೂಗಿಗೆ ಬಡಿಯಿತು. ಇಂಥದೇ ಮಾಗಿ ಕಾಲದಲ್ಲಿ ಬತ್ತ ಬಡಿಯುವ ಕಣದಲ್ಲಿ ನಮ್ಮ ಆಳುಗಳು ಹಾಡುತ್ತಿದ್ದ ಹಾಡುಗಳು, ಹಾಡಿನ ನಂತರ ‘ಕಿಲಿಲಿಯೋ’ ಎಂದು ಹೊಡೆಯುತ್ತಿದ್ದ ಕಾಕ ಕಿವಿಗೆ ಬಿದ್ದವು. ಬಿಲ ತೋಡುವ ಹೆಗ್ಗಣ, ಬಯಲಲ್ಲಿ ಓಡುವ ಮೊಲ, ಕಲ್ಲಿನ ಕೆಳಗೆ ತನ್ನ ಅಷ್ಟಪಾದಗಳನ್ನೂ ಕೊಕ್ಕರಿಸಿ ಕೂತಿರುವ ನಳ್ಳಿ, ಕಾಲುವೆ ನೀರಿನಲ್ಲಿ ತಲೆಯೆತ್ತಿಕೊಂಡು ತೇಲಿಬರುವ ಒಳ್ಳೇಕಾಟಿ ಹಾವು- ಒಂದಾ? ಎರಡಾ? ಏನೇನೋ ಕಾಣುತ್ತಿವೆ. ನನ್ನ ಕಣ್ಣು, ಮೂಗು, ನಾಲಿಗೆ, ಕಿವಿ, ಚರ್ಮ, ಮನಸ್ಸು ಹೀಗೆ ಸರ್ವೆಂದ್ರಿಯಗಳೂ ಒಂದಿಷ್ಟು ಹೊತ್ತು ಸುಖಪಟ್ಟುಕೊಂಡವು.

ಹಾಗೇ ಅಲೆದಾಡುವಾಗ ತಟಕ್ಕನೆ ಮಾದಯ್ಯ ಮೇಷ್ಟೂ ್ರ ಸಿಕ್ಕಿಬಿಟ್ಟರು. ಅಪ್ಪ ಆಗ ಹೇಳುತ್ತಿದ್ದರು- ‘ತಪು್ಪ ಮಾಡುದ್ರೆ ಮೊಕಾ ಮೂತಿ ನೋಡದೆ ಎರಡು ಬಿಗೀರಿ ಮೇಷ್ಟೆ ್ರ. ಈಗ ನಾನೂ ಅದನ್ನೇ ಹೇಳಬೇಕು ಅನ್ನಿಸ್ತಾ ಇದೆ. ‘ನಿಮ್ಮ ಶಿಷ್ಯ ಎಷ್ಟು ದೊಡ್ಡವನಾದ್ರೂ ನಿಮಗೆ ಚಿಕ್ಕವನೇ ಸಾರ್. ತಪು್ಪ ನೆಪು್ಪ ಕಂಡರೆ ಮೊಕಾ ಮೂತಿ ನೋಡದೆ ಎರಡು ಬಿಗೀರಿ ಸಾರ್, ಬೇಕಾದ್ರೆ ಕುರ್ಚಿ ಕೂಡ್ಸಿ, ಕಿವಿ ಹಿಡಿಸಿ. ನಿಮ್ ಕೈಲಿ ಏಟು ತಿಂದು ಭಾಳಾ ದಿನ ಆಯ್ತು ಸಾರ್!’.

Leave a Reply

Your email address will not be published. Required fields are marked *

Back To Top