ಅಲೋಕ್​ಕುಮಾರ್ ಬೆಂಗಳೂರು ಪೊಲೀಸ್ ಆಯುಕ್ತ; ಎಡಿಜಿಪಿ ಹುದ್ದೆಗೆ ಬಡ್ತಿ: ಅಧಿಕಾರ ಹಸ್ತಾಂತರಿಸಿದ ಸುನೀಲ್​ಕುಮಾರ್

ಬೆಂಗಳೂರು: ಸಿಲಿಕಾನ್​ಸಿಟಿಯ 34ನೇ ಪೊಲೀಸ್ ಕಮಿಷನರ್ ಆಗಿ ಅಲೋಕ್​ಕುಮಾರ್ ನೇಮಕವಾಗಿದ್ದು, ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಲೋಕ್​ಕುಮಾರ್​ಗೆ ನಿರ್ಗಮಿತ ಕಮಿಷನರ್ ಟಿ. ಸುನೀಲ್​ಕುಮಾರ್ ಬೇಟನ್ ಹಸ್ತಾಂತರಿಸಿದರು. ಬಳಿಕ ಪರಸ್ಪರ ಹೂಗುಚ್ಛ ನೀಡುವ ಮೂಲಕ ಶುಭ ಕೋರಿದರು. ಪೊಲೀಸ್ ಬ್ಯಾಂಡ್ ಮತ್ತು ಕವಾಯತು ತಂಡ ಗೌರವ ವಂದನೆ ಸ್ವೀಕರಿಸಿ ಸುನೀಲ್​ಕುಮಾರ್ ನಿರ್ಗಮಿಸಿದರು. ಅದೇ ವೇಳೆ ಕವಾಯಿತು ತಂಡದಿಂದ ಅಲೋಕ್​ಕುಮಾರ್ ಗೌರವ ವಂದನೆ ಸ್ವೀಕರಿಸಿ ಕಚೇರಿ ಪ್ರವೇಶಿಸಿದರು. ನಗರದ ಎಲ್ಲ ಡಿಸಿಪಿಗಳು ನೂತನ ಕಮಿಷನರ್​ಗೆ ಹೂಗುಚ್ಛ ನೀಡಿ ಶುಭ ಕೋರಿದರು.

ಬಿಹಾರ ಮೂಲದ ಅಧಿಕಾರಿ: ಬಿಹಾರ ಮೂಲದ ಅಲೋಕ್​ಕುಮಾರ್, 1994ನೇ ಸಾಲಿನ ಐಪಿಎಸ್ ಬ್ಯಾಚ್​ನಲ್ಲಿ ಕರ್ನಾಟಕ ಕೇಡರ್ ಆಗಿ ಪೊಲೀಸ್ ಸೇವೆಗೆ ಸೇರಿದರು. ಬೆಂಗಳೂರಿನಲ್ಲಿ ದಕ್ಷಿಣ ವಿಭಾಗದ ಡಿಸಿಪಿಯಾಗಿ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ 2 ಬಾರಿ ಸೇವೆ ಸಲ್ಲಿಸಿರುವ ಅಲೋಕ್​ಕುಮಾರ್, ಇದೀಗ ಕಮಿಷನರ್ ಹುದ್ದೆ ಅಲಂಕರಿಸಿದ್ದಾರೆ. ನಗರದ ಅಪರಾಧ ಲೋಕದ ಸಂಪೂರ್ಣ ಮಾಹಿತಿ ಹೊಂದಿದ್ದಾರೆ.

ಅಪರಾಧ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ 9 ತಿಂಗಳು ಕರ್ತವ್ಯ ನಿರ್ವಹಿಸಿದ ಅಲೋಕ್​ಕುಮಾರ್, ರೌಡಿ, ಗೂಂಡಾಗಳ ಅಡ್ಡೆಗಳ ಮೇಲೆ ದಾಳಿ ನಡೆಸಿ ಅವರ ಹೆಡೆಮುರಿ ಕಟ್ಟಿದ್ದರು. ಪಬ್, ವಿಡಿಯೋ ಗೇಮ್ ಬಡ್ಡಿ ದಂಧೆ, ರಿಯಲ್ ಎಸ್ಟೇಟ್ ನೆಪದಲ್ಲಿ ಅಕ್ರಮ ಭೂ ವ್ಯಾಜ್ಯ ನಡೆಸುತ್ತಿದ್ದವರನ್ನು ಪತ್ತೆಹಚ್ಚಿ ಜೈಲಿಗೆ ತಳ್ಳಿದ್ದರು. ಇದೀಗ ನಗರ ಕಮಿಷನರ್​ರಾದ ಹಿನ್ನೆಲೆಯಲ್ಲಿ ಸಮಾಜಘಾತುಕ ಶಕ್ತಿಗಳಿಗೆ ನಡುಕ ಹುಟ್ಟಿದೆ. ಕೆಳ ಹಂತದ ಮೈಗಳ್ಳ ಅಧಿಕಾರಿ ಮತ್ತು ಸಿಬ್ಬಂದಿಗೂ ಎಚ್ಚರಿಕೆ ಸಂದೇಶ ಹೋಗಿದೆ.

ಹಿರಿಯ ಅಧಿಕಾರಿಗಳಲ್ಲಿ ಅಸಮಾಧಾನ?: ಐಜಿಪಿಗಳಾದ ಪ್ರಣಬ್ ಮೊಹಂತಿ, ಅಲೋಕ್​ಕುಮಾರ್ ಮತ್ತು ಬಿ. ದಯಾನಂದ್​ಗೆ ಜನವರಿಯಲ್ಲಿ ಎಡಿಜಿಪಿಗಳಾಗಿ ಬಡ್ತಿ ಸಿಗಬೇಕಿತ್ತು. ರಾಜ್ಯದಲ್ಲಿ ಎಡಿಜಿಪಿ ಹುದ್ದೆ ಖಾಲಿ ಇಲ್ಲದ ಕಾರಣಕ್ಕೆ ತಡೆ ಹಿಡಿಯಲಾಗಿತ್ತು. ಎಡಿಜಿಪಿ ರಾಘವೇಂದ್ರ ಔರಾದ್ಕರ್ ಡಿಜಿಪಿಯಾಗಿ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಒಂದು ಎಡಿಜಿಪಿ ಹುದ್ದೆ ಖಾಲಿಯಾಗಿತ್ತು. ಅವರ ಜಾಗಕ್ಕೆ ಭಾನುವಾರ ರಾತ್ರಿಯೇ ಅಲೋಕ್​ಕುಮಾರ್​ಗೆ ಬಡ್ತಿ ಕೊಟ್ಟು ಬೆಂಗಳೂರು ನಗರ ಕಮಿಷನರ್ ಆಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಇವರಿಗಿಂತ ಹಿರಿಯರಾದ ಪ್ರಣಬ್ ಮೊಹಂತಿ ಕೇಂದ್ರ ಸೇವೆಯಲ್ಲಿ ಇರುವ ಕಾರಣಕ್ಕೆ ಬಡ್ತಿ ಸಿಕ್ಕಿಲ್ಲ. ಜತೆಗೆ ಇವರಿಗಿಂತ ಹಿರಿಯ ಎಡಿಜಿಪಿಗಳು ಬೆಂಗಳೂರು ಕಮಿಷನರ್ ಹುದ್ದೆಗೆ ಲಾಬಿ ನಡೆಸಿದ್ದರು. ಇದೀಗ ಅಲೋಕ್​ಕುಮಾರ್ ಅವರನ್ನು ಕಮಿಷನರ್ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗಳು ನಡೆಯುತ್ತಿವೆ. ಭಾನುವಾರ ರಾತ್ರಿ 19 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದ ಸರ್ಕಾರ ಸೋಮವಾರ ಕೇವಲ ಸುನೀಲ್​ಕುಮಾರ್, ಅಲೋಕ್​ಕುಮಾರ್ ಮತ್ತು ರವಿಕಾಂತೇಗೌಡರನ್ನು ಹುದ್ದೆ ತೆರವು ಮಾಡಲು ಅನುಮತಿ ನೀಡಿದೆ. ಉಳಿದ ಅಧಿಕಾರಿಗಳಿಗಿನ್ನೂ ಆದೇಶ ಕೈಸೇರಿಲ್ಲ.

ಅಧಿಕಾರ ಸ್ವೀಕರಿಸಿದ ಕೂಡಲೇ ಇನ್​ಸ್ಪೆಕ್ಟರ್​ಗೆ ಕರೆ

ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ಅಲೋಕ್​ಕುಮಾರ್ ಕಚೇರಿಗೆ ತೆರಳುತ್ತಿದ್ದಾಗ ಸ್ವಾಗತಕಾರರ ಕೊಠಡಿಯಲ್ಲಿ ಮಕ್ಕಳ ಜತೆ ಮಹಿಳೆಯೊಬ್ಬರು ಕುಳಿತಿರುವುದನ್ನು ಗಮನಿಸಿದರು. ಕುರ್ಚಿ ಮೇಲೆ ಕುಳಿತ ಕೂಡಲೇ ಸಹಾಯಕನನ್ನು ಕರೆದು ಮಹಿಳೆ ಕುರಿತು ವಿಚಾರಿಸಿದರು.

ಮಹಿಳೆ ಮತ್ತು ಮಕ್ಕಳನ್ನು ಒಳಗೆ ಕರೆದು ಸಮಸ್ಯೆ ಕೇಳಿದರು. ಸೋಫಿಯಾ ಎಂಬಾಕೆಯ ಪತಿ ಭೋಪಾಲ್​ನಲ್ಲಿದ್ದು, ವರದಕ್ಷಿಣೆ ಕಿರುಕುಳ ಕೇಸ್ ಆಗಿ ಕೋರ್ಟ್ ಮೇಟ್ಟಿಲೇರಿದ್ದಾರೆ. ಇದೀಗ ಪತಿ ಜಾಮೀನು ಪಡೆದುಕೊಂಡಿದ್ದು, ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಿರುವುದಾಗಿ ಆಯುಕ್ತರ ಮುಂದೆ ಅಳಲು ತೋಡಿಕೊಂಡರು.

ಮಹಿಳೆ ನೆಲೆಸಿದ್ದ ವ್ಯಾಪ್ತಿಗೆ ಸೇರಿದ ಠಾಣೆಯ ಪೊಲೀಸ್ ಇನ್​ಸ್ಪೆಕ್ಟರ್​ಗೆ ಕರೆ ಮಾಡಿದ ಅಲೋಕ್​ಕುಮಾರ್, ಮಹಿಳೆಯೊಬ್ಬರು ಬರುತ್ತಾರೆ. ದೂರು ಪಡೆದು ಆಕೆಯ ಪತಿ ಪಡೆದಿರುವ ಜಾಮೀನು ರದ್ದುಪಡಿಸುವಂತೆ ಭೋಪಾಲ್ ಪೊಲೀಸರಿಗೆ ಪತ್ರ ಬರೆಯಬೇಕು. ಮಂಗಳವಾರ ಸಂಜೆ ವರದಿ ಒಪ್ಪಿಸುವಂತೆ ಸೂಚನೆ ನೀಡಿದರು. ಅಲೋಕ್​ಕುಮಾರ್ ಭರವಸೆಯಿಂದ ಮಹಿಳೆ ಮುಖದಲ್ಲಿ ಕೊಂಚ ನೆಮ್ಮದಿ ಭಾವ ಕಂಡುಬಂತು.

Leave a Reply

Your email address will not be published. Required fields are marked *