ಬೆಳಗಾವಿ: ಜಿಲ್ಲೆಯ ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ಚನ್ನಮ್ಮ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಅಲೆಮಾರಿ ಸಮುದಾಯಗಳ ವಿದ್ಯಾರ್ಥಿಗಳ ಪ್ರವೇಶಕ್ಕೆ ಶೇ.10 ಮೀಸಲಾತಿ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಅಲೆಮಾರಿ ಸಮುದಾಯಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಅಲೆಮಾರಿ ಸಮುದಾಯ ವರ್ಗಕ್ಕೆ ಪರಿಹಾರ ಸಿಗದ ಕಾರಣಕ್ಕೆ ಅಂತಹ ಕುಟುಂಬ ಗುರುತಿಸಿ, ಸೂಕ್ತ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ನೇರ ಉದ್ಯಮಶೀಲ ಯೋಜನೆ ಅಡಿಯಲ್ಲಿ ಲಾಟರಿ ಸಿಸ್ಟಂ ಮೂಲಕ ಆಯ್ದ ಫಲಾನುಭವಿಗಳಿಗೆ 1 ಲಕ್ಷ ರೂ. ಧನಸಹಾಯ ನೀಡಲಾಗುವುದು. ಅಲೆಮಾರಿ ಹಾಗೂ ಬುಡಕಟ್ಟು ವರ್ಗದ ಜನರು ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಖಾತೆ ಹೊಂದಿರುವುದಿಲ್ಲ. ಹೀಗಾಗಿ ಅಂತಹ ಸಮುದಾಯಕ್ಕೆ ನೇರಸಾಲ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.
ಜಿಪಂ ಸಿಇಒ ಎಚ್.ವಿ. ದರ್ಶನ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ, ಜಿಲ್ಲಾ ನಗರಾಭಿವೃದ್ಧಿ
ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಇತರರು ಇದ್ದರು.