More

  ಅರ್ಹರಿಗೆ ಯೋಜನೆಯ ಲಾಭ ದೊರೆಯಲಿ

  ಚಿತ್ರದುರ್ಗ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ದೊರೆಯಬೇಕು. ಹೀಗಾಗಿ ಜಿಲ್ಲಾಡಳಿತದೊಂದಿಗೆ ಸಮನ್ವಯ ವಹಿಸಿ ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.

  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಾಧಿಕಾರದ ಮೊದಲ ಸಭೆಯಲ್ಲಿ ಮಾತನಾಡಿ, ತಾಂತ್ರಿಕ ಕಾರಣಕ್ಕೆ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬಾರದು. ತಾಲೂಕು, ಗ್ರಾಮ ಮಟ್ಟದಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು ಕಾರ್ಯನಿರ್ವಹಿಸಿ ತೊಂದರೆಗಳನ್ನು ಪರಿಹರಿಸಬೇಕು. ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.

  ಶೀಘ್ರವೇ ಸರ್ಕಾರದಿಂದ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಆರಂಭಿಸುವಂತೆ ರಾಜ್ಯಮಟ್ಟದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

  3.7 ಲಕ್ಷ ಕುಟುಂಬಕ್ಕೆ ಅನ್ನಭಾಗ್ಯ ಲಾಭ: ಜಿಲ್ಲೆಯಲ್ಲಿ ಒಟ್ಟು 4.01 ಲಕ್ಷ ಬಿಪಿಎಲ್, ಎಪಿಎಲ್ ಕಾರ್ಡ್‌ಗಳಿವೆ. ಇದರಲ್ಲಿ 3.7 ಲಕ್ಷ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿವೆ. ಈವರೆಗೂ 3.6 ಲಕ್ಷ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ. ತಾಂತ್ರಿಕ ಕಾರಣಕ್ಕೆ 10 ಸಾವಿರ ಮಂದಿಗೆ ನೇರ ನಗದು ವರ್ಗಾವಣೆ ಸಾಧ್ಯವಾಗಿಲ್ಲ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಮಾಹಿತಿ ನೀಡಿದರು.

  ಜಿಲ್ಲೆಯಲ್ಲಿ ಒಟ್ಟು 3.84 ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 3.6 ಲಕ್ಷ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂ. ಜಮೆ ಆಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದರು.

  ಶಕ್ತಿ ಯೋಜನೆ ಜಾರಿ ನಂತರ ಜಿಲ್ಲೆಯಲ್ಲಿ 1.52 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದಾರೆ. ನಿತ್ಯ 60 ಸಾವಿರ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಚಿತ್ರದುರ್ಗ ವಿಭಾಗಕ್ಕೆ ಈ ಯೋಜನೆಯಿಂದ ಒಟ್ಟು 52 ಕೋಟಿ ರೂ. ಲಾಭವಾಗಿದೆ. ವಿಭಾಗಕ್ಕೆ 10 ಹೊಸ ಬಸ್‌ಗಳು ಸೇರ್ಪಡೆಯಾಗಿವೆ ಎಂದು ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ ಮಾಹಿತಿ ನೀಡಿದರು.

  3.67 ಲಕ್ಷಕ್ಕೂ ಅಧಿಕ ಗೃಹ ಬಳಕೆದಾರರು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಲಾಭ ಪಡೆಯುತ್ತಿದ್ದಾರೆ. ಚಿತ್ರದುರ್ಗ ಬೆಸ್ಕಾಂಗೆ ಯೋಜನೆಯಿಂದ ವಾರ್ಷಿಕವಾಗಿ 13.84 ಕೋಟಿ ರೂ. ಸರ್ಕಾರ ಪಾವತಿ ಮಾಡಲಿದೆ ಎಂದು ಬೆಸ್ಕಾಂ ಇಂಜಿನಿಯರ್ ಜಯಣ್ಣ ತಿಳಿಸಿದರು.

  ಜಿಲ್ಲೆಯಲ್ಲಿ 4,023 ಯುವಕರು ಯುವನಿಧಿ ಯೋಜನೆಯಡಿ ನೋಂದಾಯಿಸಿದ್ದು, 2,379 ಮಂದಿಗೆ ಈಗಾಗಲೇ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್‌ಕುಮಾರ್ ತಿಳಿಸಿದರು.

  ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಪ್ರಾಧಿಕಾರದ ಉಪಾಧ್ಯಕ್ಷರಾದ ಡಿ.ಎನ್.ಮೈಲಾರಪ್ಪ, ಖಾದಿ ಜೆ.ರಮೇಶ್, ಟಿ.ನಿರಂಜನ್, ಜಿ.ಟಿ.ಬಾಬುರೆಡ್ಡಿ, ನಾಗೇಶ್ ರೆಡ್ಡಿ, ಸದಸ್ಯರಾದ ಬಿ.ಟಿ.ಜಗದೀಶ್, ಅಬ್ದುಲ್ಲಾ ಶಾ ವಲಿ, ಟಿ.ಕೃಷ್ಣಮೂರ್ತಿ, ನಾಗರಾಜ್, ಹೇಮಂತ್‌ಯಾದವ್, ಮಹಮದ್ ಇಸ್ಮಾಯಿಲ್, ಎ.ಲೋಹಿತ್, ಕೆ.ಎ.ತಿಪ್ಪೇಶ್, ಎಲ್.ಇಂದಿರಾ, ಪಿ.ಆರ್.ಶಿವಕುಮಾರ್, ಮಧುಪಾಲೇಗೌಡ, ಟಿ.ಪ್ರಕಾಶ್, ಚನ್ನಕೇಶವ, ಜಿ.ಪಿ.ಸುರೇಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts