ಅರ್ಹತೆಯಿಲ್ಲದೆ ಏನನ್ನೂ ಪಡೆಯಬಾರದು

ನಿರ್ದಿಷ್ಟ ಹಂತ ತಲುಪಿದ ಜನರಿಗೆ ಬಯಸಿದುದೆಲ್ಲ ತಾನಾಗಿಯೇ ಸಿಗುತ್ತದೆ. ಆದರೆ ಅಂಥ ಅರ್ಹತೆ ಅಥವಾ ಸಾಮರ್ಥ್ಯವನ್ನು ಸಂಪಾದಿಸುವುದಕ್ಕೆ ಮುಂಚೆಯೇ ಬಯಸಿದ್ದನ್ನು ಪಡೆದುಕೊಂಡರೆ, ಪಡೆದ ವರವೂ ಶಾಪವಾಗಬಲ್ಲದು. ಕಾರಣ, ಅಪಕ್ವ ವ್ಯಕ್ತಿಗೆ ದಕ್ಕುವ ವರವೇ ಹೊರೆಯಾಗಿ ಪರಿಣಮಿಸಿ, ಪಡೆದವರನ್ನು ಸಂಕಷ್ಟಕ್ಕೀಡುಮಾಡುತ್ತದೆ.

ಯಾವುದೇ ಅಸಾಮಾನ್ಯ ಘಟನೆ ನಡೆದಾಗ, ಜನರಿಗೆ ಸಾಧಾರಣವಾಗಿ ಅಲಭ್ಯವಾದುದನ್ನು ಕೇಳಿ ಪಡೆಯಲು ಒಂದು ಅವಕಾಶ ಎಂದು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಕೆಲವೊಂದು ಪರಿಕಲ್ಪನೆಗಳನ್ನು ಕಲ್ಪಿಸಲಾಗಿದೆ. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬರುವ, ಚೀಲದ ತುಂಬ ಉಡುಗೊರೆ ತರುವ ಸಾಂತಾಕ್ಲಾಸ್ ಮತ್ತು ಪ್ಙ್ರತ್ಯಕ್ಷವಾದೊಡನೆ ಕೇಳಿದ ಮೂರು ವರಗಳನ್ನು ನೀಡುವ ಭಾರತದ ದೇವತೆಗಳು.

ಕೊರತೆಯ ಜೀವನ: ಪುರಾಣಗಳು, ಕತೆಗಳನ್ನು ಈ ರೀತಿಯಾಗಿ ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಕಾರಣ- ಪ್ರಪಂಚದ ಬಹುಪಾಲು ಜನರು ಯಾವಾಗಲೂ ಕೊರತೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರಾಚೀನ ಕಾಲದಿಂದಲೂ ಬಹಳಷ್ಟು ಜನರು ಅಥವಾ ಬಹುಶಃ ಎಲ್ಲರೂ ತಮ್ಮ ಬೇಕುಗಳಿಂದ ವಂಚಿತರಾಗಿ ಬಾಳುತ್ತಿದ್ದಾರೆ. ‘ಅದಿದ್ದರೆ ಇದಿಲ್ಲ, ಇದಿದ್ದರೆ ಅದಿಲ್ಲ’ ಎನ್ನುವಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಬದುಕುತ್ತಿದ್ದಾರೆ. ಹೀಗಿರುವಾಗ, ಏನಾದರೂ ಪಡೆಯಲು ಒಂದು ಹೊಸ ಅವಕಾಶ ದೊರೆತಾಗ ಬೇಡುವುದೇ ಪ್ರಥಮ ಕೆಲಸ.

ನಾವು ಬೇಡಿದವನಲ್ಲಿ ಕಿಂಚಿತ್ತಾದರೂ ಯೋಗ್ಯತೆ ಅಥವಾ ಮೌಲ್ಯವಿದ್ದಲ್ಲಿ ಅವನು ನೀಡಲೇಬೇಕೆನ್ನುವ ಆಗ್ರಹ. ಜಗತ್ತಿನಲ್ಲಿ ಭಕ್ತರೆನಿಸಿಕೊಂಡ ಹಲವು ಜನರದು ಹಲವು ಬಗೆಯ ಪ್ರಾರ್ಥನೆಗಳು ಮತ್ತು ರೋದನೆಗಳು. ಕೆಲವೊಮ್ಮೆ ಇವು ಬೈಗುಳ ರೂಪ ತಾಳುವುದೂ ಉಂಟು: ‘ಇದನ್ನೂ ಕೊಡಲಾಗದ ನೀನೆಂಥ ದೇವರು? ಇಷ್ಟನ್ನೂ ಮಾಡಲಾಗದ ನೀನೆಂಥ ಗುರು? ಎಲ್ಲಿದೆ ನಿನ್ನ ಕರುಣೆ, ದಯೆ, ಅನುಕಂಪ?’ ಎಂದು. ಕೇಳಿದ್ದನ್ನೆಲ್ಲ ಕೊಡುವುದಕ್ಕೆ ಇರುವ ಮಿತಿಗಳು, ಯಾವ ವಿವೇಚನೆಯೂ ಇಲ್ಲದೆ ಕೊಟ್ಟರೆ ಆಗುವ ತೊಂದರೆಗಳು, ಅನರ್ಹರಿಗೆ ಹಾಗೆ ಸುಮ್ಮನೆ ಕೊಟ್ಟಾಗ, ಕೊಡುವವರು ಮತ್ತು ಸ್ವೀಕರಿಸುವವರು ಇಬ್ಬರೂ ಎದುರಿಸುವ ಸಂಕಷ್ಟಗಳು- ಇವೆಲ್ಲವನ್ನೂ ಶೈವ ಪುರಾಣದಲ್ಲಿ ಶಿವನು ಅನೇಕ ಕತೆಗಳು ಹಾಗೂ ಘಟನೆಗಳ ಮೂಲಕ ನಿರೂಪಿಸಿದ್ದಾನೆ.

ಅರ್ಹತೆಯಿಲ್ಲದೆ ಪಡೆಯಬಾರದು: ಜೀವನದಲ್ಲಿ ಜನರ ಬೆಳವಣಿಗೆ ಒಂದು ನಿರ್ದಿಷ್ಟ ಹಂತ ತಲುಪಿದಾಗ ಬಯಸಿದುದೆಲ್ಲ ಅವರಿಗೆ ತಾನಾಗಿಯೇ ದೊರಕುತ್ತದೆ. ಆದರೆ ಆ ಹಂತ ತಲುಪುವ ಮುಂಚೆಯೇ ಅವರು ‘ಬಯಕೆ ಈಡೇರಲಿ’ ಎಂದು ಹಾತೊರೆಯುತ್ತಾರೆ. ಅರ್ಹತೆಗೆ ಮುಂಚೆಯೇ ಪಡೆದುಕೊಂಡರೆ ಮಹಾನ್ ವರವು ಕೂಡ ಮಹಾನ್ ಶಾಪವಾಗಬಲ್ಲದು. ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ತಮಗೆ ಬೇಕಾದುದನ್ನು ಪಡೆದು ನಂತರ ಇನ್ನಿಲ್ಲದ ತೊಂದರೆ ಅನುಭವಿಸುವ ಬಹಳ ಜನರು ಈ ಪ್ರಪಂಚದಲ್ಲಿ ಇದ್ದಾರೆ. ಅವರ ಆಸೆ, ಆಸೆಯಾಗಿಯೆ ಉಳಿದಿದ್ದರೆ ಅವರ ಜೀವನ ಎಷ್ಟೋ ಪಾಲು ಉತ್ತಮವಾಗಿರುತ್ತಿತ್ತು. ಆದರೆ ಆಸೆಗಳನ್ನು ಈಡೇರಿಸಿಕೊಂಡು ತುಂಬ ಕಷ್ಟಗಳಿಗೆ ಸಿಲುಕಿ ನಲುಗುತ್ತಾರೆ. ಆದುದರಿಂದ ಅನರ್ಹರಿಗೆ, ಅಪಾತ್ರರಿಗೆ ಕೊಟ್ಟರೆ, ಕೊಡುವವರು ಮತ್ತು ಸ್ವೀಕರಿಸುವವರು ಇಬ್ಬರೂ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

ಅನೇಕ ವೇಳೆ ಮಾನವರು, ತಮ್ಮ ಸಾಧನೆಯಲ್ಲಿ ನಿರ್ದಿಷ್ಟ ಮಟ್ಟ ತಲುಪಿದಾಗ ಅತಿ ಕರುಣಾಮಯಿಗಳಾಗಲು ತೀವ್ರ ಹಂಬಲ ಹೊಂದಿರುತ್ತಾರೆ. ಆದರೆ ಅನುಚಿತವಾದ ಕರುಣೆಗೆ ಮುಖ್ಯಕಾರಣ ಅಹಂ; ನೀವು ಈ ಪ್ರಪಂಚದಲ್ಲಿಯೆ ಅತ್ಯಂತ ಕರುಣಾಮಯಿಗಳಾಗಲು ಆಶಿಸುವಿರಿ. ಯಾರಿಗೆ, ಎಲ್ಲೇ ಆಗಲಿ, ಏನಾದರೂ ಬೇಕಿದ್ದಲ್ಲಿ ಸಹಾಯಹಸ್ತ ಚಾಚುವಿರಿ. ಅದು ಯಾವುದೇ ತಿಳಿವಳಿಕೆ, ವಿವೇಕ ಅಥವಾ ಅರಿವಿನಿಂದ ಉಂಟಾದುದಲ್ಲ; ‘ತಾನೇ ಶ್ರೇಷ್ಠ, ತಾನೇ ಹೆಚ್ಚು’ ಎಂದು ಕರೆಸಿಕೊಳ್ಳುವ ಬಯಕೆಯಿಂದ ಬರುವಂಥದು. ಏನೇ ಮಾಡಿದರೂ ಉತ್ಕೃಷ್ಟರಾಗಿರಬೇಕೆಂದು ಬಯಸುವಿರಿ. ನೀವೆಲ್ಲೇ ನೋಡಿ, ಜನರು ತಾವೇ ಹೆಚ್ಚು ಎಂದು ಹೇಳಿಕೊಳ್ಳುವರು. ‘ನಾನು ಮೂರ್ಖ’ ಎಂದು ಹೇಳಿದರೂ ಅವರು, ‘ನಾನು ಪ್ರಪಂಚದಲ್ಲೇ ಅತಿದೊಡ್ಡ ಮೂರ್ಖ’ ಎಂದು ಹೇಳಿಕೊಳ್ಳಲಿಚ್ಛಿಸುವರು. ಅಲ್ಲಿಯೂ ಅವರು ಮೊದಲಿಗರಾಗಲು ಬಯಸುತ್ತಾರೆ! ಹೇಗಾದರೂ ಸರಿ, ಒಂದಲ್ಲ ಒಂದು ರೀತಿಯಲ್ಲಿ ಅವರು ಅತ್ಯುತ್ತಮರಾಗಲು ಬಯಸುತ್ತಾರೆ. ‘ನಾನು ಅತ್ಯಂತ ಬುದ್ಧಿವಂತನಾಗಲು ಇಚ್ಛಿಸುವೆನು ಅಥವಾ ನಾನು ಅತ್ಯಂತ ಮೂರ್ಖನಾಗಲು ಅಪೇಕ್ಷಿಸುವೆನು, ಆದರೆ ನಾನು ಮಧ್ಯದಲ್ಲಿ ಕಳೆದುಹೋಗಲು ಇಚ್ಛಿಸುವುದಿಲ್ಲ, ಹೇಗೋ ಅಂತೂ ವಿಶಿಷ್ಟವಾಗಿರಲು ಬಯಸುತ್ತೇನೆ’ ಎಂಬ ಕನವರಿಕೆ ಇಂಥವರದ್ದು. ಅಂತೆಯೇ ನೀವು ಅತ್ಯಂತ ಕರುಣಾಮಯರಾಗಲು ಅಪೇಕ್ಷಿಸುವಿರಿ.

ಸಂತೃಪ್ತರಾಗಿಸಿಕೊಳ್ಳುವ ಕುಟಿಲಮಾರ್ಗ: ತಾವೇ ಅತ್ಯಂತ ಕರುಣಾಮಯಿಗಳಾಬೇಕೆಂಬ ಬಯಕೆ ಜನರಲ್ಲಿರುವುದು ಒಂದು ಸಮಸ್ಯೆಯಾಗಿದೆ. ನಿಜವಾದ ಕರುಣೆಯು, ನೀಡುವುದು ತೆಗೆದುಕೊಳ್ಳುವುದರ ಕುರಿತಲ್ಲ; ಅದು ಕೇವಲ ಅಗತ್ಯವಾದುದನ್ನು ಮಾಡುವುದಷ್ಟೆ ಆಗಿದೆ. ನಮಗೆ ನಮ್ಮದೇ ಆದ ಆದ್ಯತೆಗಳಾವುವೂ ಇಲ್ಲದೆ, ಯಾವುದು ಅಗತ್ಯವಿದೆಯೋ ಅದನ್ನು ಸುಮ್ಮನೆ ನಿರ್ವಹಿಸುವುದೇ ಕರುಣೆಯಾಗಿದೆ. ನಮ್ಮನ್ನು ಅಧಿಕ ಪ್ರಮಾಣದ ಭಾವೋದ್ವೇಗಕ್ಕೆ ಒಳಪಡಿಸಿಕೊಂಡು ಯಾರಿಗೋ ನೆರವಾಗಲು ಮುಂದಾಗುವುದು ದಯೆ ಎನಿಸಿಕೊಳ್ಳುವುದಿಲ್ಲ; ಅದು ಕೇವಲ ನಮ್ಮ ಆತ್ಮತೃಪ್ತಿಯಾಗುತ್ತದೆ. ನಮ್ಮನ್ನು ಸಂತೃಪ್ತರಾಗಿಸಿಕೊಳ್ಳಲು ಕಂಡುಕೊಂಡಿರುವ ಕುಟಿಲಮಾರ್ಗ ಅದು.

ನಮ್ಮದೇ ಆದ ಉದ್ದೇಶ ಅಥವಾ ಆಸೆ ಪೂರೈಸಿಕೊಳ್ಳುವುದು ಏನೂ ಇಲ್ಲದಿದ್ದಲ್ಲಿ ಮಾತ್ರ ನಿಜವಾದ ಮತ್ತು ಅಪ್ಪಟವಾದ ಕರುಣೆಯು ಸಾಧ್ಯ. ಆಗ ನೀವು ಕೇವಲ ಅಗತ್ಯವಾದುದನ್ನು ಮಾತ್ರ ಮಾಡುತ್ತೀರಿ. ಆಳವಾದ ಭಾವೋದ್ವೇಗಕ್ಕೊಳಗಾಗಿ ಏನನ್ನಾದರೂ ಮಾಡಿದರೆ, ಅದು ಒಂದು ಅತ್ಯಂತ ಕರುಣೆಯ ಕ್ಷಣವೆಂದು ಸದಾ ಆಲೋಚಿಸುವಿರಿ, ಅದು ಹಾಗಲ್ಲ. ನೀವು ಕೇವಲ ಆತ್ಮಸಂತೃಪ್ತಿಯನ್ನು ಅರಸುತ್ತಿರುವಿರಿ. ನಾನು ಇದನ್ನು ಸರಿ ಅಥವಾ ತಪ್ಪು ಎಂದು ಹೇಳುತ್ತಿಲ್ಲ. ಇದು ನಿಮ್ಮೊಳಗಿನ ಯಾವುದೋ ನಿರ್ದಿಷ್ಟವಾದ ಕೊರತೆಯಿಂದ ಹೊರಹೊಮ್ಮಿದೆ ಎಂದಷ್ಟೇ ಹೇಳುತ್ತಿದ್ದೇನೆ.

ಬೇಡಿದರೆಂದು ನೀಡಬಾರದು: ಒಮ್ಮೆ, ಅತ್ಯಂತ ದಯಾಮಯನಾದ ಋಷಿಯೊಬ್ಬ ಜನರ ಅಗತ್ಯಗಳನ್ನೆಲ್ಲ ಯಾವುದೇ ವಿವೇಚನೆ ಇಲ್ಲದೆ ಪೂರೈಸುತ್ತಿದ್ದ. ತನ್ನ ತಪಶ್ಚರ್ಯದ ಸಾಮರ್ಥ್ಯದಿಂದ ಸಿದ್ಧಿಯನ್ನು ಪಡೆದು ಜನರ ಅಗತ್ಯಗಳನ್ನು ಪೂರೈಸುತ್ತಿದ್ದ. ಒಂದು ದಿನ ಶಿವನು ಅವನನ್ನು ಬರಮಾಡಿಕೊಂಡು ಹೀಗೆ ಬುದ್ಧಿ ಹೇಳಿದ: ‘ನೋಡು, ಇದು ಸರಿಯಲ್ಲ. ಈ ರೀತಿ ದಾನ ಮತ್ತು ವರಗಳನ್ನು ಜನರಿಗೆ ನೀಡುತ್ತಿದ್ದರೆ ಅವು ನಿನಗೆ ಒಳಿತನ್ನುಂಟುಮಾಡುವುದಿಲ್ಲ, ಜನರಿಗೂ ಒಳ್ಳೆಯದಲ್ಲ. ಇದು ನಿನಗೆ ಹೆಚ್ಚು ವಿಪತ್ತನ್ನು ತರಬಹುದು. ಉಪಕಾರ ಪಡೆದವರಿಗೂ ಹೆಚ್ಚು ಕಷ್ಟಗಳನ್ನು ಉಂಟುಮಾಡಬಹುದು ಅಥವಾ ನಿಮ್ಮೀರ್ವರನ್ನೂ ಸಂಕಷ್ಟಕ್ಕೀಡುಮಾಡಬಹುದು. ಆದ್ದರಿಂದ ಈ ವರಗಳನ್ನು ನೀಡುವುದನ್ನು ನಿಲ್ಲಿಸು. ಜನರು ಬಂದು ಬೇಡಲಿ ಪರವಾಗಿಲ್ಲ, ಆದರೆ ನೀನು ನೀಡಬೇಕಾಗಿಲ್ಲ’.

ಅಲ್ಲಿಯೇ ಆಸೀನಳಾಗಿದ್ದ ಪಾರ್ವತಿ ದೇವಿಯು ಶಿವನನ್ನು ಕುರಿತು, ‘ಪ್ರಭು, ಇದು ಹೇಗೆ ಸಾಧ್ಯ? ಈ ಪ್ರಪಂಚದಲ್ಲಿ ಕೆಲವೇ ಜನರು ಏನನ್ನಾದರು ನೀಡಲು ಮನಸ್ಸುಳ್ಳವರಾಗಿರುತ್ತಾರೆ. ಆದರೆ ನೀನು ಆ ಸ್ವಲ್ಪ ಜನರನ್ನೂ ಕೊಡದಂತೆ ನಿರ್ಬಂಧಪಡಿಸುತ್ತಿರುವೆ. ಇದರ ಅರ್ಥವೇನು? ನೀಡುವ ಮನಸ್ಸುಳ್ಳವರನ್ನು ನೀಡಲು ಬಿಡು. ಇದು ಸರಿಯಲ್ಲ’ ಎಂದು ಕೇಳಿದಳು.

ಅದಕ್ಕೆ ಶಿವನು ಹೀಗೆ ಉತ್ತರಿಸುತ್ತಾನೆ- ನೋಡು, ಇದು ಜನರನ್ನು ಯಾವುದರಿಂದಲೂ ವಂಚಿತಗೊಳಿಸುವುದಕ್ಕಾಗಿ ಅಲ್ಲ. ಇದು ಸ್ವೀಕರಿಸುವುದರಿಂದ ಜಗತ್ತನ್ನು ತಡೆಯುವುದೂ ಅಲ್ಲ. ಏನನ್ನಾದರೂ ನೀಡುವುದರಿಂದ ಸಿಗುವ ಸಂತೋಷದಿಂದ ನೀಡುವವರನ್ನು ವಂಚಿಸುವ ಪ್ರಯತ್ನವೂ ಅಲ್ಲ. ಜೀವನದ ಸಮೃದ್ಧತೆಯನ್ನು ಸ್ವಾಭಾವಿಕವಾಗಿ ಸ್ವೀಕರಿಸಲು ಜನರು ಪಕ್ವವಾಗುವುದಕ್ಕೆ ನೆರವಾಗುವ ಬದಲು, ಅಪಕ್ವನಾದ ವ್ಯಕ್ತಿಗೆ ಏನನ್ನಾದರೂ ನೀಡಿದರೆ ಅದು ಅವನಿಗೆ ಹೊರಲಾಗದ ಹೊರೆಯಾಗುತ್ತದೆ. ಇದರಿಂದ ಅವನ ಜೀವನವನ್ನು ನಾಶಪಡಿಸಿದಂತಾಗುತ್ತದೆ….

ವ್ಯಕ್ತಿಯ ಪರಮೋತ್ಕೃಷ್ಟ ಒಳಿತನ್ನು ಬಯಸುವುದಾದರೆ, ಅವನು ಉನ್ನತ ಸಾಧನೆಯತ್ತ ಕ್ರಮಬದ್ಧವಾಗಿ ಬೆಳೆಯುವ ಕಠಿಣ ಪರಿಶ್ರಮದ ಪ್ರಕ್ರಿಯೆಯಲ್ಲಿ ತೊಡಗಲು ಅನುವು ಮಾಡಿಕೊಡಬೇಕು. ಆಗ ಜೀವನದ ಉನ್ನತ ಆಯಾಮಗಳು ತಾವಾಗಿಯೇ ಸಂಭವಿಸುತ್ತವೆ. ಏಕೆಂದರೆ, ಅವನು ಅದಕ್ಕೆ ಅರ್ಹನಾಗಿರುತ್ತಾನೆ. ಒಂದು ಇರುವೆಗೆ ಒಂದು ಟನ್ನಷ್ಟು ಚಿನ್ನವನ್ನು ನೀಡಿದರೆ, ಅದು ಇರುವೆಯನ್ನು ನುಚ್ಚುನೂರು ಮಾಡುವುದಷ್ಟೇ ಹೊರತು, ಇರುವೆಯನ್ನು ಶ್ರೀಮಂತಗೊಳಿಸುವುದಿಲ್ಲ. ಆದ್ದರಿಂದ ಏನನ್ನು ನೀಡುವಿರಿ, ಯಾವ ರೀತಿಯಲ್ಲಿ ನೀಡುವಿರಿ ಎಂಬುದು ಬಹುಮುಖ್ಯ. ಯಾರೋ ಬೇಡಿದರೆಂದು ನೀವು ನೀಡಲೇಬೇಕು ಎಂದೇನಿಲ್ಲ.

ಓರ್ವ ಪುಣ್ಯಪುರುಷನನ್ನೋ, ಸಾಧುವನ್ನೋ ಅಥವಾ ಸಂತನನ್ನೋ ಕಂಡಾಗ, ನಿಮಗೆ ಏನು ಬೇಕೋ ಅದನ್ನು ಬೇಡಿದರೆ, ಅದು ಈಡೇರುವುದು ಎಂಬಂತಹ ಸಂಪ್ರದಾಯವನ್ನು ಹುಟ್ಟುಹಾಕಲಾಗಿದೆ. ನಾನು ಹೇಳುವುದಾದರೆ, ನೀವು ಎಂದಿಗೂ ಬೇಡಬಾರದು. ಕಾರಣ- ಕೊಡುವವನು ಬುದ್ಧಿವಂತನಾದರೆ ನಿಮಗೆ ನೀಡುವುದಿಲ್ಲ. ಆದರೆ ಕೆಲವು ಪರಿಸ್ಥಿತಿಯಲ್ಲಿ ಅವನು ‘ಅಸ್ತು’ ಎಂದರೆ ನೀವು ಸಂಕಷ್ಟಕ್ಕೊಳಗಾಗುವಿರಿ. ಏಕೆಂದರೆ, ನೀವು ಯಾವುದಕ್ಕೆ ಸಿದ್ಧರಾಗಿರುವುದಿಲ್ಲವೋ ಅದನ್ನು ಪಡೆಯುವಿರಿ. ಹಾಗೆ ಪಡೆಯುವುದರಿಂದ ಬದುಕು ಉತ್ತಮಗೊಳ್ಳುವುದರ ಬದಲು ಅನೇಕ ರೀತಿಯ ತೊಳಲಾಟದಲ್ಲಿ ಸಿಕ್ಕಿಹಾಕಿಕೊಳ್ಳುವುದು.

ಒಂದು ನಿಶ್ಚಿತ ಸ್ಥಳದಲ್ಲಿ ಕುಳಿತಾಗ, ಒಂದು ನಿರ್ದಿಷ್ಟ ಚೈತನ್ಯದ ಪ್ರಭಾವಕ್ಕೊಳಗಾದಾಗ, ಯಾವುದೋ ಒಬ್ಬ ನಿರ್ದಿಷ್ಟ ವ್ಯಕ್ತಿ ಅಥವಾ ಸ್ಥಳವು ಒಂದು ನಿಶ್ಚಿತ ಚೈತನ್ಯವನ್ನು ಸೃಷ್ಟಿಸುತ್ತಿರುವುದು ನಿಮ್ಮ ಗಮನಕ್ಕೆ ಬರಬಹುದು. ಆ ಸನ್ನಿವೇಶದಲ್ಲಿ ನೀವು ಈಗ ಇರುವುದಕ್ಕೆ ಹೋಲಿಸಿದರೆ ಇನ್ನೂ ಹೆಚ್ಚಿನ ಸಾಧ್ಯತೆ ಪಡೆಯುವ ಒಂದು ಅವಕಾಶ ಎಂದೆನಿಸುತ್ತದೆ. ಅಂತಹ ಸಮಯದಲ್ಲಿ ಯಾವುದರ ಬಗ್ಗೆಯೂ ಚಿಂತಿಸಬಾರದು, ಏನನ್ನೂ ಬೇಡಬಾರದು, ಸುಮ್ಮನೆ ಕುಳಿತುಕೊಳ್ಳಬೇಕು. ಆದರೆ ಪಾರ್ವತಿಗೆ ಸಮಾಧಾನವಾಗಲಿಲ್ಲ. ಶಿವ ನಕ್ಕು ಹೇಳಿದ, ‘ಸರಿ ನಾನೊಂದು ಕತೆಯನ್ನು ಹೇಳುತ್ತೇನೆ’ ಎಂದ, ಅದೇನು ಕತೆ, ಮುಂದಿನ ವಾರ ನೋಡೋಣ…

ನಿಜವಾದ ಕರುಣೆಯು, ನೀಡುವುದು ತೆಗೆದುಕೊಳ್ಳುವುದರ ಕುರಿತಲ್ಲ; ಕೇವಲ ಅಗತ್ಯವಾದುದನ್ನು ಮಾಡುವುದಷ್ಟೆ ಆಗಿದೆ.

-ಸದ್ಗುರು

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

(ಸದ್ಗುರುಗಳ ಇತರ ಪುಸ್ತಕ/ವಿವರಗಳಿಗಾಗಿ ಸಂರ್ಪಸಿ- [email protected])

Leave a Reply

Your email address will not be published. Required fields are marked *