ವಿಜಯಪುರ: ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ವಿಜಯಪುರ ಜಿಲ್ಲಾ ಆಸ್ಪತ್ರೆ ವೈದ್ಯರು ಅವಧಿ ಪೂರ್ವದಲ್ಲಿಯೇ ಜನಿಸಿದ, ಕೇವಲ 575 ಗ್ರಾಂ. ತೂಕದ ನವಜಾತ ಹೆಣ್ಣು ಶಿಶುವಿಗೆ ಕಳೆದ ಹತ್ತು ದಿನಗಳಿಂದ ನವಜಾತ ಶಿಶು ಆರೋಗ್ಯ ನಿಗಾ ಘಟಕ (ಎಸ್‌ಎನ್‌ಸಿಯು)ದಲ್ಲಿ ಚಿಕಿತ್ಸೆ ನೀಡುತ್ತಿದ್ದು, ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದೆ.
ಸಾಮಾನ್ಯವಾಗಿ ಇಷ್ಟು ಕಡಿಮೆ ತೂಕದ ನವಜಾತ ಶಿಶುಗಳು ಬದುಕುಳಿಯುವುದು ಕಷ್ಟ. ಆದರೆ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶು ಆರೈಕೆ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ನೀಡಿ ಜೀವವುಳಿಸಲು ಯತ್ನಿಸುತ್ತಿರುವುದು ಪಾಲಕರಲ್ಲಿ ಭರವಸೆ ಮೂಡಿದೆ.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದ ಬಸಮ್ಮ-ಮಾಂತೇಶ ನಾಯ್ಕೋಡಿ ದಂಪತಿ ಜೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಬಸಮ್ಮಗೆ ಏಳನೇ ತಿಂಗಳು ನಡೆಯುತ್ತಿದ್ದಾಗಲೇ ಜೂನ್ 15ರಂದು ಬೆಳಗ್ಗೆ 5-00ರ ಸುಮಾರಿಗೆ ಮನೆಯಲ್ಲಿಯೇ ಹೆರಿಗೆಯಾಯಿತು. ಮಗುವಿನ ಪೂರ್ಣ ಬೆಳವಣಿಗೆಯಾಗಿದ್ದರೂ ಕೇವಲ 575 ಗ್ರಾಂ. ತೂಗುತ್ತಿತ್ತು. ತಕ್ಷಣವೇ ತಾಯಿ-ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದರು.
ಜಿಲ್ಲಾಸ್ಪತ್ರೆಯ ನವಜಾತ ಶಿಶು ವೈದ್ಯರು ಮಗುವಿನ ಆರೋಗ್ಯ ಪರೀಕ್ಷಿಸಿ, ಪಾಲಕರಿಗೆ ಪರಿಸ್ಥಿತಿ ವಿವರಿಸಿ ತಮ್ಮ ಕೈಲಾದ ಚಿಕಿತ್ಸೆ ನೀಡುವ ಭರವಸೆ ನೀಡಿದರು. ದೇವರ ದಯೆಯಿಂದ ಮಗು ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ.
ಸಾಮಾನ್ಯವಾಗಿ ಅತೀ ಕಡಿಮೆ ತೂಕದ ಮಕ್ಕಳು ಬದುಕುಳಿಯುವ ಸಾಧ್ಯತೆ ಕಡಿಮೆ. ಒಂದೆರೆಡು ದಿನದಲ್ಲೇ ಸಾವನ್ನಪ್ಪುತ್ತವೆ. ನಾವೂ ಇದನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲಾಸ್ಪತ್ರೆಯಲ್ಲಿ ಇರುವ ಎಲ್ಲಾ ಸೌಲಭ್ಯ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಮುಂದೆ ನೋಡಬೇಕು ಎಂದು ನವಜಾತ ಶಿಶು ತಜ್ಞೆ ಡಾ. ಲಕ್ಷ್ಮೀ ಹಡಲಗಿ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಮುದ್ದೇಬಿಹಾಳ ತಾಲೂಕಿನ ಭಂಟನೂರದ ದಂಪತಿಗೆ ಜನಿಸಿದ ಮಗು ಹುಟ್ಟಿದಾಗ 800 ಗ್ರಾಂ ಇತ್ತು. ಅದಕ್ಕೂ ಸೂಕ್ತ ಚಿಕಿತ್ಸೆ ನೀಡಿ ಬದುಕಿಸಲಾಗಿತು. ಈಗ ಈ ಮಗುವಿನ ತೂಕ ತೀರಾ ಕಡಿಮೆ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಚಿಲ್ಲಾ ಶಸ್ತ್ರ ಚಿಕಿತ್ಸರಾದ ಡಾ. ಶರಣಪ್ಪ ಕಟ್ಟಿ ಹೇಳಿದ್ದಾರೆ.
ವಿಜಯಪುರ ಜಿಲ್ಲಾಸ್ಪತ್ರೆಯ ನವಜಾತ ಶಿಶು ಆರೋಗ್ಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಶು, ನವಜಾತ ಶಿಶು ವೈದ್ಯೆ ಡಾ. ಲಕ್ಷ್ಮಿ ಹಡಲಗಿ, ಮೇಲ್ವಿಚಾರಕ ರಮೇಶ ರಾಠೋಡ ಹಾಗೂ ಸಿಬ್ಬಂದಿಯ ನಿರಂತರ ಆರೈಕೆಯಿಂದ ಮಗು ಚೇತರಿಸಿಕೊಳ್ಳುತ್ತಿದೆ.