ಅರ್ಥಪೂರ್ಣ ಬದುಕಿನಿಂದ ಸಮಾನತೆ

ಗಜೇಂದ್ರಗಡ: ಸಮಾಜ ಹಾಗೂ ಕೌಟಂಬಿಕ ವ್ಯವಸ್ಥೆಯಲ್ಲಿ ಸಮನ್ವಯದಿಂದ ಅರ್ಥಪೂರ್ಣ ಬದುಕು ನಡೆಸಿದಾಗ ಮಾತ್ರ ಮಹಿಳೆ ಸಮಾನತೆ ಕಂಡುಕೊಳ್ಳಲು ಸಾಧ್ಯ ಎಂದು ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
ಪಟ್ಟಣದ ರೋಣ ರಸ್ತೆಯ ಜಿ.ಕೆ. ಬಂಡಿ ಗಾರ್ಡನ್​ನಲ್ಲಿ ಸ್ಥಳೀಯ ವಿವಿಧ ಮಹಿಳಾ ಸಂಘಗಳ ಆಶ್ರಯದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮಹಿಳೆ ತನ್ನ ಕುಟುಂಬ ನಿರ್ವಹಣೆಯ ಜೊತೆಗೆ ಮನೆಯ ಸದಸ್ಯರಿಗೆ ಸರಿ ತಪ್ಪುಗಳ ಅರಿವು ನೀಡುವ ಮೂಲಕ ಸಮಾಜವನ್ನು ಸರಿ ದಾರಿಯತ್ತ ಸಾಗಿಸಲು ತನ್ನದೆಯಾದ ಕೊಡುಗೆ ನೀಡುತ್ತಿದ್ದಾಳೆ ಎಂದರು.
ಮಂಜುಳಾ ರೇವಡಿ ಹಾಗೂ ಡಾ.ರೇಷ್ಮಾ ಕೋಲಕಾರ ಮಾತನಾಡಿ, ಹೆಣ್ಣು ಮಗು ಜನಿಸಿದರೆ ಇಂದಿಗೂ ಕೆಲವರಲ್ಲಿ ಕುಟುಂಬಕ್ಕೆ ಹೊರೆ ಎಂಬ ಭಾವನೆಯಿದೆ. ಉದ್ಯೋಗ ಮಾಡುವ ಕೆಲ ಮಹಿಳೆಯರಿಗೆ ಕಿರುಕುಳ, ಅವಮಾನ ಹಾಗೂ ಅಪಮಾನಗಳಿಂದ ಮಹಿಳೆ ಬಳಲಿದ ಹಲವಾರು ವರದಿಗಳಿವೆ. ಹೀಗಾಗಿ ನಾಗರಿಕ ಸಮಾಜವೆಂದರೆ ಕೇವಲ ಪುರುಷ ಪ್ರಧಾನವಲ್ಲ. ಬದಲಾಗಿ ಸ್ತ್ರೀಯರನ್ನೊಳ್ಳಗೊಂಡ ಸಂವೇದನಾಶೀಲ ಸಮಾಜವಾಗಿದೆ ಎಂದರು.
ಪುರಸಭೆ ಸದಸ್ಯರಾದ ಸುಜಾತಾಬಾಯಿ ಶಿಂಗ್ರಿ, ಉಮಾ ಮ್ಯಾಕಲ, ಕೌಸರಬಾನು ಹುನಗುಂದ ಹಾಗೂ ಸುವರ್ಣಾ ನಂದಿಹಾಳ, ವಿದ್ಯಾ ಬಂಡಿ, ಅನಸೂಯಾ ವಾಲಿ, ಗೀತಾ ಕಂಬಳ್ಯಾಳ, ಅಕ್ಕಮಹಾದೇವಿ ಕೇಣೆದ, ಮಂಜುಳಾ ಕೋರಧಾನ್ಯಮಠ, ವಿಜಯಲಕ್ಷ್ಮಿ ಚೆಟ್ಟರ, ಶರಣಮ್ಮ ಅಂಗಡಿ, ಸುಜಾತಾ ಮುದಗಲ್, ಶಾಂತಾ ಆರೇರ, ವಿಜಯಲಕ್ಷ್ಮಿ ಕೋಟಿ, ಸುಮಿತ್ರಾ ತೊಂಡಿಹಾಳ, ಬಿ.ಟಿ. ಹೊಸಮನಿ, ಗೀತಾ ಗಾಣಿಗೇರ ಇದ್ದರು.