ಅರೆಬೆಂದ ಆಂಗ್ಲ ಶಿಕ್ಷಣ ಮಕ್ಕಳಿಗೆ ರುಚಿಸದು

ಧಾರವಾಡ: ಮಾತೃಭಾಷೆಯ ಶಿಕ್ಷಣ ಮಕ್ಕಳ ಗೃಹಿಕ ಶಕ್ತಿ ಹೆಚ್ಚಿಸುವ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ. ಇದಕ್ಕೆ ವಿರುದ್ಧವಾಗಿ ದೇಶದ ಒಟ್ಟು ಜನಸಂಖ್ಯೆಯ ಶೇ. 2 ರಷ್ಟು ಮಂದಿ ಮಾತ್ರ ಸಂಭಾಷಣೆ ಮಾಡುವ ಆಂಗ್ಲ ಮಾಧ್ಯಮ ಶಿಕ್ಷಣ ನಮ್ಮ ಮಕ್ಕಳ ಪಾಲಿಗೆ ಅರೆಬೆಂದ ಅನ್ನವಾಗಿದ್ದು, ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಯನ್ನಾಗಿ ಮಾರ್ಪಡಿಸುವುದರಿಂದ ಶಾಲೆ ತೊರೆಯುವ ಮಕ್ಕಳ ಸಂಖ್ಯೆ ಹೆಚ್ಚಲಿದೆ ಎಂಬ ಆತಂಕ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಪ್ರಥಮ ಗೋಷ್ಠಿಯಲ್ಲಿ ವ್ಯಕ್ತವಾಯಿತು.

ಅಂಬಿಕಾತನಯದತ್ತ ವೇದಿಕೆಯಲ್ಲಿ ಪೊ›.ಜಿ.ಎಸ್. ಜಯದೇವ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಶಾಲೆಗಳ ಅಳಿವು-ಉಳಿವು ಗೋಷ್ಠಿ ಆರಂಭದಲ್ಲಿ ಪ್ರೇಕ್ಷಕರ ಅಭಾವ ಎದುರಿಸಿದರೂ ಬಳಿಕ ಸಾಹಿತ್ಯಾಸಕ್ತರು ವೇದಿಕೆಯೆಡೆ ಮುಖ ಮಾಡಿದರು. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಳೆಗಳ ಉಳಿವಿನ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಗೋಷ್ಠಿ ಗಂಭೀರತೆಯನ್ನು ಪಡೆದುಕೊಂಡಿತ್ತು.

ಸರ್ಕಾರಗಳಿಗೆ ಇಚ್ಛಾಶಕ್ತಿ ಕೊರತೆ ಇರುವುದೇ ಕನ್ನಡ ಮಾಧ್ಯಮ ಶಾಲೆಗಳು ಮಂಕಾಗಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಸರ್ಕಾರ ಸಾವಿರ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಮುಂಬರುವ ಶೈಕ್ಷಣಿಕ ವರ್ಷದಿಂದ ಪರಿರ್ವತನೆ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಬದಲಾಗಿ ಒಂದು ವಿಷಯವಾಗಿ ಬೋಧನೆ ಮಾಡುವುದು ಒಳಿತು. ಅದೇ ರೀತಿ, ಶತಮಾನೋತ್ಸವ ಪೂರೈಸಿದ ಶಾಲೆಗಳಿಗೆ ಮೂಲಸೌಕರ್ಯ ಸಮಸ್ಯೆ ಎದುರಾಗಿದೆ. ಈ ವಿಚಾರವಾಗಿ ಹಿಂದೆ ಜಿ.ಎಸ್. ಶಿವರುದ್ರಪ್ಪ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿ, ಶಾಲೆಗಳನ್ನು ಸಮಗ್ರ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿಕೊಂಡಿದ್ದರೂ. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ. ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಜಾರಿ ಮಾಡುವ ಜತೆಗೆ ಶಾಲೆಗಳ ವಿಲೀನ ನಿರ್ಧಾರವನ್ನು ತಡೆ ಹಿಡಿದಿರುವುದಾಗಿ ಘೊಷಣೆ ಮಾಡಬೇಕೆಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು.

ಆಂಗ್ಲ ಭಾಷೆಯ ಹುಚ್ಚು ವ್ಯಾಮೋಹ ಬೇಡ

ಪೋಷಕರಿಗೆ ಆಂಗ್ಲ ಭಾಷೆಯಲ್ಲಿ ಮಕ್ಕಳು ಕಲಿತರೆ ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂಬ ತಪ್ಪು ಕಲ್ಪನೆಯಿದೆ. ಇದಕ್ಕೆ ಪೂರಕ ಎಂಬಂತೆ ನಮ್ಮ ಸರ್ಕಾರಗಳು ನಡೆದುಕೊಳ್ಳುತ್ತಿರುವುದು ವಿಪರ್ಯಾಸ. ದೇಶದ ಶೇ. 44 ಜನಸಂಖ್ಯೆ ಮಕ್ಕಳಿಂದ ಆವೃತವಾಗಿದೆ. ಆದರೆ, ಆಯವ್ಯಯದಲ್ಲಿ ಮಕ್ಕಳ ಕಲ್ಯಾಣಕ್ಕೆ ಶೇ. 4 ಅನುದಾನ ಇಡಲಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆ ಹೆಚ್ಚಿದಂತೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಏರುತ್ತಿರುವುದನ್ನು ಗಮನಿಸಬೇಕು. ಅಧ್ಯಯನದ ಪ್ರಕಾರ ಒಂದು ಶಾಲೆಗೆ 100 ಮಕ್ಕಳು ಸೇರಿದರೆ ಎಸ್ಸೆಸ್ಸೆಲ್ಸಿ ವೇಳೆಗೆ 300ಕ್ಕೆ ಇಳಿಕೆಯಾಗಿರುತ್ತದೆ. ಅದೇ ರೀತಿ, ಪಿಯುಸಿ ವೇಳೆಗೆ ಈ ಸಂಖ್ಯೆ 15 ಆಗಲಿದ್ದು, ಇದರಲ್ಲಿ 3 ವಿದ್ಯಾರ್ಥಿಗಳು ಮಾತ್ರ ವಿಜ್ಞಾನ ಆಯ್ಕೆ ಮಾಡುಕೊಳ್ಳುತ್ತಿದ್ದಾರೆ. ಹೀಗಾಗಿ ಆಂಗ್ಲ ಭಾಷೆ ನಮಗೆ ಅನಿವಾರ್ಯವಲ್ಲ. ಇನ್ನು ರಾಜ್ಯದ ಸರ್ಕಾರಿ ಶಾಲೆಯಲ್ಲಿ ಶೇ. 25 ಶಿಕ್ಷಕರ ಗೈರು, ಶೇ. 56 ಶಿಕ್ಷಕರು ಹಾಜರಾಗಿಯೂ ಪಾಠ ಮಾಡದಿರುವುದು ಹಾಗೂ ಮೂಲಸೌಕರ್ಯದ ಕೊರತೆಯಿಂದ ಪಾಲಕರು ಸರ್ಕಾರಿ ಶಾಲೆ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ, ಸಮಾನ ಶಿಕ್ಷಣ ಹಕ್ಕು ಕಾಯ್ದೆಯೂ ನಮ್ಮ ಶಾಲೆಗಳಿಗೆ ಕಂಠಕವಾಗಿದೆ ಎಂದು ಗೋಷ್ಠಿಯ ಅಧ್ಯಕ್ಷ ಪೊ›.ಎಸ್. ಜಯದೇವ ಅಭಿಪ್ರಾಯ ವ್ಯಕ್ತಪಡಿಸಿದರು.

ಆರ್​ಟಿಇ ಸರ್ಕಾರಿ ಶಾಲೆಗೆ ಶಾಪ

ಸರ್ಕಾರಿ ಶಾಲೆಗಳು ಮತ್ತು ಆರ್​ಟಿಇ ಪ್ರಲೋಭನೆ ಬಗ್ಗೆ ನಾಗರತ್ನ ಬಂಜಗೆರೆ ವಿಷಯ ಮಂಡಿಸಿದರು. ಎಲ್ಲ ವರ್ಗದ ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಗುಣಾತ್ಮಕ ಶಿಕ್ಷಣದ ಖಾತರಿ ನೀಡುವ ಆರ್​ಟಿಇ ಕಾಯ್ದೆಯನ್ನು ರಾಜ್ಯದಲ್ಲಿಯೂ ಆರಂಭಿಸಲಾಯಿತು. ಇದರಡಿ ಪ್ರತಿವರ್ಷ ಶೇ. 25 ಮಕ್ಕಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವ ಭ್ರಮೆಯನ್ನು ಸೃಷ್ಟಿಸಿದ್ದು, ಆರ್​ಟಿಇ ಪೋಷಕರನ್ನು ಸುಲಿಗೆ ಮಾಡಲು ದಾರಿ ಮಾಡಿಕೊಟ್ಟಂತಾಗಿದೆ. ಅಷ್ಟೇ ಅಲ್ಲ, ನಕಲಿ ದಾಖಲಾತಿ ಸೃಷ್ಟಿಸಿ ಆರ್​ಟಿಇ ಅಡಿ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. 2015ರಿಂದ 17ರ ಅವಧಿಯಲ್ಲಿ 1600 ಖಾಸಗಿ ಶಾಲೆ ಆರಂಭವಾಗಿದೆ. ಆದರೆ, ಇದೇ ಅವಧಿಯಲ್ಲಿ ರಾಜ್ಯದಲ್ಲಿ 900 ಸರ್ಕಾರಿ ಶಾಲೆ ಮುಚ್ಚಲ್ಪಟ್ಟಿದೆ. ಈ ನಡುವೆ ಸರ್ಕಾರ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚುವ ಸಂಚು ಮಾಡುತ್ತಿದೆ. ಇನ್ನು 8ನೇ ತರಗತಿ ಬಳಿಕ ನಮ್ಮ ಮಕ್ಕಳಿಗೆ ಶಿಕ್ಷಣದ ಖಾತ್ರಿಯಿಲ್ಲದ ಪರಿಣಾಮ ಅರೆಕುಶಲರ ಸಂಖ್ಯೆ ಅಧಿಕವಾಗುತ್ತಿದೆ. ಇದೀಗ ರಾಜ್ಯದಲ್ಲಿ ಆರ್​ಟಿ ಕಾಯ್ದೆ 2019ರಲ್ಲಿ ಅಂತ್ಯವಾಗಲಿದ್ದು, ಖಾಸಗಿ ಶಾಲೆ ಅವಲಂಬಿತ ವಿದ್ಯಾರ್ಥಿಗಳು ಬೀದಿ ಪಾಲಾಗುವ ಸಾಧ್ಯತೆಯಿದೆ ಎಂದು ನಾಗರತ್ನ ಬಂಜಗೆರೆ ಆತಂಕ ವ್ಯಕ್ತಪಡಿಸಿದರು.

ಉರ್ದು ಭಾಷಿಕರ ಕನ್ನಡ ಪ್ರೇಮ

ಅಬ್ದುಲ್ ರೆಹಮಾನ್ ಪಾಷ ಕನ್ನಡ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳು ವಿಷಯದ ಮೇಳೆ ಬೆಳಕು ಚೆಲ್ಲಿದರು. ಮಾತೃಭಾಷೆ ಉರ್ದುವಾದರೂ ಕನ್ನದ ಮಾಧ್ಯಮ ಶಾಲೆಯಲ್ಲಿ ಓದಿದೆ. ಅದೇ ರೀತಿ, ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಓದಿಸಿದೆ. ನಾನು ಇಚ್ಛಿಸಿದರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಓದಿಸಬಹುದಾಗಿತ್ತು. ಆದರೆ, ಕನ್ನಡ ಮಾಧ್ಯಮದ ಶಿಕ್ಷಣವೇ ಉತ್ತಮ ಆಯ್ಕೆ ಎನ್ನುವುದು ನನ್ನ ಅರಿವಿನಲ್ಲಿತ್ತು. ಪ್ರತಿ ಪೋಷಕರು ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪೋಷಕರ ಮನವೊಲಿಸಬೇಕಾಗಿದೆ. ಇನ್ನು ಪ್ರಾಥಮಿಕ ಶಾಲೆಯಲ್ಲಿ ಮಾತೃಭಾಷೆ ಆಯ್ಕೆ ಮಾಡಿಕೊಳ್ಳಬೇಕು ಎಂದಾಗ ಹಲವು ಭಾಷೆಗಳು ಸ್ಥಳೀಯವಾಗಿ ಬರುತ್ತವೆ. ಕೆಲವು ಜಾತಿ, ಧರ್ಮಗಳಲ್ಲಿನ ಸ್ಥಾಪಿತ ಪಟ್ಟಬದ್ಧ ಹಿತಾಸಕ್ತಿಗಳು ನಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬ ಒತ್ತಾಯ ಮಾಡುವ ಸಾಧ್ಯತೆ ಕೂಡ ಇರುತ್ತದೆ ಎಂದು ಹೇಳಿದರು.

ಕಸಾಪ ನಡೆಗೆ ಅಸಮಧಾನ

ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ, ಅದನ್ನು ಪೋಷಿಸಬೇಕೆಂಬ ಪ್ರಸ್ತಾಪ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಮುಂದಿದೆ. ಆದರೆ, ಈವರೆಗೂ ಕಸಾಪ ಅದನ್ನು ಸಾಧ್ಯಮಾಡದಿರುವುದು ವಿಪರ್ಯಾಸ ಎಂದು ಪೊ›.ಜಿ.ಎಸ್. ಜಯದೇವ ಅಸಮಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಇನ್ನಾದರೂ ನಾಡು-ನುಡಿಯ ಹಿತದೃಷ್ಟಿಯಿಂದ ಶಾಲೆಗಳ ವಿಚಾರವಾಗಿ ನಡೆದುಕೊಳ್ಳಬೇಕೆಂದು ಕಿವಿಮಾತನ್ನು ಹೇಳಿದರು.

ಸಿಎಂ ಕುಮಾರಸ್ವಾಮಿ ಹಳೆಯ ಹೇಳಿಕೆಗೆ ಟೀಕೆ

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ಪೊ›. ಜಿ.ಎಸ್. ಜಯದೇವ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು. ಈಗ ಸಾವಿರ ಸರಕಾರಿ ಶಾಲೆ ತೆರೆಯುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಹಿಂದೊಮ್ಮೆ ಮುಖ್ಯಮಂತ್ರಿಯಾಗಿರುವ ನನಗೆ ಇಂಗ್ಲಿಷ್​ನಲ್ಲಿ ಮಾತನಾಡಲು ಬರುತ್ತಿಲ್ಲ. ಇದು ನನಗೆ ನಾಚಿಕೆ ಆಗುತ್ತೆ. ಆದರೆ, ಜನಸಾಮಾನ್ಯರ ಗತಿ ಏನಾಗಿರಬೇಡ ಅಂದಿದ್ದರು. ಆದರೆ, ಇಂಗ್ಲೀಷ್ ಬರದಿದ್ದಕ್ಕೆ ಕುಮಾರಸ್ವಾಮಿ ಏಕೆ ನಾಚಿಕೆ ಪಡಬೇಕು. ಕನ್ನಡ ಬರದಿದ್ದರೆ, ಕನ್ನಡ ಎತ್ತಿ ಹಿಡಿಯದೇ ಹೋದರೆ ನಾಚಿಕೆ ಪಡಬೇಕು ಹೊರತು, ಇಂಗ್ಲೀಷ್ ಬಾರದಕ್ಕೆ ಅಲ್ಲ. ಇಂಗ್ಲೀಷ್ ಭಾಷೆಯೇ ಗೊತ್ತಿಲ್ಲದ ಅನೇಕ ಖ್ಯಾತ ಮುಖ್ಯಮಂತ್ರಿಗಳು ತಲೆ ಎತ್ತಿ ನಿಂತಿದ್ದಾರೆ. ಕರುಣಾನಿಧಿಯವರು ಇದಕ್ಕೆ ಉದಾಹರಣೆ. ಹೀಗಿರುವಾಗ ಇವರೇಕೆ ಇಂಗ್ಲಿಷ್ ಬರೋದಿಲ್ಲ ಅಂತಾ ನಾಚಿಕೆ ಪಡಬೇಕು ಅಂತಾ ಸಿಎಂ ಕುಮಾರಸ್ವಾಮಿ ಹಳೆಯ ಹೇಳಿಕೆ ಟೀಕಿಸಿದರು.

ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ, ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ್ ಮತ್ತಿತರರು ಉಪಸ್ಥಿತರಿದ್ದರು.

ಸರ್ಕಾರ ರೈತರ ಸಾಲಮನ್ನಾಕ್ಕೆ 45 ಸಾವಿರ ಕೋಟಿ ರೂ. ಮೀಸಲಿಡುತ್ತದೆ. ಅದೇ ರೀತಿ, 12 ಸಾವಿರ ಕೋಟಿ ರೂ. ಸರ್ಕಾರಿ ಶಾಲೆಗಳಿಗೆ ಮೀಸಲಿಟ್ಟರೆ ಸಮಗ್ರ ಅಭಿವೃದ್ಧಿ ಸಾಧ್ಯ. ಶಿಕ್ಷಕರ ಕೊರತೆ ನೀಗಿಸಿ, ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿದರೆ ಖಾಸಗಿ ಶಾಲೆಗೆ ತೆರಳುತ್ತಿರುವ ಮಕ್ಕಳು ಸಹ ಸರ್ಕಾರಿ ಶಾಲೆಗಳೆಡೆ ಮುಖ ಮಾಡುತ್ತಾರೆ.

| ಸಿದ್ಧರಾಮ ಮನಹಳ್ಳಿ, ವಿಷಯ ತಜ್ಞ