ಅರುಣ ರಾಗಕ್ಕೆ ತಲೆದೂಗಿದ ರಿಯಾಲ್ಟಿ

| ಅಭಿಷೇಕ ಡಿ ಪುಂಡಿತ್ತೂರು ಬೆಂಗಳೂರು

ಕೈಗೆಟುಕುವ ಮನೆ ಯೋಜನೆಯನ್ನು ಮತ್ತಷ್ಟು ಆಕರ್ಷಕವಾಗಿಸುವುದೂ ಸೇರಿ ಅನೇಕ ಕ್ರಮಗಳ ಮೂಲಕ ಪ್ರಸಕ್ತ ಸಾಲಿನ ಬಜೆಟ್​ನ್ನು ರಿಯಲ್ ಎಸ್ಟೇಟ್ ಸ್ನೇಹಿ ಎಂದು ಬಿಂಬಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ರಿಯಾಲ್ಟಿ ಕ್ಷೇತ್ರಕ್ಕೆ ಲಾಭದ ಜತೆಗೆ ಕ್ಷೇತ್ರದ ಕುರಿತು ಗ್ರಾಹಕರಲ್ಲಿ ನಂಬಿಕೆ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಕ್ರಮವನ್ನು ರಿಯಲ್ ಎಸ್ಟೇಟ್ ತಜ್ಞರು ಸ್ವಾಗತಿಸಿದ್ದಾರೆ.

ಇದರೊಂದಿಗೆ ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಜೇಟ್ಲಿ ಅವರು ಹೆಚ್ಚಿನ ಪ್ರಾಧಾನ್ಯತೆ ನೀಡಿರುವುದರಿಂದ ವಸತಿ ಯೋಜನೆ, ಬಡಾವಣೆ ನಿರ್ವಣದಂತಹ ಯೋಜನೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಖಾಸಗಿ ವಿಭಾಗದ ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್​ಗಳಿಗೆ ಕೇಂದ್ರ ಬಜೆಟ್​ನಿಂದ ಹೆಚ್ಚಿನ ಅನುಕೂಲವಾಗಲಿದೆ. ಇದರೊಂದಿಗೆ ಮನೆ ಖರೀದಿಸುವ ಗ್ರಾಹಕರಿಗೂ ಹೆಚ್ಚಿನ ಪ್ರಯೋಜನವಾಗಲಿದೆ.

ಕೈಗೆಟುಕುವ ವಸತಿ ವಿಭಾಗವನ್ನು(ಅಫೋರ್ಡೆಬಲ್ ಹೌಸಿಂಗ್) 30 ಮೀಟರ್​ನಿಂದ ಹೆಚ್ಚಿಸಿ 60 ಚದರ ಮೀಟರ್​ಗೆ ನಿಗದಿಗೊಳಿಸಿರುವುದರಿಂದ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ. ಬೆಂಗಳೂರು ಸೇರಿದಂತೆ ಇನ್ನಿತರ ಮಹಾನಗರಗಳ ಹೊರ ವಲಯದಲ್ಲಿ ಜನರಿಗೆ ಅಗತ್ಯವಾದ ಅತ್ಯುತ್ತಮ ಗುಣಮಟ್ಟದಲ್ಲಿ ಮನೆ ನಿರ್ಮಾಣ ಸಾಧ್ಯವಾಗಲಿದೆ. ನಗರಗಳಲ್ಲಿನ ಜಾಗದ ಕೊರತೆ ಹಾಗೂ ದುಬಾರಿ ಮೊತ್ತದ ಜಮೀನಿಗೆ ಕಡಿವಾಣ ಬೀಳಲಿದೆ. ಹಲವಾರು ವರ್ಷಗಳ ಬೇಡಿಕೆ ಈಡೇರಿರುವುದು ಡೆವಲಪರ್ಸ್ ಹಾಗೂ ಗ್ರಾಹಕರ ಮುಖದಲ್ಲಿ ಸಂತಸ ಮೂಡಿಸಿದೆ. ಪ್ರಮುಖವಾಗಿ ಬಿಲ್ಟ್ ಅಪ್ ಏರಿಯಾ ಹಾಗೂ ಕಾರ್ಪೆಟ್ ಏರಿಯಾಗಳನ್ನು ಕೈಗೆಟುಕುವ ವಸತಿ ಯೋಜನೆಯಲ್ಲಿ ಹೆಚ್ಚಳ ಮಾಡಿರುವುದು ಉತ್ತಮ ನಿರ್ಧಾರ ಎಂದು ಕ್ರೆಡಾಯ್ ಬೆಂಗಳೂರು ಕಾರ್ಯದರ್ಶಿ ಸುರೇಶ್ ಹರಿ ಸಂತಸ ವ್ಯಕ್ತಪಡಿಸಿದ್ದಾರೆ.

ಬಂಡವಾಳದ ಲಾಭದಲ್ಲಿ ತೆರಿಗೆಗೆ ಕಾಲಾವಕಾಶ

ಜಾಯಿಂಟ್ ಅಗ್ರಿಮೆಂಟ್ ವಿಭಾಗದಲ್ಲಿ ಭೂ ಮಾಲೀಕರು ಬಂಡವಾಳದ ಲಾಭದಲ್ಲಿನ ತೆರಿಗೆ ಅಂಶವನ್ನು ಮೊದಲೇ ಕಟ್ಟಬೇಕು ಎಂಬ ನಿಯಮ ಈವರೆಗೆ ಜಾರಿಯಲ್ಲಿತ್ತು. ಆದರೆ ಇನ್ನು ಮುಂದೆ ಯೋಜನೆಗಳು ಪೂರ್ಣವಾದ ಬಳಿಕ ಬಂಡವಾಳದಲ್ಲಿನ ಲಾಭದ ತೆರಿಗೆ ಕಟ್ಟಲು ಕೇಂದ್ರ ಅನುಮತಿ ನೀಡಿದೆ. ಇದರಿಂದ ಜಂಟಿ ಒಪ್ಪಂದದಲ್ಲಿ ನಡೆಯುವ ವಸತಿ ಯೋಜನೆಗಳಿಗೆ ಹೆಚ್ಚು ಅನುಕೂಲವಾಗಲಿದೆ.

ಸರ್ವರಿಗೂ ಸೂರು ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸಲು ಈ ಬಜೆಟ್ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಈ ಬಾರಿಯ ಬಜೆಟ್ ಸರ್ವರಿಗೂ ಸೂರು ಎಂಬುದಕ್ಕೆ ಸ್ಪಷ್ಟವಾದ ಅರ್ಥ ಕೊಟ್ಟಿದೆ ಎಂದು ಟಾಟಾ ಹೌಸಿಂಗ್ ಸಂಸ್ಥೆಯ ಸಿಇಒ ಬ್ರೊಟಿನ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ವಾಣಿಜ್ಯ ಸಾಲ ಮಿತಿ ಹೆಚ್ಚಳ

ವಾಣಿಜ್ಯ ಸಾಲಗಳ ಮೇಲಿನ ಮಿತಿಯನ್ನು ಹೆಚ್ಚಳ ಮಾಡಿರುವುದು ಇನ್ನೂ ಹೆಚ್ಚು ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಿದೆ. ದೀರ್ಘಾವಧಿ ಸಾಲಗಳ ಬಡ್ಡಿ ದರ ಕಡಿಮೆ ಮಾಡಿರುವುದರಿಂದ ಡೆವಲಪರ್​ಗಳ ಮೇಲಿನ ನಿರ್ಮಾಣ ವೆಚ್ಚ ಕಡಿಮೆ ಆಗಲಿದೆ. ರಿಯಲ್ ಎಸ್ಟೇಟ್ ಉದ್ಯಮದ ಮೇಲಿನ ಸಂಪನ್ಮೂಲ ಹೂಡಿಕೆ ಪ್ರಮಾಣ ಹೆಚ್ಚಲು ಸಹಾಯಕವಾಗಲಿದೆ. ಈ ಮೂಲಕ ವಸತಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಕಡಿಮೆ ಮಾಡಲು ಕೇಂದ್ರದ ನಿರ್ಧಾರ ಸಹಕಾರಿಯಾಗಿದೆ.

ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವುದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೆಚ್ಚು ಅನುಕೂಲವಾಗಿದೆ. ಇದರೊಂದಿಗೆ ವಿವಿಧ ವಿಭಾಗದ ತೆರಿಗೆ ಪಾವತಿಗೂ ಕಾಲಾವಕಾಶ ನೀಡಿರುವುದು ಸ್ವಾಗತಾರ್ಹ. ಕೈಗೆಟುಕುವ ಮನೆಯ ಕಾರ್ಪೆಟ್ ಏರಿಯಾ ಹೆಚ್ಚಿಸಿರುವುದರಿಂದ ಮನೆಯ ಗಾತ್ರ ಶೇ.30ಹೆಚ್ಚಳವಾಗಲಿದೆ ಹಾಗೂ ಮಹಾನಗರಗಳ ಹೊರವಲಯದಲ್ಲಿ, ಗ್ರಾಮೀಣ ಭಾಗದಲ್ಲೂ ಕೈಗೆಟುಕುವ ಮನೆ ನಿರ್ಮಾಣ ಸಾಧ್ಯವಾಗಲಿದೆ ಎಂದು ರಿಕ್ಸ್ ಎಮರ್ಜಿಂಗ್ ಬ್ಯುಸಿನೆಸ್​ನ ಗ್ಲೋಬಲ್ ಮ್ಯಾನೇಜಿಂಗ್ ಡೈರೆಕ್ಟರ್ ಸಚಿನ್ ಸಂಧೀರ್ ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲಕರ ಅಂಶಗಳು

  •   3 ಲಕ್ಷ ರೂಗಿಂತ ಅಧಿಕ ವ್ಯವಹಾರ ಆನ್​ಲೈನ್ ಮೂಲಕವೇ ನಡೆಯಬೇಕು
  •  2.41 ಲಕ್ಷ ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿಗಾಗಿ ಮೀಸಲು
  •  ಇಂದಿರಾ ಆವಾಸ್ ಯೋಜನೆ 600 ಜಿಲ್ಲೆಗಳಿಗೆ ವಿಸ್ತರಣೆ
  •  ಕೈಗೆಟುಕುವ ಮನೆಯ ಕಾರ್ಪೆಟ್ ಏರಿಯಾ ಹೆಚ್ಚಿಸಿರುವುದರಿಂದ ಮನೆಯ ಗಾತ್ರ ಶೇ.30 ಹೆಚ್ಚಳ

 ರಿಯಲ್ ಎಸ್ಟೇಟ್ ವಿಭಾಗದ ಅಭಿವೃದ್ಧಿಗೆ ಬಜೆಟ್ ಪೂರಕವಾಗಿರುವುದು ಸಂತಸದ ಸಂಗತಿ. ಬಂಡವಾಳ ಲಾಭದ ತೆರಿಗೆ ಪಾವತಿಸಲು ಸಮಯಾವಕಾಶ, ಕೈಗೆಟುಕುವ ಮನೆಗಳ ಚದರಡಿಯಲ್ಲಿ ಬದಲಾವಣೆ ಸ್ವಾಗತಾರ್ಹ. ಅಭಿವೃದ್ಧಿ ಪೂರಕ ಬಜೆಟ್ ಇದಾಗಿದೆ.

| ಆಶಿಶ್ ಪುರವಂಕರ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ

 

ರಿಯಲ್ ಎಸ್ಟೇಟ್, ಕೈಗೆಟುಕುವ ಮನೆಗಳ ಯೋಜನೆ ಮೂಲಸೌಕರ್ಯದ ಪರವಾಗಿ ಕೇಂದ್ರ ಬಜೆಟ್ ಮಂಡಿಸಿರುವುದು ಒಳ್ಳೆಯ ಬೆಳವಣಿಗೆ. ಆದಾಯ ತೆರಿಗೆ ವಿಭಾಗ ಸೇರಿದಂತೆ ರಿಯಲ್ ಎಸ್ಟೇಟ್​ಗೆ ಪೂರಕವಾದ ಅಂಶಗಳು ಅಭಿವೃದ್ಧಿಗೆ ಪೂರಕವಾಗಲಿದೆ.

| ಅಂಶುಮಾನ್ ಮ್ಯಾಗಜೀನ್ ಇಂಡಿಯಾ ಮತ್ತು ಸೌತ್ ಈಸ್ಟ್ ಏಷ್ಯಾ ಸಿಬಿಆರ್​ಇ ಅಧ್ಯಕ್ಷ

Leave a Reply

Your email address will not be published. Required fields are marked *