ಅರಬ್ಬಿ ತೀರದಲ್ಲೊಬ್ಬ ಸೈಕೋ ಶ್ರೀಮಂತ

ಬೆಂಗಳೂರು: ‘ಮಾಡೆಲಿಂಗ್ ಮತ್ತು ಛಾಯಾಗ್ರಹಣದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತವುಳ್ಳ ವ್ಯಕ್ತಿಯೊಬ್ಬ ರೂಪದರ್ಶಿಯನ್ನು ಮದುವೆಯಾಗುತ್ತಾನೆ. ಆದರೆ, ಸಂಸಾರ ಹೆಚ್ಚು ದಿನ ಉಳಿಯುವುದಿಲ್ಲ. ಕೊನೆಗೊಂದಿನ ಕಟ್ಟಿಕೊಂಡ ಪತ್ನಿಯನ್ನೇ ಕೊಲೆಗೈಯುತ್ತಾನೆ!- ಕೊಯಮತ್ತೂರಿನಲ್ಲಿ ನಡೆದ ಈ ನೈಜ ಘಟನೆಯನ್ನೇ ವಿ. ಉಮಾಕಾಂತ್ ‘ಅರಬ್ಬಿ ಕಡಲ ತೀರದಲ್ಲಿ..’ ಸಿನಿಮಾ ಮಾಡಿದ್ದಾರೆ. ಇಂದು (ಮಾ. 15) ಈ ಸಿನಿಮಾ ತೆರೆಕಾಣುತ್ತಿದೆ. ನಿರ್ದೇಶಕ ವಿ. ಉಮಾಕಾಂತ್​ಗೆ ಇದು 16ನೇ ಸಿನಿಮಾ. ನಾಯಕನಾಗಿ ನಟಿಸುವುದರ ಜತೆಗೆ ನಿರ್ವಪಕರಾಗಿಯೂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಕೃಷ್ಣೇಗೌಡ. ‘ನೈಜ ಘಟನೆಯನ್ನು ಯಥಾವತ್ತಾಗಿ ಕಟ್ಟಿಕೊಟ್ಟಿಲ್ಲ. ಬದಲಾಗಿ, ಕಾಲ್ಪನಿಕ ಅಂಶಗಳನ್ನು ಸಿನಿಮಾದಲ್ಲಿ ಸೇರಿಸಿದ್ದೇವೆ. ಪ್ರಸ್ತುತ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ಕೃಷ್ಣೇಗೌಡ. ‘ಪ್ರಾಣಿ, ಕೀಟಗಳ ಆಹಾರ ಸರಪಳಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅದು ಪ್ರಕೃತಿಯ ಸಹಜ ಪ್ರಕ್ರಿಯೆ. ಆ ಗುಣ ಮನುಷ್ಯನಲ್ಲೂ ಇರುತ್ತದೆ. ಅದನ್ನೇ ಈ ಸಿನಿಮಾದಲ್ಲಿ ತೋರಿಸಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಉಮಾಕಾಂತ್. ವೈಷ್ಣವಿ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ನಟಿ ರಂಜಿತಾ ರಾವ್ ‘ಅರಬ್ಬಿ ಕಡಲ ತೀರದಲ್ಲಿ’ ಸಿನಿಮಾ ಮೂಲಕ ಚೊಚ್ಚಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾದಲ್ಲಿ ಅವರದ್ದು ರೂಪದರ್ಶಿ ಪಾತ್ರ. ಎ.ಟಿ. ರವೀಶ್ ಸಂಗೀತ ನೀಡಿದ್ದು, ಎಂ.ಆರ್. ಸೀನು ಛಾಯಾಗ್ರಹಣ ನಿಭಾಯಿಸಿದ್ದಾರೆ.