ಅರಣ್ಯ ಸಾಗುವಳಿ ಹಕ್ಕುಪತ್ರ ವಿತರಣೆ

ಗದಗ: ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಆರಂಭಿಕ ನಾಯಕತ್ವ ನೀಡಿದ ಗದಗ ಜಿಲ್ಲೆಯಲ್ಲಿ ಪಾರಂಪರಿಕ ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರಗಳನ್ನು ನೀಡಿರುವುದು ಪ್ರಶಂಸನೀಯ ಕಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಮುನ್ನ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅರಣ್ಯ ಸಾಗುವಳಿ ಹಕ್ಕು ಪತ್ರದ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಡಿ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮ ಜರುಗಿಸಲಾಗುವುದು ಎಂದರು.

ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, 30 ವರ್ಷಗಳಿಂದ ಜಿಲ್ಲೆಯಲ್ಲಿ ಅರಣ್ಯ ಸಾಗುವಳಿ ಹಕ್ಕುಪತ್ರ ಪಡೆಯುವ ಕುರಿತಂತೆ ನಡೆಸಿದ ಪ್ರಯತ್ನಗಳು ಇಂದು ಫಲ ನೀಡುತ್ತಿವೆ. ಕೇಂದ್ರ ಸರ್ಕಾರವೇ ಅರಣ್ಯ ಕಾಯ್ದೆ ತಿದ್ದುಪಡಿ ತಂದಿದ್ದು ದೇಶದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತಾಗಿದೆ ಎಂದರು.

ಜಿಲ್ಲೆಯಲ್ಲಿ 479 ಫಲಾನುಭವಿಗಳಿದ್ದು, ಇದರಲ್ಲಿ 13 ಜನರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ನೀಡಲಾಗಿದೆ. ಬಾಕಿ ಉಳಿದ ಫಲಾನುಭವಿಗಳಿಗೂ ಹಕ್ಕುಪತ್ರ ನೀಡಲು ಬೇಗನೇ ಕ್ರಮ ಜರುಗಿಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಖಾಜಾಹುಸೇನ್ ಮುಧೋಳ ಮಾತನಾಡಿ, ಅನುಸೂಚಿತ ಜಾತಿ, ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಕುರಿತು ಅಧಿನಿಯಮ 2012ರ ತಿದ್ದುಪಡಿಯಡಿ ಜಿಲ್ಲೆಯಲ್ಲಿ ಈಗಾಗಲೇ ಒಟ್ಟಾರೆ 1153 ಎಕರೆ, 29ಗುಂಟೆ ಜಮೀನಿನ ಹಕ್ಕುಪತ್ರಗಳನ್ನು 616 ಫಲಾನುಭವಿಗಳಿಗೆ ನೀಡಲಾಗಿತ್ತು. ಇಂದು 107.03 ಎಕರೆ ಜಮೀನನ್ನು 479 ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 1095 ಫಲಾನುಭವಿಗಳಿಗೆ 2226 ಎಕರೆ 31 ಗುಂಟೆ ಜಮೀನಿನ ಸಾಗುವಳಿ ಹಕ್ಕುಪತ್ರ ವಿತರಿಸಿದಂತಾಗಿದೆ ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಜಿಲ್ಲೆಯ ಎಲ್ಲ ಅರಣ್ಯ ಸಾಗುವಳಿ ಹಕ್ಕು ಪತ್ರ ಇರುವ ಫಲಾನುಭವಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಆಗ್ರಹಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಸಲ್ಲಿಕೆಯಾದ ಎಲ್ಲ ಅರ್ಜಿಗಳ ಸಮಗ್ರ ಹಾಗೂ ಮರುಪರಿಶೀಲನೆ ಮಾಡಿ ಯಾವುದೇ ಅರ್ಹರು ಅರಣ್ಯ ಸಾಗುವಳಿ ಹಕ್ಕುಪತ್ರದಿಂದ ವಂಚಿತರಾಗದಂತೆ ಕ್ರಮ ಕೈಕೊಳ್ಳಲಾಗಿದೆ ಎಂದರು.

ಶಾಸಕ ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಗದಗ ತಾಪಂ ಅಧ್ಯಕ್ಷ ಮೋಹನ ದುರಗಣ್ಣನವರ, ಜಿಪಂ ಸದಸ್ಯರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಜಿಪಂ ಸಿಇಒ ಮಂಜುನಾಥ ಚವ್ಹಾಣ, ಎಸ್ಪಿ ಶ್ರೀನಾಥ ಜೋಶಿ, ಡಿಎಫ್​ಒ ಸೋನಲ್ ವೃಷ್ಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು.