ಅರಣ್ಯ ಸಚಿವರಿಗೆ ಕೈತಪ್ಪಿದ ಜಿಲ್ಲಾ ಉಸ್ತುವಾರಿ

ಹಾವೇರಿ: ಜಿಲ್ಲೆಯ ಶಾಸಕರೊಬ್ಬರು ಸಚಿವರಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ದೂರದ ಬೆಂಗಳೂರಿನವರಿಗೆ ನೀಡಿದ್ದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ರಾಣೆಬೆನ್ನೂರ ಕ್ಷೇತ್ರದ ಕೆಪಿಜೆಪಿ ಪಕ್ಷದ ಶಾಸಕ ಆರ್. ಶಂಕರ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ಆರ್. ಶಂಕರ ಪಾಲಾಗುವುದು ಎಂಬ ನಿರೀಕ್ಷೆ ಇತ್ತು. ಆದರೆ, ಎಲ್ಲರ ನಿರೀಕ್ಷೆ ಮೀರಿ ಬೆಂಗಳೂರಿನ ಚಾಮರಾಜಪೇಟೆ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿರುವ ಜಮೀರ್ ಅಹ್ಮದ ಖಾನ್ ಅವರಿಗೆ ಜಿಲ್ಲೆಯ ಉಸ್ತುವಾರಿ ವಹಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಶಂಕರಗೆ ಕೈ ನಾಯಕರ ವಿರೋಧ: ಆರ್. ಶಂಕರ ಜಿಲ್ಲೆಯ ಶಾಸಕರಾಗಿದ್ದರೂ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಹಾಗೂ ಬೆಂಗಳೂರು ಮೂಲದವರು ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸ್ಥಾನ ತಪ್ಪಿಸಲಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಜಿಲ್ಲೆಯ ಕೈ ನಾಯಕರೊಂದಿಗೆ ಆರ್. ಶಂಕರ ಸಂಬಂಧವೂ ಅಷ್ಟಕಷ್ಟೆ. ಅದರಲ್ಲಿಯೂ ಜಿಲ್ಲೆಯ ಹಿರಿಯ ಕಾಂಗ್ರೆಸ್ಸಿಗ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡರ ಬದ್ಧ ವೈರಿ ಎಂದರೂ ಅಚ್ಚರಿಯಿಲ್ಲ. ಶಂಕರ ಸಂಪುಟ ರಚನೆಯ ವೇಳೆಯಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಜಿಲ್ಲೆಗೆ ಬಂದ ನಂತರ ಕೈ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿಲ್ಲ. ಈ ಎಲ್ಲ ಕಾರಣಗಳಿಂದ ಜಿಲ್ಲೆಯ ಕೈ ನಾಯಕರು ಶಂಕರ ಸಚಿವರಾದ ನಂತರವೂ ಅವರೊಂದಿಗೆ ಅಂತರ ಕಾಯ್ದುಕೊಂಡರು. ಶಂಕರಗೆ ಉಸ್ತುವಾರಿ ನೀಡಿದರೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯ ವೇಳೆಯಲ್ಲಿ ಪಕ್ಷ ಸಂಘಟನೆಗೂ ತೊಡಕಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಅವರಿಗೆ ನೀಡದಂತೆ ಕೈ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ಶಂಕರಗೆ ಸ್ವಂತ ಜಿಲ್ಲೆಯ ಉಸ್ತುವಾರಿ ಕೈ ತಪ್ಪಿದೆ ಎಂಬ ಮಾತುಗಳು ಕೈ ಪಾಳಯದಲ್ಲಿ ಹರಿದಾಡಿತ್ತಿವೆ.

ಜಮೀರ ಅಹ್ಮದಗೆ ಮಣೆ: ಆರ್. ಶಂಕರ ಬೆಂಗಳೂರ ಮೂಲದವರು. ಅದರಂತೆ ಬೆಂಗಳೂರಿನ ಜಮೀರ ಅಹ್ಮದ ಅವರನ್ನು ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಿದ್ದು ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ಕಣ್ಣಿಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಈಗಾಗಲೇ 2 ಬಾರಿ ಸ್ಪರ್ಧಿಸಿರುವ ಸಲೀಂ ಅಹ್ಮದ ಪರಾಭವಗೊಂಡಿದ್ದಾರೆ. ಈ ಬಾರಿಯೂ ಸಲೀಂ ಅವರು ಟಿಕೆಟ್​ಗಿಟ್ಟಿಸಿಕೊಳ್ಳಲು ದೆಹಲಿ ಮಟ್ಟದಲ್ಲಿ ಪೈಪೋಟಿಯಲ್ಲಿದ್ದಾರೆ. ಸಲೀಂ ಬದಲು ಲಿಂಗಾಯತರಿಗೆ ಲೋಕಸಭೆ ಟಿಕೆಟ್ ನೀಡುವ ಚರ್ಚೆಗಳು ಬಿರುಸುಗೊಂಡಿವೆ. ಒಂದೊಮ್ಮೆ ಸಲೀಂಗೆ ಟಿಕೆಟ್ ಕೈ ತಪ್ಪಿದರೆ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುವ ಆತಂಕವೂ ಕೈ ಪಾಳಯಕ್ಕಿದೆ. ಇಂತಹ ಸಮಯದಲ್ಲಿ ಜಮೀರ್ ಅಹ್ಮದ ಅವರಿಗೆ ಜಿಲ್ಲೆಯ ಉಸ್ತುವಾರಿ ನೀಡುವುದರಿಂದ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹೈಕಮಾಂಡ್​ನದ್ದು ಎನ್ನಲಾಗಿದೆ.

ಒಟ್ಟಾರೆ ಜಿಲ್ಲೆಯ ಶಾಸಕರನ್ನು ಕಡೆಗಣಿಸಿ ಜಮೀರ ಅಹ್ಮದಗೆ ಜಿಲ್ಲೆಯ ಉಸ್ತುವಾರಿ ನೀಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧದ ಚರ್ಚೆಗಳು ಚುರುಕುಗೊಂಡಿವೆ. ಜಿಲ್ಲೆಯ ಏಕೈಕ ಶಾಸಕ ಬಿ.ಸಿ. ಪಾಟೀಲರನ್ನು ಮಂತ್ರಿ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿದೆ ಎಂಬ ಚರ್ಚೆಯನ್ನೂ ನಡೆಸಿದ್ದಾರೆ.

ಬಿಸಿಪಿಗೆ ಒಲಿಯುವುದೇ ಅದೃಷ್ಟ: ಮುಂದಿನ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲರಿಗೆ ಸಚಿವ ಸ್ಥಾನ ನೀಡುವುದು ಖಾತ್ರಿಯಾಗಿದೆ. ಈಗಾಗಲೇ ಬಿ.ಸಿ. ಪಾಟೀಲರು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವೂ ಬೇಡವೆಂದಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತವಾಗಿದೆ. ಅವರು ಸಚಿವರಾದ ನಂತರ ಉಸ್ತುವಾರಿ ಬದಲಾಯಿಸುವುದು ಸ್ವಲ್ಪ ಮಟ್ಟಿಗೆ ಕಷ್ಟ. ಅದರ ಬದಲು ಹೊರಗಿನವರಿಗೆ ಈಗ ಉಸ್ತುವಾರಿ ಸ್ಥಾನ ಕೊಡಲಾಗಿದೆ ಎಂಬ ಅಭಿಪ್ರಾಯಗಳು ಕೈ ನಾಯಕರಲ್ಲಿ ಕೇಳಿ ಬರುತ್ತಿವೆ.