ಅರಣ್ಯ ರಕ್ಷಣೆ ನಿರ್ಲಕ್ಷಿಸಿದರೆ ಗಂಡಾಂತರ ನಿಶ್ಚಿತ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಆಧುನಿಕ ಬೆಳವಣಿಗೆ ನೆಪದಲ್ಲಿ ಪರಿಸರ ವಿನಾಶದತ್ತ ಸಾಗಿದೆ. ನಮ್ಮ ಬದುಕು ಉತ್ತಮವಾಗಿರಲು ಅರಣ್ಯ ರಕ್ಷಣೆಗೆ ಮುಂದಾಗಬೇಕಿದೆ. ನಿರ್ಲಕ್ಷಿಸಿದಲ್ಲಿ ದೊಡ್ಡ ಗಂಡಾಂತರಗಳು ಎದುರಾಗುವುದರಲ್ಲಿ ಅನುಮಾನವಿಲ್ಲ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ಹನುಮನಹೊಂಡದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆ, ಪುರಸಭೆ, ತಾಪಂ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ನಿಮಿತ್ತ ಮಂಗಳವಾರ ಸಸಿ ನೆಟ್ಟು ಅವರು ಮಾತನಾಡಿದರು.

ವಿಶ್ವ ಮಟ್ಟದಲ್ಲಿ ಪರಿಸರ ಉಳಿವಿಗಾಗಿ ದೊಡ್ಡ ಮಟ್ಟದ ಆಂದೋಲನಗಳನ್ನು ನಡೆಸಲಾಗುತ್ತಿದೆ. ನದಿಗಳಲ್ಲಿನ ನೀರು ಕಲುಷಿತಗೊಂಡಿದೆ. ವಾಹನಗಳು ವಿಪರೀತ ಹೊಗೆ ಉಗುಳುವ ಮೂಲಕ ವಾಯು ಮಾಲಿನ್ಯ ದುಪ್ಪಟ್ಟಾಗಿದೆ. ಹೀಗಾಗಿ ಪರಿಸರ ಸಮತೋಲನ ಕಳೆದುಕೊಂಡಿದೆ. ಇತ್ತೀಚೆಗೆ ಒಂದಿಲ್ಲೊಂದು ರೂಪದಲ್ಲಿ ಪ್ರಕೃತಿ ಮನುಷ್ಯರಿಗೆ ತೊಂದರೆ ನೀಡುತ್ತಿದೆ. ತಾಪಮಾನ ಏರಿಕೆ, ಪ್ರಾಕೃತಿಕ ಏರುಪೇರು, ಅತಿವೃಷ್ಟಿ, ಅನಾವೃಷ್ಟಿ ಮತ್ತಿತರ ಸಮಸ್ಯೆಗಳು ಉದ್ಭವಿಸುತ್ತಿವೆ. ಎಲ್ಲ ಜೀವಿಗಳಿಗೆ ಭೂಮಿ ಮೇಲೆ ಜೀವಿಸಲು ತೊಂದರೆ ಉಂಟಾಗಲಿದೆ. ದೈವದತ್ತವಾದ ಪ್ರಕೃತಿಯನ್ನು ಅಳಿಸುವ ಬದಲು ಉಳಿಸುವಲ್ಲಿ ನಾವೆಲ್ಲ ಯತ್ನಿಸಬೇಕು. ಮನೆಗೊಂದು ಮರ, ಊರಿಗೊಂದು ವನ ಎಂಬ ನಾಣ್ಣುಡಿ ಬದಲಾಗಬೇಕಿದೆ. ಮನೆಗೆ ಎರಡು ಮರಗಳು, ಓಣಿಗೊಂದು ವನವಾಗಿ ಪರಿವರ್ತನೆಯಾಗಬೇಕಿದೆ ಎಂದರು.

ವಲಯ ಅರಣ್ಯಾಧಿಕಾರಿ ಮಲ್ಲೇಶಪ್ಪ ಮರಣ್ಣವರ ಮಾತನಾಡಿ, ಹತ್ತು ವರ್ಷಗಳ ಹಿಂದೆ ವಿಶ್ವಮಟ್ಟದಲ್ಲಿ ಶೇ. 18ರಷ್ಟಿದ್ದ ಅರಣ್ಯಪ್ರದೇಶ ಈಗ 22ರಷ್ಟಾಗಿದೆ. ಭೂಮಿಯ ಶೇ. 33ರಷ್ಟು ಅರಣ್ಯವನ್ನು ಬೆಳೆಸಿದಾಗ ಮಾತ್ರ ಪರಿಸರ ನಮ್ಮನ್ನು ಕಾಪಾಡಲಿದೆ. ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳು ಜಂಟಿಯಾಗಿ ಗಿಡಗಳ ಬೇಸಾಯ ಪದ್ಧತಿಗೆ ಒತ್ತು ನೀಡಿವೆ. ಪ್ರಸಕ್ತ ಸಾಲಿನಲ್ಲಿ 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದ್ದು, ಹಂತ ಹಂತವಾಗಿ ರೈತರಿಗೆ, ಸಾರ್ವಜನಿಕರಿಗೆ ಇನ್ನಷ್ಟು ಸಸಿಗಳನ್ನು ವಿತರಣೆ ಮಾಡಲಾಗುವುದು ಎಂದರು.

ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ, ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ಜಮೀಲಾ ಹೆರಕಲ್ಲ, ಚಂದ್ರಪ್ಪ ಶೆಟ್ಟರ, ಮಲ್ಲೇಶಪ್ಪ ಚಿಕ್ಕಣ್ಣನವರ, ಗಣೇಶ ಬೊಮ್ಮಣ್ಣನವರ, ಜಯಣ್ಣ ಚಿಲ್ಲೂರುಮಠ, ಕೆಂಪೇಗೌಡ ಪಾಟೀಲ, ಶಿವಯೋಗಿ ಗಡಾದ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *