ಅರಣ್ಯ ಭೂಮಿ ಹಸ್ತಾಂತರಕ್ಕೆ 13 ಷರತ್ತು

ಬೆಂಗಳೂರು: ಕಾಡುಗುಡಿ ಬಳಿ ಮೆಟ್ರೋ ಡಿಪೋ ನಿರ್ವಣಕ್ಕೆ ಅಗತ್ಯವಿರುವ 18.11 ಹೆಕ್ಟೇರ್ ಅರಣ್ಯ ಭೂಮಿಯನ್ನು 20 ವರ್ಷಕ್ಕೆ ಬಿಎಂಆರ್​ಸಿಎಲ್​ಗೆ ಸ್ವಾಧೀನಕ್ಕೆ ಅರಣ್ಯ ಇಲಾಖೆ ನೀಡಿದೆ. ಹಸ್ತಾಂತರ ಸಂದರ್ಭದಲ್ಲಿ 13 ಷರತ್ತುಗಳನ್ನು ಇಲಾಖೆ ವಿಧಿಸಿದೆ.

ನಮ್ಮ ಮೆಟ್ರೋ 2ನೇ ಹಂತದಲ್ಲಿ ಡಿಪೋ ನಿರ್ವಣಕ್ಕಾಗಿ ಕಾಡುಗುಡಿ ಬಳಿ 18.11 ಹೆಕ್ಟೇರ್(ಅಂದಾಜು 45 ಎಕರೆ)ಅರಣ್ಯ ಭೂಮಿ ಅವಶ್ಯಕತೆಯಿದೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕೆಂಗೇರಿ- ವೈಟ್​ಫೀಲ್ಡ್ ನೇರಳೆ ಮಾರ್ಗಕ್ಕೆ ಬೈಯಪ್ಪನಹಳ್ಳಿ ಡಿಪೋ ಬದಲಾಗಿ ಕಾಡುಗುಡಿ ಡಿಪೋ ಬಳಕೆಯಾಗಲಿದೆ. ಅರಣ್ಯ ಭೂಮಿ ಬಳಕೆಗೆ ಮಾ.9ರಂದು ಹಸಿರು ನಿಶಾನೆ(ಸ್ಟೇಜ್ 1 ಕ್ಲಿಯರೆನ್ಸ್) ನೀಡಿರುವ ಅರಣ್ಯ ಇಲಾಖೆ, ಯೋಜನೆಗಾಗಿ ಬಳಕೆಯಾಗಲಿರುವ ಅರಣ್ಯ ಭೂಮಿ ಪ್ರಮಾಣ 18.11 ಹೆಕ್ಟೇರ್​ಗಿಂತ ಹೆಚ್ಚು ಆಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬೈಯ್ಯಪ್ಪನಹಳ್ಳಿ-ವೈಟ್​ಫೀಲ್ಡ್ ಮಾರ್ಗ ಬಹುತೇಕ ಮುಖ್ಯ ರಸ್ತೆಯ ವಿಭಜಕದಲ್ಲೇ ಸಾಗುತ್ತಿದೆ. ಹೀಗಾಗಿ ಬೈಯಪ್ಪನಹಳ್ಳಿಯಿಂದ ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದವರೆಗೆ ಶೇ.97.73 ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಬೈಯಪ್ಪನಹಳ್ಳಿ, ಕೆ.ಆರ್.ಪುರ ಬಳಿ ಕೊಂಚ ರೈಲ್ವೆ ಭೂಮಿ ಬಿಎಂಆರ್​ಸಿಎಲ್​ಗೆ ಅಗತ್ಯವಿದೆ. ಈ ಮಾರ್ಗದಲ್ಲಿ ಬೈಯಪ್ಪನಹಳ್ಳಿಯಿಂದ ದೊಡ್ಡನೆಕ್ಕುಂದಿಯವರೆಗೆ ನಿರ್ಮಾಣ ಕಾಮಗಾರಿ (ಸಿವಿಲ್ ವರ್ಕ್) ಶೇ.28 ಪೂರ್ಣಗೊಂಡಿದೆ. ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದಿಂದ ವೈಟ್​ಫೀಲ್ಡ್​ವರೆಗೆ ಶೇ.37 ಮಾರ್ಗ ನಿರ್ಮಾಣ ಪೂರ್ಣಗೊಂಡಿದೆ.

ನಿಗಮದ ಹೆಗಲಿಗೆ ಅರಣ್ಯ ಬೆಳೆಸುವ ಖರ್ಚು!

ಡಿಪೋಗಾಗಿ ಬಳಸುವ ಭೂಮಿ ಅರಣ್ಯ ಭೂಮಿಯಾಗಿದ್ದರೂ, ಇಲ್ಲಿ ಮರಗಳಿಲ್ಲ. ಹೀಗಿದ್ದರೂ ನಿಯಮದಂತೆ ಅರಣ್ಯ ಭೂಮಿ ಬದಲಾಗಿ ಬೇರೆಡೆ ಭೂಮಿ ನೀಡಬೇಕು. ನಿಯಮಕ್ಕೆ ಅನುಗುಣವಾಗಿ ಕಾಳಿ ಹುಲಿ ಸಂರಕ್ಷಿತಾರಣ್ಯ ಬಳಿ 11.87 ಹೆಕ್ಟೇರ್ ಖಾಸಗಿ ಭೂಮಿ ಹಾಗೂ ತಿಪ್ಪಗೊಂಡನಹಳ್ಳಿ ಬಳಿ 6.56 ಹೆಕ್ಟೇರ್ ಸರ್ಕಾರಿ ಭೂಮಿಯನ್ನು ಬಿಎಂಆರ್​ಸಿಎಲ್ ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ. ಈ ಜಾಗಗಳಲ್ಲಿ ಗಿಡ-ಮರ ಬೆಳೆಸುವ ಖರ್ಚನ್ನು ಮೆಟ್ರೊ ನಿಗಮವೇ ಭರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಇಲಾಖೆ ಸ್ಟೇಜ್ 2 ಅನುಮತಿ ನೀಡಿದ 6 ತಿಂಗಳೊಳಗಾಗಿ ರಾಜ್ಯ ಅರಣ್ಯ ಕಾಯ್ದೆಯ ಅನ್ವಯ ಈ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಹೇಳಲಾಗಿದೆ.

15.5 ಕಿ.ಮೀ. ಉದ್ದದ ಈ ಮಾರ್ಗ 4,800 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಆಗಲಿದೆ. 178 ಕೋಟಿ ರೂ.ವೆಚ್ಚದಲ್ಲಿ ಡಿಪೋ ನಿರ್ವಣಕ್ಕೆ ಈಗಾಗಲೇ ಬಿಎಂಆರ್​ಸಿಎಲ್ ಟೆಂಡರ್ ಆಹ್ವಾನಿಸಿದೆ. 2 ವರ್ಷದಲ್ಲಿ ಡಿಪೋ ನಿರ್ವಣಗೊಳ್ಳಲಿದೆ.

ರಾಜ್ಯ ಸರ್ಕಾರಕ್ಕೂ ಬಿಎಂಆರ್​ಸಿಎಲ್ ಹಣ ಕಟ್ಟಬೇಕು!

2008ರಲ್ಲಿ ಸುಪ್ರೀಂಕೋರ್ಟ್ ಹೊರಡಿಸಿರುವ ಆದೇಶವೊಂದರ ಅನ್ವಯ ರಾಜ್ಯ ಸರ್ಕಾರ 18.11 ಹೆಕ್ಟೇರ್ ಅರಣ್ಯ ಭೂಮಿಗೆ ಬಿಎಂಆರ್​ಸಿಎಲ್​ನಿಂದ ನೆಟ್ ಪ್ರಸೆಂಟ್ ವಾಲ್ಯೂ(ಎನ್​ಪಿವಿ)ವಸೂಲಿ ಮಾಡಬೇಕು. ನಿಗಮ ಈ ಹಣ ಪಾವತಿಸಲು ವಿಫಲವಾದಲ್ಲಿ ವಾರ್ಷಿಕ ಎನ್​ಪಿವಿಯ 5 ಪಟ್ಟು ದಂಡ ವಿಧಿಸಿ ವಸೂಲಿ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.

ನಿಖರ ಎನ್​ಪಿವಿ ಯನ್ನು ಅರಣ್ಯ ಇಲಾಖೆ ತಿಳಿಸಬೇಕು. ಅರಣ್ಯ ಅಭಿವೃದ್ಧಿಗೂ ಹಣ ನೀಡಬೇಕು.

| ಚನ್ನಪ್ಪಗೌಡರ್, ಹಿರಿಯ ಅಧಿಕಾರಿ ಮೆಟ್ರೋ ಭೂಸ್ವಾಧೀನ