ಅರಣ್ಯ ಇಲಾಖೆ ಉಚಿತವಾಗಿ ಬಿದಿರು ನೀಡಿದರೂ ಪಡೆಯಲು ಬಾರದ ಮೇದಾರ ಜನಾಂಗ

ಚಿಕ್ಕಮಗಳೂರು: ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಹಲವು ಕಡೆ ಬಿದಿರು ಸಾಕಷ್ಟು ಬೆಳೆದಿದ್ದು, ಇದನ್ನು ನಿಯಮಾನುಸಾರ ವೃತ್ತಿ ಮಾಡುವ ಮೇದಾರ ಜನಾಂಗಕ್ಕೆ ವಿತರಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಕೈಚೆಲ್ಲಿ ಕುಳಿತಿದೆ. ಬೆಳೆದ ಬಿದಿರು ಕಡಿಯದಿದ್ದರೆ ಬಿದಿರು ಚಿಗುರುವುದೂ ಇಲ್ಲ. ಇದು ಇಕ್ಕಟ್ಟಿಗೆ ಸಿಲುಕಿಸಿದೆ.

ಜಿಲ್ಲೆಯ ಮಲೆನಾಡಿನ ವ್ಯಾಪ್ತಿಯ ಅರಣ್ಯದಲ್ಲಿ ದಶದಕ ಹಿಂದೆ ಹೂ ಬಿಟ್ಟ ಬಿದಿರು ನಾಶವಾಗಿತ್ತು. ಈಗೊಂದಿಷ್ಟು ಹುಲುಸಾಗಿ ಬೆಳೆದಿರುವ ಬಿದಿರನ್ನು ಸರ್ಕಾರದ ನಿರ್ಧಾರದಂತೆ ಉಚಿತವಾಗಿ ವಿತರಿಸಲು ಇಲಾಖೆ ಮುಂದಾದರೂ ಅದನ್ನು ಕೊಂಡೊಯ್ಯಲು ಮೇದಾರ ಜನಾಂಗವೇ ಮುಂದೆ ಬರುತ್ತಿಲ್ಲ.

ರಾಜ್ಯ ಸರ್ಕಾರ ಬಿದಿರು ವೃತ್ತಿ ಮಾಡುವ ಮೇದಾರ ಜನಾಂಗದವರಿಗೆ 40 ಸಾವಿರ ಬೊಂಬು ಉಚಿತವಾಗಿ ಕೊಡಲು ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಆದರೆ, ಇದುವರೆಗೂ ಎಸ್​ಸಿಪಿ (ಪರಿಶಿಷ್ಟ ಜಾತಿ) ಸಮುದಾಯದವರಿಗೆ ಎರಡೂವರೆ ಸಾವಿರ ಹಾಗೂ ಎಸ್​ಟಿಪಿ(ಪರಿಶಿಷ್ಟ ಪಂಗಡ) ಐದು ಸಾವಿರ ಬೊಂಬುಗಳನ್ನು ಮಾತ್ರ ವಿತರಿಸಲಾಗಿದೆ.

ಕಾಡಿನಲ್ಲಿ ಬೆಳೆಯುವ ಬಿದರು ಹೂ ಬಿಡುವ ಹಂತಕ್ಕೆ ಬಂದಿದೆ. ಒಮ್ಮೆ ಹೂ ಬಿಟ್ಟರೆ ಈ ಬಿದಿರು ಒಣಗಿ ಅಲ್ಲಿಯೇ ನಾಶವಾಗುತ್ತದೆ. ಒಣಗಿರುವ ಬೊಂಬುಗಳನ್ನು ಅರಣ್ಯ ಇಲಾಖೆ ತೆರವು ಮಾಡದಿದ್ದರೆ ಹೊಸ ಬಿದಿರುವ ಕಳಲೆ(ಮೊಳಕೆ) ಬುರುವುದು ಕಡಿಮೆಯಾಗುತ್ತದೆ. ಹೊಸ ಬಿದಿರು ಬೆಳೆಯಬೇಕೆಂದರೆ ಹೀಗೆ ವಯಸ್ಸಾಗಿ ಹೂ ಬಿಡುವ ಹಂತದ ಬಿದಿರನ್ನು ಅರಣ್ಯಇಲಾಖೆ ತೆರವು ಮಾಡಬೇಕಾಗುತ್ತದೆ.

ಉಚಿತವಾಗಿ ಇಲಾಖೆ ನೀಡುವ ಬಿದಿರು ಕೊಂಡೊಯ್ಯಲು ಮೇದಾರ ಜನಾಂಗದ ಬೆರಳೆಣಿಕೆಷ್ಟು ಜನ ಮಾತ್ರ ಕೊಪ್ಪ ಪ್ರಾದೇಶಿಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಅರಣ್ಯದೊಳಗಿರುವ ಬಿದಿರು ಕಡಿದು ಸಾಗಿಸುವುದು ಕಷ್ಟವಾಗಿರುವುದರಿಂದ ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ವೃತ್ತಿ ಮಾಡುವವರ ಸಂಖ್ಯೆಯೂ ಅನೇಕ ಕಾರಣಗಳಿಗೆ ಕ್ಷೀಣಿಸಿದೆ.

ಮರದ ಬುಟ್ಟಿ, ಖುರ್ಚಿಗಳ ಜಾಗವನ್ನು ಪ್ಲಾಸ್ಟಿಕ್ ಆಕ್ರಮಿಸಿರುವುದರಿಂದ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿದೆ. ಹಬ್ಬ ಹರಿದಿನಗಳಲ್ಲಿ ಬಾಗಿನ ಕೊಡಲು ಕೆಲವೊಂದಿಷ್ಟು ಮೊರ (ಕೇರುವ) ಮಾತ್ರ ಮಾರಾಟವಾಗುತ್ತವೆ. ಹೀಗಾಗಿ ಅರಣ್ಯದಲ್ಲಿ ಬೆಳೆದಿರುವ ಬಿದಿರನ್ನು ಕಷ್ಟಪಟ್ಟು ತರಲು ಆಸಕ್ತಿ ತೋರುತ್ತಿಲ್ಲ. ಕಾಡಿನೊಳಗಿನ ಬಿದಿರಿಗಿಂತ ಸುಲಭವಾಗಿ ತೋಟಗಳಲ್ಲಿ ಬೆಳೆಯವ ಅರಿಶಿಣ ಬಿದಿರನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.

ಆಧುನಿಕತೆ ಬೀದಿಗೆ ತಂದಿದೆ: ಆಧುನಿಕ ಯುಗ ಬಿದಿರು ವೃತ್ತಿ ಮಾಡುವ ಮೇದಾರ ಸಮುದಾಯದ ಕಸುಬು ಕಸಿದುಕೊಂಡು ಅವರನ್ನು ಬೀದಿಗೆ ತಂದಿದೆ ಎಂದು ನಗರದ ಮಾರುಕಟ್ಟೆ ರಸ್ತೆಯಲ್ಲಿ ಬಿದಿರು ಉತ್ಪನ್ನ ಮಾಡುವ ಕುಮಾರ್ ತಿಳಿಸಿದರು.

ಅಪ್ಪ, ಅಜ್ಜನ ಕಾಲದಿಂದ ಈ ವೃತ್ತಿ ಮಾಡುತ್ತಿದ್ದು, ಈಗ ಬಿದಿರು ಉತ್ಪನ್ನಗಳಿಗೆ ಬೇಡಿಕೆ ಇಲ್ಲವಾಗಿದೆ. ಏಣಿ, ಚಟ್ಟ, ಬುಟ್ಟಿ, ಮೊರ ತಯಾರಿಕೆ ಮಾಡಲಾಗುತ್ತಿದೆ. ಇದಕ್ಕೆ ತೋಟಗಳ ಬದುಗಳಲ್ಲಿ ಬೆಳೆಯುವ ಅರಿಶಿಣ ಬಿದಿರು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಕಾಡಿನೊಳಗಿನ ಬಿದಿರುವ ಕಡಿದು ತರುವುದು ಈಗ ಕಷ್ಟಸಾಧ್ಯವಾಗಿದೆ ಎಂದರು.

ಅರಣ್ಯದಿಂದ ತರುವುದೇ ಕಷ್ಟ : ಅರಣ್ಯದೊಳಗಿನ ಬಿದಿರನ್ನು ಮೇದಾರ ಜನಾಂಗದವರು ಬಿಟ್ಟರೆ ಇನ್ಯಾವುದೇ ಅನ್ಯ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಆದಿವಾಸಿ ರಕ್ಷಣ ಪರಿಷತ್ ಅಧ್ಯಕ್ಷ ಪಿ.ರಾಜೇಶ್ ಹೇಳಿದ್ದಾರೆ.

ಹೂವಿನ ಹಂತಕ್ಕೆ ಬೆಳೆದ ಬಿದಿರನ್ನು ಕಡಿದು ಮೇದಾರ ಜನಾಂಗಕ್ಕೆ ನಿಯಮಾನುಸಾರ ಅರಣ್ಯ ಇಲಾಖೆ ಕೊಡುವ ಪ್ರಯತ್ನ ಮಾಡುತ್ತಿದೆ. ಆದರೆ, ಅರಣ್ಯದಲ್ಲಿ ಬಿದಿರು ಸಾಗಣೆ ಮಾಡಲು ದಾರಿ ಇಲ್ಲದಿರುವುದರಿಂದ ಬಿದಿರು ತರಲು ಕಷ್ಟವಾಗುತ್ತಿದೆ. ಹೀಗಾಗಿ ಹಲವು ಮೇದಾರರು ಕಾಡಿಗೆ ಹೋಗಿ ವಾಪಸ್ ಬಂದಿದ್ದಾರೆ. ಒಂದಿಷ್ಟು ಕಸುಬುದಾರರು ಅರಣ್ಯ ಇಲಾಖೆ ಜತೆ ಸೇರಿದ ಬಿದಿರು ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹೊಸ ಬಿದಿರುವ ಹುಲುಸಾಗಿ ಬೆಳೆಯಬೇಕಾದರೆ ಬೆಳೆದ ಬಿದಿರು ಕಡಿದು ಹೊರ ತೆಗೆಯಬೇಕು. ಇಲ್ಲದಿದ್ದರೆ ಬಿದಿರು ಮೊಳಕೆ ಬರುವುದು ಕಷ್ಟವಾಗುತ್ತದೆ. ಆದರೆ, ಅಷ್ಟು ಬಿದಿರು ತಂದು ಉತ್ಪನ್ನ ತಯಾರಿಸಿದರೆ ಅವುಗಳು ಮಾರಾಟವಾಗುವುದಿಲ್ಲ. ಕೆಲವರು ಇಲಾಖೆ ಅನುಮತಿ ಪಡೆದು ಕಾಡಿನೊಳಗಿನಿಂದ ಬಿದಿರು ತಂದು ಮನೆ ಮುಂದೆ ಸಂಗ್ರಹಿಸಿಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

53,000 ಬಿದಿರು ಬೊಂಬು ವಿತರಣೆಗೆ ಅವಕಾಶ: ಮೇದಾರ ಜನಾಂಗದವರ ವೃತ್ತಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರವೇ ಆದೇಶ ಹೊರಡಿಸಿದೆ. ಅದರಂತೆ ಮೇದಾರ ಜನಾಂಗದವರಿಗೆ ಉಚಿತವಾಗಿ ಎಸ್​ಸಿಪಿ, ಎಸ್​ಟಿಪಿಯಡಿ 40 ಸಾವಿರ ಉದ್ದನೆಯ ಬಿದಿರಿನ ಬೊಂಬುಗಳನ್ನು ಅರಣ್ಯ ಇಲಾಖೆಯೇ ಕಡಿದು ಉಚಿತವಾಗಿ ವಿತರಿಸಬೇಕು. ಎಸ್​ಇಪಿ, ಟಿಎಸ್​ಪಿ ಅಲ್ಲದೆ ಸಾಮಾನ್ಯ ಯೋಜನೆಯಡಿ 60 ರೂ.ಗೆ ಒಂದು ಬೊಂಬುವನ್ನು ಇಲಾಖೆ ವಿತರಿಸಬೇಕು. 8500 ಕಿರು ಬಿದಿರುಗಳನ್ನು ಮತ್ತು 44,500 ಹೆಬ್ಬಿದಿರು ಒಟ್ಟು 53 ಸಾವಿರ ಬಿದಿರುಗಳನ್ನು ತೆಗೆದು ಮೇದಾರರಿಗೆ ಮತ್ತು ಇತರರಿಗೆ ಸರಬರಾಜು ಮಾಡಬಹುದು. ಆದರೆ ಅಷ್ಟು ಪ್ರಮಾಣದ ಬಿದಿರನ್ನು ಮೇದಾರ ಜನಾಂಗ ಕೊಂಡೊಯ್ಯಲು ಸಿದ್ಧವಿಲ್ಲದಿರುವುದು ಅರಣ್ಯ ಇಲಾಖೆಗೆ ತಲೆಬಿಸಿಯೂ ಆಗಿದೆ.

ನಿಯಮಾನುಸಾರ ಬಿದಿರು ವಿತರಣೆ: ಕೇಂದ್ರ, ರಾಜ್ಯ ಸರ್ಕಾರದ ನಿಯಮದಂತೆ ವೃತ್ತಿ ಮಾಡುವ ಮೇದಾರ ಸಮುದಾಯದವರಿಗೆ ಬಿದಿರು ವಿತರಿಸಲಾಗುತ್ತಿದೆ ಎಂದು ಕೊಪ್ಪ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ತಖ್ತ್ ಸಿಂಗ್ ರಾಣಾವತ್ ಹೇಳಿದ್ದಾರೆ.

ಒಂದು ವೇಳೆ ಇಲಾಖೆ ಬಿದಿರು ವಿತರಣೆ ಮಾಡದೆ ಹೋದರೆ, ವೃತ್ತಿ ಮಾಡುವ ಕೆಲವರು ಇಲಾಖೆ ಕಣ್ತಪ್ಪಿಸಿ ಬಿದಿರುವ ಕಡಿದೊಯ್ಯುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಅವಕಾಶವಾಗದಂತೆ ನಿಯಮ ಪಾಲಿಸಿಯೇ ಎಸ್​ಸಿಪಿ, ಎಸ್​ಟಿಪಿ ಯೋಜನೆಯಡಿ ಉಚಿತವಾಗಿ ಬಿದಿರು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.