ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಶಿಡ್ಲಘಟ್ಟ: 45 ವರ್ಷಗಳಿಂದ ದಲಿತರು ಸಾಗುವಳಿ ಮಾಡುತ್ತ ಜೀವನ ನಡೆಸುತ್ತಿರುವ ಜಮೀನುಗಳನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಅರಣ್ಯ ಇಲಾಖೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬುಧವಾರ ಅರಣ್ಯ ಇಲಾಖೆ ಮುಂಭಾಗ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.

ನಮೂನೆ 50 ಮತ್ತು 53ರಂತೆ ಅರ್ಜಿ ಸಲ್ಲಿಸಿ ಕಂದಾಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ವರದನಾಯಕನಹಳ್ಳಿಯ ದಲಿತ ಕುಟುಂಬಗಳ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುವ ಯತ್ನ ನಡೆದಿದೆ. ಈ ಕುರಿತು ತಾಲೂಕು ಆಡಳಿತ ಸೇರಿ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ರಾತ್ರೋರಾತ್ರಿ ಜೆಸಿಬಿ ಮೂಲಕ ಜಮೀನಿನಲ್ಲಿ ಟ್ರಂಚ್ ಹೊಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯ್ದೆಯಲ್ಲಿ ದೂರು ದಾಖಲಿಸಬೇಕೆಂದು ಕದಸಂಸ ಜಿಲ್ಲಾಧ್ಯಕ್ಷ ಅರುಣ್​ಕುಮಾರ್ ಒತ್ತಾಯಿಸಿದರು.

ಗ್ರಾಮಸ್ಥರು ಹಾಗೂ ದಲಿತ ಮುಖಂಡರು ಗ್ರಾಮದ ಗೇಟ್​ನಿಂದ ಜಮೀನಿನವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಜೆಸಿಬಿ ಮೂಲಕ ತೋಡಿದ್ದ ಗುಂಡಿಗಳನ್ನು ಮುಚ್ಚಿ ಪ್ರತಿಭಟಿಸಿದರು. ಬಳಿಕ ಅರಣ್ಯ ಇಲಾಖೆ ಕಚೇರಿ ಮುಂಭಾಗ ಕೆಲಕಾಲ ಧರಣಿ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಎಸ್.ಅಜಿತ್​ಕುಮಾರ್ ರೈ ಭೇಟಿ ನೀಡಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸಲಾಗುವುದು. ಆ ಮೂಲಕ ಅರಣ್ಯ ಇಲಾಖೆ ಮತ್ತು ದಲಿತರು ಸಾಗುವಳಿ ಮಾಡುತ್ತಿರುವ ಜಮೀನುಗಳ ಸಮಸ್ಯೆ ಬಗೆಹರಿಸಲಾಗುವುದು. ಜಂಟಿ ಸರ್ವೆ ಕಾರ್ಯ ನಡೆಯುವವರೆಗೂ ಅರಣ್ಯ ಇಲಾಖೆಯವರು ಜಮೀನಿನಲ್ಲಿ ಯಾವುದೇ ಕೆಲಸ ನಡೆಸಬಾರದು ಎಂದು ಸೂಚಿಸಿದರು.

ಆರಕ್ಷಕ ವೃತ್ತ ನಿರೀಕ್ಷಕ ಆನಂದ್​ಕುಮಾರ್, ಗ್ರಾಮಾಂತರ ಠಾಣೆ ಪಿಎಸ್​ಐ ಹರೀಶ್, ದಲಿತ ಮುಖಂಡರಾದ ಮುನಿಶಾಮಪ್ಪ, ಪಿಳ್ಳಮುನಿಶಾಮಪ್ಪ, ಚಿಕ್ಕಮುನಿಯಪ್ಪ, ಗಂಗಾಧರ, ನಾರಾಯಣಸ್ವಾಮಿ, ಕದಸಂಸ ತಾಲೂಕು ಅಧ್ಯಕ್ಷ ಅಶೋಕ್​ಕುಮಾರ್ ಮತ್ತಿತರರಿದ್ದರು.