ಅರಣ್ಯ ಅತಿಕ್ರಮಣದಾರರ ಪ್ರತಿಭಟನೆ

ಮುಂಡಗೋಡ: ಅರಣ್ಯ ಹಕ್ಕು ಕಾಯ್ದೆಯಡಿ ಅತಿಕ್ರಮಣದಾರರ ಅರ್ಜಿ ಪುನರ್ ಪರಿಶೀಲನೆ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಂತರ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆಸಿ ಇಲಾಖೆ ಅಧಿಕಾರಿ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ‘ತಾಲೂಕಿನಾದ್ಯಂತ 7,104 ಅರ್ಜಿ ಸಲ್ಲಿಕೆಯಾಗಿದ್ದು, 3318 ತಿರಸ್ಕೃತವಾಗಿವೆ. 226 ಬುಡಕಟ್ಟು ಜನಾಂಗ, 21 ಪಾರಂಪರಿಕ ಅರಣ್ಯವಾಸಿಗಳ ಕುಟುಂಬ ಹಾಗೂ 58 ಅರ್ಜಿಗಳಿಗೆ ಸಮುದಾಯ ಉದ್ದೇಶಕ್ಕೆ ಅರಣ್ಯ ಭೂಮಿ ಸಾಗುವಳಿ ಹಕ್ಕು ನೀಡಲಾಗಿದೆ. ಹೀಗಾಗಿ ಉಳಿದ ಅರ್ಜಿಗಳನ್ನು ಪುರಸ್ಕರಿಸಬೇಕು. ಅರ್ಜಿದಾರನಿಗೆ ವೈಯಕ್ತಿಕವಾಗಿ ಲಿಖಿತ ನೋಟಿಸ್ ನೀಡಿ ಅಹವಾಲು ಸಲ್ಲಿಸಲು ಅವಕಾಶ ನೀಡಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ಮಾರ್ಗಸೂಚಿಯಂತೆ ಗ್ರಾಮ ಸಭೆ ಅಥವಾ ಅರಣ್ಯ ಹಕ್ಕು ಸಮಿತಿ ಸದಸ್ಯರು, ಅರ್ಜಿ ಪುನರ್ ಪರಿಶೀಲಿಸುವ ವೇಳೆ ಅರಣ್ಯ ಮತ್ತು ಕಂದಾಯ ಇಲಾಖೆ ಹಕ್ಕಿಗೆ ಸಂಬಂಧಪಟ್ಟ ದಾಖಲೆ ಬಗ್ಗೆ ಮಾರ್ಗದರ್ಶನ ನೀಡಬೇಕು. ತಿರಸ್ಕೃತಗೊಂಡ ಅರ್ಜಿ ಪ್ರತಿಯನ್ನು ಅತಿಕ್ರಮಣದಾರರಿಗೆ ತಲುಪಿಸಬೇಕು. ಜೂನ್ 30ರೊಳಗೆ ಅರ್ಜಿ ವಿಲೇವಾರಿ ನಡೆಸಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವೇದಿಕೆ ಜಿಲ್ಲಾಧ್ಯಕ್ಷ ಎ. ರವೀಂದ್ರ ನಾಯ್ಕ ನೇತೃತ್ವ ವಹಿಸಿದ್ದರು. ತಾಲೂಕಾಧ್ಯಕ್ಷ ಶಿವಾನಂದ ಜೋಗಿ, ಜಿಲ್ಲಾ ಸಂಚಾಲಕ ರಾಣೋಜಿ ಚಿಗಳ್ಳಿ, ಪ್ರಶಾಂತ ಜೈನ್, ಲಕ್ಷ್ಮಣ ವಾಲ್ಮೀಕಿ, ಗೌಸು ಖಾನ್, ಮಲ್ಲಿಕಾರ್ಜುನ, ಅಬ್ದುಲ್ ಚಪಾತಿ, ಹನುಮಂತಪ್ಪ ಕಾಡಿಗಿ, ಮಂಜುನಾಥ ಅಣ್ವೇಕರ, ರಾಮಾ ಜೋಗಿ ಚಳಗೇರಿ, ದೇವರಾಜ ಗೊಂಡ, ಮಂಜುನಾಥ ಮರಾಠಿ, ಭೀಮ್ಸಿ ವಾಲ್ಮೀಕಿ, ಮಂಜುನಾಥ ಶಾಸ್ತ್ರಿ, ಸೀತಾರಾಮ ಗೌಡ, ಪ್ರಭಾಕರ ನಾಯ್ಕ, ಮೋಹನಗೌಡ, ಸೀತಾರಾಮ ನಾಯ್ಕ, ರಾಜೇಶ ನಾಯ್ಕ, ದಯಾನಂದ ಮಿರಾಶಿ ಇತರರಿದ್ದರು.

ಕಚೇರಿಗೆ ಮುತ್ತಿಗೆ ಯತ್ನ

ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿರಸಿಗೆ ಹೋಗಿದ್ದರು. ಅಧಿಕಾರಿಗಳು ಬರಲೇಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರಾದರೂ ಸಿಪಿಐ ಶಿವಾನಂದ ಚಲವಾದಿ ತಡೆದರು. ಎರಡು ತಾಸಿನ ನಂತರ ಆಗಮಿಸಿದ ಇಲಾಖೆ ಅಧಿಕಾರಿ ಗೋಪಾಲಕೃಷ್ಣ, ಪ್ರತಿಭಟನಾಕಾರರಲ್ಲಿ ಕ್ಷಮೆ ಕೋರಿ ಮನವಿ ಸ್ವೀಕರಿಸಿದರು.

ಅರಣ್ಯ ಹಕ್ಕು ಮಂಜೂರಿ ಪ್ರಕ್ರಿಯೆಯಲ್ಲಿ ಸ್ಥಳೀಯ ಶಾಸಕರು ನಿರ್ಲಕ್ಷ್ಯ ತೋರಿದ್ದಾರೆ. ಕೇವಲ ಮಂತ್ರಿಗಿರಿ ಪಡೆಯಲು ಓಡಾಡುತ್ತಿದ್ದಾರೆ. ಹಕ್ಕು ಮಂಜೂರು ಮಾಡಿಸಲು ಅವರ ನಿರಾಸಕ್ತಿ ಎದ್ದು ಕಾಣುತ್ತಿದೆ.
| ಎ. ರವೀಂದ್ರ ನಾಯ್ಕ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ.

Leave a Reply

Your email address will not be published. Required fields are marked *