ಅರಣ್ಯೀಕರಣ ನೆಪದಲ್ಲಿ ಹಣ ಲೂಟಿ

ಕಾರವಾರ: ಶಿರಸಿ ಅರಣ್ಯ ವಲಯದಲ್ಲಿ ಅರಣ್ಯೀಕರಣದ ನೆಪದಲ್ಲಿ ಭಾರಿ ಹಣ ಲೂಟಿ ಮಾಡುವುದು ಪತ್ತೆಯಾಗಿದ್ದು, ಈ ಸಂಬಂಧ ಕಾರವಾರ ಎಸಿಬಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

2017ನೇ ಸಾಲಿನಲ್ಲಿ ವಿವಿಧೆಡೆ ಗಿಡಗಳ ಪ್ಲಾಂಟೇಶನ್ ಕಾಮಗಾರಿಗಳನ್ನು ಕೈಗೊಂಡಿರುವ ಅರಣ್ಯಾಧಿಕಾರಿಗಳು ಅಂದಾಜು ಪತ್ರಿಕೆಯ ಪ್ರಕಾರ ಗಿಡಗಳನ್ನು ನಾಟಿ ಮಾಡದೇ ಹೋದರೂ ಗುತ್ತಿಗೆದಾರನಿಗೆ ವೋಚರ್ ಸೃಷ್ಟಿ ಮಾಡಿ ಬಿಲ್ ಪಾವತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ 2018ರ ಮೇ ತಿಂಗಳಲ್ಲಿ ಪರಿಶೀಲನೆ ಕೈಗೊಂಡ ಅರಣ್ಯ ಸಂಚಾರಿ ದಳವು ಅಕ್ರಮ ನಡೆದಿರುವುದನ್ನು ಖಚಿತಪಡಿಸಿ, ಶಿರಸಿಯಲ್ಲಿರುವ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ನೀಡಿದೆ. ಆದರೆ, ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಈಗ ಎಸಿಬಿ ಡಿವೈಎಸ್​ಪಿ ಗಿರೀಶ ನೇತೃತ್ವದ ತಂಡ ತನಿಖೆ ಕೈಗೊಂಡಿದೆ.

ಅಕ್ರಮ ಹೇಗೆ?: ಅರಣ್ಯ ಇಲಾಖೆಗೆ ಗಿಡಗಳ ಗುಂಡಿ ತೆಗೆಯಲು, ಮತ್ತೆ ಅದನ್ನು ಅರ್ಧ ಮುಚ್ಚಿ ಸಸಿಗಳನ್ನು ನಾಟಿ ಮಾಡಲು ಮತ್ತು ಪ್ರೂನಿಂಗ್ ಕೈಗೊಳ್ಳಲು… ಹೀಗೆ ಪ್ರತ್ಯೇಕ ವಿಭಾಗಗಳಲ್ಲಿ ಹಣ ಬರುತ್ತದೆ. ಅಲ್ಲದೆ, ತಂತಿ ಬೇಲಿ ನಿರ್ವಣಕ್ಕೂ ಅವಕಾಶವಿದೆ. ಒಟ್ಟಾರೆ ಒಂದು ಗಿಡ ನೆಟ್ಟು ಪೋಷಣೆ ಮಾಡಲು ಸುಮಾರು 400 ರೂ. ಖರ್ಚು ತೋರಿಸಲಾಗುತ್ತದೆ. ನೈಸರ್ಗಿಕವಾಗಿ ಬೆಳೆದ ಗಿಡಗಳನ್ನೇ ತಾವು ನಾಟಿ ಮಾಡಿದ್ದು ಎಂದು ತೋರಿಸಿ, ಅದಕ್ಕೆ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಕೇವಲ ಒಂದೇ ವಲಯದಲ್ಲಿ ಕೋಟ್ಯಂತರ ರೂ. ಲೂಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಅಕ್ರಮ ಬಯಲಿಗೆ: ದೂರಿನ ಹಿನ್ನೆಲೆಯಲ್ಲಿ 2018ರ ಮೇನಲ್ಲಿ ಶಿರಸಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಶಿರಸಿ ವಲಯದ 3 ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಅಕ್ರಮವನ್ನು ಪತ್ತೆ ಹಚ್ಚಿದ್ದಾರೆ. ಸ್ಥಳೀಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಯ ಸಹಿ ಪಡೆದಿದ್ದು, ನೆಟ್ಟ ಗಿಡಗಳನ್ನು ಸುಣ್ಣದ ಗುರುತು ಹಾಕಿ ಲೆಕ್ಕ ಮಾಡಿದ್ದಾರೆ. ಶಿರಸಿಯ ಸದಾಶಿವಳ್ಳಿಯ ಅರಣ್ಯ ಸರ್ವೆ ನಂಬರ್ 120, 121 ರಲ್ಲಿ ಒಟ್ಟು 25 ಹೆಕ್ಟೇರ್ ಪ್ರದೇಶದಲ್ಲಿ 15625 ಗಿಡಗಳನ್ನು ನಾಟಿ ಮಾಡಲು ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಆದರೆ, ಸ್ಥಳದಲ್ಲಿ ಎಣಿಸಿದಾಗ ಕೇವಲ 4128 ಗಿಡಗಳನ್ನು ನಾಟಿ ಮಾಡಿರುವುದು ಕಂಡು ಬಂದಿದೆ. ಅಲ್ಲದೆ, ಯೋಜನೆಯಂತೆ 1800 ತಂತಿಬೇಲಿ ಕಂಬ ಹಾಕಬೇಕಿದ್ದಲ್ಲಿ 1450 ಕಂಬ ಹಾಕಿರುವುದು ಕಂಡುಬಂದಿದೆ.

ಕಲ್ಕುಣಿ ಗ್ರಾಮದ ಅರಣ್ಯ ಸರ್ವೆ ನಂಬರ್ 12ಅ1 ರಲ್ಲಿ ಐದು ಹೆಕ್ಟೇರ್ ಪ್ರದೇಶದಲ್ಲಿ ಅಂಗೀಕೃತ ಯೋಜನೆಯಂತೆ 7500 ಸಸಿಗಳನ್ನು ನಾಟಿ ಮಾಡಬೇಕಿತ್ತು. ಆದರೆ, ಕೇವಲ 2080 ಸಸಿಗಳು ಪತ್ತೆಯಾಗಿವೆ. 144ರ ಬದಲು 100 ತಂತಿಬೇಲಿ ಕಂಬ ಹಾಕಿರುವುದು ಕಂಡುಬಂದಿದೆ.

ಕಾನಸೂರು ಅರಣ್ಯ ಸರ್ವೆ ನಂಬರ್ 59 ಹಾಗೂ 13 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 8125 ಗಿಡಗಳನ್ನು ನಾಟಿ ಮಾಡಲು ಅನುಮೋದನೆ ಪಡೆದು 2687 ಗಿಡಗಳನ್ನು ನಾಟಿ ಮಾಡಿರುವುದು ಕಂಡುಬಂದಿದೆ ಎಂದು ಅರಣ್ಯ ಸಂಚಾರಿ ದಳ ವರದಿ ನೀಡಿದೆ.

ಅಕ್ರಮ ಬೆಳಕಿಗೆ ಬಂದಿದ್ದು ಹೇಗೆ: ಹುಬ್ಬಳ್ಳಿಯ ಆರ್​ಟಿಐ ಕಾರ್ಯಕರ್ತ ಹಾಗೂ ಪರಿಸರವಾದಿ ಮಂಜುನಾಥ ಬುದ್ದಿ ಅವರು ಮಾಹಿತಿ ಹಕ್ಕಿನ ಮೂಲಕ ಪಡೆದ ದಾಖಲೆಗಳ ಪ್ರಕಾರ ಅಕ್ರಮ ಬಯಲಿಗೆ ಬಂದಿದೆ. ಅಕ್ರಮವಾಗಿರುವ ಬಗೆಗೆ ಅರಣ್ಯ ಸಂಚಾರಿ ದಳ ನೀಡಿರುವ ವರದಿಯೂ ‘ವಿಜಯವಾಣಿ’ಗೆ ಲಭ್ಯವಾಗಿದೆ.

ಯೋಜನೆಯಲ್ಲೂ ನಡೆದ ಕಾಮಗಾರಿಯಲ್ಲೂ ಇರುವ ವ್ಯತ್ಯಾಸ: ಶಿರಸಿ ಕಲ್ಕುಣಿಯಲ್ಲಿ ಪ್ರತಿ 7 ಅಡಿಗೆ ಒಂದು ಗಿಡ ನಾಟಿ ಮಾಡುವುದಾಗಿ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಆದರೆ, 2, 3 ಅಡಿಗೊಂದು ಗಿಡಗಳನ್ನು ನೆಟ್ಟಿರುವುದು ಕಂಡುಬಂದಿವೆ. ಅಂದರೆ, ಸಹಜವಾಗಿ ಕಾಡಿನಲ್ಲಿ ಬೆಳೆದ ಸಸಿಗಳನ್ನು ಕೂಡ ತಾವೇ ನೆಟ್ಟಿದ್ದೇವೆ ಎಂದು ಸಂಬಂಧಪಟ್ಟವರು ಲೆಕ್ಕಕ್ಕೆ ತೋರಿಸಿದ್ದಾರೆ.

ಶಿರಸಿಯ ಕಾನಸೂರಿನಲ್ಲಿ 5 ಅಡಿಗೊಂದು ಗಿಡ ನಾಟಿ ಮಾಡುವುದಾಗಿ ಯೋಜನೆ ರೂಪಿಸಿ ಅನುಮೋದನೆ ಪಡೆಯಲಾಗಿದೆ. ಅಲ್ಲೂ ಗಿಡಗಳ ಅಂತರ ನಿರ್ವಹಣೆಯಾಗಿಲ್ಲ.

ಒಟ್ಟಾರೆ 11 ಜಾತಿಯ ಗಿಡಗಳನ್ನು ನಾಟಿ ಮಾಡಲಾಗಿದೆ. ಆದರೆ, ತಾವು 58 ಜಾತಿಯ ಗಿಡಗಳನ್ನು ನಾಟಿ ಮಾಡಿರುವುದಾಗಿ ಅರಣ್ಯಾಧಿಕಾರಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

ಮತ್ತೊಂದು ತನಿಖೆ: ಹುಬ್ಬಳ್ಳಿಯ ಆರ್​ಟಿಐ ಕಾರ್ಯಕರ್ತ ಹಾಗೂ ಪರಿಸರವಾದಿ ಮಂಜುನಾಥ ಬುದ್ದಿ ಮಾಹಿತಿ ಹಕ್ಕಿನ ಮೂಲಕ ಪಡೆದ ದಾಖಲೆಗಳಿಂದ ಅಕ್ರಮ ಬಯಲಿಗೆ ಬಂದಿದೆ. ಅಕ್ರಮವಾಗಿರುವ ಬಗೆಗೆ ಅರಣ್ಯ ಸಂಚಾರಿ ದಳ ನೀಡಿರುವ ವರದಿಯೂ ‘ವಿಜಯವಾಣಿ’ಗೆ ಲಭ್ಯವಾಗಿದೆ. ಅರಣ್ಯ ಸಂಚಾರಿ ದಳದ ವರದಿಯಲ್ಲಿ ಅಕ್ರಮ ನಡೆದಿದೆ ಎಂದು ಸ್ಪಷ್ಟವಾಗಿ ನಮೂದಾಗಿದ್ದರೂ ಆ ವರದಿಯನ್ನು ಬದಿಗಿಟ್ಟ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಅಧಿಕಾರಿಗಳಿಂದಲೇ ಮತ್ತೊಂದು ತನಿಖೆ ಕೈಗೊಂಡು ಯಾವುದೇ ಅಕ್ರಮ ನಡೆದಿಲ್ಲ ಎಂದು ನಿರ್ಣಯಕ್ಕೆ ಬಂದಿದ್ದು, ದೂರನ್ನು ವಿಲೇಗೆ ತರಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ ಕೆನರಾ ವೃತ್ತ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಸಂಪರ್ಕಕ್ಕೆ ಸಿಗಲಿಲ್ಲ.