ಶಿರಸಿ: ಜಿಲ್ಲೆಯಲ್ಲಿ ಅರಣ್ಯ ಸಿಬ್ಬಂದಿ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಆತಂಕ ಉಂಟು ಮಾಡುವ ಜತೆ, ಮಾನಸಿಕ ಮತ್ತು ದೈಹಿಕ ದೌರ್ಜನ್ಯವೆಸಗುತ್ತಿದ್ದಾರೆ. ಇದನ್ನು ಮುಂದುವರಿಸಿದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಮುಖರು ಎಚ್ಚರಿಸಿದ್ದಾರೆ.
ಸೋಮವಾರ ಸಿಸಿಎಫ್ ಯತೀಶ ಕುಮಾರ ಅವರನ್ನು ಭೇಟಿ ಮಾಡಿದ ಹೋರಾಟಗಾರರ ವೇದಿಕೆ ಪ್ರಮುಖರು, ಅರಣ್ಯ ಸಿಬ್ಬಂದಿ ವಿರುದ್ಧ ದೂರು ನೀಡಿದರು. ಇತ್ತೀಚಿನ ದಿನಗಳಲ್ಲಿ ಜೊಯಿಡಾ, ದಾಂಡೇಲಿ, ಹಳಿಯಾಳ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಜನಸಾಮಾನ್ಯ ಮತ್ತು ಅರಣ್ಯ ವಾಸಿಗಳ ಮೇಲೆ ಏಕಾಏಕಿಯಾಗಿ ಮನೆಗೆ ನುಗ್ಗಿ ಮಹಿಳೆ ಇರುವ ಸಂದರ್ಭದಲ್ಲಿ ಅಮಾನವೀಯವಾಗಿ ವರ್ತಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಇಬ್ರಾಹಿಂ ನಬಿ ಸಾಬ್, ಲಕ್ಷ್ಮಣ ಮಾಳಕ್ಕಣ್ಣನವರ, ತಿಮ್ಮಣ್ಣ ಮರಾಠಿ, ರಾಜು ಆರೇರ, ಶಿವಪ್ಪ ಹಂಚಿನಕೇರಿ ಮುಂತಾದವರು ಉಪಸ್ಥಿತರಿದ್ದರು.
ಹೈಕೋರ್ಟ್ ಅರಣ್ಯ ವಾಸಿಗಳಿಗೆ ಆತಂಕ ಮತ್ತು ಒಕ್ಕಲೆಬ್ಬಿಸಬಾರದೆಂಬ ಸ್ಪಷ್ಟ ನಿರ್ದೇಶನದ ಆದೇಶ ನೀಡಿದೆ. ಆದರೂ ಅರಣ್ಯ ಸಿಬ್ಬಂದಿ ಕಾನೂನು ಬಾಹಿರ ದುರ್ನಡತೆ ಮುಂದುವರಿಸಿದ್ದಾರೆ. ದಿನಕ್ಕೊಂದರಂತೆ ಆಗುತ್ತಿರುವ ದೌರ್ಜನ್ಯದ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿಸಿರುವುದು ವಿಷಾದಕರ. ಇನ್ಮುಂದೆ ಅರಣ್ಯ ಸಿಬ್ಬಂದಿ ಕಾನೂನು ಬಾಹಿರ ಕೃತ್ಯ ನಡೆಸಿದರೆ ಉಗ್ರ ಹೋರಾಟ ಮಾಡಲಾಗುವುದು. | ರವೀಂದ್ರ ನಾಯ್ಕ ಅಧ್ಯಕ್ಷ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ