ಅರಕೇರಾ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ, ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಮಕ್ಕಳಲ್ಲಿ ಅಪೌಷ್ಟಿಕ ನಿವಾರಣೆ ಉದ್ದೇಶದಿಂದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಕ್ಷರ ದಾಸೋಹ ಯೋಜನೆ ಜಾರಿಗೊಳಿಸಿದ್ದರು. ಅರಕೇರಾದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2001ರಲ್ಲಿ ಅಕ್ಷರ ದಾಸೋಹ ಯೋಜನೆಗೆ ಎಸ್.ಎಂ.ಕೃಷ್ಣ ಚಾಲನೆ ನೀಡಿದ್ದರು. ಆಗ ಎಚ್.ವಿಶ್ವನಾಥ ಶಿಕ್ಷಣ ಸಚಿವರಾಗಿದ್ದರು. ದಿ.ಎ.ವೆಂಕಟೇಶ ನಾಯಕ ರಾಯಚೂರು ಸಂಸದ ಹಾಗೂ ದಿ.ಯಲ್ಲಪ್ಪ ಅಕ್ಕರಕಿ ದೇವದುರ್ಗ ಕ್ಷೇತ್ರದ ಶಾಸಕರಾಗಿದ್ದರು.
2002 ರವರೆಗೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಅಕ್ಷರ ದಾಸೋಹ ಯೋಜನೆಯನ್ನು 2003 ರಲ್ಲಿ ರಾಜ್ಯಕ್ಕೆ ವಿಸ್ತರಿಸಲಾಗಿತ್ತು. ಮೊದಲು ಪ್ರಾಥಮಿಕ ಶಾಲೆಗಳಿಗೆ ಸೀಮಿತವಾಗಿದ್ದ ಯೋಜನೆ ನಂತರ ಪ್ರೌಢಶಾಲೆ ವಿದ್ಯಾಥಿಗಳಿಗೂ ವಿಸ್ತರಿಸಲಾಯಿತು.