ಅರಕೆರೆ ಗ್ರಾಪಂನಲ್ಲಿ ಬಗೆದಷ್ಟೂ ಅಕ್ರಮ ಬಯಲು

ಹಾರೋಹಳ್ಳಿ: ಚೀನಾದಲ್ಲಿ ಇಂಜಿನಿಯರ್ ಆಗಿರುವ ವ್ಯಕ್ತಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿರುವ, ಮೃತಪಟ್ಟು 3 ರಿಂದ 5 ವರ್ಷ ಕಳೆದಿರುವವರಿಗೂ ಹಣ ಪಾವತಿಯಾಗಿರುವ ಅಕ್ರಮ ಅರಕೆರೆ ಗ್ರಾಪಂನಲ್ಲಿ ಬೆಳಕಿಗೆ ಬಂದಿದೆ.

ಕನಕಪುರ ತಾಲೂಕು ಅರಕೆರೆ ಗ್ರಾಪಂ ಸಮುದಾಯ ಭವನದಲ್ಲಿ ಗುರುವಾರ ನಡೆದ ಸಾಮಾಜಿಕ ಲೆಕ್ಕಪರಿಶೋಧನಾ ಮೊದಲನೇ ಸುತ್ತಿನ ವಿಶೇಷ ಗ್ರಾಮಸಭೆಯಲ್ಲಿ ಇಂಥ ಚಮತ್ಕಾರಿಕ ಮಾಹಿತಿ ಬಹಿರಂಗಗೊಂಡಿವೆ.

ಚೀನಾದಲ್ಲಿ ಇಂಜಿನಿಯರ್ ಆಗಿರುವ ದೊಡ್ಡಗುಳಿಯ ಡಿ.ಎಂ.ರಾಜಿ ಅರಕೆರೆ ಗ್ರಾಪಂ ವ್ಯಾಪ್ತಿಯ ಕೃಷಿಹೊಂಡದಲ್ಲಿ ಕೆಲಸ ಮಾಡಿದ್ದು, ಅವರ ಹೆಸರಿಗೆ ಹಣ ಪಾವತಿಸಲಾಗಿದೆ ಎನ್ನುವ ಮಾಹಿತಿಯನ್ನು ಸಾಮಾಜಿಕ ಲೆಕ್ಕ ಪರಿಶೋಧಕ ನಾರಾಯಣ್ ಬಹಿರಂಗಪಡಿಸಿದ್ದಾರೆ.ಡಿ.ಎಂ.ರಾಜಿ ದೊಡ್ಡಗುಳಿಯಲ್ಲಿ ಜಾಬ್​ಕಾರ್ಡ್ ಹೊಂದಿದ್ದು, ಕೃಷಿಹೊಂಡದಲ್ಲಿ ಕೆಲಸ ಮಾಡಿದ್ದಾರೆಂದು 7,080 ರೂ.ಪಾವತಿ ಮಾಡಲಾಗಿದೆ.

ಮೃತ 28 ಮಂದಿ ಹೆಸರಲ್ಲೂ ಹಣ ಪಾವತಿ!: ನರೇಗಾ ಯೋಜನೆಯಲ್ಲಿ ಕಾಮಗಾರಿ ಅನುಷ್ಠಾನ ಮಾಡುವುದಕ್ಕಿಂತ ಸುಮಾರು ವರ್ಷಗಳ ಹಿಂದೆ ಸಾವನ್ನಪ್ಪಿರುವ 28 ಮಂದಿ ಕೆಲಸ ಮಾಡಿದ್ದಾರೆಂದು ಹಾಜರಾತಿ ನೀಡಿ 94,164 ರೂ. ಹಣ ಪಾವತಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ನೌಕರರೂ ನರೇಗಾದಲ್ಲಿ ಕೆಲಸ ಮಾಡಿದ್ದಾರೆ ಎಂದು 105 ಮಂದಿಗೆ 3,28,645 ರೂ ಪಾವತಿಸಿರುವುದು ತಿಳಿದುಬಂದಿದೆ.

ಬೇರೆಡೆ ವಾಸಿಸುತ್ತಿರುವ 177 ಮಂದಿಗೆ 5,39,068 ರೂ., 14 ವಿದ್ಯಾರ್ಥಿಗಳಿಗೆ 41,772 ರೂ., ದಾಖಲೆಗಳಿಲ್ಲದೆ 78 ಕಾಮಗಾರಿಗಳಿಗೆ ಬರೋಬ್ಬರಿ 21,44,000 ರೂ. ಜಮೆ ಮಾಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14,395 ರೂ.ಪಾವತಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ಸಭೆಯಲ್ಲಿ ದೋಷ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದರೂ ಅಕ್ರಮ ನಡೆಯುತ್ತಲೇ ಇದೆ ಎಂದು ದೊಡ್ಡಗುಳಿ ಗ್ರಾಮಸ್ಥ ಮೋಟೇಗೌಡ ತಿಳಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾದವರು ತಪ್ಪೊಪ್ಪಿಕೊಳ್ಳಬೇಕು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಮುನಿಹುಚ್ಚೇಗೌಡ ಆಗ್ರಹಿಸಿದರು.

ಅಧಿಕಾರಿಗಳೇ ಉತ್ತರಿಸಲಿ: ಸಭೆಯಲ್ಲಿ ಮಂಡಿಸಿದ ಲೆಕ್ಕಕ್ಕೆ ದಾಖಲೆಗಳಿಲ್ಲ ಎಂದಾಗ ಅಕ್ರಮ ನಡೆದಿದೆ ಎಂದೇ ಭಾವಿಸಬೇಕಾಗುತ್ತದೆ. ತಪ್ಪುಗಳನ್ನು ಯಾವ ರೀತಿ ಸರಿಪಡಿಸಿಕೊಂಡು ಅಕ್ರಮವಾಗಿ ಬಳಕೆಯಾದ ಹಣವನ್ನು ಸರ್ಕಾರ ಅಥವಾ ಇಲಾಖೆಗೆ ಹಿಂತಿರುಗಿಸುತ್ತಾರೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕು ಎಂದು ನೋಡಲ್ ಅಧಿಕಾರಿಯಾಗಿದ್ದ ಇಒ ಯತಿಕುಮಾರ್ ಹೇಳಿದರು.

ಈ ಲೋಪಗಳೆಲ್ಲ ಹಿಂದಿನ ಗ್ರಾಪಂ ಅಧಿಕಾರಿ ಪುಟ್ಟರಾಮಯ್ಯ ಅವಧಿಯಲ್ಲಿ ನಡೆದಿವೆ. ನಾನು ಒಂದು ವಾರದ ಹಿಂದೆಯಷ್ಟೇ ಬಂದಿದ್ದೇನೆ. ಅನೇಕ ಕಡತಗಳನ್ನು ಲೆಕ್ಕಪರಿಶೋಧನೆಗೆ ನೀಡಿಲ್ಲ. ಈ ಲೋಪಗಳಿಗೆ ಅವರು ಉತ್ತರಿಸಬೇಕು.

| ದಾಸಪ್ಪ, ಪಿಡಿಒ ಅರಕೆರೆ ಗ್ರಾಪಂ

ಕನಕಪುರ ತಾಲೂಕಿನಲ್ಲಿ 40 ಸಾವಿರ ಜಂಟಿ ಖಾತೆಗಳಿದ್ದವು. ನರೇಗಾ ಅನುಷ್ಠಾನಗೊಳಿಸುವಾಗ ಕುಟುಂಬದ ಖಾತೆಗಳಿಗೆ ಜಮೆಯಾಗಿರಬಹುದು. ಅದಕ್ಕಾಗಿ ಎಲ್ಲ ಸದಸ್ಯರಿಗೂ ಪ್ರತ್ಯೇಕ ಖಾತೆ ಮಾಡಲಾಗುತ್ತಿದ್ದು, ಇನ್ನೂ 6000 ಖಾತೆ ಬಾಕಿ ಇವೆ. ಅದನ್ನು ಸರಿಮಾಡಿ ನಂತರ ಆಧಾರ್ ಲಿಂಕ್ ಮಾಡಲಾಗುತ್ತದೆ. ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

| ಮುಲೈಮಹೇಲನ್, ಜಿಪಂ ಸಿಇಒ, ರಾಮನಗರ

ಅರಕೆರೆ ಗ್ರಾಪಂನಲ್ಲಿ ಚೀನಾದಲ್ಲಿರುವ ಇಂಜಿನಿಯರ್​ಗೆ ಹಣಪಾವತಿ ವಿಚಾರ ಗಮನಕ್ಕೆ ಬಂದಿಲ್ಲ. ಸಾಮಾಜಿಕ ಲೆಕ್ಕಪರಿಶೋಧನಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು.

| ಶಿವರಾಮ್ ತಾಪಂ ಇಒ, ಕನಕಪುರ