ಚಿತ್ರದುರ್ಗ: ಮೆದೇಹಳ್ಳಿ ರಸ್ತೆಯ ಅಯ್ಯಪ್ಪ ಸ್ವಾಮಿ 25ನೇ ವರ್ಷದ ಲಕ್ಷ ದೀಪೋತ್ಸವ, ಮಕರ ಸಂಕ್ರಾಂತಿಯ ಪೂಜೆ ಜ. 14ರಂದು ಸಂಜೆ 5.30ಕ್ಕೆ ನೆರವೇರಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಅಯ್ಯಪ್ಪಸ್ವಾಮಿ ಆಭರಣಗಳ ಮೆರವಣಿಗೆ ನಗರದ ರಾಜ ಬೀದಿಗಳಲ್ಲಿ ಸೋಮವಾರ ಶಾಸ್ತ್ರೋಕ್ತವಾಗಿ ಜರುಗಿತು.
ಶಬರಿಮಲೆಯಲ್ಲಿ ವರ್ಷಕೊಮ್ಮೆ ಅಯ್ಯಪ್ಪಸ್ವಾಮಿ ಮೂರ್ತಿಗೆ ಆಭರಣಗಳನ್ನಾಕಿ ಮೆರವಣಿಗೆ ನಡೆಸುವ ಮಾದರಿಯಲ್ಲೇ ಇಲ್ಲಿನ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅನುಸರಿಸುತ್ತ ಬಂದಿದೆ.
ನಗರದ ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಆರಂಭವಾದ ಭವ್ಯ ಮೆರವಣಿಗೆಯೊಂದಿಗೆ ಬೆಳ್ಳಿ ಪಲ್ಲಕ್ಕಿಯನ್ನು ಅಯ್ಯಪ್ಪ ಮಾಲಾಧಾರಿಗಳು ಹೊತ್ತು ದೇಗುಲಕ್ಕೆ ತಂದರು.
ಸ್ವಾಮಿ ದೇಗುಲದಲ್ಲಿ ಪೂಜೆ ಸ್ವೀಕರಿಸಿ, ಹೊರ ಬರುತ್ತಿದ್ದಂತೆ ಗರುಡ ಆಗಮಿಸಿ ಆಭರಣದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು. ಅಲ್ಲಿಂದ ವಿವಿಧ ದೇಗುಲದಲ್ಲಿ ಪೂಜೆ ಸ್ವೀಕರಿಸಿ, ಅಯ್ಯಪ್ಪ ದೇಗುಲಕ್ಕೆ ತಲುಪಿದ ನಂತರ ಆ ಆಭರಣಗಳನ್ನು ಅಯ್ಯಪ್ಪಸ್ವಾಮಿಗೆ ತೊಡಿಸಲಾಯಿತು.
14ರ ಸಂಜೆ 5ಕ್ಕೆ ಧಾರ್ಮಿಕ ಕಾರ್ಯಕ್ರಮವನ್ನು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಉದ್ಘಾಟಿಸುವರು. ಟ್ರಸ್ಟ್ನ ಅಧ್ಯಕ್ಷ ಶರಣ್‌ಕುಮಾರ್ ಅಧ್ಯಕ್ಷತೆ ವಹಿಸುವರು. 5.30ಕ್ಕೆ ದೀಪೋತ್ಸವವನ್ನು ಸಚಿವ ಡಿ. ಸುಧಾಕರ್, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಎಂಎಲ್ಸಿ ಕೆ.ಎಸ್. ನವೀನ್ ಉದ್ಘಾಟಿಸುವರು.
ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಲಕ್ಷ್ಮೀಕಾಂತ್‌ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ. ಮಹಾಂತೇಶ್, ಎಚ್.ಎಂ. ದ್ಯಾಮಣ್ಣ ವರ್ತಕರಾದ ಉದಯ್ ಶೆಟ್ಟಿ, ಐಶ್ವರ್ಯ ಗ್ರೂಪ್ಸ್ೃ ಹೋಟೆಲ್ ಮಾಲೀಕ ಅರುಣ್‌ಕುಮಾರ್, ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ದೀಪಾನಂದ, ಎಂ.ಎಸ್. ಪ್ರಾಣೇಶ್, ಸಿ. ಅಶೋಕ್, ಮೆದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
20ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.