ಅಮ್ಮನ ಮನೆಗೆ ವಿದೇಶದಲ್ಲಿ ಪ್ರಿಮಿಯರ್

ಬೆಂಗಳೂರು: ನಟ ರಾಘವೇಂದ್ರ ರಾಜ್​ಕುಮಾರ್ 15 ವರ್ಷಗಳ ನಂತರ ಬಣ್ಣ ಹಚ್ಚಿರುವ ‘ಅಮ್ಮನ ಮನೆ’ ಚಿತ್ರ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಮಾರ್ಚ್ 1ರಂದು ರಾಜ್ಯಾದ್ಯಂತ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಆದರೆ, ಅದಕ್ಕೂ ಮೊದಲು ವಿದೇಶಗಳಲ್ಲಿ ಪ್ರಿಮಿಯರ್ ಶೋ ಆಗುತ್ತಿರುವುದು ವಿಶೇಷ. ಹೌದು, ಫೆ.28ರಂದು ಅಕ್ಲಾಂಡ್, ಮೆಲ್ಬೋರ್ನ್, ಸಿಂಗಾಪುರ ಮುಂತಾದ ಕಡೆ ಪ್ರಿಮಿಯರ್ ಶೋ ನಡೆಯಲಿದೆ. ಅಲ್ಲದೆ, ಸಿಂಗಾಪುರದಲ್ಲಿರುವ ಕನ್ನಡ ಒಕ್ಕೂಟಗಳು ರಾಘವೇಂದ್ರ ರಾಜ್​ಕುಮಾರ್ ಮತ್ತು ತಂಡವನ್ನು ಸಿಂಗಾಪುರಕ್ಕೆ ಆಹ್ವಾನಿಸಿದ್ದಾರೆ. ಆನಂತರ ಮಾರ್ಚ್ 1ರಂದು ಕರ್ನಾಟಕದಲ್ಲಿ ಪ್ರದರ್ಶನ ಆರಂಭಗೊಳ್ಳಲಿವೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿಖಿಲ್ ಮಂಜೂ ಲಿಂಗಯ್ಯ ಚಿತ್ರಕ್ಕೆ ನಿರ್ದೇಶನ ಮಾಡುವುದರೊಂದಿಗೆ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಆತ್ಮಶ್ರೀ ಮತ್ತು ಆರ್.ಎಸ್. ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.