Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಅಮೆರಿಕದ ನೈಜ ‘ಫಸ್ಟ್​ಲೇಡಿ’!

Sunday, 02.04.2017, 8:09 AM       No Comments

ಅಮೆರಿಕದ ಶಕ್ತಿಕೇಂದ್ರ ಶ್ವೇತಭವನದಲ್ಲಿ ಕಳೆದ ಬುಧವಾರ(ಮಾ.29) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ‘ಅಧ್ಯಕ್ಷರ ಸಹಾಯಕಿ’ಯಾಗಿ ಹೊಣೆಗಾರಿಕೆ ವಹಿಸಿಕೊಂಡರು. ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲೇ ಗಮನಸೆಳೆದಿದ್ದ ಇವಾಂಕಾ ಅನೌಪಚಾರಿಕ ವಾಗಿ ಶ್ವೇತಭವನದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ಅಧ್ಯಕ್ಷರಾಗಿರುವ ತಂದೆಗೆ ಸಲಹೆಗಳನ್ನು ನೀಡುತ್ತಿದ್ದಾರೆ ಎಂಬ ಸುದ್ದಿ ಆರಂಭದಿಂದಲೂ ಇತ್ತು. ಈಗ ಹೊಸ ಹೊಣೆಗಾರಿಕೆಯನ್ನು ಔಪಚಾರಿಕವಾಗಿ ವಹಿಸಿಕೊಂಡಿರುವ ಇವಾಂಕಾ ಶ್ವೇತಭವನದ ವೇತನರಹಿತ ಉದ್ಯೋಗಿಯಾಗಿರಲಿದ್ದಾರೆ.

‘ಸ್ವಸಾಮರ್ಥ್ಯ ಹಾಗೂ ವಿವೇಚನಾ ಶಕ್ತಿಯ ಮೇಲೆ ಅಧ್ಯಕ್ಷರಿಗೆ ನಾನು ಸಲಹೆ ನೀಡುವ ಕುರಿತಂತೆ ಹಲವರು ಕಳವಳ ಹಾಗೂ ಕಳಕಳಿಯನ್ನೂ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿದೆ. ಹಿತಾಸಕ್ತಿಗಳ ಸಂಘರ್ಷಕ್ಕೆ ಎಡೆಯಾಗದಂತೆ ಶ್ವೇತಭವನದಲ್ಲಿ ಅಧ್ಯಕ್ಷರಿಗೆ ಔಪಚಾರಿಕ ಸಲಹೆಗಾರ್ತಿಯಾಗಿ ಮುಂದುವರಿಯುತ್ತೇನೆ. ವೇತನ ಪಡೆಯದಿದ್ದರೂ, ಉಳಿದಂತೆ ಫೆಡರಲ್ ಉದ್ಯೋಗಿಗಳಿಗೆ ಲಾಗೂ ಆಗುವ ಎಲ್ಲ ನಿಯಮಗಳು, ನೀತಿಸಂಹಿತೆ ನನಗೂ ಅನ್ವಯವಾಗುತ್ತದೆ’ ಎಂದು ಇವಾಂಕಾ ಟ್ರಂಪ್ ಹೇಳಿಕೊಂಡಿದ್ದಾರೆ.

ಈ ಬೆಳವಣಿಗೆ ಇವಾಂಕಾ ಅವರನ್ನು ಮತ್ತೆ ‘ಲೈಮ್ೈಟ್’ಗೆ ತಂದು ನಿಲ್ಲಿಸಿದೆ. ಇವಾಂಕಾ ಉದ್ಯಮ ವಲಯದಲ್ಲಿ ಈಗಾಗಲೇ ಚಿರಪರಿಚಿತರು. ಜಗತ್ತಿನ ಅತ್ಯಂತ ಪ್ರಭಾವಿ ಯುವ ಮಹಿಳಾ ಉದ್ಯಮಿ ಎಂಬ ಪ್ರಸಿದ್ಧಿಯೂ ಅವರಿಗಿದೆ. ಮೂವತೆôದು ವರ್ಷ ವಯಸ್ಸಿನ ಇವಾಂಕಾ 2005ರಲ್ಲಿ ಟ್ರಂಪ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಸೇರ್ಪಡೆಯಾಗಿದ್ದು, ಕಂಪನಿಯ ರಿಯಲ್ ಎಸ್ಟೇಟ್ ಹಾಗೂ ಹೋಟೆಲ್ ಮ್ಯಾನೇಜ್​ವೆುಂಟ್ ವಿಭಾಗದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದರು. ಅದಕ್ಕೂ ಮುನ್ನ, ಫಾರೆಸ್ಟ್ ಸಿಟಿ ಎಂಟರ್​ಪ್ರೖೆಸಸ್ ಎಂಬ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು.

ಟ್ರಂಪ್ ಆರ್ಗನೈಸೇಷನ್​ಗೆ ಸೇರಿದ ಇವಾಂಕಾರ ಮೊದಲ ಆದ್ಯತೆ ಟ್ರಂಪ್ ಹೋಟೆಲ್ ಬ್ರ್ಯಾಂಡನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವುದಾಗಿತ್ತು. ಇಂದು ಈ ಹೋಟೆಲ್ ಜಾಗತಿಕ ಮಟ್ಟದ ಮುಂಚೂಣಿಯ ಹೋಟೆಲ್ ನಿರ್ವಹಣಾ ಕಂಪನಿಯಾಗಿ ಗುರುತಿಸಿಕೊಂಡಿದೆ.

2007ರಲ್ಲಿ ಡೈನಾಮಿಕ್ ಡೈಮಂಡ್ ಕಾಪೋರೇಷನ್ ಎಂಬ ವಜ್ರ ವ್ಯವಹಾರ ಕಂಪನಿ ಜತೆ ಸೇರಿಕೊಂಡು ಇವಾಂಕಾ ಟ್ರಂಪ್ ಫೈನ್ ಜುವೆಲರಿಯನ್ನು ಸ್ಥಾಪಿಸಿದರು. ಇದರ ಮೊದಲ ರಿಟೇಲ್ ಔಟ್​ಲೆಟ್ ಮ್ಯಾನ್​ಹಟನ್​ನಲ್ಲಿ ಆರಂಭವಾಯಿತು. 2015ರ ಅಕ್ಟೋಬರ್​ನಲ್ಲಿ ಇದು ಮುಚ್ಚಲ್ಪಟ್ಟಿತು ಎಂಬ ವರದಿ ಇದೆ. ಆದಾಗ್ಯೂ, 2016ರ ಅಕ್ಟೋಬರ್​ನಲ್ಲಿ ಕಂಪನಿಯ ವೆಬ್​ಸೈಟ್​ನಲ್ಲಿ ಟ್ರಂಪ್ ಟವರ್​ನಲ್ಲಿ ಫ್ಲ್ಯಾಗ್​ಷಿಪ್ ಬೊಟಿಕ್ ಇರುವುದಾಗಿ ಹೇಳಿತ್ತು. ಇದು ಏಕೈಕ ಜುವೆಲರಿಯಾಗಿದ್ದು, ಈ ಬ್ರ್ಯಾಂಡ್​ನ ಚಿನ್ನ, ವಜ್ರಾಭರಣಗಳು ಅಮೆರಿಕ, ಕೆನಡಾ ಸೇರಿ ಹಲವು ರಾಷ್ಟ್ರಗಳಲ್ಲಿ ಲಭ್ಯವಿದೆ ಎಂಬ ಮಾಹಿತಿ ಪ್ರಕಟಿಸಿತ್ತು. ಪ್ರಸ್ತುತ ಅವರು ಟ್ರಂಪ್ ಸಮೂಹ ಸಂಸ್ಥೆಯಲ್ಲಿ ಅಭಿವೃದ್ಧಿ ಹಾಗೂ ಗಳಿಕೆ ವಿಭಾಗದ ಎಕ್ಸಿಕ್ಯೂಟಿವ್ ವೈಸ್​ಪ್ರೆಸಿಡೆಂಟ್ ಹೊಣೆಗಾರಿಕೆ ಹೊಂದಿದ್ದಾರೆ. 2012ರ ಡಿಸೆಂಬರ್​ನಲ್ಲಿ ಹೆಡ್ಜ್ ಫಂಡ್ಸ್​ನ ಮಹಿಳಾ ಸದಸ್ಯರು ಇವಾಂಕಾರನ್ನು ಅವರ ಆಡಳಿತ ಮಂಡಳಿಗೆ ಸೇರ್ಪಡೆಗೊಳಿಸಿದರು. ಏತನ್ಮಧ್ಯೆ ಇವಾಂಕಾ ತಮ್ಮದೇ ಹೆಸರಿನ ಸಿದ್ಧ ಉಡುಪು, ಹ್ಯಾಂಡ್​ಬ್ಯಾಗ್, ಶೂ ಮತ್ತು ಇತರೆ ಫ್ಯಾಷನ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅಮೆರಿಕದ ಬಹುತೇಕ ಡಿಪಾರ್ಟ್ ಮೆಂಟಲ್ ಸ್ಟೋರ್​ಗಳಲ್ಲಿ ಲಭ್ಯವಿದೆ. ಅವರ ಈ ಉತ್ಪನ್ನಗಳಿಗೆ ಮೊಲದ ಚರ್ಮ ಬಳಸಲಾಗುತ್ತಿದೆ ಎಂದು ಆರೋಪಿಸಿ ಪ್ರಾಣಿ ಹಕ್ಕು ಸಂಘಟನೆಗಳವರು ಪ್ರತಿಭಟಿಸಿದ ಘಟನೆಗಳೂ ನಡೆದಿವೆ. ಅಷ್ಟೇ ಅಲ್ಲ, ಬಹುತೇಕ ವಿನ್ಯಾಸಗಳು ಖ್ಯಾತ ವಿನ್ಯಾಸಗಾರರ ನಕಲು ಎಂಬ ಆರೋಪವೂ ವ್ಯಕ್ತವಾಗಿತ್ತು. ಈ ವರ್ಷ ಫೆಬ್ರವರಿಯಲ್ಲಿ ಈ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲ ಎಂಬ ಕಾರಣಕ್ಕೆ ನೇಮನ್ ಮರ್ಕಸ್, ನಾರ್ಡ್​ಸ್ಟ್ರೋಮ್ ಮುಂತಾದ ಡಿಪಾರ್ಟ್​ವೆುಂಟಲ್ ಸ್ಟೋರ್​ಗಳು ‘ಇವಾಂಕಾ’ ಬ್ರ್ಯಾಂಡ್ ಉತ್ಪನ್ನಗಳನ್ನು ನಿರಾಕರಿಸಿದ್ದವು.

ಇವಾಂಕಾ ಹದಿನೇಳನೇ ವಯಸ್ಸಿನಲ್ಲಿ 1997ರಲ್ಲಿ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದ್ದರು. ವರ್ಸೆಸ್, ಮಾರ್ಕ್ ಬೌವರ್ ಮತ್ತು ಥೈರಿ ಮಗ್ಲರ್​ಗಳ ಪರವಾಗಿ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿದರು. ಇದಾಗಿ, ಟಾಮಿ ಹಿಲ್​ಫಿಗರ್, ಸಾಸ್ಸನ್ ಜೀನ್ಸ್​ಗಳ ಜಾಹೀರಾತಿನಲ್ಲೂ ಕಾಣಿಸಿಕೊಂಡರು. ಫೋರ್ಬ್ಸ್, ಗಾಲ್ಪ್ ಮ್ಯಾಗಜಿನ್, ಅವೆನ್ಯೂ, ಎಲ್ಲೆ ಮೆಕ್ಸಿಕೋ, ಟಾಪ್ ಚಾಯ್್ಸ ಮ್ಯಾಗಜಿನ್, ಹಾರ್ಪರ್ ಬಜಾರ್​ಗಳ ಮುಖಪುಟಗಳಲ್ಲಿ ಕಾಣಿಸಿಕೊಂಡರು. ಲವ್ ಎಫ್​ಎಂಡಿ ಮ್ಯಾಗಜಿನ್​ನಲ್ಲಿ ಹಲವು ಬಾರಿ ಇವಾಂಕಾ ಬಗ್ಗೆ ಲೇಖನಗಳು ಪ್ರಕಟವಾಗಿವೆ. ಇವಾಂಕಾಗೆ 2012ರಲ್ಲಿ ‘ಜೋಸೆಫ್ ವಾರ್ಟನ್ ಯಂಗ್ ಲೀಡರ್​ಷಿಪ್ ಅವಾರ್ಡ್’ ಅನ್ನು ಪೆನ್ನಿಸಿಲ್ವೇನಿಯಾದ ವಾರ್ಟನ್ ಸ್ಕೂಲ್ ಆಫ್ ಯೂನಿವರ್ಸಿಟಿಯ ‘ವಾರ್ಟನ್ ಕ್ಲಬ್ ಆಫ್ ನ್ಯೂಯಾರ್ಕ್’ ಕೊಟ್ಟಿತ್ತು. ಇದು ಇವಾಂಕಾರ ನಾಯಕತ್ವ ಗುಣಕ್ಕೆ ಸಂದ ಪ್ರತಿಷ್ಠಿತ ಗೌರವಗಳಲ್ಲೊಂದು.

ಈ ನಡುವೆ, 2006ರಲ್ಲಿ ಡೊನಾಲ್ಡ್ ಟ್ರಂಪ್ ಅವರು ನಿರ್ವಿುಸಿದ ‘ದ ಅಪ್ರೖೆಂಟಿಸ್’ ಎಂಬ 5 ಸಂಚಿಕೆಯ ಟಿವಿ ರಿಯಾಲಿಟಿ ಷೋ ಕಾರ್ಯಕ್ರಮದಲ್ಲಿ ಜಡ್ಜ್​ಗೆ ನೆರವಾಗುವುದಕ್ಕಾಗಿ ಭಾಗಿಯಾದರು. ಇದರಲ್ಲಿ ಗೆದ್ದವರನ್ನು ಡೊನಾಲ್ಡ್ ಟ್ರಂಪ್ ಅವರು ತಮ್ಮ ಕಂಪನಿಯಲ್ಲಿ ಉದ್ಯೋಗಕ್ಕೆ ನೇಮಿಸುತ್ತಿದ್ದರು. 2009ರಲ್ಲಿ ವ್ಯಾನಿಟಿ ಫೇರ್ ಪಾರ್ಟಿ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಕೆಪ್ಚರ್ ಸ್ಥಾನವನ್ನು ಇವಾಂಕಾ ತುಂಬಿದರು. ಇದಕ್ಕೆ ಹೊರತಾಗಿ, ಇವಾಂಕಾ ಮಾಧ್ಯಮಗಳ ಮೂಲಕವೂ ಪರಿಚಿತರು. ಫೋರ್ಬ್ಸ್, ದ ನ್ಯೂಯಾರ್ಕ್ ಟೈಮ್್ಸ, ದ ವಾಲ್ ಸ್ಟ್ರೀಟ್ ಜರ್ನಲ್, ವ್ಯಾನಿಟಿ ಫೇರ್, ಸಿಎನ್​ಎನ್, ಸಿಎನ್​ಬಿಸಿ, ಎನ್​ಬಿಸಿ’ಸ್​ನ ದ ಟುಡೇ ಷೋ, ಟೌನ್ ಆಂಡ್ ಕಂಟ್ರಿ, ಹಾರ್ಪರ್’ಸ್ ಬಜಾರ್ ಮುಂತಾದವುಗಳ ಮೂಲಕವೂ ನಾಡಿಗೆ ಚಿರಪರಿಚಿತರು.

ಮಾಡೆಲ್, ಉದ್ಯಮಿ, ಸೆಲೆಬ್ರಿಟಿಯಾಗಿರುವ ಇವಾಂಕಾ ಲೇಖಕಿಯೂ ಹೌದು. ‘ದ ಟ್ರಂಪ್ ಕಾರ್ಡ್: ಪ್ಲೇಯಿಂಗ್ ಟು ವಿನ್ ಇನ್ ವರ್ಕ್ ಆಂಡ್ ಲೈಫ್’ ಎಂಬ ಪುಸ್ತಕ ಬರೆದು 2009ರಲ್ಲಿ ಪ್ರಕಟಿಸಿದ್ದರು. 2016ರ ಜೂನ್​ನಲ್ಲಿ ಎರಡನೇ ಪುಸ್ತಕ ಪ್ರಕಟಿಸುವುದಾಗಿ ತಿಳಿಸಿದ ಅವರು ಈ ವರ್ಷ ಮೇ ತಿಂಗಳಲ್ಲಿ ‘ವುಮೆನ್ ಹೂ ವರ್ಕ್: ರೀರೈಟಿಂಗ್ ದ ರೂಲ್ಸ್ ಫಾರ್ ಸಕ್ಸಸ್’ ಎಂಬ ಪುಸ್ತಕ ಪ್ರಕಟಿಸಲು ಸನ್ನದ್ಧರಾಗಿದ್ದಾರೆ.

ಇವಾಂಕಾ ಮೇರಿ ಟ್ರಂಪ್ ಪೂರ್ಣ ಹೆಸರು. 1980ರ ಅಕ್ಟೋಬರ್ 30ರಂದು

ನ್ಯೂಯಾರ್ಕ್​ನ ಮ್ಯಾನ್​ಹಟನ್​ನಲ್ಲಿ ಜನನ. ತಂದೆ ಡೊನಾಲ್ಡ್ ಜಾನ್ ಟ್ರಂಪ್. ತಾಯಿ ಝೆಕ್ ಅಮೆರಿಕನ್ ಮಾಡೆಲ್ ಇವಾನಾ ಮೇರಿ. ಈ ದಂಪತಿಯ ಮೂವರು ಮಕ್ಕಳ ಪೈಕಿ ಇವಾಂಕಾ ಎರಡನೆಯವರು. ಇನ್ನಿಬ್ಬರು ಸಹೋದರರು- ಡೊನಾಲ್ಡ್ ಜೂನಿಯರ್ ಮತ್ತು ಎರಿಕ್. ಇವಾಂಕಾಗೆ ಹತ್ತು ವರ್ಷವಿದ್ದಾಗ ತಂದೆ-ತಾಯಿ ವಿಚ್ಛೇದನ ಪಡೆದಿದ್ದರು.ಡೊನಾಲ್ಡ್ ಟ್ರಂಪ್ ಬಳಿಕ ಮೆಲೆನಿಯಾ ಎಂಬ ಇನ್ನೊಬ್ಬ ಮಾಡೆಲನ್ನು ವಿವಾಹವಾಗಿದ್ದು, ಆ ದಾಂಪತ್ಯದಲ್ಲಿ ಟಿಫಾನಿ ಮತ್ತು ಬ್ಯಾರನ್ ಎಂಬ ಮಕ್ಕಳನ್ನು ಪಡೆದಿದ್ದಾರೆ. ಇವಾಂಕಾ 2009ರಲ್ಲಿ ವಿವಾಹವಾಗಿದ್ದು, ಪತಿ ಜರೆಡ್ ಕುಶ್ನರ್ ಕೂಡ ಉದ್ಯಮಿ, ಸದ್ಯ ಟ್ರಂಪ್ ಅವರ ಸಲಹೆಗಾರರಾಗಿದ್ದಾರೆ. ಇವಾಂಕಾಗೆ ಮೂವರು ಮಕ್ಕಳು – ಅರಬೆಲ್ಲಾ, ಜೋಸೆಫ್ ಮತ್ತು ಥಿಯೋಡೋರ್.

ಇವಾಂಕಾರ ಮಲತಾಯಿ ಮೆಲೆನಿಯಾ ಟ್ರಂಪ್ ಅಧಿಕೃತವಾಗಿ ಅಮೆರಿಕದ ಫಸ್ಟ್​ಲೇಡಿ. ಆದರೆ ಮಗಳೆದುರು ಆಕೆಯ ಪ್ರಭಾವ ಮಸುಕಾಗಿದ್ದು, ರಾಜಕೀಯ ಚಾವಡಿ ಹಾಗೂ ಮಾಧ್ಯಮ ವಲಯ ಇವಾಂಕಾರನ್ನೇ ‘ನಿಜವಾದ ಫಸ್ಟ್​ಲೇಡಿ’ ಎಂದು ವಿಶ್ಲೇಷಿಸಿವೆ. ಆಡಳಿತಾತ್ಮಕ ಅನುಭವವಿಲ್ಲದ ತಂದೆ-ಮಗಳ ಶ್ವೇತಭವನದ ಕಾರುಬಾರು ಹೇಗಿರುತ್ತದೆಂಬುದನ್ನು ಕಾದುನೋಡಬೇಕಷ್ಟೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

[ಪ್ರತಿಕ್ರಿಯಿಸಿ: [email protected],    [email protected]]

Leave a Reply

Your email address will not be published. Required fields are marked *

Back To Top