Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಅಮಾಯಕರಿಗೆ ಶಿಕ್ಷೆಯಾಗಬಾರದು, ತಪ್ಪಿತಸ್ಥ ತಪ್ಪಿಸಿಕೊಳ್ಳಬಾರದು

Wednesday, 03.01.2018, 3:05 AM       No Comments

ಬಹುಚರ್ಚಿತ  2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಾಂಗ ಹಾಗೂ ಸಾರ್ವಜನಿಕ ವಲಯದಲ್ಲಿ ಮತ್ತೆ ಚರ್ಚೆಗೀಡಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಹಾಗೂ ವಿಚಾರಣಾ ವ್ಯವಸ್ಥೆಗಳ ಕಾರ್ಯಸ್ವರೂಪವನ್ನು ವಿವರಿಸುವ ಲೇಖನ ಇಲ್ಲಿದೆ.

 ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಅಭಿಯೋಜಕನ ಕೆಲಸ. ಅಪರಾಧಿ ಶಿಕ್ಷಿಸಲ್ಪಟ್ಟು, ಅಮಾಯಕ ರಕ್ಷಿಸಲ್ಪಟ್ಟಾಗ ನ್ಯಾಯ ಒದಗಿಸಿದಂತಾಗುತ್ತದೆ.

– ಸೋನಿಯಾ ಮರಿಯಾ ಸೊಟೊಮೇಯರ್, ಅಸೋಸಿಯೇಟ್ ಜಸ್ಟೀಸ್, ಅಮೆರಿಕ ಸುಪ್ರೀಂ ಕೋರ್ಟ್

ಸಾರ್ವಜನಿಕವಾಗಿ ಘೋಷಿಸಲ್ಪಟ್ಟಿರುವ, ನ್ಯಾಯಯುತವಾಗಿ ಅನುಷ್ಠಾನದಲ್ಲಿರುವ ಮತ್ತು ಸ್ವತಂತ್ರವಾಗಿ ಶಾಸನ ರೀತ್ಯಾ ಜಾರಿಯಲ್ಲಿರುವ ಕಾನೂನುಗಳಿಗೆ ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಬದ್ಧರಾಗಿರಬೇಕು. ಇದು ಎಲ್ಲರಿಗೂ ಅನ್ವಯವಾಗುವ ಸಾಮಾನ್ಯ ಆಡಳಿತ ನಿಯಮದ ಮೂಲತತ್ತ್ವ. ಅಲ್ಲದೆ, ಕಾನೂನಿನ ಪರಮಾಧಿಕಾರದ ನಿಷ್ಠಾವಂತ ಅನುಸರಣೆ, ಕಾನೂನಿನ ಎದುರು ಎಲ್ಲರೂ ಸಮಾನರು, ಕಾನೂನಿನ ಮೇಲೆ ಬದ್ಧತೆ, ಕಾನೂನಿನ ಅನುಷ್ಠಾನದಲ್ಲಿ ನಿಷ್ಪಕ್ಷಪಾತ ನಡವಳಿಕೆ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ, ಶಾಸನೋಕ್ತ ನಿಶ್ಚಿತತೆಯನ್ನು ಖಾತ್ರಿಗೊಳಿಸುತ್ತದೆ. ಹಾಗೆಯೇ, ಮಧ್ಯಸ್ಥಿಕೆ, ಪ್ರಕ್ರಿಯಾತ್ಮಕ ಮತ್ತು ಕಾನೂನಾತ್ಮಕ ಪಾರದರ್ಶಕತೆ ತಪ್ಪಿಹೋಗದಂತೆ ಕಾಪಾಡುತ್ತದೆ.

ಅಪರಾಧ ನ್ಯಾಯ ವ್ಯವಸ್ಥೆಯ ದೃಷ್ಟಿಕೋನದಲ್ಲಿ ಹೇಳುವುದಾದರೆ, ಕಾನೂನಿನ ನಿಯಮವು ಮುಕ್ತ ವಿಚಾರಣೆಯ ಹಕ್ಕು, ಆರೋಪಿಯ ಮುಗ್ಧತೆಯ ಪೂರ್ವಕಲ್ಪನೆ, ಎರಡು ದಂಡನೆಯ ಅಪಾಯ, ಹೇಬಿಯಸ್ ಕಾರ್ಪಸ್ ಅಗತ್ಯಗಳು ಮತ್ತು ಕಾನೂನಾತ್ಮಕ ಸಮಾನತೆಯ ಮೂಲತತ್ತ್ವಗಳ ಜತೆಗೆ ತಳುಕುಹಾಕಿಕೊಂಡಿದೆ. ಉದಾಹರಣೆಗೆ, ‘ಎಲ್ಲ ಸಂಭಾವ್ಯ ಅಥವಾ ಅಪರಾಧದ ಸಾಂರ್ದಭಿಕ ಸಾಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಬೇಕು; ಎಷ್ಟರ ಮಟ್ಟಿಗೆ ಎಂದರೆ 10 ಅಪರಾಧಿಗಳು ತಪ್ಪಿಸಿಕೊಂಡರೂ, ಒಬ್ಬ ಅಮಾಯಕನಿಗೆ ಶಿಕ್ಷೆಯಾಗಬಾರದು’ ಮತ್ತು ‘ಒಂದೇ ಅಪರಾಧಕ್ಕಾಗಿ ಒಬ್ಬ ವ್ಯಕ್ತಿ ಎರಡೆರಡು ಬಾರಿ ವಿಚಾರಣೆಗೆ ಒಳಪಡಬಾರದು ಹಾಗೂ ಶಿಕ್ಷೆಗೆ ಗುರಿಯಾಗಬಾರದು’.

ಅಪರಾಧ ನ್ಯಾಯ ವ್ಯವಸ್ಥೆಯ ಕುರಿತು ಇನ್ನೂ ವಿಸõತವಾಗಿ ಹೇಳುವುದಾದರೆ, ಸಾಮುದಾಯಿಕ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವ ವ್ಯಕ್ತಿಗಳನ್ನು ಕಾನೂನಿನ ವ್ಯಾಪ್ತಿಗೆ ತರುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಹಾಗೂ ಅಪರಾಧ ವಿಚಾರಣೆ ವ್ಯವಸ್ಥೆಯನ್ನು ಪರಿಣಾಮಕಾರಿಯನ್ನಾಗಿ ನಡೆಸುವ ಸರ್ಕಾರದ ಹೊಣೆಗಾರಿಕೆಯ ಜತೆಗೂ ಕಾನೂನಿನ ನಿಯಮ ಸೇರಿಕೊಂಡಿದೆ. ಅಪರಾಧ ಎಸಗಿರಬಹುದು ಎಂಬ ಶಂಕೆ ಯಾರ ಮೇಲಿದೆಯೋ ಅವರನ್ನು ಕಾನೂನಿನ ವ್ಯಾಪ್ತಿಯಲ್ಲಿ ಸಮಾನವಾಗಿ ತಾರತಮ್ಯವಿಲ್ಲದೆ ನಡೆಸಿಕೊಳ್ಳಬೇಕು. ಸತ್ಯವಂತಿಕೆಯನ್ನು ಎತ್ತಿಹಿಡಿಯಲು ಪರಿಣಾಮಕಾರಿ ಮತ್ತು ನಿಷ್ಪಕ್ಷಪಾತ ವಿಚಾರಣಾ ವ್ಯವಸ್ಥೆ ಅವಶ್ಯ ಬೇಕು. ಅರ್ಥಾತ್, ಸಾರ್ವಜನಿಕ ಬದುಕಿನಲ್ಲಿ ಬಲವಾದ ನೈತಿಕ ಮೌಲ್ಯಗಳು, ಪ್ರಾಮಾಣಿಕತೆ, ಸಭ್ಯತೆಗಳನ್ನು ಎತ್ತಿಹಿಡಿಯಬೇಕು. ಹಾಗೆಯೇ, ಸುದೀರ್ಘ ಕಾಲದ ಜಡತ್ವ ಅರ್ಥಾತ್ ಬದಲಾವಣೆ ಬಯಸದೇ ಹಾಗೇ ಉಳಿದಿರುವ ಸ್ಥಿತಿಯೇ ವಿಚಾರಣಾ ವ್ಯವಸ್ಥೆಯ ಮಂತ್ರವಾಗಿತ್ತು. ವಿಶೇಷವಾಗಿ ಪ್ರಭಾವಿ ಆರೋಪಿಗಳ ವಿಷಯದಲ್ಲಿ ವಿಚಾರಣೆ ವೇಳೆ ಇಂಥ ಪ್ರವೃತ್ತಿ ಕಂಡುಬರುತ್ತಿತ್ತು. ಈ ಅನಪೇಕ್ಷಿತ ರೂಢಿ ಮುಂದುವರಿದಿರುವುದು ಖೇದಕರವೇ ಸರಿ.

ಅಪರಾಧ ವಿಚಾರಗಳಲ್ಲಿ ‘ಸಂಕಷ್ಟಕ್ಕೀಡಾದ ಕಕ್ಷಿದಾರ’ ಸ್ಥಾನ ‘ಸರ್ಕಾರ’ದ್ದೇ ಆಗಿರುತ್ತದೆ. ಸರ್ಕಾರ ಎಂಬುದು ವಿಸõತ ಅರ್ಥದಲ್ಲಿ ಸಮುದಾಯದ ಸಾಮಾಜಿಕ ಹಿತಾಸಕ್ತಿ ಕಾಯುವ ರಕ್ಷಕನ ಪಾತ್ರವನ್ನು ನಿರ್ವಹಿಸುತ್ತಿರುವುದೇ ಅದಕ್ಕೆ ಕಾರಣ.

ಅಪರಾಧ ವಿಚಾರಣಾ ವ್ಯವಸ್ಥೆಯ ಚಿತ್ರಣ: ಮೇಲಿನ ವಿಚಾರಗಳಿಗೆ ಪೂರಕವಾಗಿ, (1) ತನಿಖೆ (2) ಅಪರಾಧ ವಿಚಾರಣೆಯ ಹೊಣೆಗಾರಿಕೆ ಸರ್ಕಾರದ್ದೇ ಆಗಿರುತ್ತದೆ. ತನಿಖೆ ಎಂಬುದು ಸಾಕ್ಷ್ಯಗಳ ಸಂಗ್ರಹಕ್ಕೆ ಸಂಬಂಧಿಸಿದ್ದಾಗಿದ್ದು, ಆರೋಪಿಯನ್ನು ವಿಚಾರಣೆಗೊಳಪಡಿಸಲು ಸಾಧ್ಯ ಇದೆಯೋ ಇಲ್ಲವೋ ಎಂಬುದನ್ನು ನಿರ್ಣಯಿಸುವ ಪ್ರಮುಖ ಘಟ್ಟ. ಇನ್ನು ವಿಚಾರಣೆಯ ಹಂತದಲ್ಲಿ ಆರೋಪಿಯ ಆರೋಪ ಸಾಬೀತು ಪಡಿಸುವ ಪ್ರಕ್ರಿಯೆ ನಡೆಯುತ್ತದೆ. ಹಾಗೆಯೇ, ಅಭಿಯೋಜಕನೊಬ್ಬ ತನಿಖಾ ಸಂಸ್ಥೆಯ ಭಾಗವಾಗಿರದೆ, ಸ್ವತಂತ್ರವಾಗಿ ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ತನಿಖಾ ಸಂಸ್ಥೆಯ ಮನವಿಗಳಿಗೆ ಸ್ಪಂದಿಸಬೇಕು. ಆದಾಗ್ಯೂ, ವಿಚಾರಣಾ ಕೋರ್ಟ್ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಯನ್ನು ಅನುಸರಿಸದ ಹೊರತು, ಅಂತಿಮ ವಿಶ್ಲೇಷಣೆಯ ಕಸರತ್ತು ನಿಷ್ಪ›ಯೋಜಕ. ತನಿಖೆ ಮತ್ತು ವಿಚಾರಣೆಗಳು ಸ್ವತಂತ್ರವಾಗಿರುವಂಥದ್ದು. ಆದರೂ, ಒಂದಕ್ಕೊಂದು ಅಂತರ್ ಸಂಬಂಧ ಹೊಂದಿರುವಂಥದ್ದು. ಆದ್ದರಿಂದ, ವಿಚಾರಣಾ ವ್ಯವಸ್ಥೆಯ ಸುಧಾರಿಸದ ಹೊರತು ತನಿಖೆಯ ಸುಧಾರಣೆ ಪ್ರಾಯೋಗಿಕವಾಗಿ ಅಸಾಧ್ಯವಾದ ಮಾತು.

ಅಪರಾಧ ತನಿಖೆಯಲ್ಲಿ ಸರ್ಕಾರಿ ಅಭಿಯೋಜಕನದು ಮಹತ್ವದ ಪಾತ್ರ. ಸರ್ಕಾರಿ ಅಭಿಯೋಜಕನನ್ನು ಅಪರಾಧ ದಂಡ ಸಂಹಿತೆಯ ಪ್ರಕಾರ ಕಾನೂನು ಬದ್ಧವಾಗಿ ನೇಮಕ ಮಾಡಲಾಗಿರುತ್ತದೆ. ಇನ್ನು ಕೆಲವು ಪ್ರಕರಣಗಳಲ್ಲಿ ‘ವಿಶೇಷ ಅಭಿಯೋಜಕ’ರ ನೇಮಕವಾಗಿರುತ್ತದೆ. 10 ವರ್ಷಕ್ಕೆ ಕಮ್ಮಿ ಇಲ್ಲದಂತೆ ವಕೀಲಿಕೆ ಅನುಭವ ಇರುವ ನ್ಯಾಯವಾದಿಯನ್ನೇ ‘ವಿಶೇಷ ಅಭಿಯೋಜಕ’ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಹಾಗೆಯೇ, ಪ್ರಕರಣದ ಇಡೀ ವಿಚಾರಣೆಯನ್ನು ಸೆಷನ್ಸ್ ಜಡ್ಜ್ ನಿಗಾವಹಿಸುವುದಲ್ಲದೇ, ಅದನ್ನು ನಿಯಂತ್ರಿಸುತ್ತಾರೆ ಕೂಡ. ಇಲ್ಲಿ, ವಿಚಾರಣಾ ಭಾಗದಿಂದ ಯಾವ್ಯಾವ ಸಾಕ್ಷಿಗಳನ್ನು ಬಿಡಬೇಕು ಅಥವಾ ಯಾವ್ಯಾವ ಸಾಕ್ಷಿಗಳನ್ನು ಪುನಃ ಪರೀಕ್ಷೆಗೊಳಪಡಿಸಬೇಕು ಎಂಬುದನ್ನು ಸರ್ಕಾರಿ ಅಭಿಯೋಜಕ ನಿರ್ಧರಿಸು ತ್ತಾರೆ. ಕೋರ್ಟ್​ನ ಅನುಮತಿ ಮೇರೆಗೆ ದಾವೆಯನ್ನು ಹಿಂಪಡೆಯುವ ಅಧಿಕಾರವೂ ಆತನಿಗಿದೆ.

ಸರ್ಕಾರವೇ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿದ್ದರೂ, ಆತ/ಆಕೆ ಪ್ರಾಥಮಿಕವಾಗಿ ಕೋರ್ಟ್​ನ ಅಧಿಕಾರಿ ಎಂಬುದು ವಾಸ್ತವ. ಒಮ್ಮೆ ಆತ/ಆಕೆ ಕೋರ್ಟ್​ಗೆ ಪ್ರಕರಣದ ನಿರ್ವಹಣೆಗೆ ಅಥವಾ ವಿಚಾರಣೆಗೆ ಹಾಜರಾದರೆ, ನ್ಯಾಯದ ಹಿತಾಸಕ್ತಿಯ ನಿಯಮಾವಳಿಗಳ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ;ಅವರ ಕ್ರಿಯೆಗಳು ಯಾವಾಗಲೂ ಸಾರ್ವಜನಿಕ ಹಿತವನ್ನು ಕಾಪಾಡುವಂಥದ್ದಾಗಿರಬೇಕು; ಅವರ ಕೆಲಸ ಕಾರ್ಯಗಳು ನ್ಯಾಯಸಮ್ಮತವಾಗಿದ್ದು, ಕಾನೂನಿನ ಚೌಕಟ್ಟಿನೊಳಗೇ ನಡೆಯತಕ್ಕದ್ದು. ಸರ್ಕಾರಿ ಅಭಿಯೋಜಕ ಸರ್ಕಾರದ ನಿರ್ದೇಶನಾನುಸಾರ ಕೆಲಸ ಮಾಡುವಂತಿಲ್ಲ. ಹಾಗೂ ಆತ/ಆಕೆ ಕೋರ್ಟ್​ನ ಅಧಿಕಾರಿ ಎಂಬಂತೆ ವಸ್ತುನಿಷ್ಠವಾಗಿ ವರ್ತಿಸಬೇಕು. ಕೆಲವೊಮ್ಮೆ ಆರೋಪಿಗಳು ಸರ್ಕಾರಿ ಹುದ್ದೆ ಹೊಂದಿದ್ದು, ಪ್ರಕರಣವನ್ನೇ ತಮ್ಮ ಪರವಾಗಿ ಮಾಡಿ ಕೊಳ್ಳಬಲ್ಲವರಾಗಿರುತ್ತಾರೆ. ಆದ್ದರಿಂದ,‘ನೀವೆಷ್ಟೇ ದೊಡ್ಡವರಾಗಿರಿ ಅಥವಾ ಪ್ರಭಾವಿಗಳಾಗಿರಿ, ಕಾನೂನು ಯಾವತ್ತಿದ್ದರೂ ನಿಮಗಿಂತ ಎತ್ತರದಲ್ಲಿರುತ್ತದೆ’ ಎಂಬುದನ್ನು ಅರ್ಥೈಸಿಕೊಳ್ಳಲು ಇಂಥ ಗ್ರಹಿಕೆ ಸಹಕಾರಿಯಾದೀತು.

ತನಿಖಾ ಸಂಸ್ಥೆಗಳನ್ನು ನಿಯಂತ್ರಿಸುವುದು ಕಾರ್ಯಾಂಗವಾದರೂ, ಅವುಗಳ ಕೆಲಸದಲ್ಲಿ ಕಾರ್ಯಾಂಗದ ಯಾವುದೇ ಪ್ರಭಾವ ಉಂಟಾಗದಂತೆ ರಕ್ಷಿಸುವ ನಿಯಮಗಳಿವೆ; ಅದು ಅನುಶಾಸನ.

ನಿಷ್ಪಕ್ಷಪಾತ, ನ್ಯಾಯಸಮ್ಮತ, ನಿಖರ ಮತ್ತು ಪರಿಣಾಮಕಾರಿ ವಿಚಾರಣೆ ಅಗತ್ಯವೇನೋ ಹೌದು. ಆದರೆ ಅದು ಸಹಜ ಅಗತ್ಯ ಎಂಬುದೂ ಅಷ್ಟೇ ವಾಸ್ತವ. ಒಬ್ಬ ಅಮಾಯಕನಿಗೆ ಶಿಕ್ಷೆ ಆಗದಿರಲು ಹಲವು ಅಪರಾಧಿಗಳು ಬಚಾವ್ ಆದರೂ ತೊಂದರೆಯಿಲ್ಲ ಎಂದು ನಾವು ಭಾವಿಸಬಹುದು. ಹಾಗಂತ ವಿಚಾರಣಾ ಪ್ರಕ್ರಿಯೆ ಜಾಳುಜಾಳಾಗಿ, ಬೇಜಾವಾಬ್ದಾರಿಯಿಂದ ಪರಿಣಾಮಕಾರಿಯಲ್ಲ ರೀತಿಯಲ್ಲಿ ನಡೆಯುತ್ತದೆ ಎಂಬುದು ಇದರ ಅರ್ಥವಲ್ಲ. ಆರೋಪಿಯೊಬ್ಬ ಅರ್ಹ ಕಾರಣಗಳಿಗೆ ದೋಷಮುಕ್ತವಾಗುವುದಕ್ಕೂ ತಾಂತ್ರಿಕ ಲೋಪದ ಕಾರಣಕ್ಕೆ ದೋಷಮುಕ್ತನಾಗುವುದಕ್ಕೂ ಬಹಳ ವ್ಯತ್ಯಾಸವಿದೆ.

ಸುಪ್ರೀಂ ಕೋರ್ಟ್ ಟಿಪ್ಪಣಿ: ರಾಜಸ್ಥಾನ ಸರ್ಕಾರ ಡ/ಠ ಎನ್.ಕೆ. (2000) ಪ್ರಕರಣದ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ನೀಡಿದ ಟಿಪ್ಪಣಿ ಇದು -‘ಭಾರತದಲ್ಲಿ ಚಾಲ್ತಿಯಲ್ಲಿರುವ ಹಳೇಕಾಲದ ಅಪರಾಧ ನ್ಯಾಯಶಾಸ್ತ್ರದಲ್ಲಿ ಸುವರ್ಣಾಕ್ಷರದ ಒಂದು ನುಡಿಗಟ್ಟಿದೆ – ಒಂಭತ್ತು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಒಬ್ಬ ಅಮಾಯಕನಿಗೆ ಶಿಕ್ಷೆಯಾಗಬಾರದು. ಇದೇ ವೇಳೆ, ಅಪರಾಧ ಸಾಬೀತಾದವನೊಬ್ಬ ಶಿಕ್ಷೆಯಿಂದ ಪಾರಾಗಬಾರದು. ಅನರ್ಹರನ್ನು ದೋಷಮುಕ್ತಗೊಳಿಸುವುದು ಸಮಾಜದ ಹಿತದಿಂದಲೂ ಉತ್ತಮ ನಡೆಯಲ್ಲ. ಒಂದೊಮ್ಮೆ ಆರೋಪಿಯ ಅಪರಾಧ ಸಾಬೀತು ಮಾಡುವಲ್ಲಿ ವಿಚಾರಣಾ ವ್ಯವಸ್ಥೆ ಯಶಸ್ವಿಯಾದರೆ, ಆಗ ಕೋರ್ಟ್ ಸಕಾಲಿಕವಲ್ಲದ ಅಥವಾ ಅನಪೇಕ್ಷಿತ ಪರಿಸ್ಥಿತಿಗಳಿಗೆ ಒತ್ತು ನೀಡಿ ಅಥವಾ ತಾಂತ್ರಿಕ ಲೋಪ ಅಥವಾ ಸಂದೇಹಗಳನ್ನು ಮುಂದುಮಾಡಿ, ದೋಷಮುಕ್ತಗೊಳಿಸಲು ಹೋಗಬಾರದು. ಅನರ್ಹರನ್ನು ದೋಷಮುಕ್ತಗೊಳಿಸುವುದರಿಂದ ಸಮಾಜದಲ್ಲಿ ಇನ್ನಷ್ಟು ದುಷ್ಕೃತ್ಯಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ. ಸಮಾಜ ಅದರ ಬಲಿಪಶುವಾಗುತ್ತದೆ. ಅಪರಾಧ ನ್ಯಾಯಶಾಸ್ತ್ರದ ಪ್ರಕಾರ ಸಂದೇಹಕ್ಕೆ ಸಕಾರಣಗಳಿರಬೇಕು ಮತ್ತು ಅದು ದೋಷಮುಕ್ತಗೊಳಿಸುವುದಕ್ಕೆ ಕಂಡುಕೊಳ್ಳುವ ಸಂದೇಹವಾಗಿರಬಾರದು’.

ಈಗಾಗಲೇ ಹೇಳಿದಂತೆ, ಒಂದೊಮ್ಮೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದು ಅಪರಾಧ ಸಾಬೀತಾಗುವ ಹಂತದಲ್ಲಿ ತಾಂತ್ರಿಕ ವಿಷಯಗಳನ್ನು ಮುಂದಿಟ್ಟರೆ ಅದನ್ನು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಅಧೀನ ಕೋರ್ಟ್​ಗಳಿಗೆ ಸೂಚಿಸಿದೆ. ಕೋರ್ಟ್​ಗಳು ಈ ಸೂಚನೆಗೆ ನಿಷ್ಠವಾಗಿವೆ. ಆದಾಗ್ಯೂ, ವಿಚಾರಣಾ ವ್ಯವಸ್ಥೆ ಪ್ರಭಾವಿಗಳ ತಾಳಕ್ಕೆ ತಕ್ಕಂತೆ ಕುಣಿಯದೆ, ಪ್ರಕರಣ ಸಾಬೀತುಮಾಡುವ ಮೇಲ್ನೋಟದ ಸಾಕ್ಷ್ಯಗಳು ಇದ್ದರೂ ಅದನ್ನು ದೃಢೀಕರಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡಿದರೂ ಆರೋಪ ಸಾಬೀತುಪಡಿಸಬಹುದು. ಮುಂದಿನ ಕಂತಿನಲ್ಲಿ 2ಜಿ ತರಂಗಾಂತರ ಹಂಚಿಕೆ ಪ್ರಕರಣದ ತೀರ್ಪಗಳನ್ನು ಅವಲೋಕಿಸೋಣ.

( ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top