ಅಮಾನಿಕೆರೆ ಕಾಮಗಾರಿ ಆರಂಭಿಸಿ

ತುಮಕೂರು: ಬುಗುಡನಹಳ್ಳಿ ಕೆರೆಯಿಂದ ತುಮಕೂರಿನ ಅಮಾನಿಕೆರೆಗೆ ಹೇಮಾವತಿ ನೀರು ಹರಿಸುವ 56.50 ಕೋಟಿ ರೂ. ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಗ್ರಹಿಸಿದರು.

ಮುಂದಿನ 45 ದಿನದಲ್ಲಿ ಅಮಾನಿಕೆರೆ ಕಾಮಗಾರಿ ಆರಂಭಿಸದಿದ್ದರೆ ಮಳೆ ಬಂದು ನೀರು ತುಂಬಿಕೊಳ್ಳಲಿದೆ. ಕಾಮಗಾರಿ ನನೆಗುದಿಗೆ ಬೀಳಲಿದೆ. ಡಿಸಿಎಂ ವಿಶೇಷ ಗಮನಹರಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ನಗರದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀತಿ ಸಂಹಿತೆ ಹೆಸರಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಇಂತಹ ಸಮಯದಲ್ಲಿ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವ ಕಾಮಗಾರಿಯನ್ನಾದರೂ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸ್ಮಾರ್ಟ್​ಸಿಟಿ ಯೋಜನೆಯ ಅತ್ಯಂತ ಮಹತ್ವದ ಯೋಜನೆಯಲ್ಲಿ ಅಮಾನಿಕೆರೆಗೆ-ಪಿಎನ್​ಆರ್ ಪಾಳ್ಯಕ್ಕೆ ನೀರು ತರಲು 56.50 ಕೋಟಿ ರೂ. ನೀಡಲಾಗಿದ್ದು, ನಗರದ ಅಂತರ್ಜಲಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದರು.

ಬುಗುಡನಹಳ್ಳಿ ಕೆರೆ ಹೂಳು ತೆಗೆಯುವ ಕಾರ್ಯ ನನೆಗುದಿಗೆ ಬಿದ್ದಿದೆ. ಬೇಸಿಗೆಯಾದ್ದರಿಂದ ಕಾಮಗಾರಿ ಆರಂಭಿಸದಿದ್ದರೆ ನಗರಕ್ಕೆ ಭವಿಷ್ಯದಲ್ಲಿ ನೀರು ಪೂರೈಸುವುದು ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರೆಕಲ್ಲುಪಾಳ್ಯ ಬಫರ್ ಮೂಲಕ ಮೈದಾಳ ಕೆರೆ ನೀರನ್ನು ಈಗಾಗಲೇ ನಗರದ ಕೆಲವು ವಾರ್ಡ್​ಗೆ ಬಳಸಲಾಗುತ್ತಿದೆ ಎಂದರು. ಕೆಐಡಿಬಿ ನಿಯಂತ್ರಣದಲ್ಲಿ ಮೈದಾಳ ಕೆರೆಯಿದ್ದು, ಮರಳೂರು, ಮೈದಾಳ, ಬುಗುಡನಹಳ್ಳಿ ಕೆರೆಗಳ ಹೂಳು ತೆಗೆಯುವುದರಿಂದ ಕುಡಿವ ನೀರಿಗೆ ಶಾಶ್ವತ ಪರಿಹಾರ ಪಡೆಯಬಹುದು ಎಂದು ಹೇಳಿದರು.

ಹೆಬ್ಬಾಕ ಕೆರೆಯನ್ನು ಕೈಗಾರಿಕಾ ಉದ್ದೇಶಕ್ಕೆ ನೀಡದೆ ಪಾಲಿಕೆಗೆ ಉಳಿಸಿಕೊಳ್ಳಬೇಕು. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಪ್ರತಿಪಕ್ಷದ ನಾಯಕ ಸಿ.ಎನ್.ರಮೇಶ್, ಮುಖಂಡರಾದ ರವೀಶಯ್ಯ, ಪಾಲಿಕೆ ಮಾಜಿ ಸದಸ್ಯ ನಾಗಣ್ಣ, ಮುಖಂಡರಾದ ಹನುವಂತರಾಯಪ್ಪ, ಅಣೆತೋಟ ಶ್ರೀನಿವಾಸ್, ಸಾಗರನಹಳ್ಳಿ ವಿಜಯ ಕುಮಾರ್ ಇದ್ದರು.

Leave a Reply

Your email address will not be published. Required fields are marked *