ಅಮನ್​ಪ್ರೀತ್ ಸಿಂಗ್, ದಿವ್ಯಾ ಮುನ್ನಡೆ

ಹುಬ್ಬಳ್ಳಿ: ವಿಆರ್​ಎಲ್ ಸಮೂಹ ಸಂಸ್ಥೆ ಪ್ರಾಯೋಜಕತ್ವದ ರಾಷ್ಟ್ರಮಟ್ಟದ ಹುಬ್ಬಳ್ಳಿ ಓಪನ್ ಶೂಟಿಂಗ್ ಚಾಂಪಿಯನ್​ಷಿಪ್​ನ ಏರ್ ಪಿಸ್ತೂಲ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ದೆಹಲಿಯ ಅಮನ್​ಪ್ರೀತ್ ಸಿಂಗ್ ಮುನ್ನಡೆ ಸಾಧಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ದಿವ್ಯಾ ಟಿ.ಎಸ್. ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಸ್ಪರ್ಧೆಯ ಮೊದಲ ದಿನವಾದ ಭಾನುವಾರ ಅಗ್ರಸ್ಥಾನದಲ್ಲಿದ್ದ ಕರ್ನಾಟಕದ ಸಾಗರ್ ಸಿಂಗ್ ಬೇಡಿ ಸೋಮವಾರ ದ್ವಿತೀಯ ಸ್ಥಾನಕ್ಕೆ ಕುಸಿದರು. ಸೋಮವಾರ 4 ಸುತ್ತುಗಳಲ್ಲಿ ಅಮನ್​ಪ್ರೀತ್ ಸಿಂಗ್ 388 ಅಂಕ ಸಂಪಾದಿಸಿ ಮುಂಚೂಣಿಗೆ ಬಂದರು. ಸಾಗರ್ ಸಿಂಗ್ 381 ಅಂಕ ಗಳಿಸಿದ್ದಾರೆ. ಉತ್ತರ ಪ್ರದೇಶದ ಸೌರಭ್ ಚೌಧುರಿ (379), ಉತ್ತರ ಪ್ರದೇಶದ ಕುಸ ಸಿರಹಿ (379), ಸೇನೆಯ ಇ. ಗಿರಿಧರ (378) ಕ್ರಮವಾಗಿ 3,4,5ನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರದ ವೈಷ್ಣವಿ ರಾಜೇ (362) ದ್ವಿತೀಯ, ಹುಬ್ಬಳ್ಳಿಯ ರಕ್ಷಾ ಪಟೇಗಾರ (349) ತೃತೀಯ, ಮಹಾರಾಷ್ಟ್ರದ ಜಾಹ್ನವಿ ಪಾಟೀಲ್ (342) 4ನೇ ಹಾಗೂ ಶ್ರಾವಣಿ ದೀಪಕ್ (342) 5ನೇ ಸ್ಥಾನದಲ್ಲಿದ್ದಾರೆ. ಚಾಂಪಿಯನ್​ಷಿಪ್​ನ ಕೊನೆಯ ದಿನವಾದ ಮಂಗಳವಾರ ಕೊನೆಯ 3 ಸುತ್ತುಗಳ ಸ್ಪರ್ಧೆ ನಡೆಯಲಿದೆ.

ವಿಜೇತರಿಗೆ ಇಂದು ಬಹುಮಾನ

ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ವತಿಯಿಂದ ಸಾಯಿನಗರದ ಕಾವೇರಿ ಕಾಲನಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಚಾಂಪಿಯನ್​ಷಿಪ್ ಮತ್ತು ಅಂಗವಿಕಲರ ಚಾಲೆಂಜ್ ಕಪ್​ನ ಬಹುಮಾನ ವಿತರಣಾ ಹಾಗೂ ಸಮಾರೋಪ ಸಮಾರಂಭ ಮಂಗಳವಾರ ಸಂಜೆ 4 ಗಂಟೆಗೆ ನಡೆಯಲಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ. ಸಂಸದ ಪ್ರಲ್ಹಾದ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಶಂಕರಪಾಟೀಲ್ ಮುನೇನಕೊಪ್ಪ, ವೀರಣ್ಣ ಸವಡಿ, ಅಶ್ವಿನಿ ಮಜ್ಜಗಿ, ಮೇನಕಾ ಹುರಳಿ, ಜ್ಯುಡೋ ತರಬೇತುದಾರರಾದ ತ್ರಿವೇಣಿಸಿಂಗ್ ಸಂಕ್ಲಾ, ಕೆಎಲ್​ಇ ತಾಂತ್ರಿಕ ವಿವಿ ಡೀನ್ ಎಸ್.ಬಿ.ಕುರಬರ ಇತರರು ಪಾಲ್ಗೊಳ್ಳುವರು.

Leave a Reply

Your email address will not be published. Required fields are marked *